ಕ್ರಿಕೆಟ್

ದಾಖಲೆ ಬರೆದ ಮಿಸ್ಟರ್ ಕೂಲ್, ಅಜರುದ್ದೀನ್ ದಾಖಲೆ ಪತನ!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯೊಂದನ್ನು ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ದಾಖಲೆ ಬರೆದ ಮಿಸ್ಟರ್ ಕೂಲ್, ಅಜರುದ್ದೀನ್ ದಾಖಲೆ ಪತನ!
ಸಂಗ್ರಹ ಚಿತ್ರ
Published On :

ಆಂಟಿಗುವಾ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯೊಂದನ್ನು ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಭಾರತೀಯ ತಂಡದ ಪರವಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಧೋನಿ, 4ನೇ ಸ್ಥಾನದಲ್ಲಿದ್ದ ಮಹಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್ ನಲ್ಲಿ ಧೋನಿ ಒಟ್ಟು  291 ಪಂದ್ಯಗಳಲ್ಲಿ 9,442 ರನ್ ಗಳಿಸಿದ್ದು, 334 ಪಂದ್ಯಗಳನ್ನಾಡಿರುವ ಅಜರುದ್ದೀನ್ ಒಟ್ಟು 9378 ರನ್ ಗಳನ್ನು ಕಲೆ ಹಾಕಿದ್ದಾರೆ.

ಇನ್ನು ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, ಸಚಿನ್ ಒಟ್ಟು 463 ಏಕದಿನ ಪಂದ್ಯಗಳಲ್ಲಿ ಒಟ್ಟು 18426 ರನ್ ಗಳನ್ನು ಕಲೆಹಾಕಿದ್ದಾರೆ. 2ನೇ ಸ್ಥಾನದಲ್ಲಿರುವ ಗಂಗೂಲಿ 308 ಏಕದಿನ ಪಂದ್ಯಗಳಲ್ಲಿ  11221 ರನ್ ಗಳಿಕೆ ಮಾಡಿದ್ದಾರೆ. ಅಂತೆಯೇ ಮೂರನೇ ಸ್ಥಾನದಲ್ಲಿರುವ ದ್ರಾವಿಡ್ 340 ಏಕದಿನ ಪಂದ್ಯಗಳಲ್ಲಿ 10768 ರನ್ ಗಳನ್ನು ಗಳಿಸಿದ್ದಾರೆ.

ಇನ್ನು ಅಜರುದ್ದೀನ್ ಬಳಿಕದ ಸ್ಥಾನದಲ್ಲಿ ಯುವರಾಜ್ ಸಿಂಗ್ ಇದ್ದು, ಯುವಿ ಒಟ್ಟು 301 ಏಕದಿನ ಪಂದ್ಯಗಳಲ್ಲಿ ಒಟ್ಟು 8609 ರನ್ ಕಲೆಹಾಕಿದ್ದಾರೆ. ಯುವಿ ಬಳಿಕದ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ  187 ಏಕದಿನ ಪಂದ್ಯಗಳಲ್ಲಿ ಒಟ್ಟು 8143 ರನ್ ಗಳನ್ನು ಕಲೆಹಾಕಿದ್ದಾರೆ.

ಬರೊಬ್ಬರಿ 2 ವರ್ಷಗಳ ಬಳಿಕ ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಇನ್ನು ಈ ಪಂದ್ಯದಲ್ಲಿ ಧೋನಿ ಆಜೇಯ 78 ರನ್ ಗಳಿಸಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಅಂತೆಯೇ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಧೋನಿ ಕಳೆದ 2 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ  ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, 2015ರ ಅಕ್ಟೋಬರ್ ನಲ್ಲಿ ಧೋನಿ ಕೊನೆಯ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

50ಕ್ಕೂ ಹೆಚ್ಚು ರನ್, ವಿಂಡೀಸ್ ನ ಡೆಸ್ಮಾಂಡ್ ಹೇನ್ಸ್ ದಾಖಲೆ ಸರಿಗಟ್ಟಿದ ಧೋನಿ
ಇದೇ ಪಂದ್ಯದಲ್ಲಿ ಧೋನಿ ವಿಂಡೀಸ್ ಬ್ಯಾಟಿಂಗ್ ದಂತಕಥೆ ಡೆಸ್ಮಾಂಡ್ ಹೇನ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದು, ಡೆಸ್ಮಾಂಡ್ ಹೇನ್ಸ್ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿರುವ ದಾಖಲೆ ಬರೆದಿದ್ದಾರೆ.  ಡೆಸ್ಮಾಂಡ್ ಹೇನ್ಸ್ ಒಟ್ಟು 73 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದು, ಧೋನಿ ಕೂಡ 73 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಸಿಕ್ಸರ್ ಗಳಿಕೆಯಲ್ಲೂ ಧೋನಿ ದಾಖಲೆ
ಇನ್ನು ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಧೋನಿ 5ನೇ ಸ್ಥಾನದಲ್ಲಿದ್ದು, ಧೋನಿ ನಿನ್ನೆಯ ಪಂದ್ಯದಲ್ಲಿ 2 ಸಿಕ್ಸರ್ ಸಿಡಿಸಿದ್ದರು. ಅದರೊಂದಿಗೆ ಧೋನಿ ತಮ್ಮ ಸಿಕ್ಸರ್ ಗಳಿಕೆಯನ್ನು 322ಕ್ಕೆ ಏರಿಸಿಕೊಂಡಿದ್ದಾರೆ.  ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಒಟ್ಟು 352 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.