ಹೊಡೆದು ಹೊಡೆದು ಬಾರೋ....
ತುಂಬಿ ಗರ್ಭಿಣಿ, ಸುಡು ಬಿಸಿಲಿನಲ್ಲಿ ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಪಕ್ಕದಲ್ಲೇ ಕಲ್ಲು ಹೊಡೆಯುತ್ತಿರುವ ಗಂಡ...

ತುಂಬಿ ಗರ್ಭಿಣಿ, ನೆತ್ತಿ ಸುಡುವ ಬಿಸಿಲಿನಲ್ಲಿ ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಪಕ್ಕದಲ್ಲೇ ಕಲ್ಲು ಹೊಡೆಯುತ್ತಿರುವ ಗಂಡ ತಲೆ ಸುತ್ತಿ ಬೀಳುತ್ತಾನೆ. ಗಣಿ ಮಾಲೀಕ ಇಬ್ಬರ ಮೇಲೆ ಅಟ್ಟಹಾಸ ಮೆರೆಯುತ್ತಾನೆ..., ಗೌಡನಿಗೆ ಊರಿನ ಹೆಣ್ಣು ಮಕ್ಕಳ ಮೇಲೆ ಕಣ್ಣು. ತಾವು ಹೇಳಿದ್ದೇ ಸರಿ ಎನ್ನುವ ಗೌಡನ ಮಕ್ಕಳು. ಹೆಣ್ಣಿನ ಮಾನ, ಪ್ರಾಣಕ್ಕೆ ರಕ್ಷಣೆ ಇಲ್ಲದ ಊರು..., ಆತ ಚಿತ್ರದ ನಾಯಕ. ಗೌಡನ ಎಲ್ಲ ಕರ್ಮಕಾಂಡಗಳಿಗೂ ಮೂಕ ಸಾಕ್ಷಿ. ಗೌಡ ಹೇಳಿದಂತೆ ಕೇಳುವ ಬಂಟ ಅವನು. ಗೌಡಮಗಳಿಗೆ ಅಪ್ಪನ ಸೇವಕನ ಮೇಲೆ ಪ್ರೀತಿ..., ಅದೇ ಗೌಡ ಮತ್ತವನ ಮಕ್ಕಳಿಂದ ನಾಯಕನ ತಂಗಿ ಮತ್ತು ಅಮ್ಮನ ಸಾವು..., ಒಂದು ಫ್ಲ್ಯಾಷ್ ಬ್ಯಾಕ್. ಅಲ್ಲಿ ನಾಯಕನ ನಿಜವಾದ ತಂದೆ, ತಾಯಿಯ ದರ್ಶನ, ಇವರು ಗೌಡನ ಬೀಗರು, ತನ್ನ ಗತವನ್ನು ತಿಳಿಯುವ ನಾಯಕ ಎಲ್ಲರ ರುಂಡ ಕತ್ತರಿಸುವುದು... ಹೀಗೆ ನೋಡುತ್ತ ಹೊದರೆ ನೂರಾರು ಹಳೇ ಹಳ್ಳಿ ಚಿತ್ರಗಳ ಹೆಸರು ನೆನಪಾಗಬಹುದು. ಹಾಗಂತ ಅಂಥ ಹಳ್ಳಿ ಟ್ರೆಂಡ್ ಚಿತ್ರಗಳ ಸಾಲಿಗೆ ಈ ಚಿತ್ರ ಸೇರಬಹುದೇ? ಅದು ಸಾಧ್ಯವಿಲ್ಲ ಬಿಡಿ ಎನ್ನುವ ಈ ಕಾಲದ ಹಳೆ ಸಿನಿಮಾ 'ಜಟಾಯು'.
ರಾಜ್ ನಿರ್ದೇಸಿ, ಅಭಿನಯಿಸಿ ಇವರ ಸೋದರ ಪ್ರಭಾಕರ್ ನಿರ್ಮಾಣ ಮಾಡಿರುವ 'ಜಟಾಯು' ಚಿತ್ರ ನೋಡಿದ ಮೇಲೆ ಕಾಲ ಬದಲಾಗಿಲ್ಲವೇ? ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿರೆ ಚಿತ್ರತಂಡ ಸಿಟ್ಟು ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಸಿನಿಮಾ ಇರುವುದೇ ಹಾಗೆ. ಈ ಚಿತ್ರ ನೋಡುವಾಗ 'ಹೊಡಿಮಗ ಹೊಡಿಮಗ ಬಿಡಬ್ಯಾಡ ಅವನ್ನ' ಎನ್ನುವ ಹಾಡು ನೆನಪಾದರೆ ಅದು 'ಜೋಗಿ' ಚಿತ್ರದ ಪಾರ್ಟ್ 3 ಎಂದುಕೊಳ್ಳಬೇಡಿ. 'ಹೊಡೆಯೋದೆ ನನ್ ಬ್ಯುಸಿನೆಸ್, ಹಾರೋದೆ ನನ್ ಸ್ಟೈಲು' ಎಂಬ ಹೊಸ ರಿಮಿಕ್ಸ್ ಗೀತೆಗೆ ಬದ್ದ ಎನ್ನುವ ಕೆಸರು ಗದ್ದೆ ವೀರನ ಚಿತ್ರವಿದು. ಹೊಡೆದಾಟ, ಹಾರಾಟ, ಬಡಿದಾಟವೇ ಚಿತ್ರದ ಪ್ರಧಾನ. ಹೊಡೆಯೋದು, ಹೊಡೆಸಿಕೊಳ್ಳುವುದು ಬಿಟ್ಟರೆ ಚಿತ್ರದಲ್ಲಿ ಮತ್ತೇನು ಇಲ್ಲ.
ಬಾಲ್ಯದಲ್ಲೇ ಅಪ್ಪ, ಅಮ್ಮನನ್ನು ಕಳೆದುಕೊಂಡ ನಾಯಕನನ್ನು ಊರಿನ ಗೌಡನ ಮನೆಯಲ್ಲಿ ಕೆಲಸ ಮಾಡುವ ಮುದುಕಿ ಸಾಕುವುದು. ಆತ ದೊಡ್ಡವನಾದ ಮೇಲೆ ಗೌಡನಿಗೆ ಬಂಟನಾಗುವುದು. ಗೌಡ ಹೇಳಿದ ಕೆಲಸಗಳನ್ನು ಮಾಡಿಕೊಂಡಿರುವ ನಾಯಕನನ್ನು ಪ್ರೀತಿಸುವ ಗೌಡನ ಮಗಳು, ಅದನ್ನು ನಿರಾಕರಿಸುವ ನಾಯಕನಿಗೆ ಪಕ್ಕದೂರಿನ ಬೆಳ್ಳಿ ಮೇಲೆ ಪ್ರೀತಿ ಹುಟ್ಟುವುದು, ಮುಂದೆ ಗೌಡನ ವಿರುದ್ಧ ನಾಯಕ ತಿರುಗಿ ಬೀಳುವುದು, ಸಾವು, ನೋವು... ಇವು ಚಿತ್ರದ ಟರ್ನಿಂಗ್ ಪಾಯಿಟ್ಸ್. ಆದರೆ ಚಿತ್ರದ ನಿಜವಾದ ಜೀವ ಇರುವುದು ಸಾಹಸ ದೃಶ್ಯಗಳಲ್ಲಿ. ಥ್ರಿಲ್ಲರ್ ಮಂಜು, ಮಾಸ್ ಮಾದರ ಸಾಹಸ ಸಂಯೋಜನೆಗೆ ಬಹುಪರಾಕ್ ಹೇಳಬೇಕು. ನಾಯಕ ರಾಜ್ ಕೂಡ ಫೈಟ್ ಮಾಡುವಾಗ ಮೈ ಚಳಿ ಬಿಟ್ಟು ಹಾರಿದ್ದಾರೆ.
ಆದರೆ ಸಿನಿಮಾ ಎಂದರೆ ಹೊಡೆದಾಟ, ಹಾರಾಟವಲ್ಲ ಎಂದುಕೊಂಡವರಿಗೆ 'ಜಟಾಯು' ಇಷ್ಟವಾಗೋಲ್ಲ. ಚಿತ್ರರಂಗ ಮುಂದಕ್ಕೆ ಹೋಗುತ್ತಿದ್ದರೆ, ಬಸ್ ಕಂಡಕ್ಟರ್‌ನಂತೆ 'ಹಿಂದೆ ಬನ್ನಿ' ಎನ್ನುವ ಸೂತ್ರದ ಚಿತ್ರ. ಸಾಹಸದ ಜೊತೆಗೆ ಕಥೆ ಮತ್ತು ಪಾತ್ರಧಾರಿಗಳ ಅಭಿನಯ ಮುಖ್ಯವಾಗಬೇಕಿತ್ತು.
ಗೌಡನಾಗಿ ಅವಿನಾಶ್, ಪೆಟ್ರೋಲ್ ಪ್ರಸನ್ನ, ನಾಯಕಿ ಸುರಭಿ ಹೀಗೆ ಎರಡ್ಮೂರು ಪಾತ್ರಗಳ ಹೊರತಾಗಿ ಯಾರೂ ನೆನಪಾಗಲ್ಲ. ನಾಯಕನ ಸಾಕು ತಾಯಿ ಪಾತ್ರಧಾರಿಯ ಸಂಭಾಷಣೆ ಕೇಳುತ್ತಿದ್ದರೆಹೊಸ ಟಾರ್ ರಸ್ತೆ ಮೇಲೆ ಹಳೆ ತಗುಡು ಗೀಚಿದಂತೆ. ನಂದಕುಮಾರ್ ಛಾಯಾಗ್ರಹಣ ಓಕೆ. ಇನ್ನು ಚಿತ್ರದ ಆರಂಭದಲ್ಲೇ ಕಾಣುವ ಕಲ್ಲು ಗಣಿಗಾರಿಕೆ ಸದ್ದಿನ ಜೊತೆ ರೀರೆಕಾರ್ಡಿಂಗ್ ಸ್ಪರ್ಧೆ ನೀಡುತ್ತದೆ. ವಿನಯ್ ಚಂದ್ರರ ಸಂಗೀತದಲ್ಲಿ ಎರಡು ಹಾಡು ಕೇಳಲು ಅಡ್ಡಿ ಇಲ್ಲ.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


