ಅಲ್ಲಿ ಬೇಲ್... ಇಲ್ಲಿ ಸಿಡಿದೆದ್ದ ಕ್ರಿಸ್ ಗೇಯ್ಲ್: ಗುಜರಾತ್ ವಿರುದ್ದ ಆರ್ ಸಿಬಿಗೆ ಭರ್ಜರಿ ಜಯ!
ಗುಜರಾತ್ ಲಯನ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್, ನಾಯಕ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಚಾಹಲ್ ಅವರ ಅದ್ಬುತ ಬೌಲಿಂಗ್ ನೆರವಿನಿಂದಾಗಿ...

Published On :
ರಾಜ್ ಕೋಟ್: ಗುಜರಾತ್ ಲಯನ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್, ನಾಯಕ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಚಾಹಲ್ ಅವರ ಅದ್ಬುತ ಬೌಲಿಂಗ್ ನೆರವಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ.
ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ನೀಡಿದ್ದ 214 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬೆಂಗಳೂರು ತಂಡ 21 ರನ್ ಗಳ ಭರ್ಜರಿ ಜಯ ದಾಖಲಿಸಿತು. ಈ ಹಿಂದಿನ ನಾಲ್ಕು ಪಂದ್ಯಗಳ ಸೋಲಿನಿಂದಾಗಿ ಇಂದಿನ ಪಂದ್ಯ ಆರ್ ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಆದರೆ ಕ್ರಿಸ್ ಗೇಯ್ಲ್, ಕೊಹ್ಲಿ ಅದ್ಬುತ ಬ್ಯಾಟಿಂಗ್ ಮತ್ತು ಚಾಹಲ್ ಚಾಣಾಕ್ಷತನದ ಬೌಲಿಂಗ್ ನಿಂದಾಗಿ ಆರ್ ಸಿಬಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಜೀವಂತವಾಗಿ ಉಳಿದಿದೆ.
ಬೃಹತ್ ಮೊತ್ತವನ್ನು ಬೆನ್ನು ಹತ್ತಿದೆ ಗುಜರಾತ್ ಲಯನ್ಸ್ ತಂಡಕ್ಕೆ ಚಾಹಲ್ ಮೊದಲ ಆಘಾತ ನೀಡಿದರು. ಕೇವಲ 1 ರನ್ ಗಳಿಸಿದ್ದ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಆರ್ ಸಿಬಿ ಮೊದಲ ಮುನ್ನಡೆ ತಂದುಕೊಟ್ಟರು. ಗುಜರಾತ್ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುಷ್ಟರಲ್ಲಿಯೇ ಮತ್ತೊಂದು ವಿಕೆಟ್ ಉರುಳಿಸಿದ ಚಾಹಲ್ 23 ರನ್ ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ರೈನಾ ಅವರನ್ನು ಔಟ್ ಮಾಡಿದರು. ಆದರೆ ಮತ್ತೊಂದು ತುದಿಯಲ್ಲಿದ್ದ ಮೆಕ್ಕಲಮ್ ಮಾತ್ರ ಎಂದಿನಂತೆ ತಮ್ಮ ನೈಜ ಆಟ ಮುಂದುವರೆಸಿದ್ದರು. ಫಿಂಚ್ ಜೊತೆಗೂಡಿದ ಮೆಕ್ಕಲಮ್ ನೋಡ ನೋಡುತ್ತಿದ್ದಂತೆಯೇ ಅರ್ಧ ಶತಕ ಸಿಡಿಸಿದರು. ಈ ವೇಳೆ 19 ರನ್ ಗಳಿಸಿದ್ದ ಫಿಂಚ್ ಗೆ ನೇಗಿ ಪೆವಿಲಿಯನ್ ದಾರಿ ತೋರಿದರು. ಬಳಿಕ ಬಂದ ಕಾರ್ತಿಕ್ ಕೂಡ 1 ರನ್ ಗಳಿಸಿ ಅರವಿಂದ್ ಬೌಲಿಂಗ್ ನಲ್ಲಿ ಔಟ್ ಆದರು.
ಮತ್ತೊಂದು ತುದಿಯಲ್ಲಿ ಭರ್ಜರಿ ಆಟವಾಡುತ್ತಿದ್ದ ಮೆಕ್ಕಲಮ್ ಗೆ ಮತ್ತದೇ ಚಾಹಲ್ ಪೆವಿಲಿಯನ್ ದಾರಿ ತೋರಿದರು. ಆದರೆ ಅಷ್ಟರಲ್ಲಾಗಲೇ ಮೆಕ್ಕಲಮ್ 75 ರನ್ ಗಳಿಸಿದ್ದರು. ಬಳಿಕ ಬಂದ ಜಡೇಜಾ ಕೊಂಚ ಪ್ರತಿರೋಧ ತೋರಿದರಾದರೂ 23 ರನ್ ಗಳಿಸಿ ರನ್ ಔಟ್ ಆದರು. ಅಂತಿಮ ಓವರ್ ನಲ್ಲಿ 39 ರನ್ ಗಳಿಸಿ ಗುಜರಾತ್ ಗೆ ಗೆಲುವಿನ ಆಸೆ ಚಿಗುರಿಸಿದ್ದ ಇಶಾಂತ್ ಕಿಶನ್ ಔಟ್ ಆಗುವುದರೊಂದಿಗೆ ಗುಜರಾತ್ ಗೆಲುವಿನ ಆಸೆ ಕಮರಿತು. ಆರ್ ಸಿಬಿ ಪರ ಚಾಹಲ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕುಲಕರ್ಣಿ, ಅರವಿಂದ್ ಮತ್ತು ಮಿಲ್ನೆ ತಲಾ 1 ವಿಕೆಟ್ ಗಳಿಸಿದರು. ಅಂತಿಮವಾಗಿ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮೂಲಕ ಆರ್ ಸಿಬಿ ಎದುರು 21 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Rajkotರಾಯಲ್ ಚಾಲೆಂಜರ್ಸ್ ಬೆಂಗಳೂರುRoyal Challengers Bengaluruರಾಜ್ ಕೋಟ್Gujarat Lionsಗುಜರಾತ್ ಲಯನ್ಸ್ಐಪಿಎಲ್ 2017IPL 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


