ಐಸಿಸಿ ಚಾಂಪಿಯನ್ಸ್ ಟ್ರೋಫಿ: 48 ಓವರ್ ಆದರೂ ಪಾಕಿಸ್ತಾನಕ್ಕೆ 5 ರನ್ ಗಳ ಹೆಚ್ಚುವರಿ ರನ್ ಗುರಿ ನೀಡಿದ್ದೇಕೆ?
ಭಾನುವಾರದ ಪಂದ್ಯದಲ್ಲಿ ಭಾರತ ಗಳಿಸಿದ್ದು 319 ರನ್ ಗಳೇ ಆದರೂ ಪಾಕಿಸ್ತಾನಕ್ಕೆ 324 ರನ್ ಗಳ ಅಂದರೆ 5 ರನ್ ಗಳ ಹೆಚ್ಚುವರಿ ಗುರಿ ನೀಡಿದ್ದೇಕೆ ಎಂಬ ಅನುಮಾನಗಳು ಮೂಡಿದ್ದು, ಇದಕ್ಕೆ ಉತ್ತರ ಇಲ್ಲಿದೆ...

Published On :
ಬರ್ಮಿಂಗ್ ಹ್ಯಾಮ್: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಭಾನುವಾರದ ಪಂದ್ಯದಲ್ಲಿ ಭಾರತ ಗಳಿಸಿದ್ದು 319 ರನ್ ಗಳೇ ಆದರೂ ಪಾಕಿಸ್ತಾನಕ್ಕೆ 324 ರನ್ ಗಳ ಅಂದರೆ 5 ರನ್ ಗಳ ಹೆಚ್ಚುವರಿ ಗುರಿ ನೀಡಿದ್ದೇಕೆ ಎಂಬ ಅನುಮಾನಗಳು ಮೂಡಿದ್ದು, ಇದಕ್ಕೆ ಉತ್ತರ ಇಲ್ಲಿದೆ...
ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ನಿರೀಕ್ಷೆಯಂತೆಯೇ ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗುತ್ತಿದ್ದು, ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಪ್ರಮುಖವಾಗಿ ಇಡೀ ಪಂದ್ಯಕ್ಕೆ ಆಗಾಗ ಸುರಿಯುತ್ತಿದ್ದ ಮಳೆ ಕೊಂಚ ಅಡ್ಡಿ ಪಡಿಸಿತ್ತೇ ಆದರೂ, ಮಳೆ ನಿಂತು ಹೋದ ಮೇಲೆ ಅಂಪೈರ್ ಗಳು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ಕುತೂಹಲ ಕೆರಳಿಸುತ್ತಿತ್ತು. ಮೊದಲ ಬಾರಿ ಮಳೆ ಬಂದಾಗ ತಲಾ 2 ಓವರ್ ಗಳ ಕಡಿತಕ್ಕೆ ಮುಂದಾಗಿದ್ದ ಅಂಪೈರ್ ಗಳು ಎರಡನೇ ಬಾರಿ ಮಳೆ ಬಂದಾಗಲೂ ಮತ್ತೊಂದು ಅಚ್ಚರಿ ನಿರ್ಣಯ ಕೈಗೊಂಡರು.
ಅದೇನೆಂದರೆ 48 ಓವರ್ ಗಳಲ್ಲಿ ಭಾರತ 319 ರನ್ ಗಳಿಸಿತ್ತು. ಹೀಗಾಗಿ ಪಾಕಿಸ್ತಾನ ತಂಡ 320 ರನ್ ಗಳ ಗುರಿಯನ್ನು ಬೆನ್ನ ಹತ್ತಬೇಕಿತ್ತು. ಆದರೆ ಅಂಪೈರ್ ಗಳು ಪಾಕಿಸ್ತಾನಕ್ಕೆ ಹೆಚ್ಚುವರಿ 5 ರನ್ ಗಳು ಅಂದರೆ 324 ರನ್ ಗಳ ಗುರಿಯನ್ನು ನೀಡಿದರು. ಇದು ಕ್ರಿಕೆಟ್ ಪ್ರಿಯರಿಕೆ ಅಚ್ಚರಿಯನ್ನುಂಟು ಮಾಡಿತ್ತು. ಹೀಗೇಕೆ ಪಾಕಿಸ್ತಾನಕ್ಕೆ ಹೆಚ್ಚುವರಿ 5 ರನ್ ಗಳ ಗುರಿ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಡಕ್ವರ್ಥ-ಲೂಯಿಸ್ ಸ್ಟರ್ನ್ ನಿಯಮ..
ಹೌದು ಪಾಕಿಸ್ತಾನಕ್ಕೆ ಹೆಚ್ಚುವರಿ 5 ರನ್ ಗಳ ಗುರಿ ನೀಡಲು ಇದೇ ಡಕ್ವರ್ಥ್ ಲೂಯಿಸ್ ನಿಯಮ ಕಾರಣ...
ಓವರ್ ಗಳನ್ನು ಕಡಿತಗೊಳಿಸಿದಾಗ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಅನಾನುಕೂಲತೆಗಳು ಹೆಚ್ಚು. 50 ಓವರ್ ಗಳ ಪಂದ್ಯಕ್ಕೆ ಮೊದಲು ಬ್ಯಾಟ್ ಮಾಡುವ ತಂಡ ಸಿದ್ಧವಾಗಿರುತ್ತದೆ. ಆದರೆ ಕಾರಣಾಂತರಗಳಿಂದ ಓವರ್ ಗಳಲ್ಲಿ ಕಡಿತವಾದರೆ ಮೊದಲು ಬ್ಯಾಟಿಂಗ್ ಮಾಡುವ ತಂಡ ತನ್ನ ಯೋಜನೆಗಳನ್ನು ಪುನರ್ ರೂಪಿಸಬೇಕು. ಹೀಗಾದಾಗ ಅನಾನುಕೂಲಗಳೇ ಹೆಚ್ಚು. ಆದರೆ ಎರಡನೇ ಬಾರಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಅನಾನುಕೂಲಕ್ಕಿಂತ ಅನುಕೂಲ ಹೆಚ್ಚು. ಮೊದಲು ಬ್ಯಾಟಿಂಗ್ ಮಾಡಿದ ತಂಡ ನೀಡುವ ಗುರಿಯ ಆಧಾರದ ಮೇಲೆ ರನ್ ಚೇಸ್ ಮಾಡುವ ತಂಡ ಯೋಜನೆ ರೂಪಿಸಲು ಕಾಲಾವಕಾಶವಿರುತ್ತದೆ. ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಭಾರತ ತಂಡ ಬ್ಯಾಟಿಂಗ್ ಮಾಡುವಾಗ ಮಳೆಯಿಂದಾಗಿ ಸುಮಾರು 50 ನಿಮಿಷಗಳಷ್ಟು ಸಮಯ ವ್ಯರ್ಥವಾಗಿತ್ತು. ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ನೀಡಲಾಗಿದ್ದ ಗುರಿಯಲ್ಲಿ 5 ಹೆಚ್ಚುವರಿ ರನ್ ಗಳನ್ನು ನೀಡಲಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಕ್ಕೆ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ?
ಇನ್ನು ಯಾವುದೇ ಕಾರಣದಿಂದ ಪಂದ್ಯ ತಾತ್ಕಾಲಿಕ ಸ್ಥಗಿತವಾದರೆ ಈ ವೇಳೆ ಡಕ್ವರ್ಥ್ ಲೂಯಿಸ್ ನಿಯಮವನ್ನು ಅಳಡಿಸಲಾಗುತ್ತದೆ. ಈ ನಿಯಮ ಅನ್ವಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ರನ್ ಗಳಿಕೆ, ರನ್ ಗಳಿಕೆ ವೇಗ ಹಾಗೂ ಎಷ್ಟು ವಿಕೆಟ್ ಕಳೆದುಕೊಳ್ಳಲಾಗಿದೆ ಎಂಬ ಅಂಶಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆ ಎರಡನೇ ತಂಡಕ್ಕೆ ರನ್ ಚೇಸ್ ಗುರಿಯನ್ನು ನಿಗದಿಪಡಿಸಲಾಗುತ್ತದೆ. ಇದೇ ಅಂಶಗಳ ಆಧಾರದ ಮೇಲೆಯೇ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ರನ್ ಗುರಿಯನ್ನು ಹೆಚ್ಚುವರಿ 5 ರನ್ ಗಳಿಗೆ ನಿಗದಿ ಪಡಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 48 ಓವರ್ ಗಳಲ್ಲಿ 6.64 ಸರಾಸರಿಯಲ್ಲಿ ರನ್ ಪೇರಿಸಿತ್ತು. ಅಲ್ಲದೆ ಕೇವಲ 3 ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡಿತ್ತು. ಇದೂ ಕೂಡ ಪಾಕಿಸ್ತಾನದ ರನ್ ಗುರಿ ಬದಲಾಗಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತPakistanಪಾಕಿಸ್ತಾನಇಂಗ್ಲೆಂಡ್EnglandBirminghamಬರ್ಮಿಂಗ್ ಹ್ಯಾಮ್Cricket Offbeatಕ್ರಿಕೆಟ್ ಸ್ವಾರಸ್ಯICC Champions Trophyಐಸಿಸಿ ಚಾಂಪಿಯನ್ಸ್ ಟ್ರೋಫಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


