ಸ್ವೀಟಿಲ್ಲ, ಬ್ಯೂಟಿನೇ ಎಲ್ಲ
ಆರು ವರ್ಷಗಳ ನಂತರ...ರಾಧಿಕಾ ಅಭಿನಯದ...ಎಂಬ ಒಕ್ಕಣೆಯೊಂದಿಗೆ ಬಿಡುಗಡೆಯಾಗಿರುವ ಚಿತ್ರ ಸ್ವೀಟಿ....

ಆರು ವರ್ಷಗಳ ನಂತರ...ರಾಧಿಕಾ ಅಭಿನಯದ...ಎಂಬ ಒಕ್ಕಣೆಯೊಂದಿಗೆ ಬಿಡುಗಡೆಯಾಗಿರುವ ಚಿತ್ರ ಸ್ವೀಟಿ. ಅದಕ್ಕೋ ಏನೋ, ಚಿತ್ರದ ಕಥೆ, ಚಿತ್ರಕತೆಗಿಂತ ನಾಯಕಿಯ ಕಾಸ್ಟ್ಯೂಮ್, ಕಲರ್ಫುಲ್ ಲೊಕೇಶನ್ಗಳಿಗೇ ಹೆಚ್ಚು ಒತ್ತು ಕೊಟ್ಟಿರುವುದರಿಂದಾಗಿ, ಪ್ರೇಕ್ಷಕರಿಗೆ ಸಿನಿಮಾದಲ್ಲಿ ಸ್ವೀಟಿಗಿಂತ ಬ್ಯೂಟಿನೇ ಜಾಸ್ತಿ ಕಂಡು ಬರಬಹುದು. ಆದರೆ ಹಾಗಂತ ಈ ಚಿತ್ರವನ್ನು ನಿರ್ದೇಶಕ ನಾಗಶೇಖರ್ ಅವರ ಶೈಲಿಯಲ್ಲಿ ಬ್ಯೂಟಿ...ಎಂದು ಉದ್ಘರಿಸುವಂತೇನೂ ಇಲ್ಲ.
ಚಿತ್ರದ ಇಂಗ್ಲಿಷ್ ಅಡಿಬರಹ ಹೇಳುವಂತೆ ಸ್ವೀಟಿ, ಸಿಂಪಲ್ ಬಟ್ ಬ್ಯೂಟಿಫುಲ್. ಹಾಗಂತೆ ಇದು ಸಿಂಪಲ್ಲಾಗೊಂದ್ ಲವ್ಸ್ಟೋರಿ ಅಲ್ಲ. ಸಿಂಗಲ್ ಆಗಿರುವ ನಾಯಕ, ಸ್ವೀಟಿ ನನ್ನ ಜೋಡಿ ಎಂದು ಹಾಡುವ ಸಣ್ಣ ಲವ್ಸ್ಟೋರಿ ಕಮ್ ಅದಕ್ಕೆ ಅಡ್ಡಿಯಾಗುವ ನಾಯಕನ ಅಮ್ಮನ ಫ್ಯಾಮಿಲಿ ಸ್ಟೋರಿ.
ಹಾಡೊಂದರಲ್ಲಿ ರಾಧಿಕಾ ಎಂಬ ಹೆಸರನ್ನು ಬಳಸಿಕೊಂಡಿರುವ ಕಾರಣಕ್ಕೋ ಏನೋ ಚಿತ್ರದ ನಾಯಕಿಯ ಬಗ್ಗೆ ಹೇಳುತ್ತ 'ಅವಳ ಹೆಸರು ರಾಧಿಕಾ. ಆದರೆ ಎಲ್ಲರೂ ಅವಳನ್ನು ಪ್ರಿಯಾ ಎಂದು ಕರೆಯುತ್ತಾರೆ' ಎಂಬ ಸಂಭಾಷಣೆ ಇಡಲಾಗಿದೆ. ರಾಧಿಕಾಳನ್ನು ಅದ್ಯಾಕೆ ಪ್ರಿಯಾ ಎಂದು ಕರೆಯುತ್ತಾರೆ? ಜೊತೆಗೆ, ರಾಧಿಕಾ, ಪ್ರಿಯಾ ಎರಡೂ ಬಿಟ್ಟು ಸ್ವೀಟಿ ಎಲ್ಲಿಂದ ಬಂದಳು ಎಂಬೆಲ್ಲಾ ಪ್ರಶ್ನೆಗಳನ್ನೆಲ್ಲಾ ಕೇಳುವಂತಿಲ್ಲ.
ಸಿರಿವಂತರ್ಯಾರೂ ಸರಿಯಿಲ್ಲ ಎನ್ನುವ ನಾಯಕಿಯನ್ನು ಪ್ರೀತಿಸುವ ನಾಯಕ ಸುಳ್ಳು ಹೇಳಿ ನಾಯಕಿಯನ್ನು ಪಟಾಯಿಸಿ ಆಮೇಲೆ ಸಾರಿ ಕೇಳುತ್ತಾನೆ. ಅದರ ನಂತರ ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ನಾಯಕನ ಅಮ್ಮನ ಕಿರಿಕ್ ಶುರುವಾಗುತ್ತದೆ. ನಾಯಕನ ತಾಯಿ, ತನ್ನ ಸೊಸೆಯಾಗುವವಳ ಜುಟ್ಟು ಹಿಡಿದು ಅವಳ ಮುಖವನ್ನು ಟೇಬಲ್ ಮೇಲಿರುವ ಕೇಕ್ಗೆ ಗುದ್ದಿಸಿದಾಗ ಕೇಕ್ನಲ್ಲಿರುವ ಸಾಸ್ ನಾಯಕಿಯ ಮುಖಕ್ಕೆ ಹತ್ತುವುದನ್ನು ನೋಡುವವರಿಗೆ 'ಸಾಸ್ ಭೀ ಕಭೀ ಬಹೂ ಥೀ' ಧಾರಾವಾಹಿ ನೆನಪಾಗಬಹುದು. ಅತ್ತೆಯನ್ನು ಪ್ರೀತಿಯಿಂದ ಕಾಣಬೇಕು ಎಂದು ಆಸೆ ಹೊತ್ತ ನಾಯಕಿಗೆ ಅತ್ತೆಯ ಡಬಲ್ ಗೇಮ್ ಗೊತ್ತಾದಾಗ, 'ಬಹೂ' ಕೆ ದೋ ರಂಗ್ ಕೂಡ ಅನಾವರಣಗೊಳ್ಳುತ್ತದೆ. ಕೊನೆಗೆ ನಾಯಕಿ, ನಾನು ನಿಮ್ಮ ಮಗನನ್ನು ಪ್ರೀತಿಸಿದೆ. ಇದರಲ್ಲಿ ಮೇರಾ ಕ್ಯಾ ಕಸೂರ್ ಎಂದಾಗ ಆಕೆಯ ಸಹಾಯಕ್ಕೆ ಸಸೂರ್ ಬರುತ್ತಾನೆ. ಆ ನಂತರ ಅತ್ತೆ ಸೊಸೆಯರು ನಾಯಕನನ್ನು ಪಾಲು ಮಾಡಿಕೊಳ್ಳುವ ವಿಚಿತ್ರ ಕಾನ್ಸೆಪ್ಟ್ನೊಂದಿಗೆ ಎಲ್ಲವೂ ಸರಿಹೋಗುತ್ತದೆ. ಹಾಗಾಗಿ, ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕಿ ಮುನ್ನಿ ಅವರ ಫೆಮಿನೈನ್ ಟಚ್ ಏನೋ ಎದ್ದು ಕಾಣುತ್ತದೆ. ನಾಯಕಿ, ಅವಳ ಅತ್ತೆ, ಮನೆ ಕೆಲಸದಾಕೆ ಹೀಗೆ ಹರೆಯದ ಹೆಣ್ಣಿನಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೆ ಕಥೆ ವಿಸ್ತಾರವಾಗಿದೆ. ಆದರೆ ಟಿವಿ ಧಾರಾವಾಹಿಗಳ ಪ್ರಭಾವ ಸ್ವೀಟಿ ಚಿತ್ರದ ಮೇಲೆ ಪರಿಣಾಮಕಾರಿಯಾಗಿ ಆಗಿರುವುದು ಗಮನಾರ್ಹ. ಹಾಗಾಗಿ ಸಿನಿಮಾ ಮುಗಿಯುವುದು ತಡವಾದಂತೆ, ಕೆಲಸ ಮುಗಿಸಿ ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದ ಟಿವಿ ಧಾರಾವಾಹಿ ನೋಡುತ್ತಿರುವ ಹೆಂಡತಿಯರನ್ನು ಕಂಡು ಗೊಣಗುವ ಗಂಡಂದಿರಂತೆ 'ಇನ್ನೂ ಮುಗಿಲಿಲ್ವಾ ನಿಮ್ದು' ಎನ್ನುತ್ತಾನೆ ಪ್ರೇಕ್ಷಕ.
ಅರ್ಜುನ್ ಜನ್ಯ ಸಂಗೀತದಲ್ಲೂ ಸಿಹಿ ಜಿನುಗುವಂಥ ಅಂಶಗಳು ಕಡಿಮೆ. ಕೆಲವು ಹಾಡುಗಳು ಗುನುಗುವಂತಿವೆ, ಇನ್ನು ಕೆಲವು ನಾಯಕ ನಾಯಕಿ ಗೊಣಗಿದಂತಿವೆ. ಅಜಯ್ ವಿನ್ಸೆಂಟ್ ಕ್ಯಾಮರಾದಲ್ಲಿ ಬಣ್ಣವೇ ಹೆಚ್ಚು. ಬಹಳ ದಿನಗಳ ನಂತರ ಕಾಣಿಸಿಕೊಂಡಿದ್ದರೂ ಕುಣಿದಾಡುವಾ ವಯಸಿದು ಎಂದು ಹಾಡುವ ರಾಧಿಕಾ ಅವರಲ್ಲಿ ಗ್ಲಾಮರ್ಗೇನೂ ಕೊರತೆ ಇಲ್ಲ. ರೊಮ್ಯಾಂಟಿಕ್ ಚಿತ್ರವಾದರೂ 'ಮುಟ್ಟದೇ ಮುದ್ದಾಡಲೇ' ಎನ್ನುವ ತಂತ್ರ ಅನುಸರಿಸಿರುವ ನಾಯಕ ಆದಿತ್ಯ, ಫ್ಯಾಮಿಲಿಯಲ್ಲಿ ಒಬ್ಬರಾಗಿ ಇದ್ದುಕೊಂಡು ಅನುಸರಿಸಿಕೊಂಡು ಹೋಗಿದ್ದಾರೆ. ಜೈಜಗದೀಶ್, ಉಮಾಶ್ರೀ, ಜೈದೇವ್, ಬಾಡಿಗೆ ಅಪ್ಪನಾಗಿ ಪರ್ಮನೆಂಟ್ ಕೆಲಸ ಸಿಕ್ಕಂತಿರುವ ಸಾಧು ಕೋಕಿಲಾ ಸ್ವೀಟಿಯ ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿದ್ದಾರೆ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


