ಹಳೇ ಟೆಂಟ್ನಲ್ಲಿ ನಾಣಿ ಡ್ರಾಮ

ಅಕ್ಷರ ಹಾಗೂ ದೃಶ್ಯ ಮಾಧ್ಯಮದಲ್ಲಿ ಹಾಸ್ಯಕ್ಕೊಂದು ದೊಡ್ಡ ಚರಿತ್ರೆ ಇದೆ. ಮನುಷ್ಯನ ಚಿಂತೆ, ಬೇಸರಗಳನ್ನು ದೂರ ಮಾಡಿ ಒಂದಿಷ್ಟು ರಿಲ್ಯಾಕ್ಸ್ಗೆ ಮಾತ್ರ ಹಾಸ್ಯ ಸೀಮಿತವಲ್ಲದಿದ್ದರೂ ಸದ್ಯ ಭಾರತೀಯ ಚಿತ್ರರಂಗ, ಹಾಸ್ಯವನ್ನು ಅಷ್ಟಕ್ಕೇ ಸೀಮಿತ ಮಾಡಿದೆ. ಹೀಗಾಗಿ ಚಾಪ್ಲಿನ್ರ ಹಾಸ್ಯದಲ್ಲಿ ಕಾಣುವ ಸಾಮಾಜಿಕ ಕ್ರಾಂತಿಯನ್ನು ಇಲ್ಲಿ ಹುಡುಕಲಾಗದು. ಆದರೆ ಬಾಲಿವುಡ್ ಮಟ್ಟಗೆ ಹಾಸ್ಯ ಚಿತ್ರಗಳೆಂದ ಕೂಡಲೇ ಅಲ್ಲಿ ಮಸಾಲ ಸಂಗತಿಗಳಿಗೇ ಹೆಚ್ಚು ಮಹತ್ವ. ತೆಲುಗು, ತಮಿಳು ಇದಕ್ಕಿಂತ ಕೊಂಚ ಭಿನ್ನ. ಕೆಲವನ್ನು ವ್ಯಂಗ್ಯವಾಗಿ ನೋಡುವ ಪ್ರವೃತ್ತಿ ಅವರದ್ದು. ಆದರೆ ಕನ್ನಡದ ಹಾಸ್ಯ ಚಿತ್ರಗಳಿಗೆ ಯಾವ ದಾರಿಯಲ್ಲಿ ಸಾಗಬೇಕೆಂಬ ಬಗ್ಗೆ ಮೊದಲಿನಿಂದಲೂ ಒಂದಷ್ಟು ಗೊಂದಲಗಳಿದ್ದಂತಿವೆ. ಏನೇ ಮಾಡಲು ಹೋದರೂ ಅಲ್ಲಿ ಮತ್ತೊಂದರ ನೆರಳು ಕಾಣುತ್ತದೆ. ಆದರೂ ನಮ್ಮ ಹಾಸ್ಯ ಚಿತ್ರಗಳು ಪ್ರೇಕ್ಷಕನನ್ನು ರಂಜಿಸಿವೆ.
ಆದರೆ ಇತ್ತೀಚೆಗೆ ಹಾಸ್ಯದ ಧಾಟಿ ಗಡಿ ದಾಟಿಕೊಂಡು ಬರುತ್ತಿವೆ. ಈ ಕಾರಣಕ್ಕಾಗಿಯೋ ಏನೋ, ಒಮೊಮ್ಮೆ ಹಾಸ್ಯದ ಹೆಸರಿನಲ್ಲಿ ಬರುವ ಚಿತ್ರಗಳು ಅಪಹಾಸ್ಯವಾಗಿ ಕಂಡು ನೋಡುಗನಿಗೆ ಕಿರಿಕಿರಿ ಉಂಟು ಮಾಡುತ್ತವೆ. ಆದರೂ ಹಾಸ್ಯ ಚಿತ್ರಗಳ ಮೇಲೆ ಪ್ರೇಕ್ಷಕ ನಂಬಿಕೆ ಕಳೆದುಕೊಂಡಿಲ್ಲ. ಅದೇ ಭರವಸೆಯಿಂದ 'ಛತ್ರಿಗಳು ಸಾರ್ ಛತ್ರಿಗಳು' ಸಿನಿಮಾ ನೋಡಲು ಬರುವವರನ್ನು ಚಿತ್ರ ಒಮ್ಮೆ ನಗಿಸಿದರೆ, ಮತ್ತೊಮ್ಮೆ 'ಇದು ಬೇಕಿತ್ತಾ' ಎಂಬ ಪ್ರಶ್ನೆಗೆ ದೂಡುತ್ತದೆ. ಮಗದೊಮ್ಮೆ ಈ ಒಂದು ದೃಶ್ಯಕ್ಕಾದರೂ ಒಂದ್ ಸಲ ಈ ಚಿತ್ರ ನೋಡಬೇಕು ಎನ್ನಿಸುತ್ತದೆ. ಹೀಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿದ ಮಿಶ್ರ ಮನಸ್ಥಿತಿಯಲ್ಲೇ 'ಛತ್ರಿ' ಆಟವನ್ನು ಕಣ್ತುಂಬಿಕೊಳ್ಳಬೇಕು. 'ಕುರಿಗಳು ಸಾರ್ ಕುರಿಗಳು', 'ಕತ್ತೆಗಳು ಸಾರ್ ಕತ್ತೆಗಳು' ಚಿತ್ರಗಳ ನಂತರ ಮತ್ತೆ ಎಸ್. ನಾರಾಯಣ್, ರಮೇಶ್ ಅರವಿಂದ್, ಮೋಹನ್ ಕಾಂಬಿನೇಷನ್ನಲ್ಲಿ ಬಂದಿರುವ ಚಿತ್ರ, 'ಛತ್ರಿ...'. ಆದರೆ ನಟಿ ಉಮಾಶ್ರೀ ಬಳಿ ಕೀ ಕದಿಯಲು ಹೋಗುವ ನಾಣಿ, ರಮ್ಮಿ, ಮೋನಿಯರ ಪೈಕಿ ನಾಣಿ ಮೇಲೆ ವಾರೆ ನೋಟ ಬೀರುವ ಉಮಾಶ್ರೀಯ ಟ್ರ್ಯಾಕ್ ನೋಡಿದಾಗ ನಾಣಿ ಕಂಪನಿ, ಹಳೇ ಟೆಂಟ್ನಲ್ಲಿ ಹೊಸ ಡ್ರಾಮ ಮಾಡಿದೆ ಎನ್ನಿಸುತ್ತದೆ.
ಮೂರು ಛತ್ರಿಗಳು. ನಾಣಿ, ರಮ್ಮಿ, ಮೋನಿ. ಇವರಿಗೆ ಜೋಡಿಯಾಗಿ ನಾಲ್ಕು ಬಿತ್ರಿಗಳು. ಜೊತೆಗೊಂದಿಷ್ಟು ಕಂತ್ರಿಗಳು ಒಟ್ಟಾಗಿ 'ಛತ್ರಿ' ಆಟವಾಡುತ್ತಾರೆ. ಮೂರು ಛತ್ರಿಗಳು ತಾವು ಪ್ರೀತಿಸುವ ಬಿತ್ರಿಯರನ್ನು ಮದುವೆಯಾಗಲು ಹಾಗೂ ಐಷಾರಾಮಿ ಜೀವನಕ್ಕಾಗಿ ದುಡ್ಡು ಮಾಡಲು ಹೋಗುತ್ತಾರೆ. ಹಣದ ಹಿಂದೆ ಹೋಗುವ ಈ ಛತ್ರಿಗಳಿಗೆ ಒಂದಿಷ್ಟು ಅಡ್ಡದಾರಿಗಳು ಕಂಡರೂ, ಮೋನಿಯ ಅತ್ತೆ ರಾಜಮಂಡ್ರಿ ರಾಜಲಕ್ಷ್ಮಿ ಬಳಿ ಖಜಾನೆ ಲಾಕರ್ ಕೀ ಕದಿಯುವುದೇ ಮುಖ್ಯ ದಾರಿ ಕಾಣುತ್ತದೆ. ಮೋನಿಯ ಯೋಜನೆಯಂತೆ ನಾಣಿ, ರಮ್ಮಿ ದರೋಡೆ ಕೋರರಾಗುವುದೇ ಚಿತ್ರದ ಎರಡು ಸಾಲಿನ ವಿವರಣೆ. ಪ್ರೇಕ್ಷಕನಿಗೆ ಚಿತ್ರ ಆಗಾಗ ನಗು ಕೊಟ್ಟರೂ 'ಕುರಿ', 'ಕತ್ತೆ'ಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೋಗುವವರಿಗೆ ಶ್ಯಾನೆ ಬೇಸರ ಮೂಡಿಸುತ್ತದೆ. ಇದರರ್ಥ, ತುಂಬಾ ವರ್ಷಗಳ ನಂತರ ಕಾಮಿಡಿ ಮಾಡಲು ಬಂದ ನಾಣಿ ಕಂಪನಿಗೆ ಮತ್ತಷ್ಟು ರಂಜಿಸುವ ಅವಕಾಶಗಳಿದ್ದವು. ಇನ್ನೂ ಹೆಚ್ಚು ಹೆಚ್ಚು ಪಂಚ್ ಡೈಲಾಗ್ಗಳು ಬೇಕಿತ್ತು ಎನ್ನಿಸಿದರೆ ನಾಣಿ ಟೀಮ್ ಅದನ್ನು ಉಚಿತ ಸಲಹೆ ಎಂದುಕೊಳ್ಳಬಾರದು. ಇಡೀ ಚಿತ್ರ ನೋಡಿದ ಮೇಲೆ ಏನೋ ಮಿಸ್ ಆದಂತೆ ಕಾಣುತ್ತದೆ. ಕೆಲ ದೃಶ್ಯಗಳು ಕಾಶಿನಾಥ್ರ 'ಅನುಭವ'ಗಳನ್ನು ನೆನಪಿಸುತ್ತವೆ.
ನಟಿ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಬುಲೆಟ್ ಪ್ರಕಾಶ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ನಾಣಿ ಗಲಾಟೆಯಲ್ಲಿ ಅರ್ಜುನ್ ಜನ್ಯರ ಸಂಗೀತ ಗುರುತಿಸುವುದು ಕಷ್ಟ. ಎಂದಿನಂತೆ ಜಗದೀಶ್ ವಾಲಿಯ ಕ್ಯಾಮೆರಾ ಟ್ರ್ಯಾಲಿ ಹಾದಿ ತಪ್ಪಿಲ್ಲ. ನಟಿ ಸನಾತನಿ ಹೊರತಾಗಿ ಬೇರೆಯವರಿಗೆ ಹೆಚ್ಚು ಕೆಲಸವಿಲ್ಲ. ತೀರಾ ಅದ್ಭುತ ಸಿನಿಮಾ ಅಲ್ಲದಿದ್ದರೂ, ಕೆಟ್ಟ ಚಿತ್ರವಂತೂ ಅಲ್ಲ.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


