ಅಂಕಣಗಳು

ಸ್ವಾಮ್ಯ ಸನ್ನದುವಿನಿಂದ ತಾಂತ್ರಿಕ ಜ್ಞಾನ ಬೆಳೆಸುವುದು ಹೇಗೆ?

Published On :

ಮೊದಲನೆಯದಾಗಿ ಎರಡು ತಿದ್ದುಪಡಿಗಳು. ಕಳೆದ ಅಂಕಣದಲ್ಲಿ RoTOVAC ಎಂಬ ಲಸಿಕೆ ಆಧುನಿಕ ಕುಲಾಂತರಿ ತಂತ್ರಜ್ಞಾನದಿಂದ ತಯಾರಿಸಿದುದು ಎಂದು ತಿಳಿಸಿದ್ದೆ. ಮತ್ತು ಭಾರತ್ ಬಯೊಟೆಕ್ ಎಂಬ ಹೈದ್ರಾಬಾದಿನ ಸಂಸ್ಥೆ ಹೆಪಟೈಟಿಸ್‌ಇ ಲಸಿಕೆಯನ್ನು ಭಾರತ ಸರ್ಕಾರದ ಸಹಯೋಗದಿಂದ ತಯಾರಿಸಿದ್ದು ಎಂದು ಹೇಳಿದ್ದೆ. 'ಎಲ್ಲಾ ಫೌಂಡೇಷನ್‌ನ ನಾಗೇಂದ್ರ ಹೆಗ್ಗಡೆಯವರು ಪತ್ರ ಬರೆದು RoTOVAC  ಕುಲಾಂತರಿ ತಂತ್ರಜ್ಞಾನದಿಂದ ತಯಾರಾದ ಲಸಿಕೆ ಅಲ್ಲ ಹಾಗೂ ಹೆಪಟೈಟಿಸ್‌ಇ ಲಸಿಕೆಯನ್ನು ಭಾರತ ಬೈಯೊಟೆಕ್ ಕಂಪನಿಯು ಸಂಪೂರ್ಣವಾಗಿ ತಾನೇ ತಯಾರಿಸಿದ ಲಸಿಕೆ ಎಂದು ತಿದ್ದುಪಡಿ ಕಳುಹಿಸಿದ್ದಾರೆ. ಈ ಎರಡು ವಿಚಾರಗಳಲ್ಲಿ ನೀಡಿದ್ದ ತಪ್ಪು ಮಾಹಿತಿಗಳನ್ನು ಸರಿಪಡಿಸಿ ಓದುಗರಲ್ಲಿ ಕ್ಷಮೆಯಾಚಿಸುತ್ತೇನೆ ಹಾಗೂ ನಾಗೇಂದ್ರ ಹೆಗ್ಗಡೆಯವರಿಗೆ ತಿದ್ದುಪಡಿ ಕಳುಹಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.
ಜೂನ್ 13, 2013ರಂದು ಅಮೆರಿಕದ ಸುಪ್ರಿಂಕೋರ್ಟ್ ಒಂದು ಮಹತ್ತರ ತೀರ್ಪನ್ನು ಜೈವಿಕ "ಸ್ವಾಮ್ಯ ಸನ್ನದು"ವಿನ ವಿಚಾರದಲ್ಲಿ ನೀಡಿದೆ. ಈ ತೀರ್ಪಿನ ಪ್ರಕಾರ, ನಿಸರ್ಗದಿಂದ ಬೇರ್ಪಡಿಸಿದ ಡಿಎನ್‌ಎಗಳ ತುಂಡುಗಳಾಗಲಿ ಅಥವಾ ಗುಣಾಣುಗಳನ್ನಾಗಲಿ, ಅವುಗಳನ್ನು ಸ್ವಾಮ್ಯ ಹಕ್ಕಿನಿಂದ ಸಂಪೂರ್ಣವಾಗಿ ಯಾರೂ ತಮ್ಮದು ಎನ್ನುವುದಕ್ಕಾಗುವುದಿಲ್ಲ. ಅಂದರೆ ನಿಸರ್ಗದಿಂದ ಬೇರ್ಪಡಿಸಿದ ಯಾವುದೇ ಡಿಎನ್‌ಎ ತುಣುಕುಗಳಾಗಲಿ ಅಥವಾ ಗುಣಾಣುಗಳಾಗಲಿ, ಅವುಗಳನ್ನು ಪೇಟೆಂಟ್ ಮಾಡುವಂತಿಲ್ಲ. ಈ ತೀರ್ಪು ಪ್ರಪಂಚದಲ್ಲಿ ಯಾವ ದೇಶದಲ್ಲೇ ಆಗಲಿ, ಒಂದು ಕ್ರಾಂತಿಕಾರಕ ತೀರ್ಪಾಗಿ ಜೈವಿಕ ತಂತ್ರಜ್ಞಾನದ ಉದ್ದಿಮೆಗಳ ಮೇಲೆ ಮಹತ್ತರವಾದ ಪರಿಣಾಮ ಬೀರಲಿದೆ. ಮಿರಿಯಡ್ ಎಂಬ ಜೈವಿಕ ತಂತ್ರಜ್ಞಾನ ಕಂಪನಿಯು ಕೆಲ ವರ್ಷಗಳ ಹಿಂದೆ ಮಾನವನಿಂದ ಬೇರ್ಪಡಿಸಿದ  BRACL ಮತ್ತು BRACZ ಎಂಬ ಎರಡು ಗುಣಾಣುಗಳಿಗೆ ಸ್ವಾಮ್ಯ ಹಕ್ಕು ಪಡೆದುಕೊಂಡಿತ್ತು. ಅದನ್ನು ಪ್ರಶ್ನಿಸಿ ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ ಮತ್ತು ಪಬ್ಲಿಕ್ ಪೇಟೆಂಟ್ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಗಳು ಮಿರಿಯಡ್ ಕಂಪನಿಯ ಮೇಲೆ ಅಮೆರಿಕದ ಸುಪ್ರಿಂಕೋರ್ಟ್‌ನಲ್ಲಿ ದಾವೆ ಹೂಡಿದ್ದವು. ಸುಪ್ರಿಂಕೋರ್ಟ್‌ನ 9 ನ್ಯಾಯಾಧೀಶರುಗಳು ಒಮ್ಮತದಿಂದ ಈ ತೀರ್ಪನ್ನು ನೀಡಿದ್ದಾರೆ. ಜೀವ ಶಾಸ್ತ್ರದಲ್ಲಾಗಲಿ ಅಥವಾ ಜೈವಿಕ ತಂತ್ರಜ್ಞಾನದಿಂದ ಸೃಷ್ಟಿಸಿದ ತಂತ್ರಜ್ಞಾನಕ್ಕೆ ಪೇಟೆಂಟ್ ರಕ್ಷಣೆ ಕೊಡಬೇಕೆಂಬುದನ್ನು ವಿರೋಧಿಸಿ ಪ್ರಪಂಚದಾದ್ಯಂತ ನೂರಾರು ಸರ್ಕಾರೇತರ ಸಂಸ್ಥೆಗಳು ಹೋರಾಟ ನಡೆಸುತ್ತಿದ್ದವು. ಈ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಆದರೆ ಡಿಎನ್‌ಎ ತುಣುಕುಗಳನ್ನು ಬೇರ್ಪಡಿಸಿದ ಮೇಲೆ, ಅವುಗಳನ್ನು ಮಾರ್ಪಾಟು ಮಾಡಿದ್ದಾಗಲಿ ಅಥವ ಬೇರೆ ಇನ್ಯಾವುದೇ ಜ್ಞಾನದಿಂದ ಮಾರ್ಪಾಡುಗಳನ್ನು ಮಾಡಿದ್ದರೆ, ಅಂತಹ ಡಿಎನ್‌ಎ ತುಣುಕುಗಳಿಗೆ ಸ್ವಾಮ್ಯ ಸನ್ನದು ಹಕ್ಕನ್ನು ಪಡೆಯಬಹುದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. BRACL ಮತ್ತು BRACZ ಎಂಬ ಎರಡು ಗುಣಾಣುಗಳು ಸ್ತನ ಕ್ಯಾನ್ಸರ್‌ನ ಲಕ್ಷಣಗಳನ್ನು  ಮುಂಚಿತವಾಗಿಯೇ ಕಂಡು ಹಿಡಿಯಬಹುದಾದ ಡಯಾಗ್ನಾಸ್ಟಿಕ್ ಟೆಸ್ಟ್‌ಗಳಿಗೆ ಯಾರ ಹಂಗಿಲ್ಲದೆ ಉಪಯೋಗಿಸಬಹುದು. ಇದರಿಂದ ಪ್ರಪಂಚದಲ್ಲಿ ಲಕ್ಷಾಂತರ ಹೆಂಗಸರ ಆರೋಗ್ಯ ಸುಧಾರಿಸಬಹುದಾಗಿದೆ. ನಿಸರ್ಗದಿಂದ ಬೇರ್ಪಡಿಸಿದ ಡಿಎನ್‌ಎ ತುಣುಕುಗಳನ್ನು ಮಾರ್ಪಾಟು ಮಾಡಿದ ಮೇಲೆ ಅದಕ್ಕೆ CDNA (Complimentary DNA): ಜೈವಿಕ ತಂತ್ರಜ್ಞಾನದಿಂದ ಸೃಷ್ಟಿಸಿದ ಡಯಾಗ್ನಾಸ್ಟಿಕ್ ಪರೀಕ್ಷೆಗಳಿಗೆ ಉಪಯೋಗಿಸುತ್ತಾರೆ. ಹಾಗಾಗಿ CDNA ತುಣುಕುಗಳನ್ನೇ ಪೇಟೆಂಟ್ ಮಾಡಬಹುದಾಗಿದೆ. ಕೇವಲ CDNA ಅಲ್ಲದೆ, ಇನ್ನೂ ನೂರಾರು ತರಹದ ಮಾರ್ಪಾಡುಗಳನ್ನು ಪ್ರಯೋಗಾಲಯದಲ್ಲಿ ಮಾಡಿದ ಮೇಲೆಯೇ ಪೇಟೆಂಟ್ ಪಡೆದುಕೊಂಡು ವಾಣಿಜ್ಯ ನಡೆಸಬಹುದಾಗಿದೆ.
ಅಮೆರಿಕ 1971ರಲ್ಲಿಯೇ ಜೀವರಾಶಿಗಳ ಮೇಲೆ ಪೇಟೆಂಟ್ ಅಥವಾ ಸ್ವಾಮ್ಯ ಸನ್ನದು ಹಕ್ಕನ್ನು ಪಡೆಯಬಹುದೆಂಬ ಅತ್ಯಂತ ಮಹತ್ತರವಾದ ತೀರ್ಪನ್ನು ಭಾರತೀಯ ಮೂಲದವರಾದ ವಿಜ್ಞಾನಿ ಡಾ. ಆನಂದ ಚಕ್ರವರ್ತಿಯವರ ಪರವಾಗಿ ನೀಡಿತ್ತು. ಅಲ್ಲಿಂದಾಚೆಗೆ ಅಮೆರಿಕದಲ್ಲಿ ಮತ್ತು ಯೂರೋಪ್ ದೇಶಗಳಲ್ಲಿ ಜೈವಿಕ ತಂತ್ರಜ್ಞಾನದ ವಿಷಯಗಳಿಗೆ ಪೇಟೆಂಟ್ ದೊರಕಲಾರಂಭಿಸಿವೆ. ಹೀಗಾಗಿ, ಸಾವಿರಾರು ಗುಣಾಣುಗಳ ಪೇಟೆಂಟ್‌ಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪಡೆದುಕೊಂಡಿವೆ. ಈ ವಿಷಯಕ್ಕಾಗಿಯೇ, ಸುಮಾರು 30-40 ವರ್ಷಗಳಿಂದ ಕೆಲವು ಸರ್ಕಾರೇತರ ಸಂಘಗಳು ವಿರೋಧ ಮಾಡುತ್ತಾ ಬಂದಿವೆ. ಯಾವುದೇ ಜೀವರಾಶಿಗಳಾಗಲಿ ಅಥವಾ ಜೀವರಾಶಿಗಳ ಯಾವುದೇ ಭಾಗಗಳಾಗಲಿ ಅವೆಲ್ಲವೂ ನೈಸರ್ಗಿಕವಾಗಿ ಕಾಲಾನುಕಾಲದಿಂದ ಸೃಷ್ಟಿಯಾಗಿರುವಂತಹ ವಸ್ತುಗಳು. ಇವೆಲ್ಲವೂ ಭೂವಲಯದಲ್ಲಿ ವಾಸಿಸುವ ಎಲ್ಲಾ ಮಾನವರ, ಸಾಮಾಜಿಕ ಸ್ವತ್ತುಗಳು. ಅವುಗಳನ್ನು ಯಾವುದೇ ಒಬ್ಬ ವ್ಯಕ್ತಿಯಾಗಲಿ, ವ್ಯಕ್ತಿಗಳ ಗುಂಪಾಗಲಿ ಅಥವಾ ಸಂಘ -ಸಂಸ್ಥೆಗಳಾಗಲಿ ಅಥವಾ ಉದ್ದಿಮೆಗಳಿಗಾಗಲಿ ಸ್ವಂತವಾಗಿಸಿಕೊಳ್ಳುವ ಹಕ್ಕಿಲ್ಲ ಎಂದು ಪ್ರತಿಪಾದಿಸುತ್ತಾ ಬಂದಿವೆ.
ಸುಪ್ರಿಂಕೋರ್ಟ್‌ನ ಈ ಹೊಸ ತೀರ್ಪಿನಿಂದ ಡಾ. ಆನಂದ ಚಕ್ರವರ್ತಿಗೆ ನೀಡಿದ್ದ ಒಂದು 'ಎಣ್ಣೆ ತಿನ್ನುವ ಬ್ಯಾಕ್ಟೀರಿಯಾದ' ಪೇಟೆಂಟ್ ಮತ್ತು ಇನ್ನಿತರೆ ನಿಸರ್ಗದಲ್ಲಿಂದ ಬೇರ್ಪಡಿಸಿದ್ದ ಜೀವಾಣುಗಳ ಪೇಟೆಂಟ್‌ಗತಿ ಏನಾಗುತ್ತದೆಂದು ಕಾದು ನೋಡಬೇಕಾಗಿದೆ. ರಿಸರ್ಚ್ ಮಾಡುತ್ತಿರುವ ಬೇಕಾದಷ್ಟು ಸಂಘ- ಸಂಸ್ಥೆಗಳು ಮತ್ತು ವಿಜ್ಞಾನಿಗಳು ಈ ತೀರ್ಪಿನಿಂದ ಹರ್ಷಿತರಾಗಿದ್ದಾರೆ. ಯಾಕೆಂದರೆ, ಇನ್ನು ಮೇಲೆ ಮೂಲ ಮತ್ತು ನೈಸರ್ಗಿಕವಾಗಿ ದೊರೆಯುವ ಡಿಎನ್‌ಎಗಳ ಮೇಲೆ ತೊಂದರೆಯಿಲ್ಲದೆ ಸಂಶೋಧನೆ ಮಾಡಬಹುದು. ಇನ್ನು ಮುಂದೆ ಖಾಸಗಿ  ಕಂಪನಿಗಳು ತಮ್ಮ ಸ್ವಾಮ್ಯ ಸನ್ನದನ್ನು ಪಡೆಯಬೇಕಾದರೆ, ಮತ್ತಷ್ಟು ತೀಕ್ಷ್ಣವಾದ ಸಂಶೋಧನೆ ಮಾಡಿ ಮತ್ತು ಅತ್ಯಂತ ಬುದ್ಧಿವಂತಿಕೆಯಿಂದ ಆವಿಷ್ಕರಿಸಿದ ಡಿಎನ್‌ಎ ತುಣುಕುಗಳು ಮತ್ತು ಗುಣಾಣುಗಳನ್ನು ಮಾತ್ರ ಪೇಟೆಂಟ್ ಪಡೆಯಬಹುದಾಗಿದೆ. ಇಲ್ಲಿಯ ತನಕ ಕೆಲವು ಕಂಪನಿಗಳು ಮಾಡಿದ ಹಾಗೆ ಸಿಕ್ಕ, ಸಿಕ್ಕ ಡಿಎನ್‌ಎ ತುಣುಕುಗಳಿಗೆ ಪೇಟೆಂಟ್ ಪಡೆಯುವಂತಿಲ್ಲ. ಈ ಸ್ವಾಮ್ಯ ಸನ್ನದು ವಿಚಾರವೆಲ್ಲಾ ಮಾನವನ ಗುಣಾಣುಗಳಿಗೆ ಸಂಬಂಧಪಟ್ಟವು. ಹಾಗಾದರೆ, ಪೇಟೆಂಟ್‌ನಿಂದ ಬೀಜಗಳಿಗೆ ಮತ್ತು ಗಿಡ, ಸಸ್ಯಗಳಿಗೆ ಯಾವ ರೀತಿ ತೊಂದರೆ ಒದಗಿಬರಬಹುದು ಎಂಬ ಮಹತ್ತರ ಪ್ರಶ್ನೆ. ಇನ್ನೂ ಸಾಕಷ್ಟು ಬೆಳವಣಿಗೆ ಗಳಿಸಬೇಕಾದ ಮತ್ತು ಮುಖ್ಯವಾಗಿ ಕೃಷಿಯನ್ನೇ ನಂಬಿರುವ ಬಡ ದೇಶಗಳ ರೈತರ ಗತಿಯೇನು? ಉದಾಹರಣೆಗೆ ಭಾರತದಲ್ಲಿ ಗಿಡ, ಸಸ್ಯ, ಮೂಲಿಕೆಗಳಿಗೆ ಮತ್ತು ಆಹಾರ, ಧಾನ್ಯ, ಹಣ್ಣು ಮತ್ತು ತರಕಾರಿಗಳಿಗೆ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ. ಆದರೆ ಭಾರತ UPov ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಸದಸ್ಯನಾಗಿದ್ದರಿಂದ ತನ್ನದೇ ಆದ ಅಂದರೆ Sui-generis  ನಿಂದ "ಪ್ಲಾಂಟ್ ವೆರೈಟಿ ಪ್ರೊಟೆಕ್ಷನ್‌"  ಮತ್ತು ಪ್ರಪಂಚದಲ್ಲೇ ಮೊದಲ ಬಾರಿಗೆ "ರೈತರ ಹಕ್ಕುಗಳು" (farmer's rights) ಒಳಗೊಂಡ ಮಸೂದೆಯನ್ನು ತೊಂಬತ್ತರ ದಶಕದಲ್ಲಿ ಜಾರಿ ಮಾಡಿತು. ಆದರೆ, ಈ "ರೈತರ ಹಕ್ಕು"ಗಳನ್ನು UPov ಸಂಸ್ಥೆ ಅಂಗೀರಿಸುತ್ತಿಲ್ಲ. ಈ ಭಿನ್ನಾಭಿಪ್ರಾಯ ಇನ್ನೂ ಇತ್ಯರ್ಥವಾಗಿಲ್ಲ. ಈ "ರೈತರ ಹಕ್ಕು"ಗಳಿಂದ ರೈತರಿಗೆ ಏನು ಲಾಭ ಅಂದರೆ, ರೈತರುಗಳಿಗೆ, ತಾವೇ ತಯಾರಿಸಿದ "ತಳಿಗಳಿಗೆ" ಸ್ವಾಮ್ಯ ಸನ್ನದು ಹಕ್ಕು ಮತ್ತು ಬೇರೆ, ಬೇರೆ ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿದ ಮೇಲೆ, ಆ ತಳಿಗಳ ಬೀಜಗಳನ್ನು ಉಳಿಸಿಕೊಂಡು, ಬೇರೆ ರೈತರಿಗೆ ಮಾರುವ ಹಕ್ಕು ಇರುವುದು. ಆದರೆ, ಒಂದೇ ಒಂದು ನಿಯಮವೇನೆಂದರೆ, ಉಳಿಸಿದ ಬೇರೆ, ಬೇರೆ ತಳಿಗಳ ಬೀಜಗಳನ್ನು ಮೂಲ ತಯಾರಕರು ನೀಡಿದ ಹೆಸರನ್ನು ಉಪಯೋಗಿಸಬಾರದು ಎಂಬುದು. ಆದರೆ ಅಮೆರಿಕದಲ್ಲಿ ಬೀಜ ಕಾಯ್ದೆ ಮತ್ತು ಪೇಟೆಂಟ್ ಕಾಯ್ದೆಗಳೇ ಬೇರೆ ತರಹದಲ್ಲಿವೆ. ಅಮೆರಿಕದಲ್ಲಿ ಮತ್ತು ಯೂರೋಪ್ ಖಂಡದಲ್ಲಿ ಪ್ರಾಸೆಸ್ ಮತ್ತು ಪ್ರಾಡಕ್ಟ್ ಪೇಟೆಂಟ್‌ಗಳನ್ನು ಪಡೆಯಬಹುದು. ಆದರೆ ಭಾರತದಲ್ಲಿ ಇತ್ತೀಚಿನವರೆಗೆ ಪ್ರಾಡಕ್ಟ್ ಪಡೆಯುವಂತಿರಲಿಲ್ಲ. ಭಾರತ ತನ್ನ ಪೇಟೆಂಟ್ ಕಾಯ್ದೆಗೆ, ಇತ್ತೀಚೆಗೆ ತಿದ್ದುಪಡಿ ತಂದು ಪ್ರಾಡಕ್ಟ್ ಪೇಟೆಂಟ್ ಪಡೆಯುವಂತೆ ಮಾಡಿದೆ. ಆದರೂ ಸಹ, ಬೀಜಗಳಿಗೆ ಪೇಟೆಂಟ್ ಪಡೆಯುವಂತಿಲ್ಲ.
ಮೇ, 2013ರಲ್ಲಿ ಅಮೆರಿಕದ ಸುಪ್ರಿಂಕೋರ್ಟ್ ಒಬ್ಬ ರೈತನಿಂದ ಮಾನ್ಸಾಂಟೋ ಕಂಪನಿಯ ವಿರುದ್ಧದ ಕೇಸಿನಲ್ಲಿ, ಕುಲಾಂತರಿ ಬೀಜಕ್ಕೆ ಇರುವ ಪೇಟೆಂಟ್ ರಕ್ಷಣೆಯನ್ನು ಅಧಿಕೃತಪಡಿಸಿದೆ. ಇದರಿಂದ ಮಾನ್ಸಾಂಟೋ ಕಂಪನಿಯ ಕುಲಾಂತರಿ ಬೀಜದ ಪೇಟೆಂಟ್ ಹಕ್ಕು ಅಧಿಕೃತಗೊಂಡಂತಾಗಿದೆ. ಮುಂದೆ, ಈ ತರಹದ ಕುಲಾಂತರಿ ಬೀಜಗಳಿಗೆ ಭಾರತದಲ್ಲೂ ಸ್ವಾಮ್ಯ ಸನ್ನದು ಸಿಗಬಹುದೆಂಬ ಆಶ್ವಾಸನೆಯಿದೆ. ಆದರೆ ಭಾರತದ ರಾಜಕಾರಣದಲ್ಲಿ ರೈತಹಿತಕ್ಕೆ ಸರಿಯಾದ ಮನ್ನಣೆಯೇ ಸಿಗುವುದಿಲ್ಲ. ಒಂದು ವಿಷಯವಂತೂ ನಿಜ. ಅದೇನೆಂದರೆ, ಮುಂದಿನ ದಿನಗಳಲ್ಲಿ ಸರ್ಕಾರೇತರ ಸಂಘ-ಸಂಸ್ಥೆಗಳು ಕಾಯಾ, ವಾಚಾ, ಮನಸಾ ಆ ತರಹದ ಮಸೂದೆಗಳನ್ನು ಶತಾಯ-ಗತಾಯ ವಿರೋಧಿಸಲಿವೆ.
 ಆದರೆ, ಮುಂಬರುವ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಾಗಬಲ್ಲ ತಂತ್ರಜ್ಞಾನಾಧಾರಿತ ಕ್ರಾಂತಿಕಾರಕ ಅಭಿವೃದ್ಧಿ ಮತ್ತು ಬದಲಾವಣೆಗಳನ್ನು ನಿಯಂತ್ರಿಸಬೇಕಾದರೆ ಬೌದ್ಧಿಕ ಒಡೆತನಕ್ಕೆ ಹೊಂದುವಂತಹ ಪೇಟೆಂಟ್ ಕಾಯ್ದೆ-ಮಸೂದೆಗಳನ್ನು ಜಾರಿಗೆ ತರಬೇಕಾಗುತ್ತದೆ. ಹಾಗಾಗಿಯೇ ಮುಂದಿನ ಕೃಷಿ ಕ್ಷೇತ್ರದ ಹೊಸ ಕಲ್ಪನೆಗಳನ್ನೊಳಗೊಂಡಿರುವ ಅಥವಾನವೀನ ತಂತ್ರಜ್ಞಾನದ ಆವಿಷ್ಕಾರಗಳನ್ನು ದೇಶದ ಕೃಷಿ ಕ್ಷೇತ್ರಕ್ಕೆ ಅಳವಡಿಸಬೇಕಾದರೆ, ಬೌದ್ಧಿಕ ಆಸ್ತಿಯನ್ನು ರಕ್ಷಿಸುವಂತಹ ಕಾಯ್ದೆ-ಮಸೂದೆಗಳು ಬೇಕಾಗುತ್ತವೆ. ಈ ತರಹದ ಮಹತ್ತರ ವಿಷಯಗಳ ಮೇಲೆ ಮಸೂದೆಗಳನ್ನು ತರಬೇಕಾದರೆ ಸಮಗ್ರ ರೀತಿಯಲ್ಲಿ ದೇಶಾದ್ಯಂತ ಚರ್ಚೆಗಳು ನಡೆಯಬೇಕು. ಈ ತರಹದ ಚರ್ಚೆಗಳಿಗೆ ಹತ್ತಾರು ವರ್ಷ ಸಮಯ ಬೇಕಾಗುತ್ತದೆ. ಸರ್ವಜನರ ಹಿತ ಕಾಪಾಡುವುದಕ್ಕಾಗಿ ಮೇಲೆ ತಿಳಿಸಿದ ಕಾಯ್ದೆ ತಯಾರಿಸಬೇಕಾದರೆ, ಆಸ್ಥೆ ಉಳ್ಳವರನ್ನೂ ಸೇರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಎಲ್ಲವನ್ನೂ ಒಳಗೊಂಡಂಥ ಕಾಯ್ದೆ ಸ್ಥಾಪಿಸಲು ಸಾಧ್ಯ.ಅದು ಸಾಧ್ಯವಾಗದಿದ್ದರೆ ಮುಂಬರುವ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ.

- ಪ್ರೊ. ಶಾಂತು ಶಾಂತಾರಾಮ್, ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.