ಸಿನಿಮಾ ವಿಮರ್ಶೆ

ಖಾಲಿ ಕ್ವಾಟ್ರು, ಫುಲ್ ಥೇಟ್ರು

ಚಿತ್ರದ ನಾಯಕನಿಗೆ ಹೆಂಡತಿಯಿಂದ ತೊಂದರೆ. ಅವನು ಆತ್ಮಹತ್ಯೆಗೆ ಮುಂದಾಗುತ್ತಾನೆ.

ಖಾಲಿ ಕ್ವಾಟ್ರು, ಫುಲ್ ಥೇಟ್ರು
Published On :

ಚಿತ್ರದ ನಾಯಕನಿಗೆ ಹೆಂಡತಿಯಿಂದ ತೊಂದರೆ. ಅವನು ಆತ್ಮಹತ್ಯೆಗೆ ಮುಂದಾಗುತ್ತಾನೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಅವನ ಎಲ್ಲ ಪ್ರಯತ್ನಗಳೂ ಕೈ ಕೊಡುತ್ತವೆ. ಹಾಗಾಗಿ ತನ್ನನ್ನೇ ಕೊಲೆ ಮಾಡುವಂತೆ ಸುಪಾರಿ ಕಿಲ್ಲರ್ ಒಬ್ಬನಿಗೆ ಆಫರ್ ಕೊಡುತ್ತಾನೆ. ಆದರೆ ಅವನ ಸಾಯುವ ನಿರ್ಧಾರ ಬದಲಾಗುತ್ತದೆ. ಆದರೆ ಅಷ್ಟರಲ್ಲಿ ಅನಾಮಿಕ ಕಿಲ್ಲರ್ ನಾಯಕನ ಹಿಂದೆ ಬಿದ್ದಿರುತ್ತಾನೆ. ಮುಂದೇನಾಗುತ್ತದೆ ನೋಡಿ ಎಂದು ಹೇಳಿದರೆ, ಅಪ್ಪಟ ಕನ್ನಡ ಚಿತ್ರಪ್ರೇಮಿಗಳು 'ಈವಾಗೇನ್ ನೋಡೋದು?, ಇದನ್ನ 15 ವರ್ಷ ಮುಂಚೆನೇ ನೋಡಿದೀವಿ' ಎನ್ನಬಹುದು. ನೀವು 'ವಿಕ್ಟರಿ' ಸಿನಿಮಾ ಕಥೆ ಹೇಳ್ತಿದೀರ, ಇಲ್ಲ ಫಣಿ ರಾಮಚಂದ್ರ ನಿರ್ದೇಶನದ ಶಶಿಕುಮಾರ್ ಸಿತಾರಾ, ಅಭಿನಯದ 'ಗಣೇಶನ ಗಲಾಟೆ' ಸಿನಿಮಾ ಕಥೆ ಹೇಳ್ತಿದೀರ ಎನ್ನಬಹುದು. ಅದು ನಿಜವೇ. ಗಣೇಶನ ಗಲಾಟೆಗೆ ಇನ್ನೊಂದಿಷ್ಟು ಗಲಾಟೆ ಸೇರಿಸಿ ವಿಕ್ಟರಿ ಸಿನಿಮಾ ಮಾಡಲಾಗಿದೆ. ಅಲ್ಲಿ, ನಾನು ಸತ್ತರೆ ಹಣದಾಹಿಯಾಗಿರುವ ಹೆಂಡತಿಗೆ ನನ್ನ ಇನ್ಶ್ಯೂರೆನ್ಸ್ ಹಣವಾದರೂ ಸಿಗಲಿ ಎಂಬ ಯೋಚನೆಯಲ್ಲಿ ನಾಯಕ ಸಾಯಲು ಯೋಚಿಸಿದರೆ ಇಲ್ಲಿ ಅದಕ್ಕೆ ಬೇರೆ ಕಾರಣ ಇದೆ ಅಷ್ಟೆ. ಅಲ್ಲಿ ಮೊದಲು ಎಸ್‌ಪಿಬಿ ಮಾಡಬೇಕಿದ್ದು, ಕೊನೆಗೆ ಸಿಲ್ಕ್‌ಸ್ಮಿತಾ ಮಾಡಿದ್ದ ಕಿಲ್ಲರ್ ಪಾತ್ರ ಇಲ್ಲಿ ರವಿಶಂಕರ್ ಪಾಲಾಗಿದೆ.
ಅಷ್ಟಕ್ಕೂ ಇದು 'ದಿ ಆಡ್ ಜಾಬ್‌' ಎಂಬ ಪುಸ್ತಕ ಆಧಾರಿತ ಚಿತ್ರ. ಇಂಥ ಕಥೆಯನ್ನು ನಕಲು ಮಾಡಿದರೆ, ಡೋಂಟ್ ವರಿ ಚಿನ್ನ ನಮಗೂ ವಿಕ್ಟರಿ ಟೈಮ್ ಬಂದೇ ಬರ್ತದೆ ಎಂಬ ನಂಬಿಕೆ ವಿಕ್ಟರಿ ಚಿತ್ರತಂಡದ್ದು. ಗಣೇಶನ ಗಲಾಟೆಯಲ್ಲಿದ್ದ ಇನ್ಶ್ಯೂರೆನ್ಸ್ ಎಪಿಸೋಡ್ ಇಲ್ಲೂ ಇದೆ. ಆದರೆ ಅದು ಖಳನಾಯಕನ ಕಥೆಗೆ ಶಿಫ್ಟ್ ಆಗಿದೆ. ಆದರೆ ನಕಲು ಮಾಡಿದ ಕಥೆಯಾದರೂ ನಗುವಿಗೆ ಬರವಿಲ್ಲ ಎಂಬ ಅಶ್ಯೂರೆನ್ಸ್ ಕೊಡುತ್ತದೆ ವಿಕ್ಟರಿ.
 ಇದೂ ಒಂಥರಾ ರಿಮೇಕ್ ಚಿತ್ರ ಎನಿಸಿದರೂ ಶರಣ್‌ರ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾಗಿ ವಿಕ್ಟರಿ ಎಂಬುದು ಒಂದು ನಗುವಿನ ಫ್ಯಾಕ್ಟರಿ. ಆದ್ರೆ ಫ್ಯಾಕ್ಟ್ ಏನ್ ರೀ ಅಂದಾಗ ಗಣೇಶನ ಗಲಾಟೆ ನೆನಪಾದರೂ, ಈಗಾಗಲೇ ಎಷ್ಟೋ ಕನ್ನಡ ಚಿತ್ರಗಳಲ್ಲಿ ಬಂದಿರುವ ಹಿಂದಿಯ ಹಂಗಾಮ ಚಿತ್ರದ ಕ್ಲೈಮ್ಯಾಕ್ಸ್‌ನ 'ಕಾಮಿಡಿ ಕರೆಂಟ್‌' ಮತ್ತೊಮ್ಮೆ ರಿಪೀಟ್ ಆಗಿದ್ದರೂ, ಬೇರೆ ಚಿತ್ರದ ಎಳೆ ತೆಗೆದುಕೊಂಡಿದ್ದರೂ, ಅದು ಅಲ್ಲಲ್ಲಿ ಗಂಟು ಹಾಕಿಕೊಂಡಿದೆ ಎನಿಸಿದರೂ, ಪ್ರೇಕ್ಷಕ ಮುಖ ಗಂಟು ಹಾಕಿಕೊಳ್ಳಲು ಮಾತ್ರ  ಅವಕಾಶವೇ ಇಲ್ಲ ಎನ್ನುವ ವಿಕ್ಟರಿ ಚಿತ್ರಕ್ಕೆ, ಕ್ವಾಟ್ರು ಖಾಲಿ ಆದ್ರೂ ಥೇಟ್ರು ಫುಲ್ ಆಗಿಸುವಂಥ ಲಕ್ಷಣಗಳಿವೆ.
  ಚಿತ್ರದ ಕಥೆಯಲ್ಲಿ ಇನ್ನೊಂದು ಚಿತ್ರ ಕಾಣಿಸುತ್ತದೆ. ಈ ಶರಣ್ ಪಾತ್ರದಲ್ಲಿ, ಆ ಶರಣ್ ಕಾಣಿಸುತ್ತಾರೆ. ರಂಗಾಯಣ ರಘು ವೇಷದಲ್ಲಿ ತಬಲಾ ನಾಣಿ ಕಾಣಿಸುತ್ತಾರೆ, ಯಾವಾಗಲೂ ಮುಖದ ಮೇಲೆ ಸೆರಗು ಹೊದ್ದುಕೊಂಡಿರುವ ನಾಣಿ ಹೆಂಡ್ತಿ ಅಂತೂ ಸಿನಿಮಾ ಪೂರ್ತಿ ಕಾಣಿಸೋದೇ ಇಲ್ಲ. ಹೀಗೆ, ಮಿಸ್ಟೇಕನ್ ಐಡೆಂಟಿಟಿ ಕಾನ್ಸೆಪ್ಟ್‌ಗೆ ಹೇಳಿ ಮಾಡಿಸಿದ ಚಿತ್ರವಾದರೂ ಚಿತ್ರದಲ್ಲಿ ಮಿಸ್ಟೇಕ್‌ಗಳು ಮಾತ್ರ ಕಡಿಮೆ. ಹಾಗಾಗಿ ತಮ್ಮ ಮೊದಲ ಪ್ರಯತ್ನದಲ್ಲಿ ನಿರ್ದೇಶಕ ನಂದಕಿಶೋರ್‌ಗೆ ವಿಕ್ಟರಿ ಸಿಕ್ಕಿದೆ ಎಂದು ಹೇಳಲಡ್ಡಿಯಿಲ್ಲ.
ಕಥೆಯಲ್ಲಿ ಡಬಲ್ ಶರಣ್ ಎಂಟ್ರಿ ಆದಮೇಲೆ ಸಿನಿಮಾ ಕೊಂಚ ವೀಕ್ ಎನಿಸಿದರೂ ಪ್ರಶಾಂತ್‌ರ ಸಂಭಾಷಣೆ ಎಲ್ಲೂ ಚಿತ್ರವನ್ನು ಕೈ ಬಿಟ್ಟಿಲ್ಲ. ಕೆಲವೊಮ್ಮೆ ಅವರು ಬರೆದ ಇಂಟರೆಸ್ಟಿಂಗ್ ಸಂಭಾಷಣೆಗಾಗಿಯೇ ದೃಶ್ಯ ಸೃಷ್ಟಿಯಾಗಿದೆ ಎಂದು ಅನುಮಾನ ಹುಟ್ಟಿಸುವಷ್ಟರ ಮಟ್ಟಿಗೆ ಪ್ರಶಾಂತ್ ತಮ್ಮ ಪ್ರತಿಭೆ ಮೆರೆದಿದ್ದಾರೆ. ಹಾಗಾಗಿ ಪ್ರಶಾಂತ್ ಅವರನ್ನು ಕನಿಷ್ಟ ಪಕ್ಷ ಚಿತ್ರದ ಸೆಕೆಂಡ್ ಹೀರೋ ಎಂದು ಕರೆದರೆ ತಪ್ಪಿಲ್ಲ.
ಶರಣ್‌ರ ಪ್ರತಿಯೊಂದು ಮಾತು, ಹಾವಭಾವಕ್ಕೂ ವಾಟ್ ಆ್ಯನ್ ಐಡಿಯಾ ಶರಣ್‌ಜೀ ಎನ್ನುತ್ತಾ ಪ್ರೇಕ್ಷಕ ಶರಣಾಗುತ್ತಾನೆ. ಸಾಧು ಕೋಕಿಲಾ ಫುಲ್ ಫಾರ್ಮ್‌ನಲ್ಲಿದ್ದಾರೆ. ಖಳನಾಯಕ ರವಿಶಂಕರ್ ಪ್ರೇಕ್ಷಕ ಗಹಗಹಿಸಿ ನಗುವಂತೆ ಮಾಡುತ್ತಾರೆ. ನಾಣಿ ಅವರದ್ದು ಅಭಿನಯ ಎನ್ನುವುದಕ್ಕಿಂತ ಅನುಕರಣೆ ಎಂದರೆ ಅದು ಅವರಿಗೆ 'ಕೇಳಿಸುತ್ತದೋ ಇಲ್ಲವೋ' ಗೊತ್ತಿಲ್ಲ.  ರಂಗಾಯಣ ರಘು ಕಾಲ್‌ಶೀಟ್ ಸಿಗದೇ ಇದ್ದುದಕ್ಕೋ ಏನೋ ನಾಣಿಗೆ ರಘು ಅವರ ಮ್ಯಾನರಿಸಂ ತುಂಬಿ ಅಭಿನಯಿಸುವಂತೆ ಮಾಡಿರುವುದು ವಿಶೇಷ. ನಾಯಕಿ ಅಸ್ಮಿತಾ ನಗದೆ ಇದ್ದಾಗಲೂ ಚೆನ್ನಾಗಿ ಕಾಣಿಸುತ್ತಾರೆ. ಅವಿನಾಶ್ ಕಾಮಿಡಿ ಚಿತ್ರಕ್ಕೆ ಸೀರಿಯಸ್‌ನೆಸ್ ತಂದುಕೊಟ್ಟಿದ್ದಾರೆ.
ತಮ್ಮ ಜನ್ಯಪ್ರಿಯ ಟ್ಯೂನ್‌ಗಳ ಮೂಲಕ ಅರ್ಜುನ್, ವಿಕ್ಟರಿ ವ್ಯಾಲ್ಯೂ ಹೆಚ್ಚಿಸಿದ್ದಾರೆ. ಚಂದ್ರು ಛಾಯಾಗ್ರಹಣಕ್ಕೂ ಟೂ ಥಂಬ್ಸ್ ಅಪ್.  ಹೇಳಿ ಕೇಳಿ ಇದು ಕಾಮಿಡಿ ಚಿತ್ರ. ಪ್ರೇಕ್ಷಕನಿಗೆ ನಕ್ಕ ಹಾಗೆ ನಟಿಸುವುದಕ್ಕೆ ಇಲ್ಲಿ ಅವಕಾಶ ಇಲ್ಲ. ಹಾಗಾಗಿ ಕಥೆಯಲ್ಲಿ ಯಾರೋ ಒಬ್ಬ ಹೊಗೆ ಹಾಕಿಸಿಕೊಂಡರೂ ಅದು ನಗೆ ಉಕ್ಕಿಸುತ್ತದೆ. ಇದರ ಜೊತೆಗೆ, ಹಾಸ್ಯ  ಚಿತ್ರಕ್ಕೆ ಹೆಚ್ಚು ಬಂಡವಾಳ ಬೇಡ ಎನ್ನುವ ನಿರ್ಮಾಪಕರು ಮೋಹನ್ ಅವರನ್ನು ನೋಡಿ ಕಲಿಯಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ರಿಚ್ ಆಗಿರುವುದರಿಂದ ಜನಕ್ಕೆ ರೀಚ್ ಆಗುವುದು ಕಷ್ಟವೇನಲ್ಲ.

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.