Hmmm... ಪಾಂಚ್ ಯೋಗರಾಜ್ ಭಟ್
ನಿಮ್ಮ ಹೊಸ ಹಿಂದಿ ಪಿಕ್ಚರ್ಗೆ ಮುಂಬೈಯಲ್ಲಿ ಕೂತು ಕಥೆ ಬರೀತಿದೀರಂತೆ, ಹಿಂದಿ ಪಿಕ್ಚರ್ ಅಂದಾಕ್ಷಣ ಕಥೆನೂ ಮುಂಬೈನಲ್ಲೇ ಕೂತುಕೊಂಡ್...
- ನಿಮ್ಮ ಹೊಸ ಹಿಂದಿ ಪಿಕ್ಚರ್ಗೆ ಮುಂಬೈಯಲ್ಲಿ ಕೂತು ಕಥೆ ಬರೀತಿದೀರಂತೆ, ಹಿಂದಿ ಪಿಕ್ಚರ್ ಅಂದಾಕ್ಷಣ ಕಥೆನೂ ಮುಂಬೈನಲ್ಲೇ ಕೂತುಕೊಂಡ್ ಬರೀಬೇಕಾ?
ಕನ್ನಡ ಪಿಕ್ಚರ್ನ ಇಷ್ಟು ಭಾಗ ಕರ್ನಾಟಕದಲ್ಲೇ ಶೂಟ್ ಮಾಡ್ಬೇಕು ಅಂತ ರೂಲ್ ಇದೆಯಲ್ಲ, ಇದೂ ಹಂಗೆ! ಅಲ್ಲಿ, ಬರೀ ಮಳೆ ನೋಡಿ ಸಾಕಾಗಿತ್ತು, ಸ್ವಲ್ಪ ಡಿಫರೆಂಟಾಗಿ ಬಿಸಿಲು ನೋಡಿ ಕಣ್ಣು ತಂಪು ಮಾಡ್ಕೊಳ್ಳೋಣ ಅಂತ ಬಂದೆ.
- ಸರಿ, ನಿಮ್ಮ ಚಿತ್ರಕ್ಕೆ 'ಹೆಲ್ಮೆಟ್' ಅಂತ ಹೆಸರಿಟ್ಟಿದೀರ ಅನ್ನೋ ಗಾಳಿಸುದ್ದಿ ಇದೆ. ಎಲ್ಲರೂ ಡೈಲಾಗ್ನಲ್ಲಿ ಡಬಲ್ ಮೀನಿಂಗ್ ಇಟ್ರೆ, ನೀವು ಟೈಟಲ್ನಲ್ಲೇ ಡಬಲ್ಮೀನಿಂಗ್ ಇಡ್ತಿದೀರಲ್ಲ?
ಇದನ್ನು ನೋಡಿ 'ಬಲ್ ನನ್ಮಗ' ಅಂತೆಲ್ಲಾ ಸಿನಿಮಾ ಮಾಡ್ತಿದ್ದೋರು, ಇನ್ಮೇಲೆ 'ಡಬಲ್ ನನ್ಮಗ' ಅಂತ ಸಿನಿಮಾ ಮಾಡ್ಕಳ್ಳಿ ಬಿಡಿ.
- ಸರಿ ಭಟ್ರೇ, ಬಾಂಬೆಗ್ ಹೋದ್ಮೇಲೆ ಬಾಲಿವುಡ್ಡಲ್ಲಿ ಮಹೇಶ್ ಭಟ್, ವಿಕ್ರಮ್ ಭಟ್, ಪೂಜಾ ಭಟ್ ಯಾರಾದ್ರೂ ಸಿಕ್ಕಿದ್ರಾ?
ರೀ, ನಾನೇನ್ ಸಂಬಂಧ ಬೆಳೆಸೋಕೆ ಬಂದಿದೀನಾ ಇಲ್ಲಿಗೆ. ಸಿನಿಮಾ ಮಾಡೋಕೆ ಬಂದಿರೋದು. ಆದ್ರೆ ಈ
ಬಾಲಿವುಡ್ ಅಂದ್ರಲ್ಲ, ಥತ್ ಅವನಜ್ಜಿ, ಬಾಂಬೇಗ್ ಬಂದಾಗಿಂದ ಅದೆಲ್ಲೈತೆ ಅಂತ ಹುಡುಕ್ತಾನೇ ಇದೀನಿ, ಸಿಕ್ತಾನೇ ಇಲ್ಲ.
- ಹಿಂದಿ ಸಿನಿಮಾ ಬಿಡಿ, ನಿಮ್ಮ ಮುಂದಿನ ಕನ್ನಡ ಸಿನಿಮಾ ಬಗ್ಗೆ ಹೇಳಿ. ಇಲ್ಲಿನ ಬಚ್ಚನ್ ಜೊತೆ ಪಿಕ್ಚರ್ ಮಾಡ್ತೀರಾ ಅಂತ ಸುದ್ದಿಯಿತ್ತು. ಅಲ್ಲಿ ರಿಯಲ್ ಬಚ್ಚನ್ ಸಿಕ್ಕಿದಾರೆ ಅಂತ ಸುದ್ದಿ. ಹಂಗಾದ್ರೆ ಈ ಬಚ್ಚನ್ ಕಥೆ?
ರಿಯಲ್ ಬಚ್ಚನ್ ಸಿಗೋವಾಗ ಹೆಂಗ್ರೀ ಬಿಡೋದು, ಆಂಗ್ರಿ ಯಂಗ್ ಮ್ಯಾನ್ ಈಸ್ ಬ್ಯಾಕ್. ಹಂಗಾಗಿ, ಆ ಆ್ಯಂಗ್ರಿ ಯಂಗ್ ಮ್ಯಾನ್ಗೆ ಬ್ಯಾಕ್ ತೋರಿಸಿಬಿಟ್ಟೆ.
- ಅದ್ಸರಿ, ನಿಮ್ಮ ಹಿಂದಿ ಪಿಕ್ಚರ್ನಲ್ಲಿ ಸಲ್ಮಾನ್ ಖಾನ್ ಆ್ಯಕ್ಟಿಂಗ್ ಮಾಡ್ತಾನಾ?
ನಿಮ್ ಪಿಕ್ಚರ್ಲಿ ಸಲ್ಮಾನ್ ಖಾನ್ ಇದಾನಾ ಅಂತ ಕೇಳಿ, ಹೂ ಅಂದ್ರೂ ಅಂತೀನಿ, ಆದ್ರೆ, ಸಲ್ಮಾನ್ ಖಾನ್ 'ಆ್ಯಕ್ಟಿಂಗ್ ಮಾಡ್ತಾನಾ?' ಅಂತೆಲ್ಲಾ ಕೇಳಿದ್ರೆ ಉತ್ರ ಹೇಳೋದ್ ಕಷ್ಟ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಸಿಹಿತಿಂಡಿ ಇಷ್ಟಪಡುವವರಿಗೆ ಇದು ಸಿಹಿಯಾದ ಮಾಹಿತಿ. ಸ್ವೀಟ್ 16 ವಯಸ್ಸಿನವರಿಂದ ಹಿಡಿದು ಸಕ್ಕರೆ ಖಾಯಿಲೆ ಇರುವವರಿಗೂ ಸ್ವೀಟ್ ಬೇಕು. ಮೊದಲೆಲ್ಲಾ ಊಟದಲ್ಲಿ ಒಂದೊಂದೇ ಸ್ವೀಟ್ ಇಡುವ ವಾಡಿಕೆ ಇತ್ತು. ಆದರೆ ಈಗೀಗ ಎಲ್ಲರನ್ನೂ ಮೆಚ್ಚಿಸಲು ಹಲವಾರು ಬಗೆಯ ಸಿಹಿತಿಂಡಿಗಳು ಕಾಣಿಸುತ್ತವೆ. ಅಂಥ ಹಲವು ಬಗೆಯ, ನಮಗೆ ಅಪರಿಚಿತ ಎನಿಸುವ ಹೊಸಬಗೆಯ ಸಿಹಿತಿಂಡಿಗಳನ್ನು ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
bit.ly/1dLNQyJ
bit.ly/13KisuC
bit.ly/aqTsqY
bit.ly/14qtV8X
bit.ly/126pNe4
ಹರಿ-ಕಥೆ
ಖೇಮು ವಾಸಿಸುತ್ತಿದ್ದ ಗುಡಿಸಲಿನ ಹೊರಗೆ ಒಂದು ದಿನ ರಾತ್ರಿ ಏನೋ ಸದ್ದು ಕೇಳಿಸಿತು. ಹೋಗಿ ನೋಡಿದರೆ ಕತ್ತಲಲ್ಲಿ ಒಂದು ಬೆಕ್ಕಿನ ಮರಿ ಕಾಣಿಸಿತು. ಹತ್ತಿರ ಹೋದ ಮೇಲೆ ಅದು ಬೆಕ್ಕಲ್ಲ ಆಗ ತಾನೇ ಹುಟ್ಟಿದ್ದ ಹುಲಿಮರಿ ಎಂದು ಗೊತ್ತಾಯಿತು. ಛಳಿಯಲ್ಲಿ ನಡುಗುತ್ತಿದ್ದ ಆ ಪುಟ್ಟ ಮರಿಯನ್ನು ನೋಡಿ ಖೇಮು ಮನಸ್ಸು ಕರಗಿತು. ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಮರಿ ಕೂಡಾ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿತು. ಇಬ್ಬರಲ್ಲೂ ಅದೆಂಥದೋ ಆತ್ಮೀಯತೆ ಎಕ್ಸ್ಛೇಂಜ್ ಆಯ್ತು. ಸರಿ, ಅದನ್ನು ಎತ್ತಿ ಒಳಗೆ ತಂದು, ಹಾಲು ಕುಡಿಸಿ, ಬೆಚ್ಚನೆಯ ಜಾಗದಲ್ಲಿ ಮಲಗಿಸಿದ. ಅಂದಿನಿಂದ ಆ ಹುಲಿಮರಿ ಖೇಮು ಆಶ್ರಯದಲ್ಲೇ ಬೆಳೆಯಿತು. ಇಬ್ಬರೂ ಒಂದುಕ್ಷಣವೂ ಬಿಟ್ಟಿರಲಾರದಷ್ಟು ಕ್ಲೋಸ್ ಆದರು. ಆದರೆ ಒಂದು ದಿನ ಖೇಮುವಿಗೆ ಹುಲಿಮರಿಯನ್ನು ಬಿಟ್ಟು ದೂರದೂರಿಗೆ ಹೋಗಬೇಕಾಯ್ತು. ಭಾರವಾದ ಮನಸ್ಸಿನಿಂದ ಊರಿಗೆ ಹೋಗಿ ಮನೆಗೆ ಬಂದ ಖೇಮುಗೆ ಶಾಕ್ ಕಾದಿತ್ತು. ಹುಲಿಮರಿ ಕಾಣೆಯಾಗಿತ್ತು. ತಲೆಕೆಡಿಸಿಕೊಂಡ ಖೇಮು ಅದನ್ನು ಹುಡುಕಿಕೊಂಡು ಅಲೆಯದ ಜಾಗವೇ ಇಲ್ಲ. ಆದರೆ ಏನೂ ಲಾಭವಾಗಲಿಲ್ಲ. ಒಂದಷ್ಟು ದಿನಗಳವರೆಗೆ ಕೊರಗಿದ ಖೇಮು ನಂತರ ಅದನ್ನು ಮರೆತುಹೋದ. ಎಷ್ಟೋ ವರ್ಷಗಳು ಕಳೆದವು. ಒಮ್ಮೆ ಖೇಮು ಉತ್ತರ ಭಾರತ ಪ್ರವಾಸಕ್ಕೆಂದು ಹೊರಟ. ದಾರಿಯಲ್ಲಿ ಝೂ ಒಂದಕ್ಕೆ ಹೋಗಿದ್ದ ಖೇಮುಗೆ, ಪಂಜರವೊಂದರಲ್ಲಿದ್ದ ಹುಲಿಯನ್ನು ನೋಡಿದಾಕ್ಷಣ ಎಷ್ಟೋ ವರ್ಷಗಳ ಹಿಂದಿನ ತನ್ನ ಹುಲಿಮರಿ ನೆನಪಾಯಿತು. ಹತ್ತಿರ ಹೋಗಿ ಆ ಹುಲಿಯ ಕಣ್ಣನ್ನೇ ದಿಟ್ಟಿಸಿದ. ಹುಲಿ ಕೂಡ ಇವನ ಕಡೆಗೇ ನೋಡಿತು. ಖೇಮುಗೆ ಅಂದು ಸಿಕ್ಕಿದ್ದ ಆ ಹುಲಿಮರಿಯ ನೋಟವೇ ಈ ಹುಲಿಯ ಕಣ್ಣಲ್ಲೂ ಕಂಡಿತು. ಅದರ ಜೊತೆಗೆ ಅದರ ಕಣ್ಣಿನ ಪಕ್ಕದಲ್ಲಿದ್ದ ಸಣ್ಣ ಮಚ್ಚೆ ಕೂಡ. ಫುಲ್ ಎಕ್ಸೈಟ್ ಆದ ಖೇಮು, ಹುಲಿ ನೋಡಿಕೊಳ್ಳುತ್ತಿದ್ದವನನ್ನು ಕರೆದು, ಈ ಹುಲಿ ನನಗೆ ಗೊತ್ತು, ನಾನು ಅದರ ಬಳಿ ಹೋಗಬೇಕು, ಬಾಗಿಲು ತೆರೆ ಎಂದ. ಕಾವಲುಗಾರ ಮೊದ ಮೊದಲು ನಿರಾಕರಿಸಿದರೂ ನಂತರ ಖೇಮುವಿನ ಹುಲಿಕಥೆ ಕೇಳಿ ಕರಗಿ ಬಾಗಿಲು ತೆರೆದ. ಖೇಮು ಪಂಜರದ ಒಳಹೊಕ್ಕ ಕೂಡಲೇ ಆ ಹುಲಿ ಅವನ ಮೇಲೆ ಎರಗಿ ಅವನನ್ನು ಕೊಂದು ತಿಂದು ಹಾಕಿತು. ಅಷ್ಟೆ. ಇಲ್ಲಿಗೆ ಕತೆ ಮುಗೀತು. ಮೋಸ್ಟ್ಲೀ ಅದು ಬೇರೆ ಹುಲಿ ಇರ್ಬೇಕು, ಹೋಗ್ಲಿ ಬಿಡಿ.
ಸ್ಯಾಂಡಲ್ವುಡ್
ಬಸವಣ್ಣ ಅನ್ನೋ ಹೆಸರಿಟ್ಟಾಗ ಇದು ವಿವಾದ ಆಗಬಹುದು ಎಂಬ ಸುದ್ದಿ ಆಗುತ್ತೆ. ವಿವಾದ ಆದ ನಂತರ ಮತ್ತೆ ಸುದ್ದಿ. ಅದನ್ನು ಬ್ರಾಹ್ಮಣ ಅಂತ ಬದಲಿಸಿದಾಗ ಮತ್ತೆ ಅದು ರಿಪೀಟ್. ಶ್ರೀನಿವಾಸರಾಜು ಮತ್ತು ಉಪೇಂದ್ರ ಕಾಂಬಿನೇಷನ್ನ ಬಸವಣ್ಣ ಚಿತ್ರದ ವಿಷಯದಲ್ಲಿ ಇದೇ ಆಗುತ್ತಿದೆ. ಬಸವಣ್ಣ ಎಂಬ ಹೆಸರಿನಿಂದ ವಿವಾದವಾದರೆ ಅದನ್ನು, ಬ್ರಾಹ್ಮಣ ಅಂತ ಬದಲಾಯಿಸುವುದರ ಹಿಂದಿನ ಉದ್ದೇಶವೇ ಮತ್ತೊಂದು ವಿವಾದ ಆಗಲಿ ಎಂಬ ಕಾರಣಕ್ಕೆ ಎನ್ನುವುದು ಯಾರಿಗೂ ಅರ್ಥವಾಗದ ವಿಷಯವಲ್ಲ. ಆದರೆ ಇಲ್ಲಿ ಮಾಧ್ಯಮಗಳು ವಿವಾದ ಹುಟ್ಟು ಹಾಕುವ ಇವರ ಚಿಲ್ಲರೆ ಬುದ್ಧಿಗೆ ದಾಳಗಳಾಗಿವೆ ಎಂಬುದು ವಿಷಾದ. ಸಿನಿಮಾ ಮಾಡಿ ಹೆಸರು ಮಾಡ್ರಪ್ಪಾ ಅಂದ್ರೆ ಹೆಸರಿನಿಂದಲೇ ಹೆಸರು ಮಾಡೋಕೆ ಹೊರಟು 'ಹೆಸರೇ ಉಸಿರು' ಎಂಬ ಘೋಷಣೆಯಲ್ಲಿ ನಂಬಿಕೆ ಇಟ್ಟು, ತಮ್ಮ ಚಿತ್ರವನ್ನು ಹೆಸರುಘಟ್ಟದಲ್ಲೇ ವಿವಾದಕ್ಕೀಡು ಮಾಡುವ ಇವರ ಉದ್ದೇಶಕ್ಕೆ ಯಾರೂ ನೀರೆರೆಯದಿದ್ದರೆ ಒಳ್ಳೆಯದೇನೋ. ಈ ನಿಟ್ಟಿನಲ್ಲಿ, ಇಂಥ ವಿಷಯಗಳನ್ನು ಸುದ್ದಿ ಮಾಡದೆ ಸುಮ್ಮನಿರುವುದೇ ಸರಿ. ನೀವ್ ಮೊದ್ಲು ಟೈಟಲ್ ಫೈನಲ್ ಮಾಡ್ಕಳಿ ಆಮೇಲೆ ಸುದ್ದಿ ಮಾಡ್ತೀವಿ ಅಂತ ಮಾಧ್ಯಮಗಳು ಡಿಸೈಡ್ ಮಾಡಿದರೆ ಇಂಥ ತಲೆಹರಟೆಗಳು ಕಡಿಮೆ ಆಗಬಹುದು.
ಡಬ್ಕುಡಬಲ್ ತುದಾಂಡಲ್...
= ಹುಡುಗ ಕುಡೀತಾನೆ ಅಂತ ನಾಜೂಕಾಗಿ ಹೇಳುವ ವಿಧಾನ
ಹುಡುಗ ಏನೋ ಒಳ್ಳೆಯವನೇ, ಆದ್ರೆ ಕಣ್ಣಿನ ಕಲರ್ ಮಾತ್ರ 'ಎಣ್ಣೆ'ಗೆಂಪು
- ಸಿನಿ ಡೌಟು: ಅಭಿನಯ ಬಾರದೆ ಸಿಕ್ಕಾಪಟ್ಟೆ ಕ್ಯಾನ್ಗಳನ್ನ ವೇಸ್ಟ್ ಮಾಡೋ ನಾಯಕ, ನಾಯಕಿಯ ಸಿನಿಮಾವನ್ನು 'ಕ್ಯಾನ್ ಫಿಲ್ಮ್ ಫೆಸ್ಟಿವಲ್'ಗೆ ಕಳಿಸಬಹುದೇ?
- 'ಭಾಗ್ ಮಿಲ್ಕಾ ಭಾಗ್' ಚಿತ್ರದ 'Fly'ಯಿಂಗ್ ಸಿಖ್' ಎಂಬ ವಿವರಣೆ ನೋಡಿ, ಇದೂ ಕೂಡ ನೊಣದ ಸಿನಿಮಾ ಎಂದುಕೊಂಡು, ನಮ್ಮ ಸುದೀಪ್ 'ಈಗ' ಪಾರ್ಟ್ 2' ಮಾಡೋಕೆ ರೆಡಿ ಆಗಿರಬಹುದೇ?
- ಸುದೀಪ್ ಮತ್ತು ಉಪೇಂದ್ರ ಒಟ್ಟಾಗಿ ಸೆಲೆಬ್ರೆಟಿ ಸ್ಪೋರ್ಟ್ಸ್ ಅಂತ ಆಡಿದರೆ ಯಾವ ಆಟ ಆಡಬಹುದು?
ಬಚ್ಚ- ಬಸವಣ್ಣ
- ನಾನು ಕಡಿಮೆ ಬಟ್ಟೆ ಹಾಕಿಕೊಳ್ಳುವುದು ಒಂಥರಾ 'ಸೋಶಿಯಲ್ ಸರ್ವೀಸ್' ಮಾಡಿದಂತೆ - ಪೂನಂ ಪಾಂಡೆ
ಪೂನಂ, ತಮ್ಮ ಅಂಥ ಚಿತ್ರಗಳನ್ನು ಫೇಸ್ಬುಕ್, ಟ್ವಿಟ್ಟರ್ ಅಕೌಂಟ್ಗಳಲ್ಲಿ ಹಾಕಿಕೊಳ್ಳುವುದರಿಂದ ಅದನ್ನು 'ಸೋಶಿಯಲ್ ನೆಟ್ವರ್ಕ್ ಸರ್ವೀಸ್' ಎಂದರೆ ಸೂಕ್ತ.
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

