'ದೇವ್ರಾಣೆ' ದೇವರ ಚಿತ್ರವಲ್ಲ

ನಿನ್ನ ಮತ್ತು ನಿನ್ ಮಠವನ್ನು ನಂಬಿ ಹೊಸ ಪಕ್ಷ ಕಟ್ಟಿ ಹಾಳಾಗಿ ಹೋದೆ. ಜಾಸ್ತಿ ಆಸ್ತಿ ಮಾಡಿದ್ರೂ ಅರೆಸ್ಟ್ ಮಾಡ್ತಾರೆ. ಬಿಪಿ-ಶುಗರ್ ಇದ್ರೂ ಪಾದಯಾತ್ರೆ ಮಾಡ್ಬೇಕು. ಮೊಬೈಲ್ ಮೇನಿಯಾ ವಿಧಾನಸೌಧವನ್ನೂ ಬಿಟ್ಟಿಲ್ಲ...
ನೈಜ ಘಟನೆಗಳ ಸಿನಿಮಾ ಅಲ್ಲದಿದ್ದರೂ ಚಿತ್ರದಲ್ಲಿನ ಇಂಥ ಪ್ರತಿ ಸಂಭಾಷಣೆಯೂ ಈಗಿನ ಘಟನೆಗಳಿಗೆ ಟಾಂಗ್ ಹೊಡೆಯುತ್ತದೆ. 'ಒಂದ್ ಮೂಟೆ ನಿಂಬೆ ಹಣ್ಣು ಮಾರಿದ್ರೂ ಒಂದ್ ಸಾವಿರ ಸಿಗಲ್ಲ, ಅದೇ ಒಂದ್ ನಿಂಬೆ ಹಣ್ಣುಮಂತ್ರಿಸಿ ಕೊಟ್ಟರೆ ಒಂದ್ ಸಾವಿರ ಕೊಡ್ತಾರೆ' ಎನ್ನುವ ಖತರನಾಕ್ ಡೈಲಾಗ್‌ಗಳು ಕಚಗುಳಿ ಇಡುತ್ತವೆ.
'ದೇವ್ರಾಣೆ' ಹಾಸ್ಯದ ಹಿನ್ನೆಲೆಯಲ್ಲಿ ಸಾಗುವ ಪ್ರಸ್ತುತ ಘಟನಾವಳಿಗಳ ಕಾಲ್ಪನಿಕ ಸಿನಿಮಾ ಎನ್ನಬಹುದು. ಹೀಗಾಗಿ ನಮ್ಮ ಸುತ್ತಲಿನ ವಿದ್ಯಾಮಾನಗಳನ್ನು ಆಗಾಗ ನೆನಪು ಮಾಡುತ್ತದೆ. ಖಾದಿ, ಕಾವಿ ಹಾಗೂ ಮಠದ ಸುತ್ತ ಸುತ್ತುತ್ತ ಸಮಾಜದ ಮತ್ತೊಂದು ಮುಖವಾಡವನ್ನು ತೆರೆದಿಡುವ 'ದೇವ್ರಾಣೆ', ಪಕ್ಕಾ ದೇವರು, ಧರ್ಮದ ವಾಣಿಯಲ್ಲ. ನಿರ್ದೇಶಕ ಲಕ್ಕಿ ಶಂಕರ್ ತಮ್ಮ ಎರಡನೆ ಪ್ರಯತ್ನದಲ್ಲಿ ಪ್ರೇಕ್ಷಕನಿಗೆ ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಜವ್ದಾರಿಯನ್ನೂ ಈ ಚಿತ್ರದಲ್ಲಿ ವಹಿಸಿಕೊಂಡಂತೆ ಕಾಣುತ್ತಾರೆ. ಹಾಸ್ಯ ಪ್ರಧಾನ ಚಿತ್ರವಾದ್ದರಿಂದ ರವಿಶಂಕರ್, ತಬಲಾ ನಾಣಿ, ರಾಜು ತಾಳಿಕೋಟೆ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಬ್ಯಾಂಕ್ ಜನಾರ್ಧನ್, ಲಯೇಂದ್ರ, ಮೈಕಲ್ ಮಧು, ಸಿದ್ದು ಬಿರದಾರ್... ಹೀಗೆ ಹಾಸ್ಯ ನಟರ ದೊಡ್ಡ ದಂಡೇ ಇದೆ. ಗ್ಲಾಮರ್‌ಗೆ ನೀತೂ ಬಂದು ಹೋಗುತ್ತಾರೆ.
ರಾಜಕೀಯ, ಮಠ, ಖಾವಿ ಸುತ್ತ ಚಿತ್ರ ಗಿರಕಿ ಹೊಡೆದರೂ ಸಿನಿಮಾ ಮುಗಿಯುವ ತನಕ ಎಲ್ಲೂ ಗಂಭೀರ ಎನ್ನಿಸುವುದಿಲ್ಲ. ಹಾಸ್ಯವಾಗಿಯೇ ಸಾಗುತ್ತದೆ. ಚಿತ್ರದ ಪ್ಲಸ್ ಪಾಯಿಂಟ್ ಇದೇ.
ಕೆಲಸವಿಲ್ಲದೆ ಬೀದಿಬೀದಿ ಅಲೆಯುವ ಮಂಡ್ಯದ ಪೋಲಿ ಯುವಕ. ಈತನ ತಂದೆ ತೀರಿಕೊಳ್ಳುತ್ತಾರೆ. ತಂದೆಯ ಸಾವಿನಿಂದ ಖಿನ್ನನಾಗುವ ಈತ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾನೆ. ಅಲ್ಲೊಂದು ಪವಾಡ 'ದೃಶ್ಯ' ನಡೆದು ಆತ ಆತ್ಮಹತ್ಯೆಯಿಂದ ಹೊರಬರುತ್ತಾನೆ. ಈ ನಡುವೆ ಇವನೊಂದಿಗೆ ಮತ್ತೊಬ್ಬ ಖಾಲಿ ಗಿರಾಕಿ ಸೇರಿಕೊಳ್ಳುತ್ತಾನೆ. ಸಿನಿಮಾದಲ್ಲಿ ಸ್ವಾಮಿ ಪಾರ್ಟ್ ಮಾಡಿ ಬಂದು ಖಾವಿ ಬಟ್ಟೆ ತೊಟ್ಟು ಬಂದು ಮಲಗಿದ್ದ ಈತ ಬೆಳಾಗುವುದರೊಳಗೆ ಸ್ವಾಮಿಯಾಗುತ್ತಾನೆ. ಈತನಿಗಾಗಿ ರಾಜಕಾರಣಿಗಳು ಮಠ ಕಟ್ಟಿಸಿಕೊಡುರೆ. ತಮಗಾಗದ ಮತ್ತೊಬ್ಬ ಸ್ವಾಮಿಯನ್ನು ನಾಶ ಮಾಡುವುದು ಈ ರಾಜಕಾರಣಿಗಳ ಉದ್ದೇಶ. ಇವರ ರಾಜಕೀಯ ಲಾಭವನ್ನು ಬಳಸಿಕೊಂಡು ಪ್ರಸಿದ್ಧ ಸ್ವಾಮಿಯಾಗುವ ಒಬ್ಬ ಅಡ್ನಾಡಿ ಯುವಕ ಮುಂದೆ ಏನಾಗುತ್ತಾನೆಂಬುದೇ ಚಿತ್ರದ ಕಥೆ.
ಚಿತ್ರದಲ್ಲಿ ಮಾತುಗಳೇ ಹೆಚ್ಚಾಗಿ, ದೃಶ್ಯಗಳಿಗೆ ಕಡಿವಾಣ ಬಿದ್ದಿದೆ. ನಿರೂಪಣೆಯಲ್ಲೂ ಇನ್ನೊಂದಿಷ್ಟು ಗಟ್ಟಿತನ ಕಾಯ್ದುಕೊಳ್ಳಬಹುದಿತ್ತು. 'ಮೈ ನೇಮ್ ಈಸ್ ಚಿಟ್ಟೆಸ್ವಾಮಿ' ಹಾಡು ಕಲಬೆರಕೆಯಾದರೂ ಕಲರ್‌ಫುಲ್ ಆಗಿದೆ. ಎಲ್ಲ ಪಾತ್ರಧಾರಿಗಳು ಚಿತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದಿಷ್ಟು ದೃಶ್ಯಗಳು, ಹಾಸ್ಯ ಚಟಾಕಿಗಳನ್ನು ಸೇರಿಸಬಹುದಿತ್ತೇನೋ? ಆದರೂ ಒಮ್ಮೆ ನೋಡಿ ನಕ್ಕಲು ಈ ಚಿತ್ರ ಅಡ್ಡಿ ಇಲ್ಲ.
- ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


