ಕೋಚ್ ಕುಂಬ್ಳೆ ರಾಜಿನಾಮೆ; ಕೊಹ್ಲಿ ವಿರುದ್ಧ ಟೀಕೆಗಳ ಸುರಿಮಳೆ!
ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆ ಕೊಹ್ಲಿಯೇ ನೇರ ಕಾರಣ ಎಂಬ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಕುಂಬ್ಳೆ ರಾಜಿನಾಮೆ ಕೊಹ್ಲಿಯೇ ನೇರ ಕಾರಣ ಎಂಬ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ.
ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಅನಿಲ್ ಕುಂಬ್ಳೆ ಸ್ಪಷ್ಟಪಡಿಸಿದ ಬಳಿಕ, ಕೊಹ್ಲಿ ವಿರುದ್ಧ ಟೀಕೆಗಳ ಸುರಿಮಳೆ ಶುರುವಾಗಿದ್ದು, ಕ್ರಿಕೆಟ್ ಮಾಜಿ ನಾಯಕರು, ಆಟಗಾರರು, ವಿವಿಧ ಕ್ರೀಡೆಗಳ ದಿಗ್ಗಜರು, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಭಾರತೀಯ ನಾಯಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಬ್ಳೆ ರಾಜೀನಾಮೆ ನೀಡಿದ ದಿನವನ್ನು ಭಾರತೀಯ ಕ್ರಿಕೆಟ್‌ಗೆ ಬೇಸರದ ದಿನ ಎಂದಿರುವ ಮಾಜಿ ನಾಯಕ ಸುನಿಲ್ ಗವಾಸ್ಕರ್ "ಆಟಗಾರರು ಮೃದುವಾಗಿ ಮಾತನಾಡುವ, ತಾವು ಹೇಳಿದಂತೆ ಕೇಳುವ ಕೋಚ್ ಬೇಕೆಂದು ಅಪೇಕ್ಷಿಸಿದರೆ ಆ ಸ್ಥಾನಕ್ಕೆ ಅನಿಲ್ ಕುಂಬ್ಳೆ ಸೂಕ್ತರಲ್ಲ. ಆಟಗಾರನಾಗಿದ್ದಾಗಲೂ ಅಷ್ಟೇ, ಕೋಚ್ ಆದಾಗಲೂ ಅಷ್ಟೇ ಶಿಸ್ತಿಗೆ ಕುಂಬ್ಳೆ ನೀಡುವಷ್ಟು ಪ್ರಾಮುಖ್ಯತೆ ಬೇರಾರಯರೂ ನೀಡುವುದಿಲ್ಲ. ಹೀಗಾಗಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗಿದ್ದರೆ ಅದು ಆಟಗಾರರ ತಪ್ಪು' ಎಂದು ಟೀಕಿಸಿದ್ದಾರೆ. ಅಂತೆಯೇ ಈ ವಿವಾದಕ್ಕೆ ಕಾರಣವಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ವೀರೇಂದ್ರ ಸೆಹ್ವಾಗ್ ಸಹ ಮಾತನಾಡಿದ್ದು, ‘ಕುಂಬ್ಳೆಯಿಂದ ತೆರವಾಗಿರುವ ಸ್ಥಾನವನ್ನು ತುಂಬುವುದು ಕಷ್ಟ'ಎಂದು ಹೇಳಿದ್ದಾರೆ.
ಕೇವಲ ಮಾಜಿ ಆಟಗಾರರು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಕೊಹ್ಲಿ ವಿರುದ್ಧ ಅಸಂಖ್ಯಾತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕುಂಬ್ಳೆ ಮುಂದುವರಿಯಬೇಕು ಎಂದು ಸಲಹಾ ಸಮಿತಿ ನಿರ್ಧರಿಸಿತ್ತು. ಆದರೆ ಕೊಹ್ಲಿಯ ಹಠದಿಂದಾಗಿ ಕುಂಬ್ಳೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಎದುರಾಗಿದ್ದು ದುರಂತ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಭಾರತೀಯ ನಾಯಕ ಕೇವಲ ಕುಂಬ್ಳೆಗೆ ಮಾತ್ರವಲ್ಲ, ಸಲಹಾ ಸಮಿತಿಯಲ್ಲಿರುವ ಸಚಿನ್, ಗಂಗೂಲಿ, ಲಕ್ಷ್ಮಣ್‌ಗೂ ಅವಮಾನಿಸಿದ್ದಾರೆ. ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ವಿಸ್ತೃತ ವರದಿ ಕೇಳಿದ ಆಡಳಿತ ಮಂಡಳಿ
ಇದೇ ವೇಳೆ ಕೊಹ್ಲಿ-ಕುಂಬ್ಳೆ ನಡುವಿನ ವಿವಾದಕ್ಕೆ ಕಾರಣಗಳೇನು ಎಂಬುದರ ಕುರಿತು ವಿಸ್ತೃತ ವರದಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ತಿಳಿಸಿದೆ.
ಇಂದು ಕೊಹ್ಲಿ ಸುದ್ದಿಗೋಷ್ಠಿ?
ಮತ್ತೊಂದೆಡೆ ಕುಂಬ್ಳೆ ರಾಜಿನಾಮೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ನಾಯಕ ವಿರಾಟ್ ಕೊಹ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ವೇಳೆಗೆ ಕೊಹ್ಲಿ ಸುದ್ದಿಗೋಷ್ಟಿ ಕರೆಯುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


