ಕ್ರಿಸ್ ಗೇಯ್ಲ್ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ
ವಿಂಡೀಸ್ ದೈತ್ಯ ದಾಂಡಿಗ ಕ್ರಿಸ್ ಗೇಯ್ಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಬುಧವಾರ ಇಂಗ್ಲೆಂಡ್ ಎದುರು ನಡೆದ ಪಂದ್ಯ..

ಮುಂಬೈ: ವಿಂಡೀಸ್ ದೈತ್ಯ ದಾಂಡಿಗ ಕ್ರಿಸ್ ಗೇಯ್ಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಬುಧವಾರ ಇಂಗ್ಲೆಂಡ್ ಎದುರು ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 182 ರನ್ ಗಳ ಬೃಹತ್ ಮೊತ್ತವನ್ನು ವೆಸ್ಟ್ ಇಂಡೀಸ್ ತಂಡ ನಿರಾಯಾಸವಾಗಿ ಬೇಧಿಸಿತು. ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಇಂಗ್ಲೆಂಡ್ ನೀಡದ 182 ರನ್ ಗಳ ಮೊತ್ತ ಸವಾಲಗಲೇ ಇಲ್ಲ. ಭರ್ಜರಿ ಸಿಕ್ಸರ್ ಗಳು ಮತ್ತು ಬೌಂಡರಿಗಳನ್ನು ಸಿಡಿಸಿದ ಕ್ರಿಸ್ ಗೇಯ್ಲ್ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ವೆಸ್ಟ್ ಇಂಡೀಸ್ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತನ್ನ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿತು. ವಿಂಡೀಸ್ ಬೌಲರ್ ಗಳನ್ನು ದಂಡಿಸಿದ ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಬೃಹತ್ ಮೊತ್ತಕ್ಕೆ ಕಾರಣರಾದರು. ಜೆ ರೂಟ್ (48 ರನ್), ಇಯಾನ್ ಬಟ್ಲರ್ (30 ರನ್), ಹೇಲ್ಸ್ (28ರನ್) ಮತ್ತು ಇಯಾನ್ ಮಾರ್ಗನ್ (ಅಜೇಯ 27 ರನ್) ಅವರ ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ವೀಂಡೀಸ್ ಪರವಾಗಿ ರಸೆಲ್ ಮತ್ತು ಬ್ರಾವೋ ತಲಾ 2 ವಿಕೆಟ್ ಪಡೆದರೆ, ಬೆನ್ನ್ 1 ವಿಕೆಟ್ ಕಬಳಿಸಿದರು. ಇನ್ನು ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡ ಕೇವಲ 2 ರನ್ ಗಳಿಸಿರುವಾಗ ಆರಂಭಿಕ ಆಟಗಾರ ಚಾರ್ಲ್ಸ್ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿದರು. ಆ ಮೂಲಕ ವಿಂಡೀಸ್ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಆದರೆ ಮತ್ತೊಂದು ತುದಿಯಲ್ಲಿದ್ದ ದೈತ್ಯ ಕ್ರಿಸ್ ಗೇಯ್ಲ್ ವಿಂಡೀಸ್ ಗೆ ಬೆನ್ನೆಲುಬಾಗಿ ನಿಂತರು. ಇಂಗ್ಲೆಂಡ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ಕ್ರಿಸ್ ಗೇಯ್ಲ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ಗೇಯ್ಲ್ ಸ್ಯಾಮುಯೆಲ್ಸ್ (37 ರನ್) ಉತ್ತಮ ಸಾಥ್ ನೀಡಿದರು. ಸ್ಯಾಮುಯೆಲ್ಸ್ ಔಟಾದ ಬಳಿಕ ರಾಮ್ ದಿನ್ ಜೊತೆಗೂಡಿದ ಕ್ರಿಸ್ ಗೇಯ್ಲ್ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದರು.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 18.1 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 183 ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ವಿಂಡೀಸ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇನ್ನು ಭರ್ಜರಿ ಶತಕ ಸಿಡಿಸಿ ವಿಂಡೀಸ್ ಗೆಲುವಿಗೆ ಕಾರಣರಾದ ಕ್ರಿಸ್ ಗೇಯ್ಲ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


