ಪ್ರೇಕ್ಷಕರಿಗೆ ಮಂಕಿ ಕ್ಯಾಪ್
'ಟೋಪಿವಾಲಾ' ಚಿತ್ರದ ಬಿರಾದಾರ್ ಪಾತ್ರಕ್ಕೆ 'ಶಾರ್ಟ್ ಟರ್ಮ್ ಮೆಮೊರಿ ಲಾಸ್' ಸಮಸ್ಯೆ. ಆದರೆ ಸಿನಿಮಾ ನೋಡುವ ಪ್ರೇಕ್ಷಕರಿಗೆ...

'ಟೋಪಿವಾಲಾ' ಚಿತ್ರದ ಬಿರಾದಾರ್ ಪಾತ್ರಕ್ಕೆ 'ಶಾರ್ಟ್ ಟರ್ಮ್ ಮೆಮೊರಿ ಲಾಸ್' ಸಮಸ್ಯೆ. ಆದರೆ ಸಿನಿಮಾ ನೋಡುವ ಪ್ರೇಕ್ಷಕರಿಗೆ, ಈ ಮೊಮೊರಿ ಲಾಸ್ ಸಮಸ್ಯೆ, ಉಪೇಂದ್ರ ಅವರಿಗಾದರೂ ಬರಬಾರದಿತ್ತೇ ಎಂಬ ಅಸಹನೆ ಮೂಡಿದರೆ, ಪ್ರೇಕ್ಷಕನಿಗೂ ಕೂಡ ಅದೇ ಸಮಸ್ಯೆ ಇದೆ ಎಂಬ ಭ್ರಮೆಯಲ್ಲಿ ಮತ್ತೆ ಮತ್ತೆ ತಮ್ಮ ಹಳೆಯ ಚಿತ್ರಗಳ ಧಾಟಿಯನ್ನೇ ನೆನಪಿಸುವ ಉಪೇಂದ್ರ ಅವರ ಕಥೆ, ಚಿತ್ರಕಥೆ ಅದಕ್ಕೆ ಕಾರಣ.
ಎ, ಸೂಪರ್ ಚಿತ್ರಗಳ ಲಾಂಗ್ ಟೈಮ್ ಮೆಮೊರಿ ಪವರ್ ಸಿಂಡ್ರೋಮ್‌ನಿಂದ ಬಳಲುವ ಟೋಪಿವಾಲ ಚಿತ್ರಕ್ಕೆ, ಹೆಸರಿಗೆ ಶ್ರೀನಿ ನಿರ್ದೇಶಕರಾದರೂ, ನಿಜವಾದ ಡೈರೆಕ್ಟರ್ 'ಕ್ಯಾಪ್' ಯಾರ ತಲೆಯ ಮೇಲಿದೆ ಎಂಬ ಅನುಮಾನ ಮೂಡಿದರೆ ಆಶ್ಚರ್ಯವಿಲ್ಲ. 'ಯಾವಾಗ್ಲೂ ಟ್ವಿಸ್ಟ್ ಕೊಡ್ತಾ ಇದ್ರೆ ಮಜಾ ಇರೊಲ್ಲ, ಈ ಸಲ ಟ್ವಿಸ್ಟ್ ಇಲ್ಲದಿರೋದೇ ಟ್ವಿಸ್ಟ್' ಎನ್ನುವ ಚಿತ್ರದ ಸಂಭಾಷಣೆಯನ್ನು ಚಿತ್ರದ ಸಿಂಪಲ್ ವಿಮರ್ಶೆಗೆ ಬಳಸಬಹುದು. ಇಲ್ಲಿ ಟ್ವಿಸ್ಟ್ ಇಲ್ಲ, ಯೂ ಟರ್ನ್‌ಗಳಿಗೆ ಕೊರತೆಯಿಲ್ಲ. ಆದರೆ, 'ಹ್ಯಾಟ್ಸ್ ಆಫ್ ಟು ಯೂ' ಎಂದು ಹೇಳುವ ಅವಕಾಶಗಳೇ ಕಡಿಮೆ.
ಸ್ವಿಸ್‌ಬ್ಯಾಂಕ್‌ನಲ್ಲಿರೋ ದೇಶದ ಕಪ್ಪುಹಣವನ್ನು ವಾಪಸ್ಸು ತರುವ ಪ್ರಯತ್ನ ಈ ಚಿತ್ರದ ಕಥೆ. ಆದರೆ, ಚಿತ್ರದ ಕಾನ್ಸೆಪ್ಟ್ ಇರೋದು ಕಡೆಯ ಹತ್ತು ಹದಿನೈದು ನಿಮಿಷದಲ್ಲಿ. ಸರ್ಕಾರ್, ಲೋಕಾಯುಕ್ತ ಲೋಕಿ, ಮಿಸ್ಟರ್ ಇಂಡಿಯಾ ಎಂಬ ಪಾತ್ರಗಳಲ್ಲಿ ಲೋಕಾಯುಕ್ತರ ಪವರ್ ಕಿತ್ತುಕೊಂಡ ಸರ್ಕಾರ ಮತ್ತು ದೇಶದ ಪ್ರಜೆಗಳನ್ನು ಸಾಂಕೇತಿಕವಾಗಿ ತೋರಿಸುವ ಐಡಿಯಾ ಅದು. ಬೀದಿಗೆ ಬಿದ್ದಿರುವ ದೇಶದ ವ್ಯವಸ್ಥೆಯನ್ನು ಹೇಳುವ ಕಾನ್ಸೆಪ್ಟ್‌ನಲ್ಲಿ ಬೀದಿನಾಟಕದ ಟಚ್ಚೇ ಇದೆ. ಈ ಗಟ್ಟಿ ಎಳೆಯನ್ನಿಟ್ಟುಕೊಂಡ ಟೋಪಿವಾಲಾ ಆರಂಭದಿಂದ ಕೊನೆಯವರೆಗೂ ಕಾಮಿಡಿಯೂ ಅಲ್ಲದೆ ಗಂಭೀರವೂ ಅಲ್ಲದ ಕಥೆಯಲ್ಲಿ ಅತ್ತಿತ್ತ ವಾಲಾಡುತ್ತಾನೆ.
ಮೊದಮೊದಲು ಪ್ರಿಯದರ್ಶನ್ ಅವರ ಕಾಮಿಡಿ ಕಾನ್ಸೆಪ್ಟ್‌ನ ಚಿತ್ರ ಇರಬಹುದು ಎಂದುಕೊಂಡರೆ ಅದೂ ಸುಳ್ಳು. ಕೊನೆಗೆ, ಅಟ್‌ಲೀಸ್ಟ್ ದರ್ಶನ್ ಚಿತ್ರವೂ ಆಗಿಲ್ಲ. ಹಾಗಾಗಿ, ಇದು, ಕೇವಲ ಉಪೇಂದ್ರರ ಹಳೆಯ ಚಿತ್ರಗಳ ಹೊಸ ವರ್ಷನ್ ಅಷ್ಟೇ.
ಖಾಲಿ ಪಾತ್ರೆ ತುಂಬಾ ಸದ್ದು ಮಾಡುತ್ತಂತೆ, ಆದರೆ, ಚಿತ್ರದ ಖಾಲಿ ಟ್ರೈಲರ್ ಸುದ್ದಿ ಮಾಡಿರಲಿಲ್ಲ. ಆದರೆ ಟೋಪಿವಾಲನ ತಲೆಯ ಬಗ್ಗೆ ಮಾತ್ರ, ಚಿತ್ರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎನ್ನಬಹುದು. ಸದಾ
ಇನ್ನೊಬ್ಬರತ್ತ ಕೈ ತೋರಿಸಿ 'ನೀನು ಸರಿ ಇಲ್ಲ' ಎನ್ನುವ 'ನಾನು'ವಿನ ಆತ್ಮರತಿ ಇದು. ಬಸಕ್ ಎಂಬ ನಾಯಕನ ವಿಚಿತ್ರ ಹೆಸರು ಕಸಬ್‌ನನ್ನು ನೆನಪಿಸಿದರೂ ಹೇಳಿದ್ದನ್ನೇ ಹೇಳುವ ಕಿಸಬಾಯಿದಾಸನ ಕಥೆ ಹೆಚ್ಚು ನೆನಪಾಗುತ್ತದೆ.
'ಸೂಪರ್' ಸಿನಿಮಾದ ಹಳೆಯ ಒದ್ದೆ ನೆನಪುಗಳನ್ನು ಪ್ರೇಕ್ಷಕ 'ಸೂಪರ್ ಸಾಪರ್'ನಿಂದ 'ಒರೆಸುವ' ಮುಂಚೆ ಅದೇ ಶೋ ಅನ್ನು ಮತ್ತೆ ಮುಂದು-ವರಿಸಲಾಗಿದೆ. ಹಾಗಾಗಿ, 'ಟೋಪಿ, ಹ್ಯಾಟ್'ಗಳ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ 'ಕಾಪಿ ಕ್ಯಾಟ್' ದರ್ಶನ. ದೇವ್ರನ್ನ ಯಾರಾದ್ರೂ ಬಯ್ತಾರ, ಬಯ್ಯೋನೊಬ್ನೇ ಉಪೇಂದ್ರ ಎಂಬುದು ಚಿತ್ರದ ಶೀರ್ಷಿಕೆ ಗೀತೆಯ ಸಾಲು. ಆದರೆ ಸಿನಿಮಾ ನೋಡಿ ಟೋಪಿಗಳ ಲೋಕದಲಿ ಕಳೆದುಹೋಗುವ ಪ್ರೇಕ್ಷಕನಿಗೆ 'ಅಯ್ಯೋ ದೇವ್ರೆ' ಅಂತ ಬಯ್ದುಕೊಳ್ಳುವ ಅವಕಾಶ. ಕ್ಯಾಪ್ ಮೋರೆಯ ಟೋಪಿವಾಲನನ್ನು ನೋಡುವ ಪ್ರೇಕ್ಷಕನಿಗೆ ಮಂಕಿ ಕ್ಯಾಪ್ ಹಾಕಿಕೊಂಡ ಹ್ಯಾಪ್ ಮೋರೆ ಅನುಭವ. ತಮ್ಮ ಹಳೆಯ ಚಿತ್ರಗಳ ಸಂಭಾಷಣೆಗಳನ್ನು ರಜನೀಕಾಂತ್ ಶೈಲಿಯಲ್ಲಿ 'ಕಮಾನ್, ರಿಪೀಟ್' ಎನ್ನುತ್ತಲೇ
'ನಾನು ಕೊಡೋ ಐಡಿಯಾಗಳನ್ನು ಉಳಿದವರೆಲ್ಲಾ ಜೆರಾಕ್ಸ್ ಮಾಡಿಕೊಂಡು 15 ವರ್ಷ ಉಪಯೋಗಿಸ್ತಾರೆ' ಎಂಬ ಮಾತುದುರಿಸುವ ಉಪ್ಪಿಗೆ, ಇಂಟರ್‌ನೆಟ್‌ನಲ್ಲಿ ಸಿಗುವ ಇನ್ಯಾರದ್ದೋ ರಜನೀಕಾಂತ್ ಜೋಕ್‌ಗಳ ಐಡಿಯಾಗಳನ್ನು ಜೆರಾಕ್ಸ್ ಮಾಡಿಸಿ ಹಾಡು ಬರೆಸಿಕೊಳ್ಳುವ ಅಗತ್ಯವೇನಿತ್ತೋ? ಚಿತ್ರದ ಶೀರ್ಷಿಕೆಗೆ ಸ್ಫೂರ್ತಿಯಾಗಿರುವ 'ಅಂತ' ಚಿತ್ರದ ಉಗುರು ಕೀಳುವ ಎಪಿಸೋಡನ್ನು ಇನ್ನಷ್ಟು ಕೀಳಾಗಿ ತೋರಿಸಲು ಪ್ರಯತ್ನ ಪಡಬಹುದಿತ್ತೇನೋ. ಸದಾ ಮಾತಾಡುವ ಉಪೇಂದ್ರ ಅಭಿನಯದ ಬಗ್ಗೆ ಮಾತಾಡುವಂತಿಲ್ಲ. ಭಾವನಾ, ರಂಗಾಯಣ ರಘು, ರಾಜು ತಾಳಿಕೋಟೆ, ರವಿಶಂಕರ್, ಅಚ್ಯುತ್ ಕುಮಾರ್ ಎಲ್ಲರಿಗೂ ಸಣ್ಣ ಸಣ್ಣ ಸೈಜಿನ ಟೋಪಿಗಳನ್ನು ಹೊಲಿಸಲಾಗಿದೆ. ಹರಿಕೃಷ್ಣರ ಎರಡು ಹಾಡುಗಳನ್ನು ಇಷ್ಟಪಡಬಹುದು. ಸಂಕಲನಕಾರ ಕ್ರೇಜಿಮೈಂಡ್ಸ್ ಶ್ರೀ, ಉಪೇಂದ್ರರ ಮೈಂಡ್‌ಸೆಟ್ ಅರ್ಥ ಮಾಡಿಕೊಂಡ 'ಕಟ್'ಆಳುವಿನಂತೆ ಕೆಲಸ ಮಾಡಿದ್ದಾರೆ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


