ನರ ಸಂಬಂಧಿ ಆರೋಗ್ಯ ಸಮಸ್ಯೆ ನಡುವೆಯೂ ವೇದಿಕೆಯಲ್ಲಿ ಹಾಡಿದ ಸೋನು ನಿಗಮ್; ‘Show must go on’ ಎಂದ ಖ್ಯಾತ ಗಾಯಕ
ಗಾಯಕನಾಗಿ ಗಂಟಲಿನ ಆರೋಗ್ಯ ಅತ್ಯಂತ ಮುಖ್ಯವಾದರೂ, ವೈದ್ಯರು ನೀಡಿರುವ ಸ್ನಾಯು ಸಡಿಲಿಕೆ ಔಷಧಿಗಳು (Muscle Relaxants) ತಮ್ಮ ಧ್ವನಿಯ ಮೇಲೂ ಪರಿಣಾಮ ಬೀರಿವೆ.

ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ಅವರು ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ನರ (Nerve) ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ತಮ್ಮ ಸಂಗೀತ ಕಾರ್ಯಕ್ರಮಗಳನ್ನು ರದ್ದುಗೊಳಿಸದೆ ವೇದಿಕೆಯಲ್ಲಿ ಹಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ಸೋನು ನಿಗಮ್, ತೀವ್ರ ನೋವು ಮತ್ತು ವೈದ್ಯಕೀಯ ಚಿಕಿತ್ಸೆಯ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ಮಾತನಾಡಿರುವ ಅವರು, “ಇಲ್ಲಿ ನರಕ್ಕೆ ಆಗಿರುವ ಗಾಯದಿಂದ ನಾನು ಒಂದು ವಾರಕ್ಕೂ ಹೆಚ್ಚು ಕಾಲ ಕಷ್ಟ ಅನುಭವಿಸುತ್ತಿದ್ದೇನೆ. ಆದರೂ ಪರವಾಗಿಲ್ಲ. ವೇದಿಕೆಯ ಮೇಲೆ ಹಾಡಲು ದೇವರು ನನಗೆ ಶಕ್ತಿ ನೀಡಲಿ” ಎಂದು ಹೇಳಿದ್ದರು.
ಇದರ ಬಳಿಕ ವೇದಿಕೆಗೆ ಬಂದ ಸೋನು ನಿಗಮ್, ತಮ್ಮ ಜನಪ್ರಿಯ ಹಾಡುಗಳಾದ ‘ಪರದೇಸಿಯಾ’, ‘ಸಂದೇಶೇ ಆತೆ ಹೈ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಉತ್ಸಾಹದಿಂದ ಹಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ಕೆಲವು ದಿನಗಳ ಹಿಂದೆ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದ ಸೋನು, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಿಸಿದ್ದರು. “ನನ್ನ ನರಗಳು ಒತ್ತಡಕ್ಕೊಳಗಾಗಿವೆ (Pinched Nerves). ಕಳೆದ ಒಂದು ವಾರದಿಂದ MRI ಮತ್ತು CT ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ. ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದರು.
ಚಿಕಿತ್ಸೆಯ ಭಾಗವಾಗಿ ನಿರಂತರ ಫಿಸಿಯೋಥೆರಪಿ ಪಡೆಯುತ್ತಿರುವುದಾಗಿ ತಿಳಿಸಿದ ಅವರು, “ಫಿಸಿಯೋಥೆರಪಿ ತುಂಬಾ ನೋವಿನಿಂದ ಕೂಡಿದೆ. ಈಗ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಅದರ ಪರಿಣಾಮವಾಗಿ ನನ್ನ ಗಂಟಲು ಕೂಡ ಸ್ವಲ್ಪ ಭಾರವಾಗಿರುವಂತೆ ಅನಿಸುತ್ತಿದೆ” ಎಂದು ತಿಳಿಸಿದ್ದರು.
ಗಾಯಕನಾಗಿ ಗಂಟಲಿನ ಆರೋಗ್ಯ ಅತ್ಯಂತ ಮುಖ್ಯವಾದರೂ, ವೈದ್ಯರು ನೀಡಿರುವ ಸ್ನಾಯು ಸಡಿಲಿಕೆ ಔಷಧಿಗಳು (Muscle Relaxants) ತಮ್ಮ ಧ್ವನಿಯ ಮೇಲೂ ಪರಿಣಾಮ ಬೀರಿವೆ ಎಂದು ಹೇಳಿದ್ದರು.
1990ರ ದಶಕದಲ್ಲಿ ವೇದಿಕೆ ಕಾರ್ಯಕ್ರಮಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಸೋನು ನಿಗಮ್, 1993ರಲ್ಲಿ ಬಿಡುಗಡೆಯಾದ Aaja Meri Jaan ಚಿತ್ರದ ‘ಓ ಆಸ್ಮಾನ್ ವಾಲೇ ಜಮೀನ್ ಪರ್ ಉತರ ಕೆ ದೇಖ್’ ಹಾಡಿನ ಮೂಲಕ ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡರು.
ಇಲ್ಲಿಯವರೆಗೆ ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 5,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, Kal Ho Naa Ho ಚಿತ್ರದ ಶೀರ್ಷಿಕೆ ಗೀತೆಗೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
Pardes ಚಿತ್ರದ ‘ಯೇ ದಿಲ್ ದೀವಾನಾ’, Kabhi Khushi Kabhie Gham ಚಿತ್ರದ ‘ಸೂರಜ್ ಹುವಾ ಮದ್ದಮ್’ ಹಾಗೂ ‘ಕಲ್ ಹೋ ನಾ ಹೋ’ ಸೇರಿದಂತೆ ಅನೇಕ ಸೂಪರ್‌ಹಿಟ್ ಹಾಡುಗಳ ಮೂಲಕ ಸೋನು ನಿಗಂ ಭಾರತೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಆರೋಗ್ಯ ಸಮಸ್ಯೆಯ ನಡುವೆಯೂ ಸಂಗೀತದ ಮೇಲಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿರುವ ಸೋನು ನಿಗಂ ಅವರ ಈ ನಡೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



