ಕೈ ಮಸಿಯಾದರೆ ಬಾಯಿ ಮೊಸರು
ಧೋನಿ ಕ್ರಿಕೆಟ್ ಮ್ಯಾಚ್ ಸೋತ್ರೆ ಅವನ ಮನೆಗೆ ಹೋಗಿ ಕಲ್ಲು ಹೊಡೆದು ಬರ್ತೀರಲ್ಲ, ಯಾವತ್ತಾದ್ರೂ ಒಂದು ದಿನ ಒಬ್ಬ ರಾಜಕಾರಣಿಯ ಮನೆಗೆ ಕಲ್ಲು ಹೊಡೆದು ಬಂದಿದ್ದೀರಾ?

-ಧೋನಿ ಕ್ರಿಕೆಟ್ ಮ್ಯಾಚ್ ಸೋತ್ರೆ ಅವನ ಮನೆಗೆ ಹೋಗಿ ಕಲ್ಲು ಹೊಡೆದು ಬರ್ತೀರಲ್ಲ, ಯಾವತ್ತಾದ್ರೂ ಒಂದು ದಿನ ಒಬ್ಬ ರಾಜಕಾರಣಿಯ ಮನೆಗೆ ಕಲ್ಲು ಹೊಡೆದು ಬಂದಿದ್ದೀರಾ?
-ನೀವು ಸಿನಿಮಾದವರು, ಎಲ್ಲಾ ವಿಷಯದಲ್ಲೂ ಡಾ. ರಾಜ್ಕುಮಾರ್ ಅವರನ್ನು ಅನುಸರಿಸುತ್ತೀರಿ, ಆದರೆ ರಾಜಕಾರಣದ ವಿಷಯದಲ್ಲಿ ಮಾತ್ರ ಯಾಕೆ ಅಣ್ಣಾವ್ರನ್ನ ಅನುಸರಿಸೊಲ್ಲ?
ರವಿ ಶ್ರೀವತ್ಸ ಅವರ ಇಂಥ ಸಂಭಾಷಣೆ 'ಎಲೆಕ್ಷನ್' ವಿಶೇಷ. ಜೊತೆಗೆ, ಗಣ್ಯ ರಾಜಕಾರಣಿಗಳ ಸೋಗಿನಲ್ಲಿರುವ 'ಶ್ರೀ 420'ಗಳು, ಮಾಲಾಶ್ರೀ ಎಂಬ 440 ವೋಲ್ಟ್ಸ್ ಕರೆಂಟು. ಎಲೆಕ್ಷನ್ ಕಮಿಷನರ್ ಇಲ್ಲಿ ಪೊಲೀಸ್ ಕಮಿಷನರ್ ಆದಂತೆಯೂ ಕಾಣಿಸುವುದರಿಂದ ಗನ್ ಸನ್ನೆಯಲ್ಲೇ ಎಲ್ಲವೂ ನಡೆಯುತ್ತದೆ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ, ಮಾಲಾಶ್ರೀಯಂಥ ಚುನಾವಣಾಧಿಕಾರಿ ಇದ್ದರೆ ಎಲೆಕ್ಷನ್ ಎಂದರೆ ನಡುಕ. ವಿಶೇಷತೆ ಇರೋದು ಚಿತ್ರದ ಸಬ್ಜೆಕ್ಟ್ನಲ್ಲಿ. ಚುನಾವಣೆಯ ದಿನ ಘೋಷಣೆಯಾದಂದಿನಿಂದ ಫಲಿತಾಂಶ ಬರುವವರೆಗಿನ ದಿನಗಳ ನಡುವಿನ ಕಥೆ ಇದು. ಹಾಗಾಗಿ, ಎಲೆಕ್ಷನ್ ಚಿತ್ರವನ್ನು ಒಂದು ಲೆಕ್ಕದಲ್ಲಿ 'ಶಾರ್ಟ್' ಫಿಲ್ಮ್ ಎನ್ನಬಹುದು. ಇದು ಕೇವಲ ಒನ್ವೇ ರೋಡು. ಚಿತ್ರದುದ್ದಕ್ಕೂ ಮಾಲಾಶ್ರೀ ಅವರ ನಾನ್ ಸ್ಟಾಪ್ ದರ್ಬಾರ್. ಓಂಪ್ರಕಾಶ್ ಅವರ ಈ ಚಿನಕುರಳಿಯಂಥ ಚಿತ್ರಕಥೆಯಲ್ಲಿ, ಓಟಿಗಾಗಿ ಕೈ ಬಿಸಿ ಮಾಡುವ ರಾಜಕಾರಣಿಗಳೂ ಇದ್ದಾರೆ, ಮೈ ಬಿಸಿ ಮಾಡುವ ಐಟಂ ಗರ್ಲ್ಗಳೂ ಇದ್ದಾರೆ.
ಅನೇಕ ಚಿತ್ರಗಳಲ್ಲಿ ನಿಜಜೀವನದ ರಾಜಕಾರಣಿಗಳನ್ನು ತೋರಿಸುವ ಪ್ರಯತ್ನ ಆಗಿದ್ದರೂ ಅದು ಕೇವಲ ಒಂದೆರಡು ರೀಲುಗಳಿಗೆ ಸೀಮಿತವಾಗಿತ್ತು ಅಷ್ಟೆ. ಆದರೆ ಇಲ್ಲಿ ಈ ಪಾತ್ರಗಳು ಚಿತ್ರದುದ್ದಕ್ಕೂ ಇರುತ್ತಾರೆ. 'ಜೈಲಿಗೆ ಹೋದರೂ, ಚುನಾವಣೆಯಲ್ಲಿ ಗೆದ್ದರೂ' ಒಂದೇ ರೀತಿಯಲ್ಲಿ 'ಬೆರಳಾಡಿಸುವವರು', ಅವರ ಹೆಸರಿಗೆ 'ಶೋಭೆ' ನೀಡುವಂತೆ, ಹಿಂದೆ ನಿಂತು 'ಕೈಯಾಡಿಸುವವರು', ರಾಜಕಾರಣ 'ಅಂದ್ರೆಗಿನ' ಪಾದಯಾತ್ರೆ ಎಂದುಕೊಂಡವರು ಅವರಿಗೆ ಸಾಥ್ ನೀಡುವ ಸಿನಿಮಾ ನಟಿಯರು, ಮೇಡಂ ಹೇಳುವ 'ಸಿದ್ಧ' ಸೂತ್ರಗಳಿಗೆ ಬದ್ಧರಾದವರು, ಸಿನಿಮಾ ನಟಿಯನ್ನು ಮದುವೆಯಾದ 'ಮಣ್ಣಿನ ಮಕ್ಕಳು', ಮತ್ತು ಓಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುವ 'ಅಪ್ಪಂದಿರು', ಪಕ್ಷ ಬಿಟ್ಟು ಹೋದವರ 'ಪಿತೃಪಕ್ಷ' ಮಾಡುವವರು, ಎಲೆಕ್ಷನ್ ಕಮಿಷನರ್ಗಳು, ಯಾರದ್ದೋ ದುಡ್ಡುಎಲೆಕ್ಷನ್ ಜಾತ್ರೆ ಎನ್ನುವ ಸಮಯದಲ್ಲಿ ಡೀಲ್ ಕುದುರಿಸಿ ದುಡ್ಡು ಮಾಡಿಕೊಳ್ಳುವ 'ಕಮಿಷನರ್'ಗಳು ಚಿತ್ರದ ಪ್ರಮುಖ ಆಕರ್ಷಣೆ. ಆರಂಭದಿಂದಲೂ, ಇವರೆಲ್ಲರ ಮಧ್ಯೆ ನಡೆಯುವ ಮಾಲಾಶ್ರೀ ಆರ್ಭಟಕ್ಕೆ ವಿಲನ್ಗಳು ಹೆದರಿ ಉಚ್ಚೆ ಹೊಯ್ದುಕೊಳ್ಳುವಾಗ, ಪ್ರೇಕ್ಷಕರಿಗೂ ಮೂತ್ರ ವಿಸರ್ಜನೆಗೆ ಅವಕಾಶ ಕೊಡುವ ಮಧ್ಯಂತರ. ಎಲೆಕ್ಷನ್ನಲ್ಲಿ ಗೆದ್ದವರನ್ನು 'ನೀನಾರಿಗಾದೆಯೋ ಎಲೆ ಮಾನವಾ' ಎಂದು ಕೇಳದ ಜನಗಳಿಗೆ 'ಓಟು ಹಾಕಿ ಮತ್ತು ಸರಿಯಾದವರಿಗೆ ಓಟು ಹಾಕಿ' ಎನ್ನುವ 'ಕೈ ಮಸಿಯಾದರೆ ಬಾಯಿ ಮೊಸರು' ಎನ್ನುವ ಸಂದೇಶ ನೀಡಿದ್ದಾರೆ ಮಾಲಾಶ್ರೀ. ಅವರ ಆಶಯದಂತೆ, ಕೊನೆಗೆ ಎಲೆಮರೆಯ ಕಾಯಿಯಂತಿರುವ ಪ್ರಾಮಾಣಿಕರೊಬ್ಬರು ಮುಖ್ಯಮಂತ್ರಿಯಾಗುವಲ್ಲಿ ಶುಭಂ. ಆದರೆ ಈ ಚಿತ್ರ ಮೊನ್ನೆ ನಡೆದ ಎಲೆಕ್ಷನ್ಗೆ ಮುಂಚೆ ಬಂದಿದ್ದರೆ ಅದರ ಖದರ್ರೇ ಬೇರೆ ಇರುತ್ತಿತ್ತು ಎಂಬುದು ಸತ್ಯ. ಅಂಥ ಅವಕಾಶವನ್ನು ಹಾಳು ಮಾಡಿದ ಖ್ಯಾತಿ ಸೆನ್ಸಾರ್ ಮಂಡಳಿಗೆ ಹೋಗಬೇಕು. ಮಾಲಾಶ್ರೀ ಅಭಿನಯಕ್ಕೆ ಬಹುಮತ ಸಿಗುವುದರಲ್ಲಿ ಅನುಮಾನವಿಲ್ಲ. ಶ್ರೀನಿವಾಸಮೂರ್ತಿ, ಶೋಭರಾಜ್, ಸುಚೇಂದ್ರ ಪ್ರಸಾದ್, ಲೋಹಿತಾಶ್ವ, ಪ್ರದೀಪ್ ರಾವುತ್, ಅಭಿನಯದಲ್ಲಿ ಬಲಿಷ್ಟ ಅಭ್ಯರ್ಥಿಗಳು. 'ಪ್ರಚಾರ ಪ್ರಿಯ'ರಾಗಿ ಸಾಧು, ಬುಲೆಟ್ ಅಲ್ಲದೆ, ಚಿತ್ರದ ಡಮ್ಮಿ ಕ್ಯಾಂಡಿಡೇಟ್ಸ್ಗಳೂ ಇಲ್ಲಿ ಗಮನಸೆಳೆಯುವುದು ವಿಶೇಷ. ಹಂಸಲೇಖ ಸಂಗೀತದ ಒಂದು ಹಾಡು ಮತ್ತು ಹಿನ್ನೆಲೆ ಸಂಗೀತ ಎಲೆಕ್ಷನ್ ಬಿಸಿ ಹೆಚ್ಚಿಸಿದೆ. ರಾಜೇಶ್ ಕಟ್ಟ ಛಾಯಾಗ್ರಹಣ ಕಪಟ ರಾಜಕಾರಣಿಗಳ ಮೇಲೆ ಬೆಳಕು ಚೆಲ್ಲಿದೆ.
-ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


