ಜೇಡರ ಬಲೆಯ ಶಕ್ತಿ, ರೇಷ್ಮೆ ನೂಲಿಗೆ ಬಂದಾಗ!
ಎಲ್ಲಾ ಕೃಷಿ ಉದ್ದಿಮೆಗಳಂತೆ ರೇಷ್ಮೆ ಉದ್ದಿಮೆಯೂ ಸಹ ಹತ್ತಾರು ವರ್ಷಗಳಿಂದ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ...
ಎಲ್ಲಾ ಕೃಷಿ ಉದ್ದಿಮೆಗಳಂತೆ ರೇಷ್ಮೆ ಉದ್ದಿಮೆಯೂ ಸಹ ಹತ್ತಾರು ವರ್ಷಗಳಿಂದ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಜೊತೆಗೆ ಚೀನಾ ದೇಶದಿಂದ ಆಮದಾಗುತ್ತಿರುವ ರೇಷ್ಮೆ ನೂಲು ಮತ್ತು ವಸ್ತ್ರಗಳ ಪೈಪೋಟಿಯಿಂದ ದೇಶದ ಮತ್ತು ಕರ್ನಾಟಕ ರಾಜ್ಯದ ರೇಷ್ಮೆ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ ಜಾಗತಿಕ ವಿದ್ಯಮಾನದಲ್ಲಿ ಪ್ರಪಂಚದ ಎಲ್ಲಾ ಕಡೆಯಿಂದ ಪೈಪೋಟಿಯನ್ನು ಎದುರಿಸದೇ ಗತಿಯಿಲ್ಲ. ರೇಷ್ಮೆಯನ್ನು ಒಳ್ಳೆಯ ಗುಣಮಟ್ಟದಲ್ಲಿ ಹಾಗೂ ಪೈಪೋಟಿ ನೀಡುವಂತಹ ದರದಲ್ಲಿ ತಯಾರಿಸಬೇಕು. ಹಾಗಾಗಬೇಕಾದರೆ ರೇಷ್ಮೆ ಉದ್ದಿಮೆಯೂ ಸಹ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಯೋಗವನ್ನು ಪಡೆದುಕೊಳ್ಳಬೇಕು. ರೇಷ್ಮೆಯನ್ನು ಸುಮಾರು ಐದು ಸಾವಿರ ವರ್ಷಗಳ ಕೆಳಗೆ ಚೀನಾ ದೇಶದಲ್ಲಿ ಕಂಡು ಹಿಡಿಯಲಾಯಿತು. ಮೊದಲಿದ್ದ ರೇಷ್ಮೆ ಹುಳುಗಳು ಯಥಾ ಜಾತಿಗೆ ಸಂಬಂಧಿಸಿದ ಹುಳುಗಳು ಇಂದು ಯಾವುದೂ ಬದುಕುಳಿದಿಲ್ಲ. ಯಾಕೆಂದರೆ, ರೇಷ್ಮೆ ಹುಳವನ್ನು ಅಷ್ಟರ ಮಟ್ಟಿಗೆ ಉದ್ಯಮದಲ್ಲಿ ಪಳಗಿಸಿಕೊಂಡಾಗಿದೆ. ರೇಷ್ಮೆ ನೂಲನ್ನು ವಸ್ತ್ರ ತಯಾರಿಕೆಗಷ್ಟೇ ಅಲ್ಲದೆ, ಸಜೀವ ವಸ್ತುಗಳಾದ (bio-materials) ಗಾಯಗಳಿಗೆ ಹೊದಿಕೆ, ಕೃತಕ ಅಂಗಾಂಗ ಮತ್ತು ಅಂಗಾಂಶಗಳು, ಸ್ನಾಯುಗಳು, ಅಂಗಾಂಶ ಹೊದಿಕೆ ಅಥವಾ ಪದರಗಳು, ಸೂಕ್ಷ್ಮ-ಕ್ಯಾಪ್ಸೂಲ್ಗಳಂಥ ವಸ್ತುಗಳ ತಯಾರಿಕೆಗೆ ಉಪಯೋಗಿಸಬಹುದಾಗಿದೆ. ಅದೂ ಅಲ್ಲದೆ, ರೇಷ್ಮೆ ನೂಲನ್ನು ಚಾಕ್ಷುನ, ನರಶಾಸ್ತ್ರಕ್ಕೆ ಸಂಬಂಧಿಸಿದ ಮತ್ತು ಸೌಂದರ್ಯವರ್ಧಕಗಳ ಸಾಧನಗಳಿಗೆ ಉಪಯೋಗಿಸಬಹುದಾಗಿದೆ. ಆದರೆ, ರೇಷ್ಮೆ ನೂಲಿನ ದೃಢತೆ ಜೇಡರ ಹುಳದ ನೂಲಿಗಿಂತ ಕಡಿಮೆ. ಆದರೆ ಈಗ ರೇಷ್ಮೆ ಹುಳುವಿನ ನೂಲಿಗೆ ಜೇಡರದ ನೂಲಿನ ದೃಢತೆ ತರಿಸುವುದಕ್ಕೆ ಹೊಸದಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗಿದೆ.
ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳು 'ಪಿಗ್ಗಿ ಬ್ಯಾಂಕ್' ಎಂಬ ಅದ್ವಿತೀಯ ವೆಕ್ಟರ್ನಲ್ಲಿ ಜೇಡರ ಬಲೆಗೆ ದೃಢತೆ ತಂದುಕೊಡುವ ಗುಣಾಣುವನ್ನು ರೇಷ್ಮೆ ಹುಳುವಿನ ನೂಲಿನ ಗುಣಾಣುವನ್ನು ಸೇರಿಸಿ, ಅದನ್ನು ರೇಷ್ಮೆ ಹುಳುವಿಗೆ ಅಳವಡಿಸಿ ಹೊಸ ನೂಲನ್ನು ತಯಾರಿಸಿದ್ದಾರೆ. (Proc.Natl. Acad.Sci Jan 17,2012:109(3): 923:928ಈ ತರಹದ ವಂಶಾಂತರಿ ರೇಷ್ಮೆ ಹುಳುವಿನಿಂದ ತಯಾರಾದ ನೂಲಿಗೆ ಅತ್ಯಂತ ಬೇಡಿಕೆ ಇದೆ. ಇದರಿಂದ ರೇಷ್ಮೆ ಉದ್ದಿಮೆದಾರರು ಮತ್ತಷ್ಟು ಸಂಪಾದನೆ ಹೆಚ್ಚಿಸಕೊಳ್ಳಬಹುದಾಗಿದೆ.
ಮತ್ತೊಂದು ನವೀನ ತಂತ್ರಜ್ಞಾನದ ಹೆಸರು "''Sterile insect technique'' (SIT) Transpasson ''Jumping genes'' ಎಂಬ Vector ಅವಲಂಬಿತ r DNA ತಂತ್ರಜ್ಞಾನದ ಮುಖೇನ ಕುಲಾಂತರಿ ರೇಷ್ಮೆ ಹುಳುಗಳನ್ನು ತಯಾರಿಸಬಹುದು (Alfred Handlev - ವಿರಚಿತ ಪ್ರಬಂಧ Genetica 116:137-149, 2002). ಈ ತಂತ್ರಜ್ಞಾನಕ್ಕೆ ಮೂಲಾಧಾರವಾದ ಸಂಶೋಧನೆಯನ್ನು ಭಾರತೀಯ ವಿಜ್ಞಾನಿಗಳಾದ ಡಾ. ಶುಕ್ಲ, ಎಸ್. ಜಾಧವ್ ಮತ್ತು ಜೆ. ನಾಗರಾಜು ಎನ್ನುವವರು 2011ರಲ್ಲೇ ಸ್ಥಳ-ಖಚಿತವಾದ ಜಾಗದಲ್ಲಿ ಗುಣಾಣುವನ್ನು ಅಳವಡಿಸುವ ತಂತ್ರಗಾರಿಕೆಯನ್ನು ತೋರಿಸಿಕೊಟ್ಟ ಒಂದೂವರೆ ವರ್ಷದಲ್ಲೇ ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳು ಅತ್ಯಂತ ಉಪಯುಕ್ತವಾಗಿ ಕುಲಾಂತರಿ ರೇಷ್ಮೆ ಹುಳುಗಳನ್ನು ತಯಾರು ಮಾಡಿ ತೋರಿಸಿದ್ದಾರೆ.(Tan et.al.Proc. Natt. Acad.Sci. USA-2013 February). ಇವರುಗಳು ಸೃಷ್ಟಿಸಿದ ಕುಲಾಂತರಿ ರೇಷ್ಮೆ ಹುಳುಗಳು ಹೆಚ್ಚಾಗಿ ಗಂಡು ಹುಳುಗಳಾಗೇ ಇರುತ್ತವೆ. ರೇಷ್ಮೆ ಉದ್ದಿಮೆಯಲ್ಲಿ ಗಂಡು ಹುಳುಗಳನ್ನೇ ಉದ್ದಿಮೆದಾರರು ಗುರುತರವಾಗಿ ಬಯಸುತ್ತಾರೆ. ಯಾಕೆಂದರೆ, ಗಂಡು ರೇಷ್ಮೆ ಹುಳುಗಳು ಶ್ರೇಷ್ಠವಾಗಿ ರೇಷ್ಮೆ ಕಟ್ಟುವ ಗುಣ ಹೊಂದಿರುತ್ತದೆ.ಅಲ್ಲದೆ ಅವು ಕಡಿಮೆ ಆಹಾರ ತಿನ್ನುತ್ತವೆ ಮತ್ತು ಆರ್ಥಿಕವಾಗಿ ಹೆಚ್ಚು ಲಾಭ ಮಾಡಿಕೊಡುವ ನೂಲನ್ನು ತಯಾರಿಸುತ್ತವೆ. ನಿಸರ್ಗದಲ್ಲಿ ಸಾಮಾನ್ಯವಾಗಿ ಗಂಡು ರೇಷ್ಮೆ ಹುಳುಗಳು ಅಧಿಕವಾಗಿ ಕಂಡು ಬರುವುದಿಲ್ಲ. ಹೀಗಾಗಿ, ಉದ್ದಿಮೆದಾರರಿಗೆ ಹೆಣ್ಣು ರೇಷ್ಮೆ ಹುಳುಗಳನ್ನೂ ಸಹ ಸಾಕಬೇಕಾಗುತ್ತದೆ. ಆದರೆ ಮೇಲೆ ಹೇಳಿದ ರೀತಿಯಲ್ಲಿ ಕುಲಾಂತರಿ ರೇಷ್ಮೆ ಹುಳುಗಳನ್ನು ಅಧಿಕವಾಗಿ ಉತ್ಪನ್ನ ಮಾಡಬಹುದು. ಇದರಿಂದ ಕಡಿಮೆ ವೆಚ್ಚದಲ್ಲಿ ಜೇಡರ ಬಲೆಯ ಶಕ್ತಿಯುಳ್ಳ ಮತ್ತು ಗಂಡು ಸಂತತಿ ಕುಲಾಂತರಿ ರೇಷ್ಮೆ ಹುಳುಗಳನ್ನು ತಯಾರಿಸಬಹುದು. ಈ ತರಹದ ಕುಲಾಂತರಿ ತಂತ್ರಜ್ಞಾನ ಚೀನಾದಲ್ಲಿ ಈಗಾಗಲೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾಗಿ ಚೀನಾ ರೇಷ್ಮೆ ಉದ್ದಿಮೆ ಇನ್ನಷ್ಟು ಪಕ್ವವಾಗಿ ಬೆಳೆದು, ಅತ್ಯಂತ ಕಡಿಮೆ ದರದಲ್ಲಿ ರೇಷ್ಮೆಯನ್ನು ಮಾರುಕಟ್ಟೆಗೆ ತಂದು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪೈಪೋಟಿ ನೀಡಲಿದೆ. ಖಂಡಿತವಾಗಿಯೂ ಭಾರತ ಈ ಕುಲಾಂತರಿ ತಂತ್ರಜ್ಞಾನವನ್ನು ಆಮದು ಮಾಡಿಕೊಂಡು, ತ್ವರಿತ ವೇಗದಲ್ಲಿ ದೇಶದ ಉದ್ದಿಮೆದಾರರಿಗೆ ತಲುಪಿಸಬೇಕು.
ಕುಲಾಂತರಿ ರೇಷ್ಮೆ ಹುಳುಗಳಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ಹುಳುಗಳಿಂದ ಬೇರೆ, ಬೇರೆ ಹುಳುಗಳಿಗೆ ಗುಣಾಣುಗಳು ವರ್ಗವಾಗುವುದಕ್ಕೆ ಸಾಧ್ಯವಿಲ್ಲ ಮತ್ತು ರೇಷ್ಮೆ ಉದ್ದಿಮೆ, ಉದ್ದಿಮೆದಾರನ ಕೈ ಹಿಡಿತದಲ್ಲೇ ಇರುವುದರಿಂದ, ಯಾವುದೇ ತರಹದ ದುಷ್ಪರಿಣಾಮ ಪರಿಸರಕ್ಕೆ ಉಂಟಾಗುವುದು ಸಾಧ್ಯವಿಲ್ಲ. ಮತ್ತೊಂದು ಅಂಶವೆಂದರೆ, ಈ ತಂತ್ರಜ್ಞಾನವನ್ನು ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯಗಳು ಆಮದು ಮಾಡಿಕೊಂಡು ಮತ್ತು ಅದನ್ನು ಪರಿಷ್ಕರಿಸಿ, ಉದ್ದಿಮೆದಾರರಿಗೆ ವರ್ಗಾಯಿಸಬಹುದಾಗಿದೆ. ಈ ತಂತ್ರಜ್ಞಾನ ಕಾರ್ಯಗತವಾಗಬೇಕಾದರೆ, ಸರ್ಕಾರ ಕುಲಾಂತರಿ ತಂತ್ರಜ್ಞಾನದಬಗ್ಗೆ ಖಚಿತ ನಿಲುವು ತೋರಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ದೇಶದ ರೇಷ್ಮೆ ಉದ್ದಿಮೆದಾರರ ಜೀವನ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
- ಪ್ರೊ. ಶಾಂತು ಶಾಂತಾರಾಮ್
ಐಯೋವ ಕೃಷಿ ವಿಶ್ವವಿದ್ಯಾಲಯ
shanthus@iastate.edu
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

