ಕ್ರೀಡಾಸ್ಫೂರ್ತಿ ಮರೆತು ಕ್ರಿಕೆಟಿಗರಿಗೆ ಅಪಮಾನ ಮಾಡಿದ ಶ್ರೀಲಂಕಾ ಪ್ರೇಕ್ಷಕರು!
ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯ ಶ್ರೀಲಂಕಾ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು.

Published On :
ಪಳ್ಳೆಕಿಲೆ: ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯ ಶ್ರೀಲಂಕಾ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು.
ಪಂದ್ಯದ 44ನೇ ಓವರ್ ನಲ್ಲಿ ಸಿರಿವರ್ಧನ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ 1 ಬೌಂಡರಿ ಹಾಗೂ ಧೋನಿ ಒಂದು ಭರ್ಜರಿ ಸಿಕ್ಸರ್ ಭಾರಿಸುವುದರೊಂದಿಗೆ ಭಾರತ ಗೆಲುವು ಖಚಿತವಾಗಿತ್ತು. ಈ ಹಂತದಲ್ಲಿ ಅಂದರೆ 45ನೇ ಓವರ್ ಆರಂಭಕ್ಕೂ ಮೊದಲೇ ಪ್ರೇಕ್ಷಕರ ಅಂಗಳದಲ್ಲಿದ್ದ ಶ್ರೀಲಂಕಾ ಅಭಿಮಾನಿಗಳು ಲಂಕಾ ತಂಡ ಹಾಗೂ ಲಂಕಾ ಕ್ರಿಕೆಟಿಗರ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಒಂದು ಹಂತದಲ್ಲಿಯಂತೂ ಪ್ರೇಕ್ಷಕರು ಮೈದಾನದಲ್ಲಿದ್ದ ಆಟಗಾರರತ್ತ ಬಾಟಲಿಗಳನ್ನೂ ತೂರುವ ಮೂಲಕ ಲಂಕಾ ಕ್ರಿಕೆಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಅಂಪೈರ್ ಗಳು ಕೆಲಕಾಲ ಆಟವನ್ನು ಸ್ಥಗಿತಗೊಳಿಸಿದ್ದರು. ಅಲ್ಲದೆ ಪ್ರೇಕ್ಷಕರ ಗ್ಯಾಲರಿಯನ್ನು ಸಮಾಧಾನ ಪಡಿಸುವಂತೆ ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದರು. ಭದ್ರತಾ ಸಿಬ್ಬಂದಿಗಳು ಮೈದಾನದ ಸುತ್ತಾ ಪರೇಡ್ ನಡೆಸಿ ಪ್ರೇಕ್ಷಕರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೈದಾನದಿಂದ ಬಹುತೇಕ ಪ್ರೇಕ್ಷಕರು ಹೊರಟು ಹೋಗಿದ್ದರು. ಬಳಿಕ ಮೈದಾನದಲ್ಲಿದ್ದ ಬಾಟಲಿಗಳನ್ನು ಸಿಬ್ಬಂದಿಗಳು ತೆರವುಗೊಳಿಸಿದ ಬಳಿಕ ಆಟ ಮತ್ತೆ ಆರಂಭವಾಯಿತು.
ತಮ್ಮ ತಂಡದ ಸೋಲನ್ನು ಅರಗಿಸಿಕೊಳ್ಳಲಾಗದ ಲಂಕಾ ಅಭಿಮಾನಿಗಳು ಈ ರೀತಿ ನಡೆದುಕೊಂಡಿದ್ದು ಮಾತ್ರ ನಿಜಕ್ಕೂ ದುರದೃಷ್ಟಕರ. ಕ್ರಿಕೆಟ್ ನಲ್ಲಿ ಈ ಹಿಂದೆ ಸಾಕಷ್ಟು ಭಾರಿ ಇಂತಹ ಘಟನೆಗಳು ಸಂಭವಿಸಿವೆ. ಭಾರತದ ಪ್ರೇಕ್ಷಕರೂ ಕೂಡ ಭಾರತ ಸೋತಾಗ ಇಂತಹ ವರ್ತನೆ ತೋರಿದ್ದಾರೆ. ಆದರೆ ಸೋಲುತ್ತಿರುವ ತಂಡಕ್ಕೆ ಬೆಂಬಲ ನೀಡಿ ಸ್ಪೂರ್ತಿಯಾಗಬೇಕಾದ ಅಭಿಮಾನಿಗಳೇ ಈ ರೀತಿ ನಡೆದುಕೊಂಡರೆ ಹೇಗೆ ಎಂಬ ಭಾವನೆ ಕ್ರೀಡಾ ಪ್ರೇಮಿಗಳನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


