ಕ್ರಿಕೆಟ್

ಜಗಳ ನಿಲ್ಲಿಸಿ, ಕ್ರಿಕೆಟ್ ಆಡಿ; ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ

ಸಾಮರ್ಥ್ಯಕ್ಕೆ ತಕ್ಕ ಆಟ ತೋರುವಲ್ಲಿ ವಿಫಲರಾಗಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲೀಗ ಅಸಮಾಧಾನದ ಹೊಗೆಯಾಡುತ್ತಿದ್ದು, ಸ್ವತಃ ಪಾಕಿಸ್ತಾನದ ಮಾಜಿ ಆಟಗಾರರೇ ತಂಡದಲ್ಲಿನ ಇತ್ತೀಚಿನ ಘಟನೆಗಳಿಂದ ಬೇಸತ್ತು ಕಿಡಿಕಾರಿದ್ದಾರೆ.

ಜಗಳ ನಿಲ್ಲಿಸಿ, ಕ್ರಿಕೆಟ್ ಆಡಿ; ಪಾಕ್ ತಂಡಕ್ಕೆ ಖಡಕ್ ಎಚ್ಚರಿಕೆ
ಶೊಯೆಬ್ ಮಲ್ಲಿಕ್ ಹಾಗೂ ಶೊಯೆಬ್ ಅಖ್ತರ್ (ಸಂಗ್ರಹ ಚಿತ್ರ)
Published On :

ಇಸ್ಲಾಮಾಬಾದ್: ಸಾಮರ್ಥ್ಯಕ್ಕೆ ತಕ್ಕ ಆಟ ತೋರುವಲ್ಲಿ ವಿಫಲರಾಗಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲೀಗ ಅಸಮಾಧಾನದ ಹೊಗೆಯಾಡುತ್ತಿದ್ದು,  ಸ್ವತಃ ಪಾಕಿಸ್ತಾನದ ಮಾಜಿ ಆಟಗಾರರೇ ತಂಡದಲ್ಲಿನ ಇತ್ತೀಚಿನ ಘಟನೆಗಳಿಂದ ಬೇಸತ್ತು ಕಿಡಿಕಾರಿದ್ದಾರೆ.

ಬಹುಶಃ ಪಾಕಿಸ್ತಾನದ ಈ ಹಿಂದಿನ ನಾಯಕರುಗಳಿಗಿಂತ ಅತಿ ಹೆಚ್ಚು ಟೀಕೆಗೆ ಒಳಗಾಗಿರುವ ನಾಯಕ ಅಂದರೆ ಈಗಿನ ಶಾಹಿದ್ ಅಫ್ರಿದಿ ಎಂದೇ ಹೇಳಬಹುದು. ಏಷ್ಯಾಕಪ್ ನ ಸೋಲು ಮತ್ತು ಪ್ರಸ್ತುತ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನೇರವಾಗಿ ತಂಡದ ನಾಯಕ ಅಫ್ರಿದಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಇನ್ನು ಸ್ವತಃ ಪಾಕಿಸ್ತಾನ ತಂಡದಲ್ಲಿಯೂ ಅಫ್ರಿದಿ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದ್ದು, ಸಮರ್ಥ ಆಟಗಾರರಿಗೆ ಅಫ್ರಿದಿ ಸೂಕ್ತ ವೇದಿಕೆ ಕಲ್ಪಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಉಮರ್ ಅಕ್ಮಲ್ ತಮಗೆ ಭಡ್ತಿ ನೀಡಿ ಮೇಲಿನ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೂ  ಅಫ್ರಿದಿ ಮಾತ್ರ ಅವರಿಗೆ ಅವಕಾಶ ನೀಡುತ್ತಿಲ್ಲವಂತೆ. ಇಂತಹುದೇ ಮತ್ತೊಂದು ಆರೋಪ ಅಫ್ರಿದಿ ವಿರುದ್ಧ ಕೇಳಿಬರುತ್ತಿದ್ದು, ಈ ಹಿಂದೆ ತಂಡದ ಯಶಸ್ವೀ ಆರಂಭಿಕ ಆಟಗಾರನಾಗಿದ್ದ  ಮಹಮದ್ ಹಫೀಜ್ ಈಗ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇವರೂ ಕೂಡ ಮೇಲಿನ ಕ್ರಮಾಂಕಕ್ಕೆ ಭಡ್ತಿ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ ಟಿ20 ಮಾದರಿಯಲ್ಲಿ ಬಹುತೇಕ ಓವರ್  ಗಳು ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳ ಪಾಲಾಗುವುದರಿಂದ ಕೆಳಕ್ರಮಾಂಕದ ಬ್ಯಾಟ್ಸಮನ್ ಗಳಿಗೆ ತಮ್ಮ ಸಾಮರ್ಥ್ಯ ತೋರುವ ಅವಕಾಶವೇ ಲಭಿಸುತ್ತಿಲ್ಲ ಎಂಬುದು  ಮತ್ತೊಂದು ವಾದವಾಗಿದೆ.

ನಾಯಕ ಅಫ್ರಿದಿ ಮಾತ್ರ ತಮಗಿಚ್ಛಿಸಿದಂತೆ ತಮ್ಮ ಕ್ರಮಾಂಕವನ್ನು ಆಗಾಗ್ಗೆ ಬದಲಾವಣೆ ಮಾಡಿಕೊಳ್ಳುತ್ತಿರುತ್ತಾರೆ ಎನ್ನುವುದು ಪಾಕ್ ತಂಡದ ಇತರೆ ಆಟಗಾರರ ಆರೋಪವಾಗಿದೆ ಎಂದು  ತಿಳಿದುಬಂದಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಮಾಜಿ ಆಟಗಾರರು ಪಾಕಿಸ್ತಾನ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಜಗಳ ನಿಲ್ಲಿಸಿ ಉತ್ತಮ ಕ್ರಿಕೆಟ್ ಆಡುವಂತೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್, ಪಾಕಿಸ್ತಾನ ತಂಡಕ್ಕೆ ಸಂಭಾವನೆಗಾಗಿ ಆಡುವ ಕ್ರಿಕೆಟಿಗರಿಗಿಂತ, ತಂಡಕ್ಕಾಗಿ ಆಡುವ ಕ್ರಿಕೆಟಿಗರ ಅವಶ್ಯಕತೆ ಇದೆ ಎಂದು  ಹೇಳುವ ಮೂಲಕ ಪಾಕಿಸ್ತಾನದ ಕ್ರಿಕೆಟ್ ನ ಪರಿಸ್ಥಿತಿಯನ್ನು ಜಗಜ್ಜಾಹಿರು ಮಾಡಿದ್ದಾರೆ.

ಅತ್ತ ಹಿರಿಯ ಕ್ರಿಕೆಟಿಗರಿಂದ ವಾರ್ನಿಂಗ್ ಬರುತ್ತಿದ್ದಂತೆಯೇ ಇತ್ತ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಪ್ರಕರಣಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಯಾವುದೇ ಗೊಂದಲಗಳಿಲ್ಲ. ಸತತ 2 ಪಂದ್ಯಗಳನ್ನು ಸೋತಿರುವುದರಿಂದ ತಂಡದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ನಾವು ಒಗ್ಗಟ್ಟಾಗಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇಷ್ಟೆಲ್ಲಾ ಗೊಂದಲದ ನಡುವೆಯೇ ಇಂದು ಪಾಕಿಸ್ತಾನ ಕ್ರಿಕೆಟ್ ತಂಡ ದೈತ್ಯ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದ್ದು, ಮೊಹಾಲಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.