ಕ್ರಿಕೆಟ್

ಆಟಗಾರರ ಮೇಲೆ ಅಭಿಪ್ರಾಯ ಹೇರುವುದು ನನ್ನ ಶೈಲಿಯಲ್ಲ: ಅನಿಲ್ ಕುಂಬ್ಳೆ

ಆಟಗಾರರ ಮೇಲೆ ನನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಹೇರುವುದು ನನ್ನ ಶೈಲಿಯಲ್ಲ ಎಂದು ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ...

ಆಟಗಾರರ ಮೇಲೆ ಅಭಿಪ್ರಾಯ ಹೇರುವುದು ನನ್ನ ಶೈಲಿಯಲ್ಲ: ಅನಿಲ್ ಕುಂಬ್ಳೆ
ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ)
Published On :

ನವದೆಹಲಿ: ಆಟಗಾರರ ಮೇಲೆ ನನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಹೇರುವುದು ನನ್ನ ಶೈಲಿಯಲ್ಲ ಎಂದು ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಟೀಂ ಇಂಡಿಯಾಗೆ ಕೋಚ್ ಆದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಕನ್ನಡಿಗ ಅನಿಲ್ ಕುಂಬ್ಳೆ, ಭಾರತ ಕ್ರಿಕೆಟ್ ತಂಡದ ತರಬೇತಿ ಬಗ್ಗೆ ತಮ್ಮ ಯೋಜನೆಗಳ ಕುರಿತು ಮಾತನಾಡಿದರು. "ಪ್ರಸ್ತುತ ಟೀಂ ಇಂಡಿಯಾದಲ್ಲಿ ಸಾಕಷ್ಟು ಯುವ ಆಟಗಾರರಿದ್ದು, ನಾವು ಹೇಳುವ ಪ್ರತಿಯೊಂದು ಅಂಶವನ್ನೂ ಆಸಕ್ತಿಯಿಂದ ಕೇಳುತ್ತಾರೆ. ಹೀಗಾಗಿ ಅವರಿಗೆ ತರಬೇತಿ ನೀಡುವಲ್ಲಿ ನನಗೆ ಹೆಚ್ಚಿನ ಶ್ರಮವಾಗದು. ಈ ಹಿಂದೆ ನಾನು ಕೆಲಸ ಮಾಡಿದ ಸಾಕಷ್ಟು ಹುಡುಗರು ಕೂಡ ತಂಡದಲ್ಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಸಮಯಾವಕಾಶವೇನೂ ಬೇಕಿಲ್ಲ. ಆದರೂ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ತಂಡದ ಕೋಚಿಂಗ್ ಬಗ್ಗೆ ಮಾತನಾಡಿದ ಕುಂಬ್ಳೆ, ನಾನು ಮಾಜಿ ಕೋಚ್ ಜಾನ್ ರೈಟ್ ಅವರಡಿಯಲ್ಲಿ ಅಡಿದ್ದೇನೆ. ಅಂತೆಯೇ ಗ್ಯಾರಿ ಕರ್ಸ್ಟನ್ ಅವರ ತರಬೇತಿ ಶೈಲಿಯನ್ನೂ ಬಲ್ಲೆ. ಜಾನ್ ರೈಟ್ ಅವರಿಗೆ ಭಾರತ ಕ್ರೀಡಾ ಸಂಸ್ಕೃತಿ ಬಗ್ಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಜಾನ್ ರೈಟ್ ಅವರ ಕೋಚಿಂಗ್ ಶೈಲಿ ಹಾಗೂ ಗ್ಯಾರಿ ಕರ್ಸ್ಟನ್ ಅವರ ತರಬೇತಿ ಕಲೆಗಳನ್ನು ಅಳವಡಿಸಕೊಂಡು ಕೋಚಿಂಗ್ ಮಾಡುತ್ತೇನೆ ಎಂದು ಕುಂಬ್ಳೆ ಹೇಳಿದ್ದಾರೆ.

ನಾನು ತೀರ ಕಡಿಮೆ ಅವಧಿಗಾಗಿ ಆಯ್ಕೆಯಾಗಿದ್ದು, ಈ ಕಡಿಮೆ ಅವಧಿಯಲ್ಲೇ ತಂಡ ಉತ್ತಮ ಪ್ರದರ್ಶನ ನೀಡುವಂತೆ ಮಾಡುವುದು ನನ್ನ ಎದುರಿಗಿನ ಮೊದಲ ಸವಾಲಾಗಿದೆ. ತಂಡದ ಮುಂದೆ ಇರುವುದಕ್ಕಿಂತ ತಂಡದ ಹಿಂದೆ ಇದ್ದು, ತಂಡ ಉತ್ತಮ ರೀತಿಯಲ್ಲಿ ಆಡುವಂತೆ ನೋಡಿಕೊಳ್ಳುವುದಕ್ಕೆ ನನ್ನ ಮೊದಲ ಆದ್ಯತೆ. ಓರ್ವ ಕೋಚ್ ಆಗಿ ಮೊದಲು ನಾನು ತಂಡದ ನಾಯಕನ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸಬೇಕು. ನಾನು ಕೂಡ ತಂಡದ ನಾಯಕನಾಗಿದ್ದ ವೇಳೆ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆ. ಹೀಗಾಗಿ ನಾಯಕನ ಮೇಲೆ ಎಷ್ಟು ಒತ್ತಡವಿರುತ್ತದೆ ಎಂಬುದು ನನಗೆ ತಿಳಿದಿದೆ ಎಂದು ಕುಂಬ್ಳೆ ಹೇಳಿದ್ದಾರೆ.

20 ವಿಕೆಟ್ ಪಡೆಯುವುದು ಪ್ರಮುಖ ಗುರಿ
ಬ್ಯಾಟಿಂಗ್ ಕ್ರಮಾಂಕದಲ್ಲಿ ಟೀಂ ಇಂಡಿಯಾ ಉತ್ತಮ ಆಟಗಾರರನ್ನು ಹೊಂದಿದ್ದು, ವಿರಾಟ್, ಪೂಜಾರಾ, ರೋಹಿತ್, ರಾಹುಲ್ ಮತ್ತು ಶಿಖರ್ ಧವನ್ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಬೌಲಿಂಗ್ ಕ್ರಮಾಂಕ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದ್ದು, ಟೆಸ್ಟ್ ನಲ್ಲಿ 20 ವಿಕೆಟ್ ಪಡೆಯುವುದು ಪ್ರಮುಖ ಆಧ್ಯತೆಯಾಗಬೇಕು ಎಂದು ಕುಂಬ್ಳೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ತಂಡದೊಂದಿಗೆ ಕುಂಬ್ಳೆ ಮೊದಲ ಕ್ಯಾಂಪ್
ಇದೇ ವೇಳೆ ಟೀಂ ಇಂಡಿಯಾ ಕೋಚ್ ಆದ ಬಳಿಕ ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ ಪುಟ್ಟ ಕೋಚಿಂಗ್ ಕ್ಯಾಂಪ್ ಆಯೋಜಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮೊದಲೇ ಈ ಕ್ಯಾಂಪ್ ಅನ್ನು ನಡೆಸಲು ಉದ್ದೇಶಿಸಿದ್ದಾರೆ. ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿರುವ ನಾಯಕ ಧೋನಿ ಜಿಂಬಾಬ್ವೆ ಟೂರ್ನಿ ಬಳಿಕ ಭಾರತಕ್ಕೆ ವಾಪಸಾಗಲಿದ್ದು, ಭಾರತಕ್ಕೆ ಬಂದ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂತೆಯೇ ವಿಶ್ರಾಂತಿಯಲ್ಲಿರುವ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಕ್ಯಾಂಪ್ ಗೆ ಆಗಮಿಸಲಿದ್ದು, ಕುಂಬ್ಳೆ ಸಾರಥ್ಯದಲ್ಲಿ ತರಬೇತಿ ಪಡೆಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.