ಕ್ರಿಕೆಟ್

ಭಾರತ ಟಿ20 ವಿಶ್ವಕಪ್ ಗೆಲ್ಲಲು ಕಾರಣವಾಗಬಲ್ಲ ಕೀ ಪ್ಲೇಯರ್ಸ್ ಇವರು

ಟೀಂ ಇಂಡಿಯಾದಲ್ಲಿ ಸಾಕಷ್ಟು ಮ್ಯಾಚ್ ವಿನ್ನಿಂಗ್ ಆಟಗಾರರಿದ್ದು, ಭಾರತಕ್ಕೆ ವಿಶ್ವಕಪ್ ತಂದುಕೊಡಬಲ್ಲ ಸಾಮರ್ಥ್ಯವಿರುವ ಆಟಗಾರರ ಕುರಿತು ಒಂದು ಪುಟ್ಟ ವಿಶ್ಲೇಷಣೆ ಇಲ್ಲಿದೆ.

ಭಾರತ ಟಿ20 ವಿಶ್ವಕಪ್ ಗೆಲ್ಲಲು ಕಾರಣವಾಗಬಲ್ಲ ಕೀ ಪ್ಲೇಯರ್ಸ್ ಇವರು
ಭಾರತದ ಕೀ ಪ್ಲೇಯರ್ಸ್ (ಸಂಗ್ರಹ ಚಿತ್ರ)
Published On :

ನವದೆಹಲಿ: 2016ನೇ ಸಾಲಿನ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಸೋಲಿನ ಮೂಲಕ ಅಭಿಯಾನ ಆರಂಭಿಸಿತ್ತಾದರೂ, ಆ ಬಳಿಕದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.

ಏಷ್ಯಾಕಪ್ ಸರಣಿ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಸರಣಿಗೂ ಮುನ್ನ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೇ  ಹೀನಾಯ ಸೋಲು ಕಾಣುವ ಮೂಲಕ ತೀವ್ರ ಮುಜುಗರಕ್ಕೀಡಾಗಿತ್ತು. ಆದರೆ ಆ ಬಳಿಕ ಫೀನಿಕ್ಸ್ ನಂತೆ ಎದ್ದು ಬಂದ ಭಾರತ ತಂಡ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ  ತಂಡಗಳಿಗೆ ನೀರು ಕುಡಿಸುವ ಮೂಲಕ ನೇರ ಸೆಮಿಫೈನಲ್ ಪ್ರವೇಶಿಸಿತ್ತು.

ನಾಳೆ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದ್ದು, ಟೀಂ ಇಂಡಿಯಾ ಪರ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಆಟಗಾರರ ಕುರಿತು  ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಆ ಮಾತಿಗೆ ಬರುವುದಾದರೆ ಪ್ರಸ್ತುತ ಟೀಂ ಇಂಡಿಯಾ ತಂಡ ಸಾಕಷ್ಟು ಬಲಿಷ್ಠವಾಗಿದ್ದು, ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡರೆ ವಿಶ್ವದ  ಯಾವುದೇ ತಂಡವನ್ನು ಫೈನಲ್ ನಲ್ಲಿ ಮಣ್ಣುಮುಕ್ಕಿಸುವ ಸಾಮರ್ಥ್ಯ ಭಾರತಕ್ಕಿದೆ.

ಇದೀಗ ಟೀಂ ಇಂಡಿಯಾದಲ್ಲಿ ಸಾಕಷ್ಟು ಮ್ಯಾಚ್ ವಿನ್ನಿಂಗ್ ಆಟಗಾರರಿದ್ದು, ಭಾರತಕ್ಕೆ ವಿಶ್ವಕಪ್ ತಂದುಕೊಡಬಲ್ಲ ಸಾಮರ್ಥ್ಯವಿರುವ ಆಟಗಾರರ ಕುರಿತು ಒಂದು ಪುಟ್ಟ ವಿಶ್ಲೇಷಣೆ ಇಲ್ಲಿದೆ.

1.ನಾಯಕ ಮಹೇಂದ್ರ ಸಿಂಗ್ ಧೋನಿ
2007ರಲ್ಲಿ ಟಿ20 ವಿಶ್ವಕಪ್ ಗಾಗಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ಆ ಬಳಿಕ ನಿಜಕ್ಕೂ ಮ್ಯಾಜಿಕ್ ಮಾಡಿದ್ದರು. ಸತತ 24 ವರ್ಷಗಳಿಂದ ವಿಶ್ವಕಪ್ ಬರ  ಎದುರಿಸಿದ್ದ ಭಾರತ ತಂಡಕ್ಕೆ 2007ರಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಗೆಲ್ಲಿಸಿಕೊಡುವ ಮೂಲಕ ಭಾರತದ ಲಕ್ಕಿ ಕ್ಯಾಪ್ಟನ್ ಆಗಿ ಬದಲಾಗಿದ್ದರು. ತಮ್ಮ  ದಿಢೀರ್ ಮತ್ತು ಹುಬ್ಬೇರುವಂತೆ ಮಾಡಬಲ್ಲ ನಿರ್ಧಾರಗಳಿಂದಾಗಿಯೇ ಫೇಮಸ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಗ್ಯಾಂಬ್ಲರ್ ಎಂದೇ ಹೇಳಬಹುದು. ಕಠಿಣ ಪರಿಸ್ಥಿತಿಗಳಲ್ಲಿ  ದಿಗ್ಗಜ ಆಟಗಾರರೇ ತೆಗೆದುಕೊಳ್ಳಲು ಹಿಂಜರಿಯುವ ನಿರ್ಧಾರಗಳನ್ನು ತೆಗೆದುಕೊಂಡು ಅದರಲ್ಲಿ ಯಶಸ್ವಿಯಾಗಿ ಎಲ್ಲರಲ್ಲೂ ಆಚ್ಚರಿ ಮೂಡಿಸುತ್ತಾರೆ. ಇದಕ್ಕೆ 2007ರ ಟಿ20 ವಿಶ್ವಕಪ್ ಫೈನಲ್  ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿನ ದಿಟ್ಟ ನಿರ್ಧಾರಗಳೇ ಸಾಕ್ಷಿ.. ಇನ್ನು ಓರ್ವ ಆಟಗಾರನಾಗಿ ನಿಜಕ್ಕೂ ಧೋನಿ ವಿಶ್ವದ ಅತ್ಯುತ್ತಮ ಗೇಮ್ ಫೀನಿಷರ್ ಎನ್ನಬಹುದು. ಟಾರ್ಗೆಟ್  ಎಷ್ಟೇ ಇರಲಿ ಕ್ರೀಸ್ ನಲ್ಲಿರುವ ಮತ್ತೋರ್ವ ಆಟಗಾರ ಕೊಂಚ ಸಾಥ್ ನೀಡಿದರೂ ಸೈ ಪಂದ್ಯದ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ನಿಂತು ಆಡಬಲ್ಲ ಸಾಮರ್ಥ್ಯ ಧೋನಿಗಿದೆ. ಇಂತಹ  ಗುಣಗಳಿಂದಲೇ ಕೂಲ್ ಕ್ಯಾಪ್ಟನ್ ಧೋನಿ ಆಧುನಿಕ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆಯಾಗಿದ್ದಾರೆ.

2.ವಿರಾಟ್ ಕೊಹ್ಲಿ
ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನ ಕ್ರಿಕೆಟ್ ಋತುವಿನಲ್ಲಿ ಅತ್ಯದ್ಭುತ ಫಾರ್ಮ್ ನಲ್ಲಿದ್ದಾರೆ. ಏಷ್ಯಾಕಪ್ ಟೂರ್ನಿಯಿಂದ ಆರಂಭವಾದ ಅವರ ಅದ್ಭುತ ಫಾರ್ಮ್  ಟಿ20 ವಿಶ್ವಕಪ್ ಸರಣಿಯಲ್ಲೂ ಮುಂದುವರೆದಿದ್ದು, ಭಾರತ ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮಾತ್ರ ಅವರ ಸ್ಟ್ರೈಕ್ ರೇಟ್ ವಿಶ್ವದ ದಿಗ್ಗಜ ಆಟಗಾರರನ್ನೂ ಮೀರಿಸಿದೆ.  ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲುತ್ತಿದ್ದ ಸಂದರ್ಭದಲ್ಲಿ ಕೊಹ್ಲಿ ಸೋಲಿನಿಂದ ಪಾರುಮಾಡಲು ಪ್ರಯತ್ನಿಸಿದ್ದರು. ಕಿವೀಸ್ ವಿರುದ್ಧ ಪಂದ್ಯದಲ್ಲಿ 27 ಎಸೆತ  ಎದುರಿಸಿದ್ದ ಕೊಹ್ಲಿ 23 ರನ್ ಸಿಡಿಸಿದ್ದರಾದರೂ. ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿದ್ದರು. ಬಳಿಕ ಪಾಕಿಸ್ತಾನದ ವಿರುದ್ಧ ನಡೆದ ಕೋಲ್ಕತಾದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ  37 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಭರ್ಜರಿ ಅಜೇಯ 55 ರನ್ ಸಿಡಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಬಾಂಗ್ಲಾ ವಿರುದ್ಧ 24 ರನ್ ಸಿಡಿಸಿದ್ದ ಕೊಹ್ಲಿ  ಬಳಿಕ ಆಸ್ಟ್ರೇಲಿಯಾ ವಿರುದ್ಧ ನಿಜಕ್ಕೂ ತಮ್ಮ ವಿರಾಟ ರೂಪದ ಪ್ರದರ್ಶನ ಮಾಡಿದ್ದರು. ಆಸಿಸ್ ಪಡೆ ನೀಡಿದ್ದ 161ರನ್ ಗಳ ಗುರಿಯನ್ನು ಬೆನ್ನುಹತ್ತಿದ್ದ ಭಾರತಕ್ಕೆ ಆರಂಭಿಕ ಆಘಾತ  ಎದುರಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಯುವಿ ಜೊತೆಗೂಡಿದ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಬಳಿಕ ನಾಯಕ ಧೋನಿ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.  ಅತ್ಯದ್ಭುತ ಬ್ಯಾಟಿಂಗ್ ಮತ್ತು ಪರಿಣಾಮಕಾರಿಯ ಕ್ಷೇತ್ರ ರಕ್ಷಣೆ ಮಾಡುವ ಕೊಹ್ಲಿ ಭಾರತ ತಂಡದ ಪ್ರಮುಖ ಕೀ ಪ್ಲೇಯರ್ ಎನ್ನಬಹುದು.

3.ಆಲ್ ರೌಂಡರ್ ರವೀಂದ್ರ ಜಡೇಜಾ
ಸ್ಪಿನ್ನರ್ ರೂಪದಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾದ ರವೀಂದ್ರ ಜಡೇಜಾ ಬಳಿಕ ಓರ್ವ ಉತ್ತಮ ಆಲ್ ರೌಂಡರ್ ಆಗಿ ಪರಿವರ್ತನೆಯಾಗಿದ್ದಾರೆ. ಬೌಲಿಂಗ್ ವೇಳೆ ಎದುರಾಳಿ ತಂಡದ  ಬ್ಯಾಟ್ಸಮನ್ ಗಳನ್ನು ತಮ್ಮ ಪರಿಣಾಮಕಾರಿ ಸ್ಪಿನ್ ಮೂಲಕ ಕಟ್ಟಿ ಹಾಕುವ ಜಡೇಜಾ, ಬ್ಯಾಟಿಂಗ್ ವೇಳೆ ಸ್ಲಾಗ್ ಓವರ್ ಗಳಲ್ಲಿ ದೊಡ್ಡ ಹೊಡೆತಗಳನ್ನು ಭಾರಿಸುವ ಸಾಮರ್ಥ್ಯವನ್ನು  ಹೊಂದಿದ್ದಾರೆ. ಇನ್ನು ಕ್ಷೇತ್ರ ರಕ್ಷಣೆಯ ವಿಚಾರಕ್ಕೆ ಬರುವುದಾದರೆ ಟೀಂ ಇಂಡಿಯಾದ ಪ್ರಮುಖ ಕ್ಷೇತ್ರ ರಕ್ಷಕರಲ್ಲಿ ಜಡೇಜಾ ಕೂಡ ಒಬ್ಬರು. ಬಾಂಗ್ಲಾದೇಶದ ವಿರುದ್ಧ ಕೊನೆಯ ಓವರ್ ನಲ್ಲಿ  ರೋಚಕ ಜಯ ಸಾಧಿಸಿ ಆ ಪಂದ್ಯದಲ್ಲಿ ಮಹಮದುಲ್ಲಾ ಭಾರಿಸಿದ ಚೆಂಡನ್ನು ರವೀಂದ್ರ ಜಡೇಜಾ ಬಹಳ ಚಾಕಚಕ್ಯತೆಯಿಂದ ಹಿಡಿದಿದ್ದರು. ಇದು ಅವರ ಕ್ಷೇತ್ರ ರಕ್ಷಣೆಗೆ ಹಿಡಿದ  ಕೈಗನ್ನಡಿಯಾಗಿದೆ. ಜಡೇಜಾ ಟೀಂ ಇಂಡಿಯಾಗೆ ಓರ್ವ ಬೌಲರ್ ಆಗಿ ಅಲ್ಲ ಓರ್ವ ಅಲ್ ರೌಂಡರ್ ಆಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಅರ್ಹತೆ ಹೊಂದಿದ್ದಾರೆ.

4.ಹಾರ್ದಿಕ್ ಪಾಂಡ್ಯಾ
ಬಾಂಗ್ಲಾದೇಶದ ವಿರುದ್ಧ ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡಿ ಟೀಂ ಇಂಡಿಯಾಗೆ ರೋಚಕ ಗೆಲುವು ತಂದು ಕೊಟ್ಟ ಹಾರ್ದಿಕ್ ಪಾಂಡ್ಯಾ ಕೂಡ ಟೀಂ ಇಂಡಿಯಾ ಕೀ ಪ್ಲೇಯರ್ಸ್ ಗಳಲ್ಲಿ  ಒಬ್ಬರು. ಪಾಂಡ್ಯಾ ಕೂಡ ಓರ್ವ ಉತ್ತಮ ಆಲ್ ರೌಂಡರ್ ರೂಪದಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದು, ಸ್ಲಾಗ್ ಓವರ್ ಗಳಲ್ಲಿ ಎದುರಾಳಿ ಬೌಲರ್ ಗಳನ್ನು ಬೆಂಡೆತ್ತುವ ಸಾಮರ್ಥ್ಯ ಹೊಂದಿದ್ದಾರೆ.  ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲಿ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಪಾಂಡ್ಯಾ ನಿರ್ಣಾಯಕ ಘಟದಲ್ಲಿ ಎದುರಾಳಿ ತಂಡದ ಬ್ಯಾಟ್ಸಮನ್ ಗಳನ್ನು  ಕಟ್ಟಿಹಾಕಬಲ್ಲರು. ಇದಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯವೇ ಸಾಕ್ಷಿ. ಇನ್ನು ಕ್ಷೇತ್ರ ರಕ್ಷಣೆಯ ವಿಚಾರದಲ್ಲಿ ಪಾಂಡ್ಯಾ ನಿಜಕ್ಕೂ ರಾಕ್ಷಸನೇ ಸರಿ. ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಶರ್ಜೀಲ್ ಖಾನ್  ಬಾರಿಸಿದ ಚೆಂಡನ್ನು ಪಾಂಡ್ಯಾ ಜಂಪ್ ಮಾಡುವ ಮೂಲಕ ಹಿಡಿತಕ್ಕೆ ಪಡೆದಿದ್ದರು. ಆ ಕ್ಯಾಚ್ ಎಷ್ಟು ಅಪಾಯಕಾರಿಯಾಗಿತ್ತು ಎಂದರೆ ಆ ವಿಕೆಟ್ ಪತನದ ಬಳಿಕ ಬೆನ್ನು ನೋವಿಗೆ ಒಳಗಾದ  ಪಾಂಡ್ಯಾ ಡ್ರೆಸಿಂಗ್ ರೂಂಗೆ ಹೋಗಿ ಚಿಕಿತ್ಸೆ ಪಡೆದು ಮತ್ತೆ ಮೈದಾನಕ್ಕೆ ಆಗಮಿಸಿದ್ದರು.

5.ಯುವರಾಜ್ ಸಿಂಗ್
2007ರ ಟಿ20 ವಿಶ್ವಕಪ್ ನಲ್ಲಿಯೇ ಯುವಿ ಆರ್ಭಟ ಹೇಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ಗುರಿ ಎಷ್ಟೇ ಇರಲಿ.. ಹೋರಾಟದ ಮೂಲಕ ಅದನ್ನು ಸಾಧಿಸುವ ಸಾಮರ್ಥ್ಯ ಯುವರಾಜ್ ಸಿಂಗ್ ಗೆ ಇದೆ.  ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. 2007ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಬ್ರಾಡ್ ಎಸೆದ ಓವರ್ ನಲ್ಲಿ 6 ಎಸೆತಗಳಿಗೆ ಆರು ಸಿಕ್ಸರ್ ಬಾರಿಸುವ ಮೂಲಕ ಯುವಿ ಆ  ಸವಾಲಿನ ಪಂದ್ಯವನ್ನು ಭಾರತದ ಪರ ಮಾಡಿದ್ದರು. ಅದೇ ರೀತಿಯ ಹೋರಾಟ 2011ರ ವಿಶ್ವಕಪ್ ಸರಣಿಯಲ್ಲೂ ಯುವಿ ಪ್ರದರ್ಶಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ  ವಿದಾಯದ ಸರಣಿಯಾಗಿದ್ದ 2011ರ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಯುವಿ ಧೋನಿ ಜೊತೆಗೂಡಿ ಶ್ರೀಲಂಕಾ ತಂಡದ ವಿರುದ್ಧ ರನ್ ಮಳೆಗರೆದು ಗೆಲುವಿನಲ್ಲಿ ಮಹತ್ವದ ಪಾತ್ರ  ನಿರ್ವಹಿಸಿದ್ದರು. ಇಂತಹ ಪ್ರದರ್ಶನ ಪ್ರಸಕ್ತ ಟಿ20 ವಿಶ್ವಕಪ್ ಸರಣಿಯಲ್ಲಿ ಈ ವರೆಗೂ ಬಂದಿಲ್ಲವಾದರೂ, ಯಾವುದೇ ಕ್ಷಣದಲ್ಲಿ ಯುವಿ ಸಿಡಿದೇಳುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ  ದುರಾದೃಷ್ಟವಶಾತ್ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಯುವಿ ಗಾಯಗೊಂಡಿದ್ದು, ವಿಂಡೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

6.ರವಿಚಂದ್ರನ್ ಅಶ್ವಿನ್
ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಬಳಿಕ ಭಾರತ ತಂಡಕ್ಕೆ ಸಿಕ್ಕ ಓರ್ವ ಪ್ರತಿಭಾನ್ವಿತ ಸ್ಪಿನ್ನರ್ ಆರ್ ಅಶ್ವಿನ್. ಓರ್ವ ಪರಿಣಾಮಕಾರಿ ಸ್ಪಿನ್ನರ್ ಆಗಿ ಅಶ್ವಿನ್ ನಿಜಕ್ಕೂ ಭಾರತಕ್ಕೆ ನೆರವಾಗಬಲ್ಲರು.  ಭಾರತೀಯ ಪಿಚ್ ಗಳಲ್ಲಿ ಪರಿಣಾಮಕಾರಿಯಾಗಿ ಬಾಲ್ ಅನ್ನು ತಿರುಗಿಸುವ ಅಶ್ವಿನ್ ಎದುರಾಳಿ ತಂಡದ ಬ್ಯಾಟ್ಸಮನ್ ಗಳ ಕಂಗೆಡಿಸಿ ವಿಕೆಟ್ ಪಡೆಯಬಲ್ಲರು. ಇನ್ನು ಬ್ಯಾಟಿಂಗ್ ನಲ್ಲಿಯೂ  ಅಗತ್ಯಬಿದ್ದರೆ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಅಶ್ವಿನ್ ಗಿದೆ.

ಒಟ್ಟಾರೆ 2016ನೇ ಸಾಲಿನ ಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿರುವ ಟೀಂ ಇಂಡಿಯಾದಲ್ಲಿ ಈ ಮೇಲ್ಕಂಡ ಆಟಗಾರರು ಮಾತ್ರ ಉತ್ತಮ ಪ್ರದರ್ಶನ ನೀಡಿದರೆ ಸಾಲದು. ಈ ವಿಶ್ಲೇಷಣೆ  ಈ ಆಟಗಾರರ ಈ ವರೆಗಿನ ಪ್ರದರ್ಶನ ಆಧಾರಿತವಾಗಿದ್ದು, ಇಡೀ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದರೆ ಖಂಡಿತಾ ಮತ್ತೆ ಟಿ20 ವಿಶ್ವಕಪ್ ಭಾರತದ ಪಾಲಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.