ತೆಲುಗಿನಿಂದ ಬಂದ ರನ್ನ, ಕದಿಯುವನೇ ಜನರನ್ನ?
ಒಟ್ಟಿನಲ್ಲಿ ಮೂಲಕ್ಕೆ ನಿಷ್ಠವಾಗಿರುವ 'ರನ್ನ'ನ ಶ್ರೇಯಸ್ಸಾಗಲೀ-ಅಪಕೀರ್ತಿಯಾಗಲೀ 'ಅತ್ತಾರಿಂಟಿಕಿ ದಾರೇದಿ'ಗೇ ಸೇರಬೇಕು.

ಎಲ್ಲ ಸಂತೋಷದಾಯಕ ಕುಟುಂಬಗಳು ಒಂದೇ ಬಗೆ; ಪ್ರತಿ ದುಃಖಿತ ಕುಟುಂಬವೂ ತನ್ನದೇ ಆದ ರೀತಿಯಲ್ಲಿ ದುಃಖದಿಂದಿರುತ್ತದೆ. ಟಾಲ್ಸ್ಟಾಯ್ ಅವರ ಜಗತ್ಪ್ರಸಿದ್ಧ ಕಾದಂಬರಿ 'ಅನ್ನಾ ಕರೆನಿನಾ'ದ ಪ್ರಾರಂಭಿಕ ಸಾಲುಗಳಿವು. ಮೂಲ ಲೇಖಕರಲ್ಲಿ ಕ್ಷಮೆ ಕೋರುತ್ತಾ ಮೇಲಿನ ಸಾಲುಗಳನ್ನು ಕನ್ನಡ ಚಿತ್ರೋದ್ಯಮಕ್ಕೆ ವಿಸ್ತರಿಸಿದರೆ "ಈ ಎಲ್ಲ ವಾಣಿಜ್ಯಾತ್ಮಕ 'ರಿಚ್' ಸಿನೆಮಾಗಳು ಒಂದೇ ಬಗೆ" ಎನ್ನಬಹುದು; ನಾಯಕನಟನಿಗೆ ಅಪರಿಮಿತ ಶಕ್ತಿ; ನಾಯಕ ನಟ ಅತೀವ ಜಾಣ; ನಾಯಕ ನಟ ತೀರಾ ಒಳ್ಳೆಯವನು; ನಾಯಕ ನಟಿಗೆ ಹೀರೋ ನೋಡಿದಾಕ್ಷಣ ಪ್ರೀತಿ ಹೂಂಕರಿಸುತ್ತದೆ; ಹೀರೋಗೆ ರಿಯಾಲಿಟಿ ಶೋಗಳಲ್ಲಿ ನೀಡುವಂತೆ ಒಂದು ಟ್ಯಾಸ್ಕ್ ನೀಡಲಾಗುತ್ತದೆ;ಎಲ್ಲ ತೊಂದರೆಗಳನ್ನು ಸುಲಭವಾಗಿ ನೀವಳಿಸಿ ನಿವಾರಿಸಿ ಒಂದು ಸಂತೋಷದ ಅಂತ್ಯ ನೀಡಿ ಸಿನೆಮಾಗೆ ನಾಂದಿ ಹಾಡುತ್ತಾನೆ; ತೆಲುಗು ಸಿನೆಮಾ 'ಅತ್ತಾರಿಂಟಿಕಿ ದಾರೇದಿ' ಸಿನೆಮಾದ ರಿಮೇಕ್ ಈ ವಾರ ಬಿಡುಗಡೆಯಾಗಿರುವ 'ರನ್ನ' ಕೂಡ ಇದಕ್ಕೆ ಭಿನ್ನವಾದುದೇನಲ್ಲ.
ಅಪಹರಣಗೊಂಡಿರುವ ರುಕ್ಮಿಣಿ (ರಚಿತಾ ರಾಮ್) ಅಪಹರಣಕಾರರಿಗೆ ಕಥೆ ಹೇಳುತ್ತಾ ಚಲನಚಿತ್ರ ಆರಂಭವಾಗುತ್ತದೆ. ಜ್ಯೂರಿಕ್ ನಲ್ಲಿ ಸಾವಿರಾರು ಕೋಟಿಗಳ ಒಡೆಯ ಮನನೊಂದಿರುವ ತಾತ(ಪ್ರಕಾಶ್ ರೈ) ತನ್ನ ಮೊಮ್ಮಗ ಭಾರ್ಗವನಿಗೆ (ಸುದೀಪ್) ಮುನಿಸಿನಿಂದ ದೂರವಾಗಿರುವ ತನ್ನ ಮಗಳ (ಭಾರ್ಗವನ ಸೋದರತ್ತೆಯನ್ನು) ಹುಟ್ಟುಹಬ್ಬದ ದಿನ ಕರೆತಂದು ತನ್ನ ಮುಂದೆ ನಿಲ್ಲಿಸುವಂತೆ ದೀನನಾಗಿ ಬೇಡಿಕೊಳ್ಳುತ್ತಾನೆ. ಈ ಟ್ಯಾಸ್ಕ್ ಸಿಕ್ಕಿದಾಕ್ಷಣ ತನ್ನ ಸುತ್ತಲೂ ಕೆಲಸಗಾರರ ಪಟಾಲಂ ಕಟ್ಟಿಕೊಂಡು ಭಾರ್ಗವ ತಾನೆಂದೂ ನೋಡದ ಬೆಂಗಳೂರಿಗೆ ಬಂದಿಳಿಯುತ್ತಾನೆ. ತನ್ನತ್ತೆ(ಮಧೂ) ಮತ್ತು ಮಾವ (ದೇವರಾಜ್) ಮನೆ ಹೊಕ್ಕಲು ದಾರಿ ಬೇಕಲ್ಲ! ಕಾರ್ ಚಾಲಕ ಎಂದು ತನ್ನ ನಿಜವಾದ ಗುರುತನ್ನು ಮರೆಮಾಚಿ ಮನೆ ಸೇರಿಕೊಳ್ಳುತ್ತಾನೆ. ಅತ್ತೆಗೆ ಇಬ್ಬರು ಮಕ್ಕಳು. ಇಂದಿರಾ(ಹರಿಪ್ರಿಯಾ) ಮತ್ತು ರುಕ್ಮಿಣಿ(ರಚಿತಾ ರಾಮ್). ಇಂದಿರಾಳ ಪ್ರಿಯಕರನೊಂದಿಗೆ ಮದುವೆಯಾಗುವಂತೆ ಭಾರ್ಗವ ನೋಡಿಕೊಳ್ಳುತ್ತಾನೆ. ತನ್ನ ಸಾಲಗಾರ ಸೋದರತ್ತೆಯ ಹೋಟೆಲ್ ಒಂದನ್ನು ಉಳಿಸಿಕೊಡುತ್ತಾನೆ. ಹೀಗೆ ಹಲವಾರು ಸಾಹಸಗಳು ಮತ್ತು ಪ್ರಣಯ ಹಾಡುಗಳ ನಡುವೆ ಕಥೆಗೊಂದು ಧನಾತ್ಮಕ ಅಂತ್ಯ ಕಾಣಿಸುತ್ತಾನೆ!
ಕುಟುಂಬಗಳನ್ನು ಒಂದು ಮಾಡುವ ಅಸಂಖ್ಯಾತ ಸಿನೆಮಾಗಳನ್ನು ಪ್ರೇಕ್ಷಕ ನೋಡದೆ ಏನಿಲ್ಲ. ಇಲ್ಲಿ ಕೆಲವನ್ನೇ ತಕ್ಷಣಕ್ಕೆ ನೆನಪಿಸಿಕೊಳ್ಳುವುದಾದರೆ ಗಣೇಶ್ ನಟನೆಯ 'ಅರಮನೆ', ಸುದೀಪ್ ನಟನೆಯದ್ದೇ '73, ಶಾಂತಿ ನಿವಾಸ' ಇವೆಲ್ಲ ಇದೇ ರೀತಿಯ ಕಥೆಗಳಲ್ಲವೇ! ಇನ್ನು ತನ್ನ ಗುರುತು ಬದಲಿಸಿಕೊಂಡು ಮನೆ ಹೊಕ್ಕುವ ಕಥೆಗಳಿಗೂ ಕಮ್ಮಿಯಿಲ್ಲ. ಇವುಗಳ ನಡುವೆ 'ರನ್ನ' ಸಿನೆಮಾದಲ್ಲಿ ವಿಶೇಷತೆಯನ್ನು ಹುಡುಕ ಹೊರಟರೆ ನಿರಾಸೆ ಕಟ್ಟಿಟ್ಟಬುತ್ತಿ. ಆದರೆ 'ರನ್ನ' ಸಿನೆಮಾದಲ್ಲಿ ತುಂಬಿ ತುಳುಕುವುದು ಸುದೀಪ್ ಮತ್ತು ಅವರ ಹೀರೋಯಿಸಂ. ರನ್ನ ಕೈ ಎತ್ತಿದರೆ ಎದುರಾಳಿಯ ಮೂಳೆಗಳು ಲಟಲಟ ಮುರಿದುಹೋಗುತ್ತವೆ. ಐದಾರು ಜನ ಮೆಷಿನ್ ಗನ್ ಹಿಡಿದು ಸುತ್ತುವರೆದರೂ 'ರನ್ನ'ನ ಕಬ್ಬಿಣದ ದೇಹದ ಮುಂದೆ ಅವರೆಲ್ಲ ಇಂಗು ತಿಂದ ಮಂಗಗಳೇ! ಇಂತಹ ಸಮಯದಲ್ಲಿ ಮಕ್ಕಳು ನೋಡುವ 'ಆನಿಮೇಟೆಡ್ ಸಿನೆಮಾ' ನೆನಪಿಗೆ ಬಂದರೆ ಅದು 'ರನ್ನ'ನ ಹೆಚ್ಚುಗಾರಿಕೆ. ಇನ್ನು ಸಂಭಾಷಣೆಯಂತು ವರ್ಣಿಸಲಸಾಧ್ಯ. ಸದಾ ಆಳುಗಳನ್ನು ಸುತ್ತುವರೆದಿರುವ, ವಿಮಾನಗಳಲ್ಲೇ ಚಲಿಸುವ 'ರನ್ನ' ತನ್ನ ಎದುರಾಳಿಗೆ 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಎಂಬ ತಾತ್ವಿಕ ಸಾಲುಗಳನ್ನು ಲೀಲಾಜಾಲವಾಗಿ ಉದುರಿಸುತ್ತಾನೆ. ತನ್ನ ಆಳುಗಳಿಗಂತೂ ಕೈತುರಿಕೆಯಾದಾಗೆಲ್ಲಾ ಸುಮ್ಮನೆ ಕಪಾಳಕ್ಕೆ ಹೊಡೆಯುತ್ತಿರುತ್ತಾನೆ. ಹೀಗೆ 'ರನ್ನ'ನ ಹೆಚ್ಚುಗಾರಿಕೆಯೇ ತುಂಬಿದ ಸಿನೆಮಾದಲ್ಲಿ, ಸಿನೆಮಾದ ನಾಯಕ ನಟಿಯರು ಮೂಕಿಯರೇನೋ ಎಂದು ಸಂಶಯ ಬರುವಷ್ಟು ಕಡಿಮೆ ಸಂಭಾಷಣೆ ಇದೆ. ಸಾಧು ಕೋಕಿಲಾ ಸಿನೆಮಾದ ದ್ವಿತೀಯಾರ್ಧಕ್ಕೆ ಒಳಹೊಕ್ಕಿ, ಸಿನೆಮಾದ ಅವಧಿಯನ್ನು ೧೫-೨೦ ನಿಮಿಷ ಹೆಚ್ಚಿಸಲು ಕಠಿಣ ಶ್ರಮವಹಿಸಿದ್ದಾರೆ. ಅವಿನಾಶ್, ಪ್ರಕಾಶ್ ರೈ, ತಬಲಾ ನಾಣಿ, ಚಿಕ್ಕಣ್ಣ, ಶರತ್ ಲೋಹಿತಾಶ್ವ, ದೇವರಾಜ್, ಮಧೂ ಹೀಗೆ ದೊಡ್ಡ ತಾರಾಗಣ ಅವರಿಗೆ ನೀಡಿರುವ ಕೆಲಸವನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ. ಅದರಲ್ಲಿ ಚಿಕ್ಕಣ್ಣ ತನ್ನ ಹಾಸ್ಯದಿಂದ ಬಹುಶಃ 'ರನ್ನ'ನ ಹೀರೋಯಿಸಂಗೆ ತುಸು ತಡೆ ಹಾಕಿದ್ದಾರೆ. ಬಹುಷಃ 'ರನ್ನ'ನ ಹೊಡೆದಾಟ ಮತ್ತು ಸಂಭಾಷಣೆಗಳಿಂದ ರೋಮಗಳನ್ನು ನಿಮಿರಿಸಿ ಕೂರುವ ಸುದೀಪ್ ಅಭಿಮಾನಿ ಬಳಗ, ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಅತ್ತು ಕರೆದರೂ ಒಂಚೂರು ವಿಚಲಿತರಾದಂತೆ ಕಾಣುವುದಿಲ್ಲ. ಹರಿಕೃಷ್ಣರ ಅಬ್ಬರದ ಸಂಗೀತ 'ರನ್ನ'ನಿಗೆ ಇನ್ನು ಹೆಚ್ಚು ಧಂ ತುಂಬುತ್ತದೆ. ಪ್ರಾರಂಭಿಕ ಹಾಡು ಹಿಂದಿ ಸಿನೆಮಾ 'ಕಂಪನಿ'ಯ ಒಂದು ಹಾಡನ್ನು ನೆನಪಿಸಿದರೆ ಮತ್ತೊಂದು ಹಾಡು ಅವರದ್ದೇ ಸಂಗೀತ ನಿರ್ದೇಶನದ 'ವಾಸ್ತುಪ್ರಕಾರ'ದ ಹಾಡೊಂದನ್ನು ನೆನಪಿಸುತ್ತದೆ. ಹೀಗೆ ತೆಲುಗಿನ ಅಬ್ಬರವನ್ನು ಕನ್ನಡದ ಅಬ್ಬರಗಳನ್ನು ಒಗ್ಗೂಡಿಸಿ ಕನ್ನಡ ಚಿತ್ರೋದ್ಯಮದ ದಾರಿಗೆ ಈ ತೆಲುಗು ಸಿನೆಮಾವನ್ನು ನಿಷ್ಠೆಯಿಂದ ಪಳಗಿಸಿರುವ ನಿರ್ದೇಶಕ ನಂದಕಿಶೋರ್ ಸುದೀಪ್ ಅಭಿಮಾನಿಗಳನ್ನು ಬಡಿದೆಬ್ಬಿಸಿದ್ದಾರೆ!
ಜಗಳ-ಕಾದಾಟ ನಮ್ಮ ಸಂಸ್ಕೃತಿಯ ಭಾಗ. ರಸ್ತೆಯಲ್ಲಿ ನಡೆಯುವ ಒಂದು ಸಣ್ಣ ಪುಟ್ಟ ಅಪಘಾತಕ್ಕೂ ಹೊಡೆದಾಟಕ್ಕೆ ಇಳಿದುಬಿಡುವ ದೇಶ ನಮ್ಮದು. ಅಧಿಕಾರ ಮತ್ತು ದರ್ಪ ಇದ್ದವನಂತೂ ಕೇಳುವುದೇ ಬೇಡ. ಎಲ್ಲ ಸಮಯದಲ್ಲೂ ಅವನೇ ಸರಿ. ಹೀಗೇಕೆ ಎಂದು ಚರ್ಚಿಸಲು ಇದು ಸಮಾಜ ಶಾಸ್ತ್ರ ಚಿಂತನೆಯ ವೇದಿಕೆಯಲ್ಲ. ಆದರೂ ಸಿನೆಮಾಗಳಲ್ಲಿ ತನ್ನ ಕೆಲಸದ ಆಳುಗಳಿಗೆ ಮನ ಬಂದಂತೆ ಕಪಾಳಕ್ಕೆ ಹೊಡೆಯುವ ದೃಶ್ಯಗಳು ಇಂತಹ ಕೆಟ್ಟ ನೆಲ ಸಂಸ್ಕೃತಿಗೆ ಹೆಚ್ಚಿನ ಪುಷ್ಟಿ ನೀಡುತ್ತಾ ಹೋಗುತ್ತದೆ. ರಿಮೇಕ್ ನಂತಹ ಶ್ರೇಷ್ಠ-ಅದ್ಭುತ ಸೃಜನಶೀಲ ಕೆಲಸ ಮಾಡುವಾಗಲಾದರೂ ಇಂತಹ ದೃಶ್ಯಗಳನ್ನು ಕೈಬಿಡಬಹುದು! ಒಟ್ಟಿನಲ್ಲಿ ಮೂಲಕ್ಕೆ ನಿಷ್ಠವಾಗಿರುವ 'ರನ್ನ'ನ ಶ್ರೇಯಸ್ಸಾಗಲೀ-ಅಪಕೀರ್ತಿಯಾಗಲೀ 'ಅತ್ತಾರಿಂಟಿಕಿ ದಾರೇದಿ'ಗೇ ಸೇರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


