ಅಪ್ಪನ ಮರಣ ವಾರ್ತೆ ಕೇಳಿಯೂ ತಾನು ಆಟ ಮುಂದುವರಿಸಿದ್ಯಾಕೆ ಎಂಬುದನ್ನು ಹೇಳಿದ್ದಾರೆ ಕೊಹ್ಲಿ!
ಅದು ಡಿಸೆಂಬರ್ 19, 2006ರ ಮುಸ್ಸಂಜೆ. ಕೊಹ್ಲಿಯ ಅಪ್ಪ ಪ್ರೇಮ್ ಕೊಹ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 18ರ ಹರೆಯದ ಕೊಹ್ಲಿ ಆಗ ದೆಹಲಿ...

Published On :
ವಿರಾಟ್ ಕೊಹ್ಲಿ! ಈತ ರನ್ ಮೆಶೀನ್. ಸಚಿನ್ ತೆಂಡೂಲ್ಕರ್‌ನ ಆಟವನ್ನು ನೋಡಿ ಬೆಳೆದ ಈ ಕ್ರಿಕೆಟಿಗ ಈಗ ಸಚಿನ್ ದಾಖಲೆಗಳನ್ನೇ ಮುರಿಯುತ್ತಿದ್ದಾನೆ. ಕ್ರಿಕೆಟ್ ಮೇಲಿನ ಈತನ ಒಲವು, ಆಸಕ್ತಿ ಮತ್ತು ಶೈಲಿಗೆ ಕ್ರಿಕೆಟ್ ಲೋಕವೇ ಜೈ ಎನ್ನುತ್ತಿದೆ. ವಿರಾಟ್ ಕೊಹ್ಲಿ ಎಂಬ ಈ ಅದ್ಭುತ ಆಟಗಾರ ತನ್ನ ಬದುಕಿನ ಏರು ಪೇರುಗಳು ಕ್ರಿಕೆಟ್ ಜೀವನವನ್ನು ಬಾಧಿಸದಂತೆ ನೋಡಿಕೊಂಡವನು. ಏನಿದ್ದರೂ ಕ್ರಿಕೆಟ್‌ಗೆ ಈತನ ಮೊದಲ ಆದ್ಯತೆ. ಇದೀಗ ಕೊಹ್ಲಿ ಕ್ರಿಕೆಟ್ ಬಗ್ಗೆ ತನ್ನ ಪ್ಯಾಷನ್ ಮತ್ತು ಪ್ರೊಫೆಶನ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಅದು ಡಿಸೆಂಬರ್ 19, 2006ರ ಮುಸ್ಸಂಜೆ. ಕೊಹ್ಲಿಯ ಅಪ್ಪ ಪ್ರೇಮ್ ಕೊಹ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 18ರ ಹರೆಯದ ಕೊಹ್ಲಿ ಆಗ ದೆಹಲಿ ತಂಡದ ಪರವಾಗಿ ಕರ್ನಾಟಕ ತಂಡದ ವಿರುದ್ಧ ರಣಜಿ ಪಂದ್ಯವನ್ನಾಡುತ್ತಿದ್ದರು. ಮೊದಲ ಇನ್ನಿಂಗ್ಸ್ ಮುಗಿದಾಗ ಕೊಹ್ಲಿ 40 ರನ್ ಬಾರಿಸಿದ್ದರು. ಆ ಹೊತ್ತಿಗೆ ಅಪ್ಪನ ಮರಣ ವಾರ್ತೆ ತಲುಪಿತು. ಅಪ್ಪ ನ ಮರಣ ಹೊಂದಿ ದಶಕ ಕಳೆದಿದೆ. ಇದೀಗ ಕೊಹ್ಲಿ ಅಪ್ಪನ ಮರಣ ವಾರ್ತೆಯೂ ತನ್ನನ್ನು ವಿಚಲಿತನನ್ನಾಗಿ ಮಾಡಿಲ್ಲ ಯಾಕೆ ಎಂಬುದರ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ. ಆಮೇಲೆ ಏನಾಯಿತು ಎಂಬುದನ್ನು ಆತನ ಮಾತುಗಳಲ್ಲೇ ಕೇಳಿ...
ಆ ಹೊತ್ತು ಏನು ಮಾಡಬೇಕೆಂದು ತೋಚದೆ ಕುಳಿತು ಬಿಟ್ಟೆ. ಅದು ನನ್ನ ಜೀವನದ ಅತೀ ಕಠಿಣ ಸಮಯವಾಗಿತ್ತು. ಆ ಹೊತ್ತು ನಾನೊಂದು ನಿರ್ಧಾರ ತೆಗೆದುಕೊಳ್ಳಲೇ ಬೇಕಿತ್ತು. ಮರುದಿನ ನಾನು ಕ್ರೀಸ್ ಗಿಳಿದೆ. ಆ ಆಟದಲ್ಲಿ ನಾನು 90 ರನ್ ಗಳಿಸಿದ್ದೆ. ದೆಹಲಿ ತಂಡ ಫಾಲೋ ಆನ್ ನಿಂದ ಬಚಾವಾಗಿತ್ತು.
ಮುಸ್ಸಂಜೆ ವೇಳೆ ಅಪ್ಪ ತೀರಿದ ಸುದ್ದಿ ನನಗೆ ಲಭಿಸಿತ್ತು. ಮರುದಿನ ಬೆಳಗ್ಗೆ ನಾನು ನನ್ನ ದೆಹಲಿ ಕೋಚ್‌ಗೆ ಫೋನ್ ಮಾಡಿ ನಾನು ಆಡುತ್ತೇನೆ ಎಂದೆ. ಕ್ರಿಕೆಟ್‌ನ್ನು ಪೂರ್ಣಗೊಳಿಸದೇ ಹೋಗುವುದು ಪಾಪ ಎಂದು ನಂಬಿದವನು ನಾನು. ಆ ಕ್ಷಣ ನನ್ನ ಬದುಕನ್ನು ಬದಲಾಯಿಸಿ ಬಿಟ್ಟಿತು. ಈ ಆಟ ನನ್ನ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನಾನು ಅರಿತೆ ಎಂದು ಕೊಹ್ಲಿ ಹೇಳಿದ್ದಾರೆ.
ಎಳವೆಯಲ್ಲಿಯೇ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಕೊಹ್ಲಿಗೆ ಇತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರತೀ ಬಾರಿಯೂ ಪಂದ್ಯದಲ್ಲಿ ಶತಕ ಬಾರಿಸಿದರೆ ಮಾತ್ರ ಉತ್ತಮ ಪ್ರದರ್ಶನ ಎಂದೆನಿಸಿಕೊಳ್ಳುವುದಿಲ್ಲ. ಕಠಿಣ ಪರಿಸ್ಥಿತಿಯಲ್ಲಿ 80 ಅಥವಾ 75 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸುವುದು ಉತ್ತಮ ಪ್ರದರ್ಶನವೆಂದೆನಿಸಿಕೊಳ್ಳುತ್ತದೆ. ಹಲವಾರು ಬಾರಿ ಕೊಹ್ಲಿ ಹೀಗೆ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ ಮತ್ತು ಈಗ ಐಪಿಎಲ್‌ನಲ್ಲಿ ಮಿಂಚುತ್ತಿರುವ ಕೊಹ್ಲಿಗೆ ಕ್ರಿಕೆಟ್ ಮೇಲಿನ ಪ್ರೇಮ ಯಾವ ರೀತಿ ಇತ್ತು ಎಂಬುದಕ್ಕೆ ಅವರ ಈ ಮಾತುಗಳೇ ಸಾಕ್ಷಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


