ಒಒಡಿ: ಇದರ ಸಹವಾಸವೇ ಸಾಕು ಬಿಡಿ!
80ನೇ ಸಾಹಿತ್ಯ ಸಮ್ಮೇಳನದ ಮೂರೂ ದಿನ ಒಒಡಿಯದ್ದೇ ಗದ್ದಲ. ಸಮ್ಮೇಳನದ...

80ನೇ ಸಾಹಿತ್ಯ ಸಮ್ಮೇಳನದ ಮೂರೂ ದಿನ ಒಒಡಿಯದ್ದೇ ಗದ್ದಲ. ಸಮ್ಮೇಳನದ ಉದ್ಘಾಟನೆಯಿನ್ನೂ ಆರಂಭವಾಗಿಲ್ಲ. ಆಗಲೇ ಬೇಕೇ ಬೇಕು ಒಒಡಿ ಬೇಕು ಎಂಬ ಪ್ರತಿಭಟನೆಯ ಧ್ವನಿ. ಸಮ್ಮೇಳನದ ಮೂರೂ ದಿನವೂ 2-4 ಬಾರಿ 'ಬೇಕೇ ಬೇಕು ಒಒಡಿ ಬೇಕು' ಎಂಬ ಕೂಗು. ಅದಕ್ಕಾಗಿ ದೊಂಬಿ, ವಾಗ್ವಾದ.
ಸಾಹಿತ್ಯ ಸಮ್ಮೇಳನಕ್ಕೆ ಅವರು ಬರುವುದೇ ಒಒಡಿಗಾಗಿ ಎಂಬ ಭಾವನೆ ಮೂಡುವಷ್ಟು ಒಒಡಿ ಗಲಾಟೆ. ಇಡೀ ಸಾಹಿತ್ಯ ಸಮ್ಮೇಳನದಲ್ಲಿ ಇದ್ದಿದ್ದು ಅದೊಂದೇ ಗಲಾಟೆ. ಮಡಿಕೇರಿಯಲ್ಲಿ ನಡೆದ 80ನೇ ಸಾಹಿತ್ಯ ಸಮ್ಮೇಳನದಲ್ಲಿ 25,000 ಒಒಡಿಗಳನ್ನು ವಿತರಿಸಲಾಗಿದೆ. ಆದರೆ ಯಾವುದೇ ಗೋಷ್ಠಿಯಲ್ಲಿ 1-2 ಸಾವಿರಕ್ಕಿಂತ ಹೆಚ್ಚಿನ ಜನರಿರಲಿಲ್ಲ. ಹಾಗಾದರೆ ಒಒಡಿ ತೆಗೆದುಕೊಂಡವರೆಲ್ಲ ಓಡಿ ಹೋದದ್ದೆಲ್ಲಿಗೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಒಒಡಿ ಪಡೆಯುವವರದ್ದು ಅನಾಗರಿಕ ವರ್ತನೆಯಾದರೆ, ಒಒಡಿ ನೀಡುವವರದ್ದು ಇನ್ನೊಂದು ರೀತಿಯ ಅಮಾನವೀಯ ವರ್ತನೆ. ತೆಗೆದುಕೊಳ್ಳುವವರು ಅಶಿಸ್ತಿನಿಂದ ವರ್ತಿಸುತ್ತಾರೆ ಎಂಬ ಕಾರಣಕ್ಕೆ ಕೊಡುವವರೂ ಅಮಾನವೀಯವಾಗಿ ವರ್ತಿಸುತ್ತಾರೆ. ಒಒಡಿ ಪಡೆಯವವರನ್ನು ದೂಡುವುದು, ಅವರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುವುದು... ಒಟ್ಟಿನಲ್ಲಿ ಇಡೀ ಸಾಹಿತ್ಯ ಸಮ್ಮೇಳನಕ್ಕೆ ಸಹಾಯವಾಗಬೇಕಿದ್ದ ಒಒಡಿ ಸಮ್ಮೇಳನಕ್ಕೆ ಕಳಂಕವಾಗಿ ಪರಿಣಮಿಸುತ್ತಿದೆ. ಇದನ್ನೆಲ್ಲ ನೋಡಿದ ಸಾರ್ವಜನಿಕರಿಗೆ ಇದೇನಪ್ಪಾ ಒಒಡಿ, ಯಾಕೆ ಜನ ಇಷ್ಟೆಲ್ಲ ಗದ್ದಲ ಮಾಡುತ್ತಿದ್ದಾರೆ, ಇಂತಹ ಗದ್ದಲಕ್ಕೆ ಕಾರಣವಾಗುವ ಒಒಡಿಯ ಅಗತ್ಯವಾದರೂ ಏನು ಎಂಬ ಪ್ರಶ್ನೆ ಮೂಡದಿರದು. ಇದು 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಳು ಮಾತ್ರವಲ್ಲ. ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನದಲ್ಲೂ ಇದೇ ವ್ಯಥೆ.
ಸರ್ಕಾರ ಒಒಡಿ (ಆನ್ ಅದರ್ ಡ್ಯೂಟಿ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಒಳ್ಳೆಯ ಉದ್ದೇಶದಿಂದ. ಶಿಕ್ಷಕರ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮತ್ತು ಸರ್ಕಾರಿ ಉದ್ಯೋಗಿಗಳು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಒಒಡಿ ಅವಕಾಶ ಕಲ್ಪಿಸಿದೆ. ಇದನ್ನು ರಜೆ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ನೌಕರರು ಭಾಗವಹಿಸುವಂತಾಗಬೇಕು. ಅವರು ಕರ್ತವ್ಯ ಇದೆ ಎಂಬ ಕಾರಣಕ್ಕೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರಿಗೂ ಒಒಡಿ ಅನುಕೂಲ ಮಾಡಿಕೊಟ್ಟಿದೆ.
ಆದರೆ ಸಾಹಿತ್ಯ ಸಮ್ಮೇಳನದ ಪಾಲಿಗೆ ಈ ಒಒಡಿ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಗಲಾಟೆ ಎಂಬುದೊಂದಿದ್ದರೆ ಅದು ಒಒಡಿ ಗಲಾಟೆ ಮಾತ್ರ. ಮಡಿಕೇರಿ ಸಮ್ಮೇಳನದಲ್ಲಿ ಒಒಡಿ ಗಲಾಟೆ ಹೊರತುಪಡಿಸಿದರೆ ಊಟ, ವಸತಿ ಯಾವುದಕ್ಕೂ ಗಲಾಟೆ ಆಗಲಿಲ್ಲ. ಬೇರೆ ಯಾವ ಗದ್ದಲಗಳೂ ಇರಲಿಲ್ಲ. ಆದರೆ 3 ದಿನವೂ ಒಒಡಿ ಗಲಾಟೆ ಸಮ್ಮೇಳನದ ಸ್ವರೂಪವನ್ನೇ ಕೆಡಿಸಿತ್ತು. ಮುಖ್ಯ ವೇದಿಕೆಯ ಸಮೀಪವೇ 'ಬೇಕೇ ಬೇಕು ಒಒಡಿ ಬೇಕು' ಎಂಬ ಕೂಗು ಜನರಿಗೆ ಸಪ್ಪೆ ಗೋಷ್ಠಿಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಂಡಿದ್ದರಲ್ಲಿ ಅಚ್ಚರಿಯಿಲ್ಲ.
ಈ ಒಒಡಿ ಗಲಾಟೆ ಯಾವ ಮಟ್ಟದಲ್ಲಿತ್ತೆಂದರೆ ಖುದ್ದು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಈ ಬಗ್ಗೆ ಬೇಸರ ವ್ಯಕ್ತವಾಗಿದೆ. ಬುಧವಾರ ನಡೆದ ಸಾಹಿತ್ಯ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ನೀಡಲಾಗಿರುವ ಒಒಡಿ ಸೌಲಭ್ಯವನ್ನು ಮರಳಿ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುವುದೇ ಲೇಸು. ಅದರಿಂದ ಉಪಯೋಗವಾಗುವುದಕ್ಕಿಂತ ಹೆಚ್ಚಾಗಿ ತೊಂದರೆಯಾಗುತ್ತಿದೆ. ಪ್ರತಿ ವರ್ಷ ಒಒಡಿ ಗಲಾಟೆಯಿಂದ ಸಮ್ಮೇಳನಕ್ಕೆ ತೊಂದರೆಯಾಗುತ್ತಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ.
ಒಒಡಿಗಾಗಿ ಗಲಾಟೆ ಮಾಡುವವರನ್ನು ನೋಡಿದರೆ ಅವರು ನಿಜಕ್ಕೂ ಸರ್ಕಾರಿ ನೌಕರರೇ ಶಿಕ್ಷಕರೇ ಎಂಬ ಅನುಮಾನ ಮೂಡುವಂತಿತ್ತು. ಅವರ ಬೈಗುಳ, ಅಶಿಸ್ತಿನ ವರ್ತನೆ, ನೂಕುನುಗ್ಗಲು ಹಾಗಿತ್ತು. ಅವರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ಕನ್ನಡದ ಕಾಳಜಿಗಿಂತ ಒಒಡಿ ಕಾಳಜಿಯೇ ಮುಖ್ಯವಾಗಿತ್ತು. ಅತ್ತ ಮುಖ್ಯ ವೇದಿಕೆಯಲ್ಲಿ ಗೋಷ್ಠಿಗಳು, ಕವನ ವಾಚನಗಳು ನಡೆಯುತ್ತಿದ್ದರೆ, ಇವರು ಮಾತ್ರ ಮುಖ್ಯ ಸಭಾಂಗಣದ ಪಕ್ಕದಲ್ಲಿ ಬೇಕೇ ಬೇಕು ಒಒಡಿ ಬೇಕು ಎಂದು ಬೊಬ್ಬೆ ಹೊಡೆಯುವುದರಲ್ಲಿ ನಿರತರಾಗಿದ್ದರು. ನಿಜವಾಗಿ ಸಾಹಿತ್ಯದಲ್ಲಿ ಅಥವಾ ಸಾಹಿತ್ಯ ಚಟುವಟಿಕೆಯಲ್ಲಿ, ಸಮ್ಮೇಳನದಲ್ಲಿ ಆಸಕ್ತಿ ಇರುವವರು ಗೋಷ್ಠಿಗಳಲ್ಲಿ ಕುಳಿತಿರುತ್ತಿದ್ದರು. ಆದರೆ ಇವರಲ್ಲಿ ಅಂತಹ ಯಾವುದೇ ಲಕ್ಷಣ ಕಾಣಲಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಿಂತ ಹೆಚ್ಚಾಗಿ ಒಒಡಿ ತೆಗೆದುಕೊಳ್ಳುವುದೇ ಅವರ ಮೂಲ ಉದ್ದೇಶ ಎಂಬುದು ಸ್ಪಷ್ಟವಾಗುತ್ತಿತ್ತು. ಅದನ್ನು ಅವರು ಮತ್ತೆ ಮತ್ತೆ ಸಾಬೀತು ಮಾಡಿದರು ಕೂಡ.
ಕಾನೂನು ಪ್ರಕಾರ ನೋಡಿದರೆ ಸಮ್ಮೇಳನದ ಕೊನೆಯ ದಿನ ಅವರು ಒಒಡಿ ಫಾರ್ಮ್ ಪಡೆದುಕೊಳ್ಳಬೇಕು. ಅಂದರೆ ಅವರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದಕ್ಕೆ ಅದೇ ಸಾಕ್ಷಿ. ಆದರೆ ಒಒಡಿ ಫಾರ್ಮ್ ಪಡೆದುಕೊಳ್ಳುವುದೇ ಅವರ ಮೂಲ ಉದ್ದೇಶವಾದಂತಿತ್ತು. ಸಾಹಿತ್ಯ ಸಮ್ಮೇಳನಕ್ಕಾಗಿ ಒಟ್ಟು 4 ದಿನ ಒಒಡಿ ಅವಕಾಶವಿದೆ. ಇದರಲ್ಲಿ ಅರ್ಧದಷ್ಟು ಜನ ಒಒಡಿ ಫಾರ್ಮ್ ತೆಗೆದುಕೊಂಡು ಊರಿಗೆ ಅಥವಾ ಪ್ರವಾಸಿ ತಾಣಗಳಿಗೆ ತೆರಳುವವವರು. ಹೀಗಾಗಿ ಅವರಿಗೆ ಸಮ್ಮೇಳನದ ಮೊದಲ ದಿನವೇ ಒಒಡಿ ಫಾರ್ಮ್ ಬೇಕು.
ಇವರು ಒಒಡಿ ಫಾರ್ಮ್ ತೆಗೆದುಕೊಂಡು ಓಡಿ ಹೋಗುತ್ತಾರೆ ಎಂಬ ಕಾರಣಕ್ಕೇ ಕಳೆದ 2 ಸಾಹಿತ್ಯ ಸಮ್ಮೇಳನದಿಂದ ಸಮ್ಮೇಳನದ ಕೊನೆಯ ದಿನ ಒಒಡಿ ಫಾರ್ಮ್ ನೀಡಲು ನಿರ್ಧರಿಸಲಾಗಿದೆ. ಇದು ಒಒಡಿ ತೆಗೆದುಕೊಂಡು ಓಡಿ ಹೋಗುವವರಿಗೆ ಅಡ್ಡಿಯಾಗಿ ಪರಿಣಮಿಸಿದೆ. ಅದಕ್ಕೇ ಸಮ್ಮೇಳನದ ಆರಂಭದ ದಿನವೇ ಪ್ರತಿಭಟನೆ, ಗಲಾಟೆ, ಗದ್ದಲ. ಹೇಗಾದರೂ ಮಾಡಿ ಒಒಡಿ ಫಾರ್ಮ್ ತೆಗೆದುಕೊಂಡುಬಿಟ್ಟರೆ ಜೀವನವೇ ಸಾರ್ಥಕ ಎಂಬಂತೆ ವರ್ತಿಸುತ್ತಾರೆ. ಎಲ್ಲರೂ ಹೀಗಲ್ಲದಿದ್ದರೂ ದೊಡ್ಡ ಸಂಖ್ಯೆಯ ಜನ ಹೀಗೇ ಆಗಿರುವುದರಿಂದ ಉಳಿದವರೂ ಅನಿವಾರ್ಯವಾಗಿ ಇದರ ಆರೋಪಕ್ಕೆ ಗುರಿಯಾಗಬೇಕಾಗಿದೆ.
ಇದರ ಜತೆಗೆ ಒಒಡಿ ಅವ್ಯವಹಾರಗಳು ಬೇರೆ. 2-3 ಒಒಡಿ ಫಾರ್ಮನ್ನು ಪಡೆದುಕೊಂಡು ಅದನ್ನು ಅಗತ್ಯ ಇದ್ದವರಿಗೆ ಮಾರಾಟ ಮಾಡುವ ದಂಧೆ ಇದೆ. ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಿಗೆ ಒಒಡಿ ಪಾರ್ಮ್ ನೀಡಲಾಗಿದ್ದು, ಆಯಾ ಜಿಲ್ಲೆಯಿಂದ ಬಂದವರು ಅವರಿಂದ ಒಒಡಿ ಫಾರ್ಮ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಕೆಲವು ಜಿಲ್ಲಾಧ್ಯಕ್ಷರು ಹಣ ಪಡೆದು ಒಒಡಿ ಫಾರ್ಮ್ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇದು ಕನ್ನಡ ಸಾಹಿತ್ಯ ಪರಿಷತ್ ಗಮನಕ್ಕೂ ಬಂದಿದೆ. ಇನ್ನು ಕೆಲವರು ಸಮ್ಮೇಳನಕ್ಕೆ ಬಾರದೇ ತಮ್ಮ ಪರಿಚಿತರ, ಗೆಳೆಯರ ಮೂಲಕವೇ ಒಒಡಿ ಫಾರ್ಮ್ ತರಿಸಿಕೊಳ್ಳುವವರೂ ಇದ್ದಾರೆ. ಮನೆಯಲ್ಲಿ ಕುಳಿತು ರಜೆಯ ಮಜಾ ತೆಗೆದುಕೊಂಡು, ಇತ್ತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನೆಪದಲ್ಲಿ ರಜೆಯನ್ನೂ ಉಳಿಸಿದಂತಾಗುತ್ತದೆ.
ಈ ಅನರ್ಥಕ್ಕೆ ಒಒಡಿ ಸೌಲಭ್ಯ ಯಾಕೆ ಬೇಕು? ಮೂಲ ಉದ್ದೇಶವೇ ಈಡೇರದಿದ್ದರೆ ಒಒಡಿ ಸೌಲಭ್ಯ ಇದ್ದೇನು ಪ್ರಯೋಜನ? ಅದಕ್ಕಿಂತ ಹೆಚ್ಚಾಗಿ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಯಾಗುವ ಇಂತಹ ವ್ಯವಸ್ಥೆ ಮುಂದುವರಿಸುವುದರಿಂದ ಉಪಯೋಗವಿದೆಯೇ? ಇದರ ಬದಲು ನಿಜವಾಗಿಯೂ ಸಾಹಿತ್ಯದ ಬಗ್ಗೆ, ಕನ್ನಡದ ಬಗ್ಗೆ ಆಸಕ್ತಿ ಇರುವವರು ರಜೆ ಹಾಕಿ ಬರುತ್ತಾರೆ. ಒಒಡಿಗೋಸ್ಕರ ಬರುವುದಕ್ಕಿಂತ ಬರದಿರುವುದೇ ಎಷ್ಟೋ ಪಾಲು ಒಳ್ಳೆಯದು. ಅದರಲ್ಲೂ ಬಹುತೇಕ ಸಾಹಿತ್ಯ ಸಮ್ಮೇಳನಗಳು ವಾರಾಂತ್ಯದಲ್ಲಿ ನಡೆಯುತ್ತವೆ. ಹಾಗಾಗಿ ಒಒಡಿಯ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಆದರೆ ಒಒಡಿ ಅಗತ್ಯವಿದೆ ಎನ್ನುವವರೂ ಇದ್ದಾರೆ. ಒಒಡಿಗಾಗಿ ಗಲಾಟೆ ಮಾಡುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಿಜವಾದ ಆಸಕ್ತಿಯಿಂದ ಸಾಹಿತ್ಯ ಸಮ್ಮೇಳನಕ್ಕೆ ಬರುವವರೂ ಇದ್ದಾರೆ. ಗಲಾಟೆ ಮಾಡುವವರ ನೆಪದಲ್ಲಿ ಒಒಡಿ ರದ್ದುಪಡಿಸಿದರೆ ಆಗ ನಿಜವಾದ ಆಸಕ್ತಿ ಇರುವವರಿಗೆ ತೊಂದರೆ ಮಾಡಿದಂತಾಗುತ್ತದೆ ಎನ್ನುವವರೂ ಇದ್ದಾರೆ. ಆದರೆ ನಿಜವಾದ ಆಸಕ್ತಿ ಇರುವವರು ಹಾಗೂ ಒಒಡಿಗಾಗಿ ಮಾತ್ರ ಬರುವವರನ್ನು ಪ್ರತ್ಯೇಕಿಸುವುದು ಕಷ್ಟ. ಅಲ್ಲದೇ ಸಭಾಂಗಣವನ್ನು ನೋಡಿದಾಗ ಮತ್ತು ಒಒಡಿ ಪಡೆದುಕೊಂಡಿರುವವರ ಸಂಖ್ಯೆ ಗಮನಿಸಿದಾಗ ಒಒಡಿ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿರುವುದು ಸಾಬೀತಾಗುತ್ತದೆ.
ಅದಕ್ಕಿಂತ ಮುಖ್ಯವಾಗಿ ಒಒಡಿ ನೆಪದಲ್ಲಿ ಬರುವವರಿಗೆ ಸಾಹಿತ್ಯದ ಆಸಕ್ತಿಗಿಂತ ಹೆಚ್ಚಾಗಿ ಪ್ರವಾಸಿ ಕೇಂದ್ರಗಳನ್ನು ಸುತ್ತುವ, ಸುಮ್ಮನೆ ಮಜಾ ಮಾಡುವ ಉದ್ದೇಶವೇ ಹೆಚ್ಚಿದ್ದಂತೆ ಕಾಣುತ್ತಿದೆ. ಅವರ ವರ್ತನೆಯಿಂದಲೇ ಅದು ಸ್ಪಷ್ಟವಾಗುತ್ತಿದೆ. ನಿಜವಾಗಿ ಆಸಕ್ತಿ ಇರುವವರು ಸಮ್ಮೇಳನಕ್ಕಿಂತ ಹೆಚ್ಚಾಗಿ ಒಒಡಿಗೆ ಪ್ರಾಮುಖ್ಯ ನೀಡುತ್ತಿರಲಿಲ್ಲ. ಒಒಡಿ ಪಡೆಯಲು ತೋರುವ ಆಸಕ್ತಿಯನ್ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೂ ತೋರುತ್ತಿದ್ದರು. ಆದರೆ ಒಒಡಿ ಪಡೆಯಲು ಕ್ಯೂ ನಿಂತಷ್ಟು ಜನ, ಒಒಡಿಗಾಗಿ ಗಲಾಟೆ ಮಾಡಿದಷ್ಟು ಜನ ಗೋಷ್ಠಿಗಳಲ್ಲಿ ಭಾಗವಹಿಸಿದ್ದರೆ ಪ್ರೇಕ್ಷಕರ ಕೊರತೆಯಾದರೂ ನೀಗುತ್ತಿತ್ತು.
ಇದೆಲ್ಲ ವಿಷಯಗಳನ್ನು ಗಮನಿಸಿದಾಗ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡುವ ಒಒಡಿ ಸೌಲಭ್ಯವನ್ನು ಮರುಪರಿಶೀಲಿಸಬೇಕಾದ ಮತ್ತು ಇದರಿಂದ ಸಾಹಿತ್ಯ ಸಮ್ಮೇಳನಕ್ಕಾಗುತ್ತಿರುವ ತೊಂದರೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಅಗತ್ಯ ಕಾಣುತ್ತಿದೆ. ಒಒಡಿ ರದ್ದುಪಡಿಸುವುದು ಸರಿಯಲ್ಲ ಎಂದಾದರೆ ಒಒಡಿಗಾಗಿ ಪುಂಡಾಟ ನಡೆಸುವವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವನ್ನಾದರೂ ಸರ್ಕಾರ ಪರಿಶೀಲಿಸುವುದೊಳಿತು.
-ವಿನಾಯಕ ಭಟ್ಟ ಮೂರೂರು
vakradanta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


