ಸಿನಿಮಾ ವಿಮರ್ಶೆ

'ಪ್ರಾಯ'ಶಃ ಚೆನ್ನಾಗಿದೆ

ಎಳೆಯ ವಯಸ್ಸಿನ ಹುಡುಗರ ಪ್ರೀತಿ ಪ್ರೇಮದ ಎಳೆಯನ್ನಿಟ್ಟುಕೊಂಡು ಟೀನೇಜ್ ಎಂಬ ಸಿನಿಮಾ ಮಾಡಿದ್ದಾರೆ.

'ಪ್ರಾಯ'ಶಃ ಚೆನ್ನಾಗಿದೆ
Published On :

ಎಳೆಯ ವಯಸ್ಸಿನ ಹುಡುಗರ ಪ್ರೀತಿ ಪ್ರೇಮದ ಎಳೆಯನ್ನಿಟ್ಟುಕೊಂಡು ಟೀನೇಜ್ ಎಂಬ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀಕಾಂತ್. ಆದರೆ ಇಲ್ಲಿ ಕೇವಲ ಎಳೆ ಅಷ್ಟೇ ಅಲ್ಲ, ಪೂರ್ತಿ ಬೆಳೆಯೇ ಅದು. ಸಿನಿಮಾ ಮುಗಿದ ಮೇಲೆ ಅನಿಸುವ ಒಂದು ವಿಷಯ ಎಂದರೆ ಶ್ರೀಕಾಂತ್ ಒಬ್ಬ ಒಳ್ಳೆಯ ನಿರ್ದೇಶಕ ಎಂದು ಕರೆಯಲು ಯಾವ ಅಡ್ಡಿಯೂ ಇಲ್ಲ ಎಂಬುದು. ಅದಕ್ಕೆ ಕಾರಣಗಳು ಹಲವು. ಆರಂಭದ ಟೈಟಲ್‌ಕಾರ್ಡ್‌ನಿಂದ ಹಿಡಿದು, ಕಥೆ ಹೇಳುವ ವಿಧಾನ, ಅಲ್ಲಿ ತೋರಿಸಲಾಗಿರುವ ಹೊಸತನ, ಕಲರ್‌ಪುಲ್ ಹಾಡುಗಳ ಚಿತ್ರೀಕರಣ, ಹೊಸ ಪ್ರಯೋಗಗಳು ಎಲ್ಲವೂ ಸೇರಿ, ನಿಜಕ್ಕೂ ಒಂದು ನೀಟಾಗಿರುವ ಕಥೆ, ಚಿತ್ರಕಥೆ, ಸಂಭಾಷಣೆ ಸಿಕ್ಕರೆ ಶ್ರೀಕಾಂತ್ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಸ್ಪಷ್ಟವಾಗುತ್ತದೆ. ಆದರೆ ನಿರಾಸೆ ಎಂದರೆ, ಮಾಸ್ಟರ್ ಅಥವಾ ಮಿಸ್ಟರ್ ಎಂದು ಕರೆಯಬೇಕೋ ಎಂದು ಕನ್‌ಫ್ಯೂಸ್ ಆಗುವಂಥ ಹುಡುಗ, ಕಣ್‌ಸೆಳೆಯುವ ಮಿಸ್‌ಗಳು ಎಲ್ಲವೂ ಇರುವ ಟೀನೇಜ್ ಚಿತ್ರದಲ್ಲಿ ಮಿಸ್ ಆಗಿರುವುದೇ ಚಿತ್ರಕಥೆ ಮತ್ತು ಸಂಭಾಷಣೆಯ ವಿಭಾಗ. ಹಾಗಾಗಿ, ಹರೆಯದ ಹುಡುಗರ ಟೀನೇಜ್ ಅನ್ನು 'ಪ್ರಾಯ'ಶಃ ಚೆನ್ನಾಗಿದೆ ಎನ್ನಬಹುದು. ಇದು ಆಗ ತಾನೇ ಹರೆಯಕ್ಕೆ ಕಾಲಿಟ್ಟವರ ಮುಂಜಾನೆಯ ಕಥಾ ಪ್ರಸಂಗ. ಮೂರು ಜನ ಮುಂಜಾನೆಮನ್‌ಗಳ ಜೊತೆ ಹುಡುಗನ ಜಾಲಿರೈಡ್, ಟೀನೇಜ್‌ನ ಕಥೆ. ಟೀನೇಜಿನ ಮೂವರು ನಾಯಕಿಯರ ನಡುವೆ ನಡೆಯುವ ತೀನ್ ಲವ್‌ಸ್ಟೋರಿಗಳು, ಒಂದು ತಂಗಿ ಪಾಪುವಿನ ಎಪಿಸೋಡ್, ಅದರ ಜೊತೆ, ಒಂದಿಷ್ಟು ರಿಯಾಲಿಟಿ ಶೋಗಳ ಎಪಿಸೋಡ್, ಈ ಮೂರು ವಿಷಯಗಳೇ ಟೀನೇಜ್‌ನ ತೀನ್ ಟ್ರ್ಯಾಕ್‌ಗಳು.
  ಅಂಜಲಿ ಎನ್ನುವ ಹುಡುಗಿಯ ಜೊತೆ ಪ್ರೀತಿ ಇರುವಾಗಲೂ, ಪ್ರೀತಿ ಎನ್ನುವ ಹುಡುಗಿ ಪ್ರಪೋಸ್ ಮಾಡಿದಾಗ ನಾನೇಕೆ ಅಂಜಲಿ ಎಂದು ಅದನ್ನೂ ಒಪ್ಪಿಕೊಳ್ಳುವಂಥ ಚಿತ್ರದ ನಾಯಕನಿಗೆ, ಮುಂದೆ, ರೋಸಿ ಬಂದು ರೋಸ್ ಕೊಟ್ಟಾಗ ಪ್ರತಿದಿನವೂ ಪ್ರೇಮಿಕುಲ ರೋಸು. ರೋಸಿ ಬಂದು ಕರೆದಾಗ ಇವನು ಅವಳ ಹಿಂದೆಯೂ ಹೋಗುವುದನ್ನು ನೋಡಿ ಪ್ರೇಕ್ಷಕ ರೋಸಿ ಹೋದರೆ, ಅದಕ್ಕೊಂದು ಕನ್‌ವಿನ್ಸಿಂಗ್ ಕ್ಲೈಮ್ಯಾಕ್ಸ್‌ನ ಮೂಲಕ ನಿರ್ದೇಶಕ ಶ್ರೀಕಾಂತ್, ವಯಸ್ಸಿನಲ್ಲಿ ಕನ್‌ಫ್ಯೂಷನ್ನು ತುಂಬಾ ಮಾಮೂಲಿ ಎಂಬ ಸ್ಪಷ್ಟೀಕರಣ ಕೊಡುತ್ತಾರೆ.
 ಒಂದು ದೃಶ್ಯದಲ್ಲಿ, ಹೊಸ ಹುಡುಗಿ ಪ್ರಪೋಸ್ ಮಾಡಿದಾಗ ಸದ್ಯಕ್ಕೆ ಇರುವ ಕರೆಂಟ್ ಅಫೇರ್ ಅನ್ನು ಮರೆತೇ ಬಿಡುತ್ತಾನೆ ನಾಯಕ. ಹೊಸ ಅಫೇರ್‌ನಲ್ಲಿ ಕೋಣೆಯೊಳಗೆ ಹುಡುಗ ಹುಡುಗಿ ಇಬ್ಬರೇ ಇದ್ದು, ಇನ್ನೇನು 'ಕರೆಂಟ್‌' ಅಫೇರ್ ಶುರುವಾಗಬೇಕು ಎನ್ನುವಷ್ಟರಲ್ಲಿ ಹಳೆಯ ಹುಡುಗಿ ಆಗಮನ ಆಗಿ ಫ್ಯೂಸ್ ಹೋಗುತ್ತದೆ. ಹುಡುಗ ಕನ್‌ಫ್ಯೂಸ್ ಆಗುತ್ತಾನೆ. ಆಗ ಒಳಗಿರುವ ಹುಡುಗ, ಹುಡುಗಿಗೆ ನಿರಾಸೆ. ಚಿತ್ರಕ್ಕೆ ಇನ್ನೇನು ಜೀವ ಬಂತು ಎಂದುಕೊಳ್ಳುವಷ್ಟರಲ್ಲಿ ಪ್ರೇಕ್ಷಕನಿಗೂ ಆಗಾಗ ಇಂಥ ನಿರಾಸೆ ಆಗಬಹುದು.    ಒಟ್ಟಾರೆ, ಹರೆಯದ ಹುಡುಗರ ಕಥೆಯಾಗಿರುವ ಟೀನೇಜ್, ತಾಂತ್ರಿಕ ವಿಭಾಗದಲ್ಲಿ, ಅದ್ದೂರಿತನದ ವಿಷಯದಲ್ಲಿ, ಒಂದು ಹೆಜ್ಜೆ ಮುಂದೆ ಹೋಗಿ, ಏಜ್ ಬಾರ್ ಆದವರಿಗೂ ಇಷ್ಟವಾಗಬಹುದು. ಆದರೆ, ಚಿತ್ರಕಥೆ ಸಂಭಾಷಣೆ ವಿಷಯದಲ್ಲಿ ಒಂದು ಹೆಜ್ಜೆ ಹಿಂದೆ ಹೋಗಿ ಚೈಲ್ಡಿಶ್ ಎನಿಸಲೂಬಹುದು. ಅತ್ತ ಹೋಯ್ತು ಬಾಲ್ಯ, ಇತ್ತ ಬಂತು ಪ್ರಾಯ ಎನ್ನುವ ಕಿಶನ್ ಅವರದ್ದು ಕಾನ್ಫಿಡೆಂಟ್ ಅಭಿನಯ, ತನ್ವಿ ಮತ್ತು ಅಪೂರ್ವ ಅರೋರಾ ಕೂಡಾ 'ಟೀನೇಜ್‌' ಅಭಿನಯದಲ್ಲಿ 'ಪ್ರಬುದ್ಧತೆ' ತೋರಿದ್ದಾರೆ. ಪ್ರಿಯಾ ಭರತ್ ಖನ್ನ ಪ್ರೀತಿಯಲ್ಲಿ ಬೀಳುವ ಮುಂಚೆಯೇ ಭಗ್ನಪ್ರೇಮಿಯಂತೆ ಕಾಣುತ್ತಾರೆ. ರಾಜು ತಾಳಿಕೋಟೆ ಸೂತ್ರಧಾರರಾಗಿ ಆಗಾಗ ಕೇಳಿಸುತ್ತಾರೆ.
ಸಿದ್ಧಾರ್ಥ್ ವಿಪಿನ್ ಸಂಗೀತದಲ್ಲಿ 'ಕುಡಿ ಕುಡಿ ಮೀಸೆ', 'ಏನಿದೆ ಮನಸಲಿ', 'ಒಂದೊಂದೇ ಕನಸು' ಹಾಡುಗಳು ಖುಷಿ ಕೊಡುತ್ತವೆ. 'ಬಾಬ್ಬಿ' ಚಿತ್ರದ  'ನಾ ಮಾಂಗೂ ಸೋನಾ ಚಾಂದಿ' ಹಾಡಿನ ನಕಲು ಮಾಡಿದ್ದರೂ ಅದು ಕಥೆಗೆ ಪೂರಕವಾಗಿದೆ. ಮಹೇಶ್ ದೇವ್ ಕ್ಯಾಮರಾ ಹರೆಯದ ಹುಡುಗರ ಮನಸ್ಸಿನಷ್ಟೇ ಬಿಂದಾಸ್ ಆಗಿ ಹರಿದಾಡಿದೆ.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.