ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಈಗ ಆರ್ ಬಿಐ ಆಧಿಕಾರಿ!
ಒಂದು ಕಾಲದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಇದೀಗ ಆರ್ ಬಿಐ ಅಧಿಕಾರಿಯಾಗಿ ನೇಮಕವಾಗಿದ್ದಾರೆ...

ನವದೆಹಲಿ: ಒಂದು ಕಾಲದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿದ್ದ ಕ್ರಿಕೆಟಿಗ ಉಮೇಶ್ ಯಾದವ್ ಇದೀಗ ಆರ್ ಬಿಐ ಅಧಿಕಾರಿಯಾಗಿ ನೇಮಕವಾಗಿದ್ದಾರೆ...
ಹೌದು.. ಟೀಂ ಇಂಡಿಯಾದ ಖ್ಯಾತ ವೇಗಿ ಉಮೇಶ್ ಯಾದವ್ ಅವರ ತಂದೆಯ ಕನಸಿನಂತೆ ಸರ್ಕಾರಿ ನೌಕರಿ ಗಿಟ್ಟಿಸಿದ್ದು, ಇದೀಗ ಆರ್ ಬಿಐ ಆಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್, ತಮ್ಮ ಕಿರಿಯ ಮಗ ಉಮೇಶ್ ಯಾದವ್ ಸರ್ಕಾರಿ ಕೆಲಸದಲ್ಲಿರಬೇಕು ಎಂದು ಬಯಸಿದ್ದರಂತೆ. ಇದೇ ಕಾರಣಕ್ಕಾಗಿ ಉಮೇಶ್ ಕೂಡ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ನಡೆದ ಪರೀಕ್ಷೆಯನ್ನೂ ಬರೆದಿದ್ದರು. ದುರದೃಷ್ಟವಶಾತ್, ಉಮೇಶ್ ಪರೀಕ್ಷೆ ಪಾಸ್ ಮಾಡಲು ಆಗಿರಲಿಲ್ಲ.
ಆದರೆ ಹತ್ತು ವರ್ಷಗಳ ಬಳಿಕ ಹಾಲಿ ವಿಶ್ವ ಕ್ರಿಕೆಟ್ ನ ಪ್ರಮುಖ ವೇಗದ ಬೌಲರ್ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಉಮೇಶ್, ಪೊಲೀಸ್ ಪೇದೆಗಿಂತ ದೊಡ್ಡ ಮಟ್ಟದ ಸರ್ಕಾರಿ ನೌಕರಿಯನ್ನು ಸಂಪಾದಿಸಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ನಾಗ್ಪುರ ಕಚೇರಿಯಲ್ಲಿ 29 ವರ್ಷದ ಉಮೇಶ್ ಯಾದವ್ ಗೆ ಸಹಾಯಕ ವ್ಯವಸ್ಥಾಪಕ ಹುದ್ದೆ ಲಭಿಸಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ತೆರಳಲಿರುವ ಭಾರತ ತಂಡವನ್ನು ಕೂಡಿಕೊಳ್ಳುವ ಮುನ್ನ ಸೋಮವಾರ ಆರ್ಬಿಐ ಕಚೇರಿಗೆ ತೆರಳಿ, ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
‘ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾತುಕತೆ ನಡೆಸುತ್ತಿದ್ದೆವು. ಕಳೆದ ಮೇ ತಿಂಗಳಿನಲ್ಲಿ ಇಂಗ್ಲೆಂಡ್ ಗೆ ಹೊರಡುವ ಮುನ್ನ ಆರ್ ಬಿಐ ಅಧಿಕಾರಿಗಳೊಂದಿಗೆ ಉಮೇಶ್ ಮಾತನಾಡಿದ್ದರು. ಅಧಿಕಾರಿಗಳು ಕ್ರೀಡಾ ಕೋಟಾದಡಿಯಲ್ಲಿ ಉಮೇಶ್ ಗೆ ಹುದ್ದೆ ನೀಡಲು ಒಪ್ಪಿದ್ದಾರೆ. ಆದರೆ, ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಸರಣಿ ಇದ್ದ ಕಾರಣ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ’ ಎಂದು ಆರ್ ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2008ರಲ್ಲಿ ವಿದರ್ಭ ತಂಡದ ಪರವಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ತಂಡದ ನಾಯಕ ಪ್ರೀತಮ್ ಗಂಧೆ, ಉಮೇಶ್ ರನ್ನು ಏರ್ ಇಂಡಿಯಾ ಕಚೇರಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದರು. ಆದರೆ, ಉತ್ತಮ ನಿರ್ವಹಣೆ ನಡುವೆಯೂ ಏರ್ ಇಂಡಿಯಾ ಹುದ್ದೆಯನ್ನು ಪರ್ಮನೆಂಟ್ ಮಾಡಿರಲಿಲ್ಲ. ‘ರಾಜ್ಯ ತಂಡವನ್ನು ಪ್ರತಿನಿಧಿಸಿದ ಬೆನ್ನಲ್ಲಿಯೇ ಅವರು ಪರ್ಮನೆಂಟ್ ಸರ್ಕಾರಿ ಹುದ್ದೆ ಪಡೆದುಕೊಳ್ಳಬಹುದಿತ್ತು. ಆದರೆ, ಅದು ಕೂಡ ಸಾಧ್ಯವಾಗಿರಲಿಲ್ಲ. ಹೀಗಾಗಿ ಇದಕ್ಕಿಂತಲೂ ಮಿಗಿಲಾದ ಗೌರವಾನ್ವಿತ ಸಂಸ್ಥೆಯನ್ನು ಪ್ರತಿನಿಧಿಸಬೇಕು ಎನ್ನುವ ಬಯಕೆ ಅವರಲ್ಲಿತ್ತು. ಹಾಗಾಗಿ ಕೆಲಸಕ್ಕೆ ಯಾವುದೇ ಆತುರ ತೋರಿರಲಿಲ್ಲ. ಈಗ ಅವರು ಆಸೆ ಪಟ್ಟಂತಹ ಕೆಲಸ ಸಿಕ್ಕಿದ್ದು, ಆರ್ ಬಿಐ ನಿಂದ ಕೆಲಸ ಗಿಟ್ಟಿಸಿದ್ದಾರೆ ಎಂದು ಗಂಧೆ ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


