ಅಂಕಣಗಳು

ಕಾಸ್ನಾಗೆ ಟಾಸಾಕಿ ಪಕ್ಸ ಡಿಸೈಡ್ ಮಾಡಕ್ಕಾಯ್ತದಾ?

ಮೈಲಾರಿ ವೊಟ್ಟೆ ತುಂಬಾ ವುಂಡ್ಬುಟ್ಟು ಢರ್ ಅಂತ ತೇಕ್ಕಂಡು ವೋಯ್ತಾಯಿದ್ದ...

Published On :

ಮೈಲಾರಿ ವೊಟ್ಟೆ ತುಂಬಾ ವುಂಡ್ಬುಟ್ಟು ಢರ್ ಅಂತ ತೇಕ್ಕಂಡು ವೋಯ್ತಾಯಿದ್ದ. ಆತ್ಲಾಗಿಂದ ನಮ್ ಆಮಾಸೆನೂವೆ ಬಂದ.
'ಇದೇನ್ಲಾ ಮೈಲಾರಿ, ವೊಟ್ಟೆ ನೀವ್ಕಂಡು ವೋಯ್ತಾಯಿದ್ದೀಯ. ಏನ್ಲಾ ಮನ್ಯಾಗೆ ಈವತ್ತು ಪೆಸಲ್ಲು ?' ಅಂತೇಳಿ ಆಮಾಸೆ ಕೇಳ್ದ.
'ಏನಿಲ್ಲಲೇ ಅಮಾಸೆ, ಸರ್ಕಾರ್ದೋರು 30 ಕೆಜಿ ಅಕ್ಕಿ ಕೊಟ್ಟವ್ರೆ. ವತ್ತಾರೆ ಚಿತ್ರಾನ್ನ, ಮಧ್ಯಾನ ಪಲಾವು, ರಾತ್ರಿ ಬಿರ್ಯಾನಿ ಮಾಡಿಸ್ಕಂಡು ವುಂಡ್ಬುಟ್ಟೆ ಕಣ್ಲಾ. ರೇಸನ್ ಅಕ್ಕಿ ಅಲ್ವಾ ? ತಿಂದಿರಾದು ಸರ್ಯಾಗಿ ಜೀರ್ಣ ಆದಂಗೆ ಕಾಣ್ತಾಯಿಲ್ಲ. ವೊಟ್ಟೆನಾಗೆ ಗುಡುಗು, ಸಿಡ್ಲು ವೊಡೀತಾ ಐತೆ. ತಿಂದಿರಾದು ಕರುಗ್ಲಿ ಅಂತೇಳಿ ವಾಕಿಂಗು ಮಾಡ್ಕತಾಯಿದ್ದೀನಿ. ಏನ್ಲಾ ಇಸ್ಯ ?' ಅಂತೇಳಿ ಮೈಲಾರಿ ಕೇಳ್ದ.
'ಕಾಯಿ ಪಕ್ಸದ ಲೀಡ್ರು ಯಡೂರಪ್ನೋರು ಬಂದವ್ರೆ ಕಣ್ಲಾ. ವೂರು ಮುಂದ್ಲಾಗಡೆ ಇರೋ ಕಟ್ಟೆಮ್ಯಾಲೆ ಕುಂತವ್ರೆ. ಏನೋ ಸ್ಯಾನೆ ತಲೆ ಕೆಡಿಸ್ಕಂಡಂಗೆ ಕಾಣುಸ್ತಾವ್ರೆ. ವೋಗಿ ಏನಂತ ಕೇಳಲೇ' ಅಂದ ಆಮಾಸೆ.
'ನನ್ನುನ್ನ ಯಾಕ್ಲಾ ಕರೀತಾವ್ರೆ. ವೋಗಿ ಬತ್ತೀನಿರು' ಅಂತ ಮೈಲಾರಿ ವೋಡ್ದ. 'ಸಾ, ಇದೇನು ಇಲ್ಲಿ ಬಂದು ಕುಂತಿದ್ದೀರಿ. ಏನ್ ಇಸ್ಯ. ಬನ್ನಿ ಮನೆತವ ವೋಗಾಣ' ಅಂದ ಮೈಲಾರಿ ಕರ್ದ. 'ಇಲ್ಲಲೇ ಮೈಲಾರಿ, ತಲೆಕೆಟ್ಟು ಗೊಬ್ರ ಆಗೋಬುಟ್ಟದೆ' ಅಂದ್ರು ಯಡೂರಪ್ನೋರು.
'ಹಂಗಾಬುಟ್ಟದಾ ? ನಮ್ ತ್ವಾಟುಕ್ಕೆ ಹೆಂಗೂ ಗೊಬ್ರ ಇಲ್ಲ. ಕೊಟ್ಬುಡಿ, ತಕ್ಕಂಡೋಗಿ ಹಾಕ್ಕಂಬುಡ್ತೀನಿ' ಅಂದ ಮೈಲಾರಿ. 'ಲೇ ಕೋತಿ, ಮಷ್ಕಿರಿ ಮಾಡ್ತಾಯಿದ್ದೀಯ. ನನ್ ತಲೆನೋವು ನಂಗೆ' ಅಂದ್ರು ಯಡೂರಪ್ನೋರು.
'ಇನ್ನೇನು ಯೋಳಾದು, ಅಲ್ಲ, ಬೆಳಗ್ಗೆ ಎದ್ದು ನಾನು ಕಮ್ಲ ಪಕ್ಸುಕ್ಕೆ ವಾಪ್ಸು ವೊಂಟೋಯ್ತೀನಿ ಅಂತೀರ. ಮಾರ್ನೇ ದಿನ ಎದ್ದು ನಾನು ಹಂಗೆ ಯೋಳಿಲ್ಲ. ಪೇಪರ್ನೋರು ತಿರ್ಗಾಮರ್ಗ ಮಾಡಿ ಬರ್ದಾಕವ್ರೆ ಅಂತೀರ. ನಿಮ್ಮುನ್ನ ಹೆಂಗೆ ನಂಬೋದು ?' ಅಂತೇಳಿ ಮೈಲಾರಿ ಕೇಳ್ದ.
'ಅದೇ ಇಕ್ಕಟ್ನಾಗೆ ಸಿಕ್ಕಂಬುಟ್ಟಿದ್ದೀನಿ ಕಣ್ಲಾ. ಕಮ್ಲ ಪಕ್ಸುದೋರು ಬನ್ನಿ ಬನ್ನಿ ಅಂತಾವ್ರೆ. ನಮ್ ಪಕ್ಸುದೋರು ವೋಬೇಡಿ ವೋಬೇಡಿ ಅಂತ ಅಂಗಿ ಹಿಡ್ಕಂಡು ಜಗ್ತರೆ. ವೋಗಾದ, ಬುಡಾದ. ನೀನೇ ವಸಿ ಯೋಳು' ಅಂದ್ರು ಯಡೂರಪ್ನೋರು. 'ವೊಂದ್ ಕೆಲ್ಸ ಮಾಡಾವ. ಕಾಸು ತಕ್ಕಂಡು ಟಾಸು ಹಾಕವ. ರಾಜ ಬಿದ್ರೆ ಕಮ್ಲ ಪಕ್ಸ. ರಾಣಿ ಬಿದ್ರೆ ಕಾಯಿ ಪಕ್ಸ. ಹೆಂಗೆ ಐಡಿಯಾ ?' ಅಂದ ಮೈಲಾರಿ.
'ಲೇ ಇದು ರಾಜ್ಕೀಯ ಕಣ್ಲಾ, ಟಾಸು ಹಾಕಿ ಡಿಸೈಡು ಮಾಡಕ್ಕೆ ಆಯ್ತದೇನ್ಲಾ ? ತಿರ್ಗ ಏನರ ಕಮ್ಲ ಪಕ್ಸುಕ್ಕೆ ವೋಬುಟ್ರೆ ಕೈ ಪಕ್ಸುದೋರು ಸುಮ್ಕೆ ಬುಡ್ತರ. ಸಿಬಿಐ ಅದೂ ಇದು ಅಂತೇಳಿ ಹೆದ್ರುಸ್ತರೆ. ಹಿಂಗಾಗ್ಬುಟ್ಟು ತಲೆ ಚಿಟ್ಟು ಹಿಡ್ದೋಗದೆ. ವೋಗ್ಲಿ ಬುಟ್ಟಾಕಪ್ಪ ನಾನು ವೋಯ್ತೀನಿ' ಅಂತೇಳಿ ಯಡೂರಪ್ನೋರು ವೊಂಟ್ರು. ಮೈಲಾರಿ ವಾಪ್ಸು ಮನೆಕಡೆ ವೊಂಟ.
ವೋಯ್ತಾಯಿದ್ದಂಗೆ ಸಿಕ್ಸಣ ಮಂತ್ರಿ ಕಿಮ್ಮನೆ ಸಾಹೇಬ್ರು ಸಿಕ್ರು. 'ಟೇಮು ಸಿಕ್ಕುದ್ರೆ ನಿಮ್ಮುನ್ನ ನೋಡ್ಬೇಕು ಅನ್ಕಂಡಿದ್ದೆ ಸಿವ. ನೀವೇ ಬಂದ್ಬುಟ್ರಿ. ಇಸ್ಕೂಲು ಮಕ್ಳುಗೆ ಸೂ ಕೊಡ್ತೀರಂತೆ. ಅವ್ರು ಅಪ್ಪ, ಅಮ್ಮಂದ್ರಿಗೆ ಬಾಟ ಚಪ್ಲಿನೂ ಕೊಡಾದಲ್ವಾ? ಹಂಗೆ ಮಳೆಗಾಲ್ದಾಗೆ ವೋಡಾಡಕ್ಕೆ ಛತ್ರೀನೂ ಕೊಟ್ಬುಟ್ರೆ ಸ್ಯಾನೆ ವುಪ್ಕಾರ ಆಯ್ತದೆ ನೋಡಿ' ಅಂದ ಮೈಲಾರಿ.
'ಇಸ್ಕೂಲ್ನಾಗೆ ಮಕ್ಳು ಕೂತ್ಕಳಕ್ಕೆ ಬೆಂಚಿಲ್ಲ, ಬಿಲ್ಡಿಂಗಿಲ್ಲ. ಅದುನ್ನ ಕೊಡೋದು ಬುಟ್ಟು ಸೂ, ಸಾಕ್ಸು ಅಂತ ವೋಗಾದು ಸರೀನಾ?' ಅಂತ ಮೈಲಾರಿ ಕೇಳ್ದ. 'ವೋಗ್ಲಿ ನನ್ನುನ್ನ ಬುಟ್ಟಾಕಪ್ಪ' ಅಂತೇಳಿ ಕಿಮ್ಮನೆ ಕಮಕ್‌ಕಿಮಕ್ ಅನ್ದೇ ವೊಂಟೇ ವೋದ್ರು.
ಆಮ್ಯಾಲೆ ಬಂದ್ರು ನೋಡಪ್ಪ ಮನೆ ಮಂತ್ರಿ, ರೆಬೆಲ್ ಸ್ಟಾರು ಅಂಬ್ರೀಸು. 'ಅಣ್ಣ ಅಡ್‌ಬಿದ್ದೆ. ನಂಗೂ ವೊಂದು ಮನೆ ಕೊಡ್ಸಣ್ಣೋ' ಅಂತ ಮೈಲಾರಿ ಕೇಳ್ದ.
'ನಿಂಗ್ಯಾಕಲಾ ಮನೆ, ಇರೋದು ಸಾಲ್ದು ಏನಲಾ ಬಡ್ಡೆತ್ತದೆ' ಅಂದ್ರು ಅಂಬ್ರೀಸು. ಹಿಂದಿನ ಕಾಲ್ದಾಗೆ ರಾಜ್ರು ಮಹಾರಾಜ್ರು ಬ್ಯಾಸ್ಗೆಗೆ, ಮಳೆಗಾಲುಕ್ಕೆ, ಚಳಿಗಾಲುಕ್ಕೆ ಅಂತೇಳಿ ಅರ್ಮನೆ ಕಟ್ಟುಸ್ಕತಾಯಿದ್ರಂತೆ. ಹಂಗೆ ನಾನೂವೆ ಮಾಡ್ಕಂಬುಡ್ತೀನಿ ಕೊಡ್ಸಣ್ಣೋ' ಅಂತೇಳ್ದ ಮೈಲಾರಿ.
'ನನ್ಮಗನೇ, ಮನೆ ಅಂತೆ ಮನೆ. ಸಮಾಧಿ ಕಟ್ಟುಸ್ಬುಟ್ಟು ಆದ್ರಾಗೆ ಮಲುಗುಸ್ತೀನಿ ಬಾರಲೇ' ಅಂತೇಳಿ ಅಂಬ್ರೀಸು ಗುಡುಗುದ್ರು. ಮೈಲಾರಿ ವೋಡೋದ ಏಟ್ಗೆ ತಿಂದಿರೋದೆಲ್ಲಾ ಜೀರ್ಣ ಆಗೋಯ್ತು.


- ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.