ಸಿನಿಮಾ ವಿಮರ್ಶೆ

ಬೈ ಟೂ ಟೀ ಕೊಡ್ರಪ್ಪಾ....

ಬೆಳಗ್ಗೆ ಎದ್ದ ತಕ್ಷಣ, 'ಲೇ ಕಾಫಿಗಿಡೇ' ಎನ್ನುವ ಕಾಫಿ ಡೇ ಹುಡುಗ ಮತ್ತು ಅವನ ಹೆಂಡತಿಯ ಕಥೆ 'ಕಾಫಿ ವಿತ್ ಮೈ ವೈಫ್‌' ಚಿತ್ರದ್ದು.

ಬೈ ಟೂ ಟೀ ಕೊಡ್ರಪ್ಪಾ....
Published On :

ಬೆಳಗ್ಗೆ ಎದ್ದ ತಕ್ಷಣ, 'ಲೇ ಕಾಫಿಗಿಡೇ' ಎನ್ನುವ ಕಾಫಿ ಡೇ ಹುಡುಗ ಮತ್ತು ಅವನ ಹೆಂಡತಿಯ ಕಥೆ 'ಕಾಫಿ ವಿತ್ ಮೈ ವೈಫ್‌' ಚಿತ್ರದ್ದು. ಆದರೆ ಮೊದಲರ್ಧದ ಕತೆಯಲ್ಲಿ ಕಾಫಿ ಡೇಗಿಂತ ಕಾಫಿ 'ನೈಟ್‌' ಸಮಯವೇ ಹೆಚ್ಚು. ಡೇ ಅಂಡ್ ನೈಟ್ ಕಾಫಿತೋಟದಲ್ಲೇ ವಿಹರಿಸುವ ದಂಪತಿ, ಬೈಟು ಕಾಫಿ ನಡುವಿನ ಸರಸದಲ್ಲಿರುವ ಅವರ ಕಾಫಿ 'ಬೈಟ್‌'ಗಳು, ಕಾಫಿ ವಿತ್ 'ಮೈ' ವೈಫ್ ಎಂಬ ಹೆಸರಿಗೆ ತಕ್ಕಂತೆ ಬಿಸಿಬಿಸಿ ಎನಿಸಿದರೂ 'ಸಿಂಧೂ ಕಣಿವೆಯಲ್ಲಿ ನಾಗರೀಕತೆ'ಯ ಮಿತಿ ಮೀರದ ದೃಶ್ಯಗಳು, ಆರಂಭದಲ್ಲಿ ನವಿರಾದ ಕಾಫಿ ಪರಿಮಳದಂತೆ ಮೂಗಿಗೆ ಬಡಿದರೂ ನಂತರ ಪ್ರೇಕ್ಷಕ, ಮೂರ್ ದಿನದಿಂದ ಕಾಫಿನೇ ಕುಡಿದಿಲ್ಲದಿರೋರ್ ಥರಾ ಮುಖ ಮಾಡಿಕೊಂಡ್ರೆ ಅದಕ್ಕೆ ಕಾರಣ ಯಾರಾದ್ರೂ 'ಕಾಫಿಗೋಗೋಣ್ವಾ?' ಅಂತ ಕರೆದ್ರೆ ಹುಷಾರಾಗಿರಬೇಕು ಎನ್ನುವಂತೆ ಮಾಡುವ ಚಿತ್ರದ ಕಥೆ ಮತ್ತು ನಿರೂಪಣೆ. ಚಿತ್ರದಲ್ಲಿ ಒಂದಿಷ್ಟು ಮಸಾಲೆ ಇದ್ದರೂ ಸಾದಾ ಆಗಿರುವ ಕಾಫಿ ಸ್ವಾದ.
ಇದು ಎಲ್ಲಿಂದಲೂ ಕಾಪಿ ಮಾಡದ ರಿಮೇಕ್ ಚಿತ್ರ ಅಲ್ಲ ಎಂಬುದೊಂದೇ ಕಾಫಿ ವಿತ್ ಮೈ ವೈಫ್ ಚಿತ್ರದ ಹೆಗ್ಗಳಿಕೆ. ಚಿತ್ರದ ಸೆಕೆಂಡ್ ಹಾಫ್ ಅಂತೂ ಪಾ.ಪ. ಪಾಂಡುನಂಥ ಸೀರಿಯಲ್‌ಗೆ ಒಂದು ಎಪಿಸೋಡ್ ಆಗಬಹುದಿತ್ತು ಅಷ್ಟೆ.  ಈ ಗಂಡಸರ್ಯಾಕೆ ಬೆಡ್‌ರೂಮಲ್ಲಿ 'ಅದು' ಮುಗಿದ ತಕ್ಷಣವೇ ಎದ್ದು ಹೋಗ್ತಾರೆ ಎಂದು ಗಂಟಲಿಗೂ ನಾಲಿಗೆಗೂ ನಡುವೆ ಫಿಲ್ಟರ್ ಇಲ್ಲದೆ ನೇರವಾಗಿ ದೂರುವ ನಾಯಕಿ, ಗಂಡನಿಗೆ ಫಿಲ್ಟರ್ ಕಾಫಿ ಮಾಡಿಕೊಡುತ್ತಾಳೆ. ಆದರೆ, ಪುಣ್ಯಕ್ಕೆ, ಸಿನಿಮಾ ಮುಗಿದ ತಕ್ಷಣ ಎದ್ದು ಹೋಗುವ ಪ್ರೇಕ್ಷಕರನ್ನು, ಆಕೆ, 'ಯಾಕೆ?' ಎಂದು ಕೇಳುವುದಿಲ್ಲ.
ಆಗಷ್ಟೇ ಮದುವೆಯಾದ ಸ್ವೀಟ್ ಕಪಲ್. ಕಾಫಿ ಕಪ್ಪಲ್ ಸ್ವೀಟ್ ಜಾಸ್ತಿ ಆಯ್ತು ಅನ್ನೋ ಕಾರಣಕ್ಕೆ ಗಂಡ ಹೆಂಡತಿಯ ಕಪಾಳಕ್ಕೆ ಹೊಡೆಯುತ್ತಾನೆ. ಮೂಗಿನ ತುದಿಯಲ್ಲೇ ಇರುವ ಕೋಪದಿಂದಾಗಿ, ಸಂಸಾರ ಕೋಪದಲ್ ಕುಯ್ದುಕೊಂಡ ಮೂಗಿನಂತೆ. ಕಾಫಿ ಕೆಟಲ್‌ನಲ್ಲಿ ಹುಳಿ ಹಿಂಡಿದಂತೆ. ಗಂಡನ ತಲೆ ಮೇಲೆ ಹೆಂಡತಿಯ ಕಾಫಿ ಹೊಯ್ದಾಟ, ಆಮೇಲೆ ಇಬ್ಬರ ಎಮೋಶನಲ್ ಹೊಯ್ದಾಟ. ಕಾಫಿ ಸರಿ ಇಲ್ಲ ಎಂದು ಕೋಪಿಷ್ಠನಾಗುವ ಗಂಡನನ್ನು ನೋಡಿ, ಈ ಕಾಫಿ ಸಹವಾಸಕ್ಕಿಂತ 'ಚಹ'ಬಾಳ್ವೆಯೇ ವಾಸಿ ಎಂದು ಮುನಿಸಿಕೊಳ್ಳುತ್ತಾಳೆ ನಾಯಕಿ. ಈ ಮಧ್ಯೆ ಈಕೋ ಕಾಫಿ ಕಂಪನಿಯ ಕಿರಿಕಿರಿ. ಕೊನೆಗೆ ಗಂಡ, ಹೆಂಡಿರ ಸಂಬಂಧಕ್ಕೆ ಎಕೋ ಫ್ರೆಂಡ್ಲೀ ಅಲ್ಲ ಎಂಬುದನ್ನು ಸುಳ್ಳು ಮಾಡುವ ಕ್ಲೈಮ್ಯಾಕ್ಸ್‌ವರೆಗಿನ ಕಥೆಯಲ್ಲಿ ವಾಸ್ತವಿಕತೆಯ ಅಂಶಗಳು ಕಡಿಮೆ. ಗಂಡ ಹೆಂಡಿರ ಕಾಫಿ ಜಗಳಕ್ಕೆ ಎರಡೂ ಫ್ಯಾಮಿಲಿಗಳು ಕೋಳಿ ಜಗಳ ಆಡುವುದು ಅತಿರೇಕ.
ಇಲ್ಲಿ ನಾಯಕ ನಾಯಕಿಯನ್ನು ಬಿಟ್ಟರೆ ಉಳಿದವರನ್ನು ಗುರುತು ಹಿಡಿಯುವುದು ಕಷ್ಟ. ದ್ವಿತೀಯಾರ್ಧದಲ್ಲಿ ಬರುವ ವಿಲನ್, ಅವನ ಹೆಂಡತಿ ಸೇರಿದಂತೆ ಅನೇಕರನ್ನು ತೆಲುಗು ಕಲಾವಿದರು ಎಂದು ಸುಲಭವಾಗಿ ಗ್ರಹಿಸಬಹುದು. ಬಹುಷಃ ಚಿತ್ರದ ತೆಲುಗು ವರ್ಷನ್‌ನಲ್ಲಿ ಪ್ರೇಕ್ಷಕ ಅವರನ್ನು ಗುರುತು ಹಿಡಿಯಬಹುದೇನೋ. ಆದರೆ ವಿಚಿತ್ರ ಎಂಬಂತೆ ಚಿತ್ರದ ಅನೇಕ ಪಾತ್ರಗಳ ಕನ್ನಡ ಡಬ್ಬಿಂಗ್‌ನಲ್ಲಿ ತೆಲುಗು ಅಕ್ಸೆಂಟ್ ಕೇಳಿಸುತ್ತದೆ. ಅಷ್ಟೇ ಅಲ್ಲದೆ, ನಾಯಕನ ರೂಮಿನ ಗೋಡೆಯ ಮೇಲಿರುವ ಸಿನಿಮಾ ತಾರೆಯರ ಫೋಟೋಗಳಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ಕನ್ನಡ, ತೆಲುಗು ಎರಡಕ್ಕೂ ಸಲ್ಲುವ ಸುದೀಪ್ ಅವರನ್ನು ಬಿಟ್ಟರೆ ಪುನೀತ್‌ರದ್ದೊಂದೇ ಅಚ್ಚ ಕನ್ನಡದ ಮುಖ. ಯಾರದ್ದೋ ಫೋನು ರಿಂಗಾದರೆ ಪವನ್ ಕಲ್ಯಾಣ್‌ರ 'ಖುಷಿ' ಎಂಬ ತೆಲುಗು ಚಿತ್ರದ ರಿಂಗ್‌ಟೋನ್ ಕೇಳಿಸುತ್ತದೆ. ಕಾಫಿಯಿಂದ ಬ್ರೇಕ್ ಇರಲಿ ಎಂಬಂತೆ ಬ್ರೇಕ್ ಇಲ್ಲದೆ ಮಾತನಾಡುವ ಕುಮುದ ಆಲ್ಕೋಹಾಲ್ ಕುಡಿದು ನಾಯಕನನ್ನು ಕಾಡುವ ಪಾತ್ರದಲ್ಲಿ ಅಭಿನಯಿಸಲು ಯತ್ನಿಸಿದ್ದಾರೆ. ಆದರೆ ಅವರು ಕುಡಿದಿಲ್ಲದಾಗಲೂ ಕುಡಿದವರಂತೆಯೇ ಮಾತನಾಡುವುದರಿಂದ ಅದೇನೂ ರಿಲೀಫ್ ಎನಿಸುವುದಿಲ್ಲ. ಕಾಫಿ ಬಾರು ಬೋರು ಎನಿಸಿದಾಗ  ಒಂದಿಷ್ಟು ಮುದ ನೀಡುತ್ತಾರಷ್ಟೆ. ಇದರ ನಡುವೆ, ಟಿವಿ ವಾಹಿನಿಯಲ್ಲಿ ನಡೆಯುವ ಚರ್ಚೆಯಲ್ಲಿ ಯಾರೂ ಕಾಫಿ ಸಪ್ಲೈ ಮಾಡುವುದಿಲ್ಲ ಎಂಬುದು ಸಮಾಧಾನ. ಹಾಗಾಗಿ ಸಿನಿಮಾ ನೋಡಿ ಮುಗಿದ ಮೇಲೆ ಪ್ರೇಕ್ಷಕ ಯೋಗರಾಜಭಟ್ಟರ ಶೈಲಿಯಲ್ಲಿ, ಕಾಫಿ ಸಹವಾಸ ಸಾಕು, 'ಬೈಟೂ ಟೀ ಕೊಡ್ರಪ್ಪಾ' ಎನ್ನುತ್ತಾನೆ.
ಅನೀಶ್, ಸಿಂಧೂ ಅವರದ್ದು ಪ್ರಬುದ್ಧ ಅಭಿನಯ. ಅಲ್ಲಲ್ಲಿ ಸ್ಟ್ರಾಂಗ್ ಕಾಫಿಯಂತೆ ಖಡಕ್ ಆಗಿರುವ ಸಂಭಾಷಣೆ ಬರೆದ ರಿಚರ್ಡ್ ಲೂಯಿಸ್ ಅವರದ್ದು ಪ್ರಸಿದ್ಧ ಅಭಿನಯ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ ಒಂದು ಸಿಂಪಲ್ ಕಾಫಿಯಂತಿದೆ.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.