ಸಿನಿಮಾ ವಿಮರ್ಶೆ

ಒದೆ 'ವೀರ' ನಾರಿ

ನಿರ್ಮಾಪಕ ರಾಮು ಆಂಡ್ ಕಂಪನಿ ಬದಲಾಗಲ್ಲ. ಬದಲಾವಣೆ ಎಂಬುದು ಸ್ವತಃ ರಾಮುಗೂ ಬೇಕಿಲ್ಲ! ...

ಒದೆ 'ವೀರ' ನಾರಿ
Published On :

ನಿರ್ಮಾಪಕ ರಾಮು ಆಂಡ್ ಕಂಪನಿ ಬದಲಾಗಲ್ಲ. ಬದಲಾವಣೆ ಎಂಬುದು ಸ್ವತಃ ರಾಮುಗೂ ಬೇಕಿಲ್ಲ! ಅದು ರಾಮು ಅವರ ತಪ್ಪೂ ಅಲ್ಲ ಬಿಡಿ. ಯಾವ ಗಳಿಗೆಯಲ್ಲಿ ಅವರಿಗೆ ' ಕೋಟಿ ನಿರ್ಮಾಪಕ ' ಎನ್ನುವ ಬಿರುದನ್ನು ಚಿತ್ರರಂಗ ಪ್ರದಾನ ಮಾಡಿತೋ ಗೊತ್ತಿಲ್ಲ, ಅವರು ಕೋಟಿಗಳನ್ನು ಸುರಿಯುತ್ತಲೇ ಇದ್ದಾರೆ. ಕಥೆ ಹೇಗೆ ಬೇಕಾದರೂ ಇರಲಿ, ಚಿತ್ರ ಮತ್ತು ಅದರ ಮೇಕಿಂಗ್ ಮಾತ್ರ ಅದ್ಧೂರಿಯಾಗಿರಬೇಕು. ಈ ಸೂತ್ರವನ್ನು ಇಂದಿಗೂ ಬಿಟ್ಟು ಕೊಡದ ರಾಮು 'ವೀರ' ಚಿತ್ರದಲ್ಲೂ ಮುಂದುವರೆಸಿದ್ದಾರೆ. ಪರ ಭಾಷೆಯ ಟಾಪ್ ಟೆನ್ ಖಳ ನಟರು, ವಿದೇಶಗಳು, ಬಂದೂಕು, ಬಾಂಬು, ರಾಜಕೀಯ, ಪೊಲೀಸ್, ಭ್ರಷ್ಟಾಚಾರ ಎಲ್ಲವೂ ಇದೆ. ನಟಿ ಮಾಲಾಶ್ರೀ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೆಜ್ಜೆ ಹೆಜ್ಜೆಗೂ ಬರುವ ಸಾಹಸಗಳೇ ಚಿತ್ರದ ಜೀವಾಳ.
 ಒಂದು ಬದಲಾವಣೆ ಎಂದರೆ, ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದ ಅಶಿಷ್ ವಿದ್ಯಾರ್ಥಿ ಇಲ್ಲಿ ಒಳ್ಳೆಯ ಪೊಲೀಸ್ ಕಮಿಷನರ್ ಆಗಿದ್ದಾರೆ. 'ಹೊಡಿ ಮಗಳೇ, ಹೊಡಿ ಮಗಳೇ...' ಎನ್ನುವಂತೆ ಸಾಗುವ ಚಿತ್ರದಲ್ಲಿ ಹೇಳಿಕೊಳ್ಳುವಂಥ ಕಥೆ ಏನೂ ಇಲ್ಲ. ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಕ್ರಿಕೆಟ್ ಕಾಮೆಂಟ್ರಿಯಂತೆ ಹೇಳುವ ಮೂಲಕ ಆರಂಭವಾಗುವ ಚಿತ್ರದಲ್ಲಿ, ಖೋಟಾ ನೋಟಿನ ಜಾಲದಿಂದ ಅಮಾಯಕರು ಬಲಿಯಾಗುವುದು, ಗೃಹ ಸಚಿವನೊಬ್ಬ ಮುಖ್ಯಮಂತ್ರಿಯಾಗಲು ಹೊರಡುವುದು, ಅದಕ್ಕಾಗಿ ಹಾಲಿ ಮುಖ್ಯಮಂತ್ರಿ ವಿರುದ್ಧ ತಿರುಗಿ ಬೀಳುವುದು, ಚುನಾವಣೆ ಎದುರಿಸಲು ಹಣಕ್ಕಾಗಿ ಖೋಟಾ ನೋಟುಗಳನ್ನು ಮುದ್ರಿಸುವ ಯಂತ್ರಗಳನ್ನು ವಿದೇಶದಿಂದ ತರಿಸಿಕೊಳ್ಳುವುದು, ಈ ನಡುವೆ ಖಳನಾಯಕನ ಸಾಮ್ರಾಜ್ಯವನ್ನು ನಾಶ ಮಾಡಲು ಬರುವ ವೀರಲಕ್ಷ್ಮಿ, ಒಂದಿಷ್ಟು ಕಾಮಿಡಿ, ಒಂದು ಐಟಂ ಸಾಂಗ್, ಕೊಂಚ ಫ್ಲ್ಯಾಷ್ ಬ್ಯಾಕ್... ಇಷ್ಟರಲ್ಲೇ ಚಿತ್ರಕಥೆ ಮುಗಿಯುತ್ತದೆ.
 ಆದರೆ ಚಿತ್ರ ಶುರುವಾಗಿ ಕನಿಷ್ಠ ಹತ್ತು ನಿಮಿಷಗಳವರೆಗೂ ಮುಖ್ಯ ಪಾತ್ರಧಾರಿ ಮಾಲಾಶ್ರೀ ಎಂಟ್ರಿಯಾಗುವುದೇ ಇಲ್ಲ ಎಂಬುದು ಚಿತ್ರದ ಮತ್ತೊಂದು ವಿಶೇಷತೆ. ಕಥೆಯಷ್ಟೇ ಸರಳವಾಗಿ ಚಿತ್ರವನ್ನು ನಿರ್ಮಾಣ ಮಾಡಿಲ್ಲ. ಚಿತ್ರದ ಮುಕ್ಕಾಲು ಪಾಲು ವಿದೇಶದಲ್ಲೇ ಚಿತ್ರೀಕರಣ ಮಾಡಲಾಗಿದೆ. ಯಾವುದಕ್ಕೂ ಕೊರತೆ ಮಾಡದ ರಾಮು, ಕಥೆ ಇಲ್ಲದಿದ್ದರೂ ' ಅಬ್ಬಾ... ' ಎಂದು ಮೆಚ್ಚುಕೊಳ್ಳುವಂಥ ಅದ್ಧೂರಿತನ ಕಟ್ಟಿಕೊಟ್ಟಿದ್ದಾರೆ. ಮಾತ್ರವಲ್ಲ, ಇಡೀ ' ಸ್ಕ್ರೀನ್ ಪೂರ್ತಿ ' ನಟಿ ಮಾಲಾಶ್ರೀ ಅವರೇ ' ತುಂಬಿ 'ಕೊಳ್ಳುತ್ತಾರೆ ಎಂದು ಹೇಳಿದರೆ ಅಪಾರ್ಥ ತಿಳಿಯಬೇಕಿಲ್ಲ. ಯಾಕೆಂದರೆ ಚಿತ್ರಕ್ಕೆ ಮಾಲಾಶ್ರೀಯ ಫೈಟ್‌ಗಳೇ 'ಶಕ್ತಿ' ಮತ್ತು ಯುಕ್ತಿ. ನಿರ್ದೇಶಕ ಅಯ್ಯಪ್ಪ ಪಿ.ಶರ್ಮಾ ನೆಪಮಾತ್ರ. ಅಯ್ಯಪ್ಪ ತೆಲುಗು ಚಿತ್ರರಂಗದವರು ಎನ್ನುವ ಗುರುತಿನ ಚೀಟಿಯೇ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದಿಯೇನೋ?
 ಅದ್ಧೂರಿತನದ ಸಿನಿಮಾ ಎಂದರೆ ಮಾರಿ ಹಬ್ಬದಲ್ಲಿ ಕೋಣ ಬಲಿ ಕೊಡುವ ಹಾಗೆ ಹೆಜ್ಜೆ ಹೆಜ್ಜೆಗೂ ಖಳನಟರ ತಲೆಗೆ ಗುಂಡು ಹಾರಿಸುವುದೇ ವೀರಲಕ್ಷ್ಮಿಯ ಕೆಲಸ. ಈ ಕಾರಣಕ್ಕೆ ಪ್ರೇಕ್ಷಕನಿಗೆ ಎರಡು ಗಂಟೆ ಡೆತ್ ನೋಟ್ ಓದಿದ ಅನುಭವ. ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ' ಶಕ್ತಿ ' ಮೀರಿ ಸಂಭಾಷಣೆ ಬರೆದು ಮೆಚ್ಚುಗೆಗಳಿಸಿದ್ದ ನಿರ್ದೇಶಕ ಅನಿಲ್‌ರ ಸಂಭಾಷಣೆ ಇಲ್ಲಿ ಕೈ ಕೊಟ್ಟಿದೆ. ರಾಹುಲ್‌ದೇವ್, ಸಿ.ಆರ್. ಸಿಂಹ, ಕೋಮಲ್, ಮುಕುಲ್ ದೇವ್, ಶಶಿಕಲಾ ಯಾರಿಗೂ ಇಲ್ಲಿ ಹೆಚ್ಚು ಕೆಲಸವಿಲ್ಲ. ಇದ್ದಿದ್ದರಲ್ಲಿ ರಾಜು ತಾಳಿಕೋಟೆ ಹಾಗೆ ಬಂದು ಹೀಗೆ ಹೋದರೂ ಕಿಕ್ ಕೊಡುತ್ತಾರೆ. ಹಂಸಲೇಖರ ಹಿನ್ನೆಲೆ ಸಂಗೀತ ಮಾಲಾಶ್ರೀಯ ಫೈಟ್‌ಗಳ ಜೊತೆ ಸ್ಪರ್ಧೆಗಿಳಿಯುತ್ತದೆ. ವಿದೇಶಗಳ ಸ್ವರ್ಗದ ತಾಣಗಳನ್ನೇ ಕ್ಯಾಮೆರಾ ಮುಂದೆ ಇಟ್ಟರೂ ರಾಜೇಶ್ ಕಟ್ಟ ಹೊಸದನ್ನು ತೋರಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ.
 ತುಂಬಾ ಗ್ಯಾಪ್ ನಂತರ ಬಂದಿರುವ ನಟಿ ಮಾಲಾಶ್ರೀ ತೆರೆ ತುಂಬಾ ಹೇಗೆ ಕಾಣಿಸುತ್ತಾರೆ ಎನ್ನುವ ಕುತೂಹಲ ಇದ್ದವರು 'ವೀರ' ಚಿತ್ರವನ್ನು ನೋಡಬಹುದು. ' ರಾಣಿ ಮಹಾರಾಣಿ 'ಯಲ್ಲಿ ' ಒದೆ ನಾರಿ ' ದರ್ಶನವಾಗುತ್ತದೆ.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.