ಮಂದ ಬೆಳಕಿನ ಚಿತ್ರ ಯಶೋಗಾಥೆ
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾರರ್ ಸಿನಿಮಾಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ಆದರೆ, ಹಿಟ್ ಕೊಟ್ಟಿರುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಹಾರರ್ ಚಿತ್ರಗಳ ಸಾಲಿಗೆ ಸೇರಲಾಗಿದೆ...

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾರರ್ ಸಿನಿಮಾಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ಆದರೆ, ಹಿಟ್ ಕೊಟ್ಟಿರುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಹಾರರ್ ಚಿತ್ರಗಳ ಸಾಲಿಗೆ ಸೇರಲಾಗಿದೆ ಎನ್ನಲಾಗುತ್ತಿದ್ದ ಯಶೋಗಾಥೆ ಚಿತ್ರ ಬಿಡುಗಡೆಗೊಂಡಿದ್ದು, ಜನರ ಮನಗೆಲ್ಲುವಲ್ಲಿ ಸೋತಿದೆ.
ಸ್ವಾತಂತ್ರ್ಯಕ್ಕೂ ಮೊದಲು ನಡೆದ ಘಟನೆಯನ್ನಾಧರಿಸಿ ನಿರ್ದೇಶಕ ವಿನೋದ್ ಜೆ.ರಾಜ್ ಅವರು ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ತೆರಳಿದ ಸಹೋದರರಿಬ್ಬರ ಪತ್ನಿಯರು ದಟ್ಟವಾದ ಕಾನನದ ನಡುವಿನ ಒಂಟಿ ಮನೆಯಲ್ಲಿ ಭಯ ಹಾಗೂ ಆತಂಕದಲ್ಲಿ ಜೀವನ ನಡೆಸುವುದನ್ನು ಚಿತ್ರದ ಮೊದಲ ಭಾಗದಲ್ಲಿ ತೋರಿಸಲಾಗಿದೆ.
ಪುರಾತನ ಒಂಟಿ ಮನೆಯೊಂದರಲ್ಲಿ ತ್ರಿವೇಣಿ (ಮಾನಸಾ ಜೋಶಿ )ಮತ್ತು ಮೈದುನನ ಹೆಂಡತಿ ರಾತಿ (ಪವಿತ್ರಾ, ಬೆಳ್ಳಿಯಪ್ಪ) ಜೊತೆಯಲ್ಲಿ ವಾಸವಿರುತ್ತಾರೆ. ಗಂಡಂದಿರು ಸ್ವಾತಂತ್ರ್ಯ ಹೋರಾಟಕ್ಕೆ ಹೋಗಿ ಮರಳಿ ಬರುವುದಿಲ್ಲ. ಅವರನ್ನು ಕಾಯುತ್ತಲೇ, ಗಂಡು ದಿಕ್ಕಿಲ್ಲದೆ, ಮಹಿಳೆಯರು ಸಂಕಷ್ಟದಲ್ಲಿ ಕಾಲ ಕಳೆಯುವ ಮೂಲಕ ಚಿತ್ರದ ಕಥೆ ಸಾಗುತ್ತದೆ.
ಚಿತ್ರದ ಹೀಗೆ ಕಥೆ ಸಾಗುತ್ತಿದ್ದಂತೆ ಮಧ್ಯೆ ಮನೆಯಲ್ಲಿ ಅಸ್ವಾಭಾವಿಕ ಚಟುವಟಿಕೆಗಳು ನಡೆಯಲು ಆರಂಭವಾಗುತ್ತದೆ. ಇದರ ಮಧ್ಯೆಯೇ ಸಂಗೀತ ಕಲಿಯಲು ನಾರಾಯಣ ಎಂಬ ಬಾಲಕನೊಬ್ಬನ ಎಂಟ್ರಿಯಾಗುತ್ತದೆ. ಕುತೂಹಲ ಹಾಗೂ ಸ್ವಾರಸ್ಯವಿಲ್ಲದ ದೃಶ್ಯಗಳೇ ತುಂಬಿರುವ ಇಡೀ ಚಿತ್ರ 2 ಗಂಟೆ ಎಳೆದಂತಹ ಅನುಭವವಾಗುತ್ತದೆ. ಇನ್ನು ಗೊಂದಲ ಸೃಷ್ಟಿಸುವ ಮಾತುಗಳು ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಕಷ್ಟವೆನಿಸುತ್ತದೆ.
ಚಿತ್ರದ ಬಹುತೇಕ ದೃಶ್ಯಗಳು ವಿದ್ಯುತ್ ಇಲ್ಲದ ಮನೆಯಲ್ಲಿ ದೀಪದ ಬೆಳಕಲ್ಲಿ ಸಾಗುವುದರಿಂದ ನೆರಳು ಬೆಳಕಿನಾಟದಲ್ಲಿ ಛಾಯಾಗ್ರಹಣ ಮೆಚ್ಚುಗೆ ಗಳಿಸಿದರೂ ಕೆಲವೆಡೆ ಅಸ್ಪಷ್ಟವಾಗಿದೆ ಎನ್ನಬಹುದು. ಛಾಯಾಗ್ರಹಣದಲ್ಲಿ ಚಿತ್ರ ಒಳ್ಳೆಯ ಅಂಕ ಪಡೆದರೂ, ಕಥೆಯನ್ನು ಹೇಳುವುದರಲ್ಲಿ ವಿಫಲವಾಗಿದೆ.
ಇನ್ನು ಪಾತ್ರದ ಬಗ್ಗೆ ಹೇಳುವುದಾದರೆ, ಮಾನಸಾ ಜೋಶಿ, ಪವಿತ್ರ ಬೆಳ್ಳಿಯಪ್ಪ, ಲೋಹಿತ್ ಸೂರ್ಯ ಮತ್ತು ತಿವಿಶಾ ಅಜಪ ತಂದೂರ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಸ್ತ್ರ ವಿನ್ಯಾಸಕಿ ರೋಶ್ನಿ ದಿನಕರ್ ಅವರು ಸ್ವಾತಂತ್ರ್ಯ ಪೂರ್ವ ಶೈಲಿ ವಿನ್ಯಾಸದಲ್ಲಿ ಗೆದ್ದಿದ್ದಾರೆ. ನಿರ್ದೇಶಕ ವಿನೋದ್ ಅವರು ಚಿತ್ರದ ಕಥೆ ಹಾಗೂ ದೃಶ್ಯಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಯಶೋಗಾಥೆ ಉತ್ತಮ ಚಿತ್ರವಾಗಿರುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


