ಅಂಕಣಗಳು

ಮುನಿಯಬೇಡ, ತೆಗಳಬೇಡ, ಸಣ್ಣವನಾಗಬೇಡ

ರಾಜಕಾರಣದ ಮೂಲ ತತ್ವವೇ ತಂತ್ರ ಹಾಗೂ ಪ್ರತಿತಂತ್ರ. ಹಾಗೆಂದು ಇಲ್ಲಿ ಕುತಂತ್ರ..

Published On :

ರಾಜಕಾರಣದ ಮೂಲ ತತ್ವವೇ ತಂತ್ರ ಹಾಗೂ ಪ್ರತಿತಂತ್ರ. ಹಾಗೆಂದು ಇಲ್ಲಿ ಕುತಂತ್ರ ಮೆರೆಯಬಾರದು. ಚಾಣಾಕ್ಷತನ ಮಿನುಗಬೇಕು. ಹಗೆತನ ನಲುಗಬೇಕು. ರಾಜಕಾರಣ ಎಂದರೆ ನಲಿವಿಗಿಂತ ನೋವೇ ಹೆಚ್ಚು. ಇಲ್ಲಿ ಸಿಹಿಗಿಂತ ವಿಷವೇ ಪ್ರಾಧಾನ್ಯ ಪಡೆಯುತ್ತದೆ. ಆದರೆ ರಾಜಕಾರಣಿ ಆದವನು ಈ ವಿಷ ನುಂಗಿ ವಿಷಕಂಠನಾಗಬೇಕು. ಅದನ್ನು ಬಿಟ್ಟು ಕಕ್ಕಿದರೆ ಅವನಿರುವ ಬೀಡು ಬಿಕ್ಕುತ್ತದೆ. ಇಲ್ಲವೇ ಅವನ ಸ್ಥಿತಿಗೆ ಬಿದ್ದು, ಬಿದ್ದು ನಗುತ್ತದೆ.
ಹೌದು, ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಗ ಪ್ರತಿಪಕ್ಷ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರಸ್ಪರರ ಮೇಲೆ ಕಾರಿಕೊಂಡ ವೈಯಕ್ತಿಕ ರಾಜಕೀಯ ದ್ವೇಷದ ವಿಷ ಮೇಲಿನ ಮಾತಿಗೆ ಒಂದು ಸ್ಪಷ್ಟ ನಿದರ್ಶನ. ತಾವು ಏರಿರುವ ಸ್ಥಾನ, ಆ ಸ್ಥಾನದ ಗೌರವ, ತಾವಿದ್ದ ಸದನದ ಪಾವಿತ್ರ್ಯ, ಘನತೆ ಎಲ್ಲವನ್ನೂ ಸಾರಾಸಗಟಾಗಿ ಗುಡಿಸಿ ಹಾಕಿ, ಈ ಇಬ್ಬರು ನಾಯಕರು ಏಕವಚನದಲ್ಲಿ ಜರಿದುಕೊಂಡಿದ್ದು ಒಂದು ಕೆಟ್ಟ ಪರಂಪರೆಯ ಪ್ರತೀಕ. ಪ್ರಜಾತಂತ್ರ ವ್ಯವಸ್ಥೆಯ ಅಣಕ.
ಶಾಸನಸಭೆ ಎನ್ನುವುದು ರಾಜ್ಯದ ಪ್ರಗತಿಯ ರೂಪುರೇಷೆಗಳನ್ನು ಪ್ರತಿಬಿಂಬಿಸುವ ಪವಿತ್ರ ಸ್ಥಳ. ಜ್ಞಾನಾರ್ಜನೆಯ ಶಿಕ್ಷಣಸೌಧವೂ ಹೌದು. ಇಲ್ಲಿ ಪ್ರಜೆಗಳ ಹಿತಾಸಕ್ತಿ ರಕ್ಷಣೆ ವಿಚಾರಗಳ ಚಿಂತನ-ಮಂಥನವಾಗುತ್ತದೆ. ನೀತಿ-ನಿಲುವುಗಳು ರೂಪಿತವಾಗುತ್ತದೆ. ಹತ್ತು ಹಲವು ಸತ್ಸಂಪ್ರದಾಯಗಳ ಪ್ರತಿರೂಪವಾಗಿರುವ ವಿಧಾನಸಭೆಯಲ್ಲಿ ಘನತೆವೆತ್ತ ಸ್ಥಾನಮಾನ ಅಲಂಕರಿಸಿರುವ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಕೆಸರು ಎರಚಿಕೊಂಡದ್ದು ಇಡೀ ನಾಡೇ ನಾಚಿ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ. ವಿಧಾನಮಂಡಲದ ಒಳಗಿಂದ ಹೊರಬಿದ್ದ ಈ ಅನಪೇಕ್ಷಿತ ಬೆಳವಣಿಗೆ ಕನ್ನಡಕುಲಕೋಟಿ ಮುಖ ಕಿವುಚುವಂತೆ ಮಾಡಿದ್ದು ಸುಳ್ಳಲ್ಲ. ಛೇ, ಹೀಗಾಗಬಾರದಿತ್ತು, ಹೀಗೆ ಕಿತ್ತಾಡಬಾರದಿತ್ತು ಎಂದು ಹೇಳದವರೇ ಇಲ್ಲ.
ರಾಜಕೀಯದಲ್ಲಿ ನಂಬಿಕೆಗಳ ಮೇಲೆ ಅವಕಾಶವಾದಗಳೇ ಸವಾರಿ ಮಾಡುತ್ತಿರುತ್ತವೆ. ಅಧಿಕಾರ ಗಳಿಕೆಯೇ ರಾಜಕೀಯದ ಮೂಲಮಂತ್ರ. ಒಬ್ಬನ ಅಧಿಕಾರ ಗಳಿಕೆ ಮತ್ತೊಬ್ಬನ ಅವಕಾಶ ಕಸಿಯುವಿಕೆಯ ಮೇಲೆ ರಾರಾಜಿಸುತ್ತಿರುತ್ತದೆ. ಹೀಗಾಗಿ ನಂಬಿಕೆ ಹುಟ್ಟಿದಷ್ಟೇ ಸುಲಭವಾಗಿ ಸತ್ತು ಹೋಗುತ್ತದೆ. ಅಪನಂಬಿಕೆ ವಿಜೃಂಭಿಸುತ್ತದೆ. ಆಗ ಹಗೆತನ ತನ್ನಂತಾನೇ ಟಿಸಿಲೊಡೆಯುತ್ತದೆ. ಜೀವಮಾನದುದ್ದಕ್ಕೂ ಈ ಹಗೆತನ ಪರಸ್ಪರರನ್ನು ಕಾಡುವುದರ ಜತೆಗೆ, ತಮ್ಮನ್ನು ತಾವೇ ಸುಟ್ಟುಕೊಳ್ಳಲು ಕಾರಣವಾಗುತ್ತದೆ.
ರಾಜಕೀಯದಲ್ಲಿ ದ್ವೇಷ, ಅಸೂಯೆ, ಈರ್ಷೆ ಮಾಮೂಲಿ. ಒಬ್ಬನ ಉನ್ನತಿ ಮತ್ತೊಬ್ಬನ ಕರುಳಿನ ಬೆಂಕಿ. ಎದುರಾಳಿ ಅಧಿಕಾರ ಗಳಿಸಿದರೆ ಈತನ ಆತ್ಮ ದ್ವೇಷಾಗ್ನಿಯಲ್ಲಿ ಬೆಂದು ಚೀರುತ್ತದೆ. ಸಂಕಟದಿಂದ ವಿಲವಿಲವೆ ಒದ್ದಾಡುತ್ತದೆ. ಅವನು ಅಧಿಕಾರ ಗಳಿಸಿದಾಗ ಇವನು, ಇವನು ಅಧಿಕಾರ ಗಳಿಸಿದಾಗ ಅವನು ಆತ್ಮವನ್ನೇ ಅಸೂಯೆಯಾಗಿ ಪರಿವರ್ತಿಸಿಕೊಂಡು ನರಳುತ್ತಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಣ ಮೊನ್ನೆಯ ಬಹಿರಂಗ ಕದನ ಪ್ರತಿಬಿಂಬಿಸಿರುವುದು ಇದನ್ನೇ.
ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಕುಮಾರಸ್ವಾಮಿ ಅವರಂತೆ, ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಸಿದ್ದರಾಮಯ್ಯ ಅವರಂತೆ, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಧಾನ ತಪ್ಪಿಸಿದ್ದು ಕುಮಾರಸ್ವಾಮಿಯಂತೆ, ಕುಮಾರಸ್ವಾಮಿಯವರ ಪ್ರಕಾರ ಸೋನಿಯಾಗಾಂಧಿ ಅವರಂತೆ..., ಈ ಅಂತೆ-ಕಂತೆಗಳ ಬೊಂತೆ ನೀನು-ತಾನು ಎಂಬ ಏಕವಚನ ಪ್ರಯೋಗದೊಡನೆ ಪರಸ್ಪರ ಪ್ರಯೋಗ ಆದಾಗ ಇಡೀ ಸದನ ಅಸಹ್ಯ ಪಟ್ಟುಕೊಂಡಿತು. ಅದರಲ್ಲಿ ನಾಡಿನ ಜನರ ಅಭಿಪ್ರಾಯವೂ ಪ್ರತಿಫಲನವಾಗಿತ್ತು.
ಹಾಗೆ ನೋಡಿದರೆ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿದೆ. ಬ್ರಿಟಿಷ್ ಸಂಸದೀಯ ವ್ಯವಸ್ಥೆಯಲ್ಲಿ ಪ್ರತಿಪಕ್ಷ ನಾಯಕನನ್ನು ಪ್ರಧಾನ ಮಂತ್ರಿಯ ಛಾಯಾರೂಪ ಎಂದೇ ಕರೆಯಲಾಗುತ್ತದೆ. ಈ ವ್ಯವಸ್ಥೆಯನ್ನು ಭಾರತೀಯ ರಾಜಕೀಯ ವ್ಯವಸ್ಥೆಯೂ ಸಾರಾಸಗಟಾಗಿ ಒಪ್ಪಿಕೊಂಡಿರುವುದರಿಂದ ಇಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ಕೂಡ ಛಾಯಾ ಮುಖ್ಯಮಂತ್ರಿ ಎಂದೇ ಗುರುತಿಸಲಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹಾಗೆ ಕಿತ್ತಾಡಿಕೊಂಡದ್ದು ವಿಧಾನಸಭೆಗೆ ಗೌರವ ತರುವ ವಿಚಾರವಲ್ಲ. ಅದರಲ್ಲೂ ಕುಮಾರಸ್ವಾಮಿ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಅವರಿಗೂ ಆ ಸ್ಥಾನಮಾನದ ಘನತೆ ಏನೆಂಬುದು ಚೆನ್ನಾಗಿಯೇ ಗೊತ್ತು. ಅದೇ ರೀತಿ ಕುಮಾರಸ್ವಾಮಿಯವರಿಗಿಂತಲೂ ಎರಡು ಪಟ್ಟು ಹೆಚ್ಚು ರಾಜಕೀಯ ಅನುಭವ ಇರುವ ಸಿದ್ದರಾಮಯ್ಯನವರಿಗೂ. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ಒಂದೇ ಪಕ್ಷದಲ್ಲಿ ದಶಕಕ್ಕೂ ಹೆಚ್ಚು ಕಾಲ ಒಡನಾಡಿದವರು. ಈ ಒಡನಾಟದಲ್ಲಿ ಒಬ್ಬರ ಪ್ರಾಬಲ್ಯ, ದೌರ್ಬಲ್ಯ ಮತ್ತೊಬ್ಬರಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಇದರಲ್ಲಿ ರಾಜಕೀಯ ಮತ್ತು ರಾಜಕೀಯೇತರ ಎರಡೂ ಇರುತ್ತದೆ. ಆದರೆ ಇವರಿಬ್ಬರೂ ವೈಯಕ್ತಿಕ ರಾಜಕೀಯ ದ್ವೇಷ ಕಾರಿಕೊಳ್ಳಲು ವಿಧಾನಸಭೆಯನ್ನು ವೇದಿಕೆ ಮಾಡಿಕೊಂಡದ್ದು ಸರಿಯಲ್ಲ.
ಹಿಂದೆ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ನೇರ ಮತ್ತು ಖಡಾಖಡಿ ನಡೆ-ನುಡಿಯಿಂದ ಆ ಹುದ್ದೆಗೊಂದು ಘನತೆ ತಂದಿದ್ದರು. ದೇವೇಗೌಡರು ನಂತರ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೂ ಆಗಿದ್ದಾರೆ. ಆದರೆ ಹುದ್ದೆ ನಿರ್ವಹಣೆ ಹಿನ್ನೆಲೆಯಲ್ಲಿ ಅವರು ಪ್ರತಿಪಕ್ಷ ನಾಯಕರಾಗಿಯೇ ಯಶಸ್ವಿಯಾದವರು, ತೃಪ್ತಿ ಕಂಡವರು. ಹಾಗೆಂದು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಸಮರ್ಥ ಮತ್ತು ಬೆಂಕಿಚೆಂಡಿನಂತ ವಾದಸರಣಿಯಿಂದ ಸದನದಲ್ಲಿ ಗುಂಡೂರಾಯರನ್ನು ಕಕ್ಕಾಬಿಕ್ಕಿ ಮಾಡುತ್ತಿದ್ದ ದೇವೇಗೌಡರು ಹೊರಗೆ ಹುದ್ದೆಯ ತಾರತಮ್ಯ ಮೀರಿದ ಪಾರಮ್ಯ ಮೆರೆದವರು. ಗುಂಡೂರಾಯರು ದೇವೇಗೌಡರನ್ನು ಎದುರಾಳಿ ಎಂದು ಎಂದೂ ಅಂದುಕೊಂಡಿರಲಿಲ್ಲ. ಅದೇ ರೀತಿ ದೇವೇಗೌಡರು ಸಹ. ಅನ್ಯಪಕ್ಷದ ಲೇಪ ವಿಧಾನಸಭೆಗಷ್ಟೇ, ಜನಪರ ಕಾರ್ಯಗಳಿಗಷ್ಟೇ ಸೀಮಿತವಾಗಿತ್ತು. ತಮ್ಮ ಕ್ಷೇತ್ರದ ಯೋಜನೆಯೊಂದನ್ನು ಮಂಜೂರು ಮಾಡಿದರೆಂಬ ಕಾರಣಕ್ಕೆ ದೇವೇಗೌಡರೇ ಗುಂಡೂರಾಯರನ್ನು ಕ್ಷೇತ್ರಕ್ಕೆ ಕರೆಯಿಸಿ ಮೆರವಣಿಗೆ, ಸನ್ಮಾನ ಮಾಡಿದ್ದರು. ಆಲ್ಲಿ ಆಡಳಿತ ಪಕ್ಷದವರು, ವಿರೋಧಪಕ್ಷದವರು ಎಂಬ ದುಮ್ಮಾನ ಇರಲಿಲ್ಲ. ಈಗ ಅದೇ ದೇವೇಗೌಡರ ಪುತ್ರ ಕುಮಾರಸ್ವಾಮಿ ಪ್ರತಿಪಕ್ಷ ನಾಯಕ. ಗೌಡರ ಗರಡಿಯಲ್ಲೇ ಪಳಗಿದ ಸಿದ್ದರಾಮಯ್ಯ ಮುಖ್ಯಮಂತ್ರಿ. ಆದರೆ ಇಬ್ಬರಿಗೂ ಇದು ಅರ್ಥವಾಗಿಲ್ಲ.
ಆ ದಿನ ವಿಧಾನಸಭೆಯಲ್ಲಿ ಇವರಿಬ್ಬರ ನಡುವಣ ಗಲಾಟೆ ಪ್ರಹಸನಕ್ಕೆ ನಾಂದಿ ಹಾಡಿದವರು ದೇವೇಗೌಡರ ಮತ್ತೊಬ್ಬ ಪುತ್ರ ರೇವಣ್ಣ. ಬಿಜೆಪಿಗೆ ಮರು ಸೇರ್ಪಡೆ ಆದರೆ ಮತ್ತೆ ಚೂರಿ ಹಾಕಿಸಿಕೊಳ್ಳುತ್ತೀರಿ ಎಂದು ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಬುದ್ದಿಮಾತು ಹೇಳುತ್ತಿದ್ದರೆ, ಇರಲಾರದೆ ಇರುವೆ ಬಿಟ್ಟವರು ರೇವಣ್ಣ. 'ಕಾಂಗ್ರೆಸ್‌ನವರು ಎಂಥವರು ಅಂಥ ನಿಮಗೆ ಗೊತ್ತಿಲ್ಲ ಸಿದ್ರಾಮಣ್ಣ. ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಪಕ್ಕ ಇಟ್ಟುಕೊಂಡು ನಂತರ ಒದ್ದು ಆಚೆ ತಳ್ಳುತ್ತಾರೆ. ಮುಂದೆ ನಿಮಗೂ ಇದು ಅರ್ಥವಾಗುತ್ತದೆ' ಎಂದು ಸಿದ್ದರಾಮಯ್ಯನವರನ್ನು ಕೆಣಕಿದರು. ಆಗ, 'ಹಿಂದೆ ನೀವೆಲ್ಲ (ಜನತಾ ಪರಿವಾರ, ಅದರಲ್ಲೂ ವಿಶೇಷವಾಗಿ ದೇವೇಗೌಡರ ಕುಟುಂಬ) ನನಗೆ ಏನು ಮಾಡಿದ್ದೀರಿ, ಮುಖ್ಯಮಂತ್ರಿ ಸ್ಥಾನವನ್ನು ಹೇಗೆ ತಪ್ಪಿಸಿದ್ದೀರಿ ಎಂಬುದು ಚೆನ್ನಾಗಿ ಗೊತ್ತಿದೆ' ಎಂದು ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದೇ ಮುಂದೆ ಅವರು ಹಾಗೂ ಕುಮಾರಸ್ವಾಮಿ ನಡುವಣ ಏಕವಚನ ಜಗಳದವರೆಗೂ ಎಳೆದುಕೊಂಡು ಹೋಯಿತು. ಹೀಗೆ ಇವರಿಬ್ಬರ ನಡುವಣ ಜಗಳಕ್ಕೆ ನಾಂದಿ ಹಾಡಿದ ರೇವಣ್ಣ, ಅದೇ ದಿನ ಮಧ್ಯಾಹ್ನ ಸಿದ್ದರಾಮಯ್ಯನವರು ಇಟ್ಟುಕೊಂಡಿದ್ದ ಔತಣಕೂಟಕ್ಕೆ ಹೋಗಿ ಪಕ್ಕದಲ್ಲೇ ಕೂತು ಊಟ ಮಾಡಿ, ಹೆಗಲ ಮೇಲೆ ಕೈಹಾಕಿ ಬಂದರು. ಆದರೆ ಸಿದ್ದರಾಮಯ್ಯನವರು ಕೊಟ್ಟಿದ್ದ ಆಹ್ವಾನಕ್ಕೆ ಸೌಜನ್ಯದ ಬೆಲೆಯನ್ನೂ ಕೊಡದ ಕುಮಾರಸ್ವಾಮಿ ಮುನಿಸಿಕೊಂಡು ಹೋದರು. ಇಲ್ಲಿ ಸಂದರ್ಭ ಗೆದ್ದ ರೇವಣ್ಣ ದೊಡ್ಡವರಾದರು. ಒಡಲ ತುಂಬ ಹಗೆಯನ್ನೇ ಉಂಡುಹೋದರು ಕುಮಾರಸ್ವಾಮಿ ...!
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ತಮ್ಮಿಬ್ಬರ ನಡುವೆ ಮಡುಗಟ್ಟಿದ್ದ ವೈಯಕ್ತಿಕ ದ್ವೇಷವನ್ನು ಮಾತಿನ ರೂಪದಲ್ಲಿ ಕಕ್ಕಿದ ಕುಮಾರಸ್ವಾಮಿಯವರಾಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ರಾಜ್ಯ ವಿಧಾನಸಭೆಯ ನಡಾವಳಿಯ ಇತಿಹಾಸ ಗೊತ್ತಿಲ್ಲದವರೇನೂ ಅಲ್ಲ. ಒಬ್ಬರ ವಿರುದ್ಧ ವಿಷವನ್ನೇ ಕಟ್ಟಿಕೊಂಡವರು ಇಲ್ಲಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದಾರೆ. ಆದರೆ ಎಲ್ಲಿಯೂ ಟೀಕೆ-ಟಿಪ್ಪಣಿ ವೈಯಕ್ತಿಕ ನೆಲೆಗಟ್ಟಿಗೆ ಬಂದು ನಿಂತಿದ್ದಿಲ್ಲ.
ಹಿಂದೆ ಎನ್.ಧರ್ಮಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದರು. ಮುಖ್ಯಮಂತ್ರಿಯಾದ ನಂತರ ಅಧಿಕಾರ ನಿರ್ವಹಣೆಯಲ್ಲಿ ಯಡಿಯೂರಪ್ಪ ಎಷ್ಟೇ ಎಡವಿದರೂ ಪ್ರತಿಪಕ್ಷ ನಾಯಕನ ಸ್ಥಾನಗೌರವಕ್ಕೆ ಎಂದೂ ಚ್ಯುತಿ ಬರದಂತೆ ನೋಡಿಕೊಂಡಿದ್ದರು. ಸರ್ಕಾರದ ವಿರುದ್ಧ ಗುಡುಗುವ ಸನ್ನಿವೇಶ ಬಂದಾಗ ಎಷ್ಟೇ ಕೂಗಾಡಿದರೂ ಸದನದೊಳಗೆ ಟೀಕೆಯ ವ್ಯಾಪ್ತಿಯನ್ನು ವೈಯಕ್ತಿಕತೆಯ ಮಟ್ಟಕ್ಕೆ ವಿಸ್ತರಿಸಿರಲಿಲ್ಲ. ಅಷ್ಟೇ ಏಕೆ ತಮ್ಮ ಕ್ಷೇತ್ರದ ಮತ್ತು ಜನತೆಯ ಸಮಸ್ಯೆ ವಿಚಾರ ಬಂದಾಗ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿವಾಸಕ್ಕೆ ತೆರಳಿ ಅಗತ್ಯ ಕೆಲಸಗಳನ್ನು ಮಾಡಿಸಿಕೊಂಡ ಉದಾಹರಣೆ ಇತ್ತು.
ಅದೇ ರೀತಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಖುದ್ದು ಕುಮಾರಸ್ವಾಮಿಯವರೇ ಬಂಡೆದ್ದು ಕೆಡವಿದರು. ಮಾತ್ರವಲ್ಲ ಬಿಜೆಪಿ ಬೆಂಬಲವನ್ನು ಪಡೆದು ಮುಖ್ಯಮಂತ್ರಿಯೂ ಆದರು. ಅಧಿಕಾರ ಕಳೆದುಕೊಂಡ ಧರ್ಮಸಿಂಗ್ ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸಬೇಕಾಯಿತು. ತಮ್ಮ ಅಧಿಕಾರ ಪತನಕ್ಕೆ ನಡೆದ ಪ್ರಯತ್ನವನ್ನು ಬಿಡಿಸಿಡುವುದಕ್ಕೆ ಧರ್ಮಸಿಂಗ್ ಅವರಿಗೆ ಅವಕಾಶ ಸಾಕಷ್ಟಿತ್ತು. ಆದರೆ ಧರ್ಮಸಿಂಗ್ ತಮ್ಮ ಸ್ಥಾನ ಬಲವನ್ನು ಕುಮಾರಸ್ವಾಮಿ ಅವರ ವಿರುದ್ಧದ ಅಸ್ತ್ರವಾಗಿ ಬಳಸಿಕೊಳ್ಳಲಿಲ್ಲ.ಅದಕ್ಕೆ ಬದಲಾಗಿ ಮುಕ್ಯಮಂತ್ರಿ ಹುದ್ದೆಗೆ ಏರಿದ ಕುಮಾರಸ್ವಾಮಿ ಅನುಗ್ರಹದಲ್ಲಿ ಏರ್ಪಾಟು ಮಾಡಿದ್ದ ಪೂಜೆಗೆ ತೆರಳಿ ಅಲ್ಲಿಯೇ ಊಟ ಮಾಡಿ ಅಭಿನಂದಿಸಿದ್ದರು.
ಅಷ್ಟೇ ಏಕೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ಅಲಂಕರಿಸಿದ ಶಾಂತವೇರಿ ಗೋಪಾಲಗೌಡರಾಗಲಿ, ಕೆ.ಎಚ್.ರಂಗನಾಥ್ ಅವರಾಗಲಿ ಸದನದಲ್ಲಿ ಮಾತಿಗೆ ಎದ್ದು ನಿಂತರೆ ಖುದ್ದು ಮುಖ್ಯಮಂತ್ರಿಯೇ ಕುಳಿತುಕೊಂಡು ಅವರ ಮಾತುಗಳಿಗೆ ಕಿವಿಯಾಗುತ್ತಿದ್ದರು. ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ನಿಶ್ಶಬ್ಧ ಸದನದಲ್ಲಿ ನಿರ್ಮಾಣವಾಗುತ್ತಿತ್ತು. ಇವೆಲ್ಲವೂ ಸಂಸದೀಯ ನಡಾವಳಿಯ ಮೇರು ಉದಾಹರಣೆಗಳು. ಏಕೆಂದರೆ ಅವರೆಲ್ಲರಿಗೂ ಅಧಿಕಾರ ಕಳೆದುಕೊಂಡೆ ಎಂಬ ನೋವು ಹಾಗೂ ಪರಿಸ್ಥಿತಿಯನ್ನು ಮೀರಿ ನಿಲ್ಲುವ ಮನೋಸ್ಥೈರ್ಯವಿತ್ತು. ಅಷ್ಟೇ ಏಕೆ ಹೊರ ನೋಟಕ್ಕೆ ಸ್ನೇಹದ ಲೇಪ ಬಳಿದುಕೊಂಡರೂ, ಒಳಗೆ ಅಸಮಾಧಾನದ ಕುದಿ ಇರಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಜೀವನದಲ್ಲಿ ಪರಸ್ಪರ ಟೀಕೆಗೆ ಇಳಿದ ದೃಷ್ಟಾಂತವೇ ಸಿಗುವುದಿಲ್ಲ.
ಆದರೆ ಕಳೆದ ಬಜೆಟ್ ಅಧಿವೇಶನದಲ್ಲಿ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಈ ಸಂಯಮದ ಗೆರೆಯನ್ನು ಯಾವ ಮುಜುಗರವೂ ಇಲ್ಲದೇ ಮೀರಿ ಬಿಟ್ಟರು. ಅಂತರಾಳದಲ್ಲಿ ಕಟ್ಟಿಕೊಂಡ ವೈರತ್ವದ ಲಾವಾರಸವನ್ನು ಮನಸೋ ಇಚ್ಛೆ ಚೆಲ್ಲಿದರು. ಸನ್ನಿವೇಶವನ್ನು ಸಮಾಧಾನದಿಂದ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾದ ಇಬ್ಬರೂ ಸದನ ಕಲಾಪದ ಗೌರವವನ್ನೇ ಕುಗ್ಗಿಸಿದರು.

ಲಗೋರಿ: ಕೆಲವೊಮ್ಮೆ ತಮ್ಮ ಮೂಗನ್ನು ತಾವೇ ಕುಯ್ದುಕೊಂಡು ಅಂದಗೆಡಿಸಿಕೊಳ್ಳಬಹುದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.