ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ 'ತಾರತಮ್ಯ' ನೀತಿ ವಿರುದ್ಧ ಹರ್ಭಜನ್ ಸಿಂಗ್ ಕೆಂಡಾಮಂಡಲ
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಹಾಗೂ ಉಪನಾಯಕನ ವಿರುದ್ಧ ಒಂದು ಪಂದ್ಯ ನಿಷೇಧ ಹೇರಿರುವ ಐಸಿಸಿ ಶಿಸ್ತು ಕ್ರಮದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟಿಗ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೆಂಡಾಮಂಡಲರಾಗಿದ್ದಾರೆ.

Published On :
ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಹಾಗೂ ಉಪನಾಯಕನ ವಿರುದ್ಧ ಒಂದು ಪಂದ್ಯ ನಿಷೇಧ ಹೇರಿರುವ ಐಸಿಸಿ ಶಿಸ್ತು ಕ್ರಮದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟಿಗ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೆಂಡಾಮಂಡಲರಾಗಿದ್ದಾರೆ.
ಅರೆ.. ಭಜ್ಜಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿದ್ದಾರೆಯೇ ಎಂದು ಭಾವಿಸಬೇಡಿ.. ಭಜ್ಜಿ ಆಸಿಸ್ ಕ್ರಿಕೆಟಿಗರ ಬೆನ್ನಿಗೆ ನಿಂತಿಲ್ಲ. ಬದಲಿಗೆ ಐಸಿಸಿಯ ತಾರತಮ್ಯ ನೀತಿ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು.. ಈ ಹಿಂದೆ ಇದೇ ಆಸ್ಟ್ರೇಲಿಯಾ ತಂಡದ ಆಟಗಾರ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮದಲ್ಲದ ತಪ್ಪಿಗೆ ವಿಶ್ವದ ಎದುರು ಖಳನಾಯಕರಾಗಿದ್ದ ಹರ್ಭಜನ್ ಸಿಂಗ್ ಇದೀಗ ಐಸಿಸಿಯ ತಾರತಮ್ಯ ನೀತಿಯನ್ನು ವಿಶ್ವದ ಎದುರು ಬಟಾ ಬಯಲು ಮಾಡಿದ್ದಾರೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಆದ ಬಾಲ್ ಟೆಂಪರಿಂಗ್ ಘಟನೆಯನ್ನು ಹಿನ್ನಲೆಯಾಗಿಸಿಕೊಂಡು ಟ್ವೀಟ್ ಮಾಡಿರುವ ಭಜ್ಜಿ, ಐಸಿಸಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಹಿಂದೊಮ್ಮೆ ಇದೇ ಆಸೀಸ್ ತಂಡದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು ಎಂಬ ಆರೋಪಕ್ಕೊಳಗಾಗಿದ್ದ ಹರ್ಭಜನ್ ಸಿಂಗ್ ಇದೀಗ ಆಸೀಸ್ ಆಟಗಾರರ ವಿಚಾರದಲ್ಲಿ ಐಸಿಸಿ ನಡೆದುಕೊಂಡ ರೀತಿ ವಿರುದ್ಧ ಸಿಟ್ಟಾಗಿದ್ದಾರೆ.
ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕೆ ಆಸೀಸ್ ನಾಯಕ ಸ್ಮಿತ್ ಗೆ ಒಂದು ಪಂದ್ಯದ ನಿಷೇಧ ಮತ್ತು ಶೇ.100 ರಷ್ಟು ಪಂದ್ಯದ ಸಂಭಾವನೆ ದಂಡದ ಶಿಕ್ಷೆಯನ್ನು ಐಸಿಸಿ ನೀಡಿದೆ. ಇದೇ ಭಜ್ಜಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲ್ ಟ್ಯಾಂಪರಿಂಗ್ ನಂತಹ ದೊಡ್ಡ ಪ್ರಮಾಣದ ಅಪರಾಧಕ್ಕೆ ಇಂತಹ ಕ್ಷುಲ್ಲಕ ಶಿಕ್ಷೆ ನೀಡಿರುವ ಐಸಿಸಿ, ಈ ಹಿಂದೆ ತಮ್ಮ ವಿರುದ್ಧದ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಜ್ಜಿ ‘ವಾವ್ ಐಸಿಸಿ.... ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕಾನೂನು ಇದೆಯೇ? ದಕ್ಷಿಣ ಆಫ್ರಿಕಾದಲ್ಲಿ 2001 ರಲ್ಲಿ ನಾವು ಹೆಚ್ಚು ಬಾರಿ ಅಪೀಲ್ ಮಾಡಿದೆವೆಂಬ ಕಾರಣಕ್ಕೇ ನಮ್ಮ ತಂಡದ 6 ಮಂದಿಗೆ ನಿಷೇಧ ಹೇರಿದ್ರಿ? ಈಗ್ಯಾಕೆ ಚೆಂಡು ವಿರೂಪಗೊಳಿಸಿದ ಬ್ಯಾನ್ ಕ್ರಾಫ್ಟ್ ಗೆ ನಿಷೇಧವಿಲ್ಲ? 2008 ರ ಸಿಡ್ನಿ ಟೆಸ್ಟ್ ಘಟನೆ ನಿಮಗೆ ನೆನಪಿಲ್ಲವೇ? ತಪ್ಪು ಮಾಡದೆಯೂ 3 ಪಂದ್ಯಕ್ಕೆ ನಿಷೇಧ ಹೇರಿದಿರಿ. ಈಗ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮವೇ’ ಎಂದು ಕಿಡಿಕಾರಿದ್ದಾರೆ.
ಭಜ್ಜಿ ಟ್ವೀಟ್ ಇದೀಗ ವೈರಲ್ ಆಗುತ್ತಿದ್ದು, ಐಸಿಸಿಯ ತಾರತಮ್ಯ ನೀತಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಬಾಲ್ ಟ್ಯಾಂಪರಿಂಗ್ ಪ್ರಕರಣದ ಆರೋಪಿತ ಕ್ರಿಕೆಟರ್ ಗಳ ವಿರುದ್ಧ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiTwitterಟ್ವಿಟರ್ಐಸಿಸಿHarbhajan Singhಹರ್ಭಜನ್ ಸಿಂಗ್ICCBall Tampering Rowಚೆಂಡು ವಿರೂಪಗೊಳಿಸಿದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


