ಅಂಕಣಗಳು

ಬಡವರಿಗಾಗಿ ವಿಜ್ಞಾನಿಗಳೇನು ಮಾಡುತ್ತಿದ್ದಾರೆ?

Published On :

ಭಾರತ ಸುಮಾರು 8 ಬಿಲಿಯನ್ ಡಾಲರ್‌ನಷ್ಟು ಹಣವನ್ನು ಬಜೆಟ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಖರ್ಚು ಮಾಡುತ್ತಿದೆ. ಇದರಿಂದ ದೇಶದ ಬಡಜನರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಉತ್ತರವೇನು?

ಅಮೆರಿಕದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ನಿಯತಕಾಲಿಕ 'ಸೈನ್ಸ್‌', ಮೇ 31, 2013 ರ ತನ್ನ ಸಂಚಿಕೆಯ ಮುಖ ಪುಟದಲ್ಲಿ 'ಇಂಡಿಯಾ - ಸೈನ್ಸ್ ಫಾರ್ ಆಲ್‌' ಎಂಬ ಹಣೆ ಪಟ್ಟಿಯೊಡನೆ ವಿಶೇಷವಾದ ಸಂಚಿಕೆಯನ್ನು ಹೊರತಂದಿದೆ. ಈ ಲೇಖನದ ಸಾರಾಂಶ - 'ಭಾರತದಲ್ಲಿನ ಬಹುಸಂಖ್ಯಾತ ಬಡವರ ಏಳಿಗೆಗೆ ಯಾವ ರೀತಿಯಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂಬುದು. ಈ ಕುರಿತು  ಅದರಲ್ಲಿ ಉತ್ತಮವಾಗಿ ವಿಶ್ಲೇಷಣೆ ಮಾಡಿದ್ದಾರೆ.  
 ಭಾರತದಲ್ಲಿ 400 ಮಿಲಿಯನ್ ಪ್ರಜೆಗಳು ದಿನಕ್ಕೆ 1.25 ಡಾಲರ್‌ಗಿಂತಲೂ ಕಡಿಮೆ ಆದಾಯ ಹೊಂದಿದ್ದು,  ಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ವಿಜ್ಞಾನಿಗಳು ತಮ್ಮ ದೇಶದ ಬಡತನವನ್ನು ನಿವಾರಿಸಲು ಯಾವ ರೀತಿ ಸಹಾಯವಾಗಬಲ್ಲರು, ಯಾವ ರೀತಿ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ಬಹುಮುಖ್ಯ ಪ್ರಶ್ನೆಯೊಂದು ಉದ್ಭವವಾಗುತ್ತದೆ. ಭಾರತ ಸುಮಾರು 8 ಬಿಲಿಯನ್ ಡಾಲರ್‌ನಷ್ಟು ಹಣವನ್ನು ಬಜೆಟ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಖರ್ಚು ಮಾಡುತ್ತಿದೆ. ಭಾರತದಂಥ ಬಡ ರಾಷ್ಟ್ರ ಇಷ್ಟೊಂದು ಪ್ರಮಾಣದ ಹಣವನ್ನು ವಿಜ್ಞಾನಕ್ಕಾಗಿಯೇ ಪ್ರತ್ಯೇಕವಾಗಿ ತೆಗೆದಿರಿಸುತ್ತಿದ್ದರೆ, ಇದರಿಂದ ದೇಶದ ಬಡಜನರಿಗೆ ಯಾವ ರೀತಿ ಉಪಕಾರವಾಗುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಉತ್ತರವೇನು? ವೈಜ್ಞಾನಿಕ ಸಂಶೋಧನೆಗಳಿಂದ ದೇಶದ ಬಡತನ ತೀರಿಸುವ ಸಾಧ್ಯತೆಗಳು ಕಾಣಸಿಗುವುದು ಅತೀ ವಿರಳ. ಹಾಗಾಗಿ, ಎಷ್ಟೋ ಟೀಕಾಕಾರರು ವೈಜ್ಞಾನಿಕ ಸಂಶೋಧನೆ ಕೇವಲ ಒಂದು ತರಹದ 'ಲಕ್ಷುರಿ' ಎಂದು ಹೇಳುತ್ತಾರೆ. ಆದರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಅವತರಿಸಿದ ಮೇಲೆ 'ಆಕಾಶ್ ಟ್ಯಾಬ್ಲೆಟ್‌' ಮತ್ತು 'ಹೆಪಟೈಟಿಸ್-ಬಿ' ಲಸಿಕೆ ಹಾಗೂ 'ರೋಟವೈರಸ್‌' ಲಸಿಕೆಗಳನ್ನು ಅತ್ಯಂತ ಕಡು ಬಡವರ ನೆರವಿಗೋಸ್ಕರ ಮಾರುಕಟ್ಟೆಗೆ ಅತ್ಯಂತ ಕನಿಷ್ಠ ದರದಲ್ಲಿ ಬಿಡಲಾಗಿದೆ. ಆದರೆ ಭಾರತದಲ್ಲಿ ಇಂದಿನವರೆಗೂ ಅತಿದೊಡ್ಡ ಸಮಸ್ಯೆಯಾಗಿಯೇ ಉಳಿದಿರುವ ಮಲೇರಿಯಾ ರೋಗಕ್ಕೆ ಯಾವುದೇ ತರಹದ ಔಷಧಿಯನ್ನು ಕಂಡುಹಿಡಿಯಲಾಗಲಿಲ್ಲ. ಭಾರತದಲ್ಲಿ ಗೋಧಿ ಬೆಳೆಗೆ ಮುಖ್ಯವಾಗಿ ಕಾಡುವ ರೋಗವೆಂದರೆ ಯುಜಿ99. ಇದು ತುಕ್ಕುರೋಗ ಉಂಟುಮಾಡುವ ಶಿಲೀಂಧ್ರದ ತಡೆಕ್ರಮ. ಸದ್ಯಕ್ಕಂತೂ ಯುಜಿ99 ತಡೆಯುವುದಕ್ಕೆ ಉಳಿದಿರುವ ಮಾರ್ಗವೆಂದರೆ ವಂಶಾಂತರಿ ತಂತ್ರಜ್ಞಾನ. ಆದರೆ ಕುಲಾಂತರಿ ತಂತ್ರಜ್ಞಾನಕ್ಕೆ ದೇಶವ್ಯಾಪಿ ವಿರೋಧವಿರುವುದರಿಂದ, ಈ ರೋಗವನ್ನು ತಡೆಯುವುದು ಸಾಧ್ಯವೇ? ಎಂದು ಯೋಚಿಸಬೇಕಾಗಿದೆ.
ವಿಜ್ಞಾನ, ತಂತ್ರಜ್ಞಾನ ಯಾವುದೇ ಆಗಿರಲಿ. ಅವುಗಳ ಸಾಧಕ-ಬಾದಕಗಳನ್ನು ಪರೀಕ್ಷಿಸಿ, ಜನರ ಉಪಯೋಗಕ್ಕೆ ತರುವುದು ಮುಖ್ಯವಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಾಗಲಿ ಅಥವಾ ಇನ್ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಾಗಲಿ ಕೆಲಸ ಮಾಡುವ ಎಲ್ಲಾ ವಿಜ್ಞಾನಿಗಳಿಗೂ ಜನೋಪಕಾರಿಯಾದ ಸಾಧನಗಳನ್ನು ಮಾರುಕಟ್ಟೆಗೆ ತರಲು ಅಷ್ಟೊಂದು ಸೌಲಭ್ಯವಿರುವುದಿಲ್ಲ. ಹಾಗಾಗೇ, ಸರ್ಕಾರೇತರ ಕೈಗಾರಿಕೋದ್ಯಮಿಗಳು ಅಥವಾ ಎನ್‌ಜಿಓ ಗಳ ಜೊತೆ ಕೈಗೂಡಿಸಿ ಬಡವರ ಕಲ್ಯಾಣಕ್ಕಾಗುವಂತಹ ಸಾಧನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನಕ್ಕೆ ತಲುಪುವಂತೆ ಮಾಡಬೇಕು. ಹೈದರಾಬಾದಿನಲ್ಲಿರುವ 'ಭಾರತ್ ಬಯೋಟೆಕ್‌' ಎಂಬ ಜೈವಿಕ ತಂತ್ರಜ್ಞಾನದ ಕಂಪನಿಯ 'ಡಾ॥ಕೃಷ್ಣ ಎಲ್ಲ' ಹೆಪಟೈಟಸ್-ಬಿ ಲಸಿಕೆ ಮತ್ತು ರೋಟವಾಕ್ ಎಂಬ ಮತ್ತೊಂದು ಲಸಿಕೆಯನ್ನು ಕೇಂದ್ರದ ಜೈವಿಕ ವಿಜ್ಞಾನ ಇಲಾಖೆಯ ಸಹಯೋಗದಿಂದ, ಪ್ರಪಂಚದಲ್ಲೇ ಅತೀ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಅಂದಹಾಗೆ, ಈ ಎರಡೂ ಲಸಿಕೆಗಳು ಕುಲಾಂತರಿ ತಂತ್ರಜ್ಞಾನದಿಂದ ತಯಾರಾಗಿವೆ. ಈ ವಿಚಾರ ಪಾಪ ಜೈವಿಕ ತಂತ್ರಜ್ಞಾನ ವಿರೋಧಿಗಳಿಗೆ ತಿಳಿದ ಹಾಗೆ ಕಾಣಬರುವುದಿಲ್ಲ. ಏನೇ ಆದರೂ ಈ ತರಹದ ಉಪಯುಕ್ತವಾದ ಸಾಧನಗಳನ್ನು ವಿರೋಧಿಸುವುದು ತರವಲ್ಲ. ಸರ್ಕಾರವಾಗಲಿ ಅಥವಾ ಬಡವರಾಗಲಿ ಇಂತಹ ವಿರೋಧಿಗಳನ್ನು ಸಹಿಸುವುದಿಲ್ಲ.
ಇದೇ ಸೈನ್ಸ್ ಸಂಚಿಕೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿ ಜೈರಾಮ್ ರಮೇಶ್ ಅವರ ಸಂದರ್ಶನವೂ ಇದೆ. ಈ ಮನುಷ್ಯ ಯಾವುದೇ ವೈಜ್ಞಾನಿಕಾಧಾರವಿಲ್ಲದೆ ಬಿಟಿ ಬದನೆಯ ಮೇಲೆ ನಿಷೇಧ ಹೇರಿಬಿಟ್ಟಾತ. ಇದರಿಂದಾಗಿ ಬಡ ರೈತರಿಗೆ ಉಪಯುಕ್ತವಾಗುವಂತಹ ತಂತ್ರಜ್ಞಾನದ ಲಾಭವನ್ನು ಕೈ ಜಾರುವಂತೆ ಮಾಡಿದಾತ. ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧಕ, ಬಾಧಕಗಳನ್ನು ಅಳೆಯುವ ಕೆಲಸವನ್ನು ವಿಜ್ಞಾನಿಗಳಿಗೆ ಬಿಡುವುದು ಬಿಟ್ಟು, ರಾಜಕೀಯ ಕಾರಣಗಳಿಂದಾಗಿ ತಾನೇ ಅನವಶ್ಯಕವಾಗಿ ಈ ಕೆಲಸಕ್ಕೆ ಕೈ ಹಾಕಿ ಬಡಜನರಿಗೆ ದೊರಕುವ ತಂತ್ರಜ್ಞಾನವನ್ನು ತಡೆ ಹಿಡಿದಾತ. ಬಿಟಿ ಬದನೆ ಧಾರವಾಡದ ಮತ್ತು ಕೊಯಮತ್ತೂರಿನ ಕೃಷಿ ವಿವಿಗಳು ಸರ್ಕಾರದ ಹಣದಿಂದ ತಯಾರಿಸಿದ್ದ ಬೆಳೆ. ಜೈರಾಮ್ ರಮೇಶ್ ಅವರು- "ನಾನು ವಿಜ್ಞಾನವನ್ನು ಪೂಜಿಸುವುದಿಲ್ಲ. ಆದರೆ ವಿಜ್ಞಾನದಿಂದ ಏನೆಲ್ಲಾ ಸಾಧಿಸಬಹುದೆಂಬ ಅರಿವು ನನಗಿದೆ" ಎಂಬ ತದ್ವಿರುದ್ಧ ಹೇಳಿಕೆಯನ್ನು ಈ ನಿಯತಕಾಲಿಕದಲ್ಲಿ ಕೊಟ್ಟಿದ್ದಾರೆ! ಈ ತರಹದ ಮಂತ್ರಿಗಳಿದ್ದರೆ ಅದ್ಹೇಗೆ ತಾನೆ ಉಪಯುಕ್ತ ಪ್ರಾಡಕ್ಟ್‌ಗಳು, ಜನಸಾಮಾನ್ಯರನ್ನು, ಅದರಲ್ಲೂ ಮುಖ್ಯವಾಗಿ ಬಡವರನ್ನು ತಲುಪಬಲ್ಲವು?
ಭಗವದ್ಗೀತೆಯಲ್ಲಿ 'ಜ್ಞಾನಂ ವಿಜ್ಞಾನ ಸಹಿತಂ' ಎಂಬ ಮಾತಿದೆ. ಇದನ್ನೂ ನೀವೂ ಕೇಳಿರಬಹುದು. ಈ ಹೇಳಿಕೆಯನ್ನು ಬೆಂಗಳೂರು ವಿವಿಯ ಲಾಂಛನದಲ್ಲಿಯೂ ಸೇರಿಸಲಾಗಿದೆ. ಇದರರ್ಥ ಜ್ಞಾನವನ್ನು ಉಪಯುಕ್ತವಾಗುವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕೆಂಬುದು. ಹಾಗಾಗಿ, ದೇಶದ ವಿಜ್ಞಾನಿಗಳು ಬಡವರಿಗೆ ಉಪಯುಕ್ತವಾಗುವಂತಹ ವಸ್ತುಗಳನ್ನು ಸಂಶೋಧಿಸಿ ಮಾರುಕಟ್ಟೆಗೆ ತರುವಂತಾಗಬೇಕು. ದೇಶದ ಬಡವರನ್ನು ಮತ್ತಷ್ಟು ಕಾಯಿಸುವುದು, ವಂಚಿಸುವುದು ತರವಲ್ಲ. ಹಾಗೆಯೇ ಬಡತನ ನಿವಾರಣೆ ಮಾಡಲು ವೈಜ್ಞಾನಿಕಾಧಾರದ  ಮೇಲೆ ವಿಜ್ಞಾನಿಗಳು ಕೆಲಸ ಮಾಡಬೇಕಿದೆ. ಸಾಧ್ಯವಾದರೆ ಸಂಘ-ಸಂಸ್ಥೆಗಳ ನೆರವನ್ನೂ ಅವರು ಪಡೆಯಬೇಕು. ಪ್ರಪಂಚದ ಎಲ್ಲರ ಕಣ್ಣು ಸದ್ಯಕ್ಕೆ ಭಾರತದ ಮೇಲಿದೆ. ಅದರಿಂದಾಗಿ ದೇಶದ ವಿಜ್ಞಾನಿಗಳ ಜವಾಬ್ದಾರಿಯೂ ಹೆಚ್ಚಾಗಿದೆ.

- ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.