ಮತದಾರರ ಮುನಿಸಿಗೆ ಕಂಗೆಟ್ಟ ಕೇಸರಿ ಪಕ್ಷ!
ಇಷ್ಟು ಸಾಕು. ನಮಗಂತೂ ಸಾಕಾಗಿ ಹೋಗಿದೆ. ನಮಗೆ ಬದಲಾವಣೆ ಬೇಕು. ಅಸೆಂಬ್ಲಿ ಚುನಾವಣಗಳು ಇನ್ನೆರಡು ತಿಂಗಳು ಇವೆ ಅನ್ನುವಷ್ಟರಲ್ಲೇ ಮತದಾರರು ರಾಜಕೀಯ ವರ್ಗಕ್ಕೆ ಇಂತಹ ಸ್ಪಷ್ಟ ಸಂದೇಶವನ್ನು ಕಳಿಸಿದ್ದಾರೆ. ಕಳೆದ ವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅವರು, ಕಳಪೆ ಆಡಳಿತ ನೀಡಿದ ಬಿಜೆಪಿಗೆ ಚಾಟಿ ಏಟು ನೀಡಿದ್ದಾರೆ. ಕೇಸರಿ ಪಕ್ಷ ಫಲಿತಾಂಶಗಳನ್ನು ನೋಡಿ ಕಂಗೆಟ್ಟಿದೆ. ಹಾಗೆ ನೋಡಿದರೆ ಈ ಬಾರಿ ಅದು ಮೂರನೇ ಸ್ಥಾನಕ್ಕೆ ಕುಸಿದಿದೆಯಾದರೂ, ಗೆದ್ದ ಸ್ಥಾನಗಳ ಆಧಾರದ ಮೇಲೆ ಅದು ಜೆಡಿಎಸ್‌ನೊಂದಿಗೆ ಸಮಬಲ ಸಾಧಿಸಿದೆ. ಇಷ್ಟು ದಿನಗಳವರಗೆ ಪರಾಜಯ ಅನುಭವಿಸುತ್ತಾ ಬಂದಿದ್ದ ಕಾಂಗ್ರೆಸ್ ಈ ಬಾರಿ ಬಿಜೆಪಿಯನ್ನು ಹಿಂದಿಕ್ಕಿ ದಿಗ್ವಿಜಯ ಸಾಧಿಸಿದೆ.
ಮತದಾರರ ಮನಸ್ಥಿತಿಯನ್ನು ನೋಡಿದರೆ ಮುಂಬರುವ ಚುನಾವಣೆಗಳಲ್ಲಿ ಅವರು ಬಿಜೆಪಿಗೆ ಹೊರಬಾಗಿಲು ತೋರಿಸುತ್ತಾರೆ ಅನ್ನಿಸುತ್ತಿದೆ. ಅದಷ್ಟೇ ಅಲ್ಲ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲೂ ಕರ್ನಾಟಕ ಬಿಜೆಪಿ, ರಾಷ್ಟ್ರೀಯ ಪಕ್ಷಕ್ಕೆ ಹೆಚ್ಚು ಬಲ ತಂದುಕೊಡಲು ವಿಫಲವಾಗುವುದು ನಿಶ್ಚಿತ ಎಂದನ್ನಿಸದೇ ಇರದು. ಮ್ಯಾಜಿಕ್ ನಡೆದರೆ ಮಾತ್ರ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರಬಹುದು. ರಾಜ್ಯ ಬಿಜೆಪಿ ಈ ಅಧೋಗತಿಗೆ ಇಳಿದಿರುವುದಕ್ಕೆ ದೆಹಲಿಯ ನಾಯಕರನ್ನೇ ತೆಗಳಬೇಕಾಗಿದೆ. ಅವಶ್ಯಕತೆಯಿದ್ದಾಗ ಪಕ್ಷದ ಸಹಾಯಕ್ಕೆ ಅವರು ಬರಲಿಲ್ಲ. ಕಳಂಕಿತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ತಾಳಕ್ಕೆ ತಕ್ಕಂತೆ ಅವರು ಕುಣಿದರು. ಟೋಪಿ ಬದಲಿಸುವಷ್ಟೇ ಸುಲಭವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸಿದರು. ಆಡಳಿತದ ಜಾಗದಲ್ಲಿ ಕಲಹ ತುಂಬಿಕೊಂಡಾಗ ಅವರು ಕಣ್ಣುಮುಚ್ಚಿಕೊಂಡು ಕುಳಿತುಬಿಟ್ಟರು. ಒಟ್ಟಾರೆಯಾಗಿ, ದಕ್ಷಿಣ ಭಾರತದಲ್ಲಿ ತನ್ನ ದಳಗಳನ್ನು ಹಬ್ಬಿಸುವ ಉತ್ತಮ ಅವಕಾಶವನ್ನು ಅವರು ಸ್ವಯಂಕೃತಾಪರಾಧದಿಂದ ಕೈಚೆಲ್ಲಿದರು.
ಜನತೆ ಗೊಂದಲಕ್ಕೆ ಬಿದ್ದಿರುವ ವಿಷಯ ಒತ್ತಟ್ಟಿಗಿರಲಿ, ಬಿಜೆಪಿಯ ಕಾರಣದಿಂದಾಗಿಯೇ ಉದ್ಭವವಾದ ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ ಮತ್ತು ಕುಖ್ಯಾತ ರೆಡ್ಡಿ ಸಹೋದರರ ಆಪ್ತ, ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಹಾಲಿಗೆ ಇನ್ನಷ್ಟು ಹುಳಿ ಹಿಂಡಿದವು. ಅವರು ಬಿಜೆಪಿಯ ಮತಗಳನ್ನು ಒಡೆಯಲು ಸಫಲರಾದರು. ವ್ಯಂಗ್ಯವೆಂದರೆ ಈ ಎರಡೂ ಪಕ್ಷಗಳೂ ಕೂಡ ಜನರ ಒಲವು ಗಳಿಸಿಕೊಳ್ಳಲು ವಿಫಲವಾದದ್ದು. ಯಡಿಯೂರಪ್ಪ ಅವರ ಕೆಜೆಪಿ ಕೇವಲ 5 ಯುಎಲ್‌ಬಿಗಳನ್ನು ಗೆದ್ದುಕೊಂಡಿದೆ ಮತ್ತು ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಿದೆ. ಲಿಂಗಾಯತ ಕಾರ್ಡನ್ನು ಎದೆಗವಚಿಕೊಂಡು ಬಿಜೆಪಿಯನ್ನು ಇಷ್ಟು ದಿನದಿಂದ ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇನ್ನು ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಬಳ್ಳಾರಿಯಲ್ಲೇ ಹಿನ್ನಡೆ ಕಂಡಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿಯನ್ನು ತುದಿ ಬೆರಳಲ್ಲಿ ಆಡಿಸಿದ್ದ ರೆಡ್ಡಿ ಸಹೋದರರಿಗೆ ಚೆನ್ನಾಗಿಯೇ ಹೊಡೆತ ಬಿದ್ದಿದೆ. ಯಡಿಯೂರಪ್ಪ ಮತ್ತು ಶ್ರೀರಾಮುಲು ಬಿಜೆಪಿಗೆ ಸಮಾಧಿ ತೋಡಿದರಾದರೂ ಅದರಲ್ಲಿ ತಾವೂ ಬೀಳುತ್ತೇವೆ ಎನ್ನುವ ಅರಿವು ಮಾತ್ರ ಅವರಿಗಿರಲಿಲ್ಲ.
ಇನ್ನು ಬಿಜೆಪಿಗೆ ಅಘಾತ ತಂದ ವಿಷಯವೆಂದರೆ ಇಷ್ಟು ವರ್ಷದಿಂದ ತನ್ನಿ ಹಿಡಿತದಲ್ಲಿದ್ದ ಕರಾವಳಿ ಕರ್ನಾಟಕದಲ್ಲಿ ಅದು ಅನುಭವಿಸಿದ ಮುಖಭಂಗ. ಅಧಿಕಾರ ವಿರೋಧಿ ಅಲೆ ಮತ್ತು ಪಕ್ಷದಲ್ಲಿನ ಒಳಜಗಳಗಳಷ್ಟೇ ಅಲ್ಲದೆ, ಹಿಂದುತ್ವ ಗುಂಪುಗಳಾದ ಬಜರಂಗ ದಳ ಮತ್ತು ರಾಮ ಸೇನೆ ಮಾಡಿದ ಎಡವಟ್ಟುಗಳಿಂದಾಗಿ ಆ ಭಾಗದ ಜನರು ಬಿಜೆಪಿಯ ಮೇಲೆ ವಿಶ್ವಾಸ ಕಳೆದುಕೊಂಡುಬಿಟ್ಟರು. ಸುಮಾರು ಒಂದು ದಶಕದವರೆಗೆ ಬಿಜೆಪಿಯನ್ನು ನೆಚ್ಚಿಕೊಂಡಿದ್ದ ಕರಾವಳಿ ಭಾಗದ ಜನ ಈಗ ಕಾಂಗ್ರೆಸ್‌ಗೆ ಮಣೆ ಹಾಕಿದ್ದಾರೆ.
ಬಿಜೆಪಿ ವಿರುದ್ಧ ಕರ್ನಾಟಕದ ಜನಮಾನಸದಲ್ಲಿ ಎದ್ದ ಅಸಮಾಧಾನದ ಅಲೆಯ ಬೃಹತ್ ಫಲಾನುಭವಿ ಕಾಂಗ್ರೆಸ್. ಮತದಾರರು ಜೆಡಿಎಸ್, ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಅನ್ನು ಕಡೆಗಣಿಸಿ ಕಾಂಗ್ರೆಸ್‌ನ ಬೆನ್ನಿಗೆ ನಿಂತಿದ್ದಾರೆ. ಇದರರ್ಥವಿಷ್ಟೆ, ಅವರು ಕಾಂಗ್ರೆಸ್‌ಗೆ ಇನ್ನೊಂದು ಅವಕಾಶವನ್ನು ಕೊಡಲು ಬಯಸುತ್ತಿದ್ದಾರೆ ಮತ್ತು ಸಮ್ಮಿಶ್ರ ಸರ್ಕಾರವನ್ನು ನೋಡುವ ಯಾವ ಆಸೆಯೂ ಅವರಿಗಿಲ್ಲ. ಕಾಂಗ್ರೆಸ್ ಒಂದು ವೇಳೆ ಅಧಿಕಾರಕ್ಕೆ ಬಂದರೆ, ಹಿಂದೆ ಮಾಡಿದಂತಹ ತಪ್ಪನ್ನೇ ಮತ್ತೆ ಮಾಡದೇ ಉತ್ತಮ ಆಡಳಿತ ನೀಡಲಿ ಎಂದು ಆಶಿಸೋಣ. ಆದರೂ ಎಲ್ಲವನ್ನೂ ಈಗಲೇ ನಿಶ್ಚಯ ಮಾಡಿಬಿಡುವುದೂ ತರವಲ್ಲ. ಆದರೆ ವೇಗವಿಲ್ಲದ ಅಭಿವೃದ್ಧಿ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ರೋಸಿಹೋಗಿರುವ ಕರ್ನಾಟಕದ ಜನತೆ ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ ಎನ್ನುವುದಂತೂ ಸುಳ್ಳಲ್ಲ. ಬಹುಶಃ ಈ ಬದಲಾವಣೆಯನ್ನು ಕಾಂಗ್ರೆಸ್ ತರಬಲ್ಲದು ಎಂಬ ನಂಬಿಕೆ ಅವರುಗಳಿಗೆ ಇದೆಯೇನೋ? ಆದರೆ ಕಾಂಗ್ರೆಸ್ ಅವರ ಇಂಗಿತವನ್ನು ನಿಜಕ್ಕೂ ಪೂರೈಸಲಿದೆಯೇ?
ಅಸೆಂಬ್ಲಿ ಚುನಾವಣೆಗಳಿಗೆ ಇನ್ನೆರಡು ತಿಂಗಳಷ್ಟೇ ಉಳಿದಿವೆ. ನಿಜಕ್ಕೂ ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸುವ,ಭ್ರಷ್ಟಾಚಾರವನ್ನು ಹೊಡೆದೋಡಿಸುವ ಸರ್ಕಾರ ಅಧಿಕಾರಕ್ಕೆ ಬರಬಹುದೇ? ಅದು ಸಾಧ್ಯವೋ, ಇಲ್ಲವೋ ಎನ್ನುವುದನ್ನು ತಿಳಿಯಲು ಕಾದು ನೋಡಲೇಬೇಕು.
ಕೊನೆಯ ಗುಟುಕು: ಬೆಂಗಳೂರಿಗರೇ, ಇಂದು(ಮಾರ್ಚ್ 16) ಸಂಜೆ 6ಗಂಟೆಗೆ ಮಲ್ಲೇಶ್ವರಂ ಮೈದಾನಕ್ಕೆ ಬರುವುದನ್ನು ಮಾತ್ರ ಮರೆಯದಿರಿ. ಅಲ್ಲಿ ನಡೆಯಲಿರುವ ಅಭೂತಪೂರ್ವ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿಜವಾದ ಹೀರೋಗಳನ್ನು ಸನ್ಮಾನಿಸಲಾಗುವುದು. ಹಾಗಂತ, ಅವರೇನೂ ಫಿಲ್ಮ್ ಸ್ಟಾರ್‌ಗಳಲ್ಲ ಅಥವಾ ಕ್ರೀಡಾಪಟುಗಳೂ ಅಲ್ಲ. ಅವರೆಲ್ಲರೂ ನಮ್ಮ, ನಿಮ್ಮಂತೆ ಸಾಮಾನ್ಯ ಜನರು. ಆದರೆ ಬೆಂಗಳೂರಿಗಾಗಿ, ಬೆಂಗಳೂರಿನ ಜನತೆಯ ಶ್ರೇಯೋಭಿವೃದ್ಧಿಗಾಗಿ ಹಿನ್ನೆಲೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿರುವವರು. ಅವರು ನಮ್ಮ ನಡುವೆಯೇ ಇದ್ದರೂ, ಹಲವಾರು ಬಾರಿ ಅವರನ್ನು ಗುರುತಿಸಲು ನಾವು ವಿಫಲರಾಗಿಬಿಡುತ್ತೇವೆ. ಆದರೆ ಕಳೆದ ಹಲವಾರು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ ಅಂಥವರನ್ನು ಗುರುತಿಸುವ ಪ್ರಯತ್ನ ಮಾಡುತ್ತಲೇ ಇದೆ. ಹಾಗಾಗೇ ಹೇಳಿದ್ದು, ಅಂತಹ ಹೀರೋಗಳನ್ನು ಹುರಿದುಂಬಿಸುವ ಅವಕಾಶವನ್ನು ಕಳೆದುಕೊಳ್ಳದಿರಿ!
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

