ಕ್ರಿಕೆಟ್

ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್'ಗೆ ಮೊದಲೇ ಸಿಕ್ಕಿತ್ತು ಧೋನಿ ರಾಜಿನಾಮೆ ಸೂಚನೆ!

ಟೀಂ ಇಂಡಿಯಾ ನಾಯಕತ್ವಕ್ಕೆ ಎಂಎಸ್ ಧೋನಿ ರಾಜಿನಾಮೆ ನೀಡುವ ವಿಚಾರ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್ ಅವರಿಗೆ ಮೊದಲೇ ಇತ್ತು ಎನ್ನುವ ವಿಚಾರ ತಿಳಿದುಬಂದಿದೆ.

ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್'ಗೆ ಮೊದಲೇ ಸಿಕ್ಕಿತ್ತು ಧೋನಿ ರಾಜಿನಾಮೆ ಸೂಚನೆ!
ಸಂಗ್ರಹ ಚಿತ್ರ
Published On :

ನಾಗ್ಪುರ: ಟೀಂ ಇಂಡಿಯಾ ನಾಯಕತ್ವಕ್ಕೆ ಎಂಎಸ್ ಧೋನಿ ರಾಜಿನಾಮೆ ನೀಡುವ ವಿಚಾರ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್ ಅವರಿಗೆ ಮೊದಲೇ ಇತ್ತು ಎನ್ನುವ ವಿಚಾರ ತಿಳಿದುಬಂದಿದೆ.

ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್'ಗೆ ಧೋನಿ ನಾಗ್ಪುರದಲ್ಲಿಯೇ ತಮ್ಮ ನಿರ್ಧಾರ ತಿಳಿಸಿದ್ದರಂತೆ. ನಾಗ್ಪುರದಲ್ಲಿ ಜಾರ್ಖಂಡ್ ತಂಡದ ಮೆಂಟರ್ ಆಗಿದ್ದ ಧೋನಿ ಚಹಾ ವಿರಾಮದ ವೇಳೆ ಪ್ರಸಾದ್ ಜತೆ ದೀರ್ಘ  ಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ತಂಡದ ನಾಯಕತ್ವ ಸ್ಥಾನದಿಂದ ತಾವು ಕೆಳಗಿಳಿಯುವ ಕುರಿತು ಧೋನಿ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಧೋನಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್​ ಅವರು, "ಧೋನಿಯ ದೇಶಪ್ರೇಮ ಹಾಗೂ ಕ್ರಿಕೆಟ್ ತಂಡದ ಪರವಾಗಿ ಇದ್ದ ಬದ್ಧತೆ ನಮಗೆಲ್ಲರಿಗೂ ತಿಳಿದಿದೆ. ತಮ್ಮ  ಯೋಚನೆಯಲ್ಲಿ ಪೂರ್ಣ ಪ್ರಮಾಣದ ಸ್ಪಷ್ಟತೆ ಬಂದ ಬಳಿಕವೇ ಅವರು ಈ ಕಠಿಣ ನಿರ್ಧಾರ ಮಾಡಿದ್ದಾರೆ. ಅವರಿಗೆ ಇದು ಉತ್ತಮ ನಿರ್ಧಾರ ಎನಿಸಿರಬೇಕು. ಅವರ ನಿರ್ಧಾರಕ್ಕೆ ನಾವು ಗೌರವ ನೀಡಬೇಕಿದೆ" ಎಂದು ಹೇಳಿದ್ದಾರೆ.

ನಾಯಕತ್ವ ಹಸ್ತಾಂತರಕ್ಕೆ ಒತ್ತಡವಿರಲಿಲ್ಲ
ಇತ್ತೀಚೆಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕರಾಗಿ ಕಾಣುತ್ತಿರುವ ಅಮೋಘ ಯಶಸ್ಸು ಧೋನಿಗೆ ಸೀಮಿತ ಓವರ್ ತಂಡದ ನಾಯಕತ್ವ ತ್ಯಜಿಸಲು ಒತ್ತಡವನ್ನು ಹೆಚ್ಚಿಸಿತ್ತು ಎಂಬ ಅಭಿಪ್ರಾಯಗಳು ಕ್ರಿಕೆಟ್ ವಲಯದಲ್ಲಿ  ಕೇಳಿಬಂದಿತ್ತು. ಈ ಹಿಂದೆ ತಂಡದ ಮ್ಯಾನೇಜರ್ ಆಗಿದ್ದ ರವಿಶಾಸ್ತ್ರಿ ಅವರು ಕೊಹ್ಲಿಗೆ ಕ್ರಿಕೆಟ್ ಮೂರೂ ಮಾದರಿಯ ನಾಯಕತ್ವ ಪಟ್ಟಕಟ್ಟಲು ನಿರ್ಧರಿಸಿದ್ದರು. ಅಲ್ಲದೇ ಮಾಧ್ಯಮಗಳಲ್ಲೂ ಕೂಡ ಧೋನಿ ನಿವೃತ್ತಿ ಕುರಿತಂತೆ ಸಾಕಷ್ಟು  ಚರ್ಚೆಗಳಾಗಿದ್ದವು.

ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ, ಭಾರತದ ಮೂರೂ ಪ್ರಕಾರದ ತಂಡಗಳ ನಾಯಕತ್ವವನ್ನು ಕೊಹ್ಲಿಗೆ  ವಹಿಸಲು ಸರಿಯಾದ ಸಮಯ ಬಂದಿದೆ ಎಂದಿದ್ದರು. ಈ ಕಾರಣದಿಂದಲೂ ಧೋನಿ ನಾಯಕತ್ವ ತ್ಯಜಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಧೋನಿ ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಒಳಗಾಗಿರಲಿಲ್ಲ ಎಂದು ಅವರ ಆಪ್ತ ವಲಯದ  ಸ್ನೇಹಿತರು ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭವಿಷ್ಯ
ಜ.15ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ಆರಂಭವಾಗಲಿದೆ. ಅದರೊಂದಿಗೆ 77 ದಿನಗಳ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಾಪಸಾಗಲಿದ್ದಾರೆ. ಇನ್ನು ಜುಲೈನಲ್ಲಿ ನಡೆಯಲಿರುವ ಐಸಿಸಿ  ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯೂ ಧೋನಿ ಪಾಲಿಗೆ ಮಹತ್ವದ್ದಾಗಿದೆ. ಇದರಲ್ಲಿ ನೀಡುವ ನಿರ್ವಹಣೆಯೇ 2019ರ ಏಕದಿನ ವಿಶ್ವಕಪ್​ವರೆಗೆ ಧೋನಿ ತಂಡದಲ್ಲಿ ಉಳಿಯಲಿದ್ದಾರೆಯೇ ಎನ್ನುವುದನ್ನು ಸೂಚಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.