ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಯ್ಕೆ: ಸಿಎಸಿ ವಿರುದ್ಧ ಕೊಹ್ಲಿ ಅಸಮಾಧಾನ!

ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ಬೆನ್ನಲ್ಲೇ ಆಡಳಿತ ಮಂಡಳಿ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಒಂದೊಂದೇ ಭಿನ್ನಾಭಿಪ್ರಾಯ ವಿಚಾರಗಳು ಬಹಿರಂಗವಾಗುತ್ತಿದ್ದು,...

ಟೀಂ ಇಂಡಿಯಾ ಕೋಚ್ ಆಯ್ಕೆ: ಸಿಎಸಿ ವಿರುದ್ಧ ಕೊಹ್ಲಿ ಅಸಮಾಧಾನ!
ಸಂಗ್ರಹ ಚಿತ್ರ
Published On :

ನವದೆಹಲಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ಬೆನ್ನಲ್ಲೇ ಆಡಳಿತ ಮಂಡಳಿ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಒಂದೊಂದೇ ಭಿನ್ನಾಭಿಪ್ರಾಯ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ಕೋಚ್  ಆಯ್ಕೆ ವಿಚಾರದಲ್ಲಿ ಕೊಹ್ಲಿ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರ ವಿರುದ್ಧವೇ ಗರಂ ಆಗಿದ್ದಾರಂತೆ.

ಅನಿಲ್ ಕುಂಬ್ಳೆ ಆಯ್ಕೆ ಮಾಡುವ ವೇಳೆ ಕೊಹ್ಲಿ ಅಂದು ಅರ್ಜಿ ಸಲ್ಲಿಕೆ ಮಾಡಿದ್ದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಪರವಾಗಿ ಇದ್ದರೂ, ಸಿಎಸಿ ಸದಸ್ಯರು ಮಾತ್ರ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದ್ದರಂತೆ.  ಇದೇ ಕಾರಣಕ್ಕೆ ಇದೀಗ ಕೊಹ್ಲಿ ಸಿಎಸಿ ಸದಸ್ಯರ ವಿರುದ್ಧ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಕುಂಬ್ಳೆ ಜೊತೆಗಿನ ಗಲಾಟೆ ಸಂದರ್ಭದಲ್ಲಿ ನಡೆದ ಸಭೆ ವೇಳೆ ಮತ್ತು ಇದೀಗ ನೂತನ ಕೋಚ್ ಆಯ್ಕೆ ಸಂಬಂಧ ನಡೆದ ಮಾತುಕತೆ ವೇಳೆ ಕೊಹ್ಲಿ ಸಿಎಸಿ ಸದಸ್ಯರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಈ ವೇಳೆ ಕೊಹ್ಲಿ "ಈ ಮೊದಲು ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ತಂಡದ ನಾಯಕನ ಮತ್ತು ಆಟಗಾರರ ಮಾತಿಗೆ ಬೆಲೆ ನೀಡಲಾಗುತ್ತಿತ್ತು. ತಂಡಕ್ಕೆ ಹೊಂದಿಕೊಳ್ಳುವ ಕೋಚ್ ಆಯ್ಕೆ ಮಾಡಲಾಗುತ್ತಿತ್ತು. ಜಾನ್ ರೈಟ್, ಗ್ರೆಗ್ ಚಾಪೆಲ್ ಮತ್ತು ಗ್ಯಾರಿ ಕರ್ಸ್ಟನ್ ಇವರೆಲ್ಲರ ಆಯ್ಕೆ ಸಂದರ್ಭದಲ್ಲಿ ತಂಡದ ನಾಯಕನ ಭಾವನೆಗೆ ಬೆಲೆ ನೀಡಲಾಗಿತ್ತು. ಆದರೀಗ ಅದಕ್ಕೆ ತದ್ವಿರುದ್ಧವಾಗಿದ್ದು, ಸಿಎಸಿ ಆಯ್ಕೆ ಮಾಡಿದವರನ್ನೇ ಕೋಚ್ ಆಗಿ ಸ್ವೀಕರಿಸುವಂತೆ ಆಟಗಾರರ ಮೇಲೆ ಪರೋಕ್ಷ ಒತ್ತಡ ಹೇರಲಾಗುತ್ತಿದೆ" ಎಂದು ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂದಿನ ಕೋಚ್ ಆಯ್ಕೆ ಪ್ರಕ್ರಿಯೆ ವೇಳೆ ಶಾಸ್ತ್ರಿ ಅವರ 2 ವರ್ಷಗಳ ನಿರ್ದೇಶಕ ಸ್ಥಾನದ ಅನುಭವದ ಹೊರತಾಗಿಯೂ ಶಾಸ್ತ್ರಿ ಅವರನ್ನು ಪಕ್ಕಕ್ಕಿಟ್ಟು, ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಅಂದು ಸಚಿನ್ ರವಿಶಾಸ್ತ್ರಿ  ಪರವಾಗಿ ಮತ ಹಾಕಿದ್ದರೆ, ಗಂಗೂಲಿ ಕುಂಬ್ಳೆ ಪರವಾಗಿ ಮತಹಾಕಿದ್ದರಂತೆ. ಹೀಗಾಗಿ ಲಕ್ಷ್ಮಣ್ ಅವರ ಮತ ನಿರ್ಣಾಯಕವಾಗಿ ಅವರೂ ಕೂಡ ಕುಂಬ್ಳೆ ಪರವಾಗಿ ಮತಹಾಕಿದ್ದರಿಂದ ಕೋಚ್ ಹುದ್ದೆ ಕುಂಬ್ಳೆ ಪಾಲಾಗಿತ್ತು ಎಂಬ ವಿಚಾರ  ಬೆಳಕಿಗೆ ಬಂದಿದೆ.

ಇಂದೂ ಕೂಡ ಅಂದರೆ ಕುಂಬ್ಳೆ ರಾಜಿನಾಮೆ ಬಳಿಕ ಗಂಗೂಲಿ ಅವರನ್ನು ಹೊರತು ಪಡಿಸಿದರೆ ಸಚಿನ್ ಮತ್ತು ಲಕ್ಷ್ಮಣ್ ರವಿ ಶಾಸ್ತ್ರಿ ಪರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾದ ಮುಂದಿನ ಕೋಚ್ ಆಗಿ ರವಿ  ಶಾಸ್ತ್ರಿ ಅವರೇ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ನಾಯಕ ವಿರಾಟ್ ಕೊಹ್ಲಿ ಕೂಡ ಶಾಸ್ತ್ರಿ ಪರವಾಗಿದ್ದು, ಕೊಹ್ಲಿಯನ್ನು ನಾಯಕರನ್ನಾಗಿ ಆಯ್ಕೆ ಮಾಡುವಲ್ಲಿ ಶಾಸ್ತ್ರಿ ಅವರೂ ಕೂಡ ಕಾರಣ. ಹೀಗಾಗಿ ಶಾಸ್ತ್ರಿ ಅವರೇ ಕೋಚ್  ಆಗಿ ನೇಮಕವಾಗಿ ಎಂಬುದು ವಿರಾಟ್ ಕೊಹ್ಲಿ ಅವರ ಪರೋಕ್ಷ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.