ಶ್ರೀನಗರ ಕಿಟ್ಟಿ, ಮೇಘನಾ ರಾಜ್ ನಟನೆಯ 'ಅಮರ್ಥ' ಬಿಡುಗಡೆ ದಿನಾಂಕ ಘೋಷಣೆ
ಚಿತ್ರದ ಕುರಿತು ಮಾತನಾಡಿದ ಶ್ರೀನಗರ ಕಿಟ್ಟಿ, 'ಬಹುಪರಾಕ್' ಮತ್ತು 'ಬುದ್ಧಿವಂತ 2' ನಂತರ ಮೇಘನಾ ರಾಜ್ ಅವರೊಂದಿಗೆ ಇದು ತಮ್ಮ ಮೂರನೇ ಚಿತ್ರ ಎಂದರು.
ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ನಟನೆಯ 'ಅಮರ್ಥ' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಪಂಚರಂಗಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗಡೆ ನಿರ್ಮಿಸಿರುವ ಈ ಚಿತ್ರವು ಸೆಪ್ಟೆಂಬರ್ 18 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಚಿತ್ರಕ್ಕೆ ಗುರು ಹೆಗಡೆ ಮತ್ತು ವಿನಯ್ ಪ್ರೀತಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ 'ಯು/ಎ' (U/A) ಪ್ರಮಾಣಪತ್ರ ದೊರೆತಿದೆ.
ಚಿತ್ರದ ಶೀರ್ಷಿಕೆಯ ಕುರಿತು ವಿವರಿಸುತ್ತಾ, ಕಥೆಗಾರ, ನಿರ್ಮಾಪಕ ಹಾಗೂ ನಟರೂ ಆಗಿರುವ ಗುರು ಹೆಗಡೆ, ಈ ಶೀರ್ಷಿಕೆಯು ಮಾನವನ ತಿಳುವಳಿಕೆಗೆ ಮೀರಿದ ಒಂದು ಶಕ್ತಿಯನ್ನು ಸೂಚಿಸುತ್ತದೆ. 'ನಾವು ಸಾಮಾನ್ಯವಾಗಿ ಜೀವನದ ಎಲ್ಲವನ್ನೂ ವಿಧಿ, ದೈವಾನುಗ್ರಹ ಅಥವಾ ಹಣೆಬರಹಕ್ಕೆ ಆರೋಪಿಸುತ್ತೇವೆ. ಆದರೆ ಅವೆಲ್ಲಕ್ಕೂ ಮೀರಿದ ಒಂದು ಶಕ್ತಿಯಿದೆ; 'ಅಮರ್ಥ' (Amartha) ಆ ಶಕ್ತಿಯನ್ನೇ ಪ್ರತಿನಿಧಿಸುತ್ತದೆ' ಎಂದರು.
ಮಡಮಕ್ಕಿ ಮತ್ತು ನಾನು, ಅದು ಮತ್ತು ಸರೋಜಾ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಸಹ ನಿರ್ದೇಶಕ ವಿನಯ್ ಪ್ರೀತಂ, ಅಮರ್ಥವನ್ನು ಅಸಾಮಾನ್ಯವಾದ ಪ್ರಮೇಯವನ್ನು ಹೊಂದಿರುವ ಕಥೆ ಎಂದು ಬಣ್ಣಿಸಿದರು. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ಜೊತೆಗೆ ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗಡೆ ಮತ್ತು ತಮ್ಮಣ್ಣ ಶೆಟ್ಟಿ ಕೂಡ ನಟಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಶ್ರೀನಗರ ಕಿಟ್ಟಿ, 'ಬಹುಪರಾಕ್' ಮತ್ತು 'ಬುದ್ಧಿವಂತ 2' ನಂತರ ಮೇಘನಾ ರಾಜ್ ಅವರೊಂದಿಗೆ ಇದು ತಮ್ಮ ಮೂರನೇ ಚಿತ್ರ. ಈ ಚಿತ್ರವು ಒಬ್ಬ ಹುಡುಗನ ಬಾಲ್ಯದಿಂದ ಆರಂಭಗೊಂಡು, ಕಾಲಕ್ರಮೇಣ ಸ್ನೇಹವು ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಮತ್ತು ಬೆಂಗಳೂರು ಭಾಗಗಳಲ್ಲಿ 48 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಯಿತು.
'ಲಕ್ಷ್ಮಿ' ಪಾತ್ರದಲ್ಲಿ ನಟಿಸಿರುವ ಮೇಘನಾ ರಾಜ್, ಶಾಲಾ ದಿನಗಳ ಸ್ನೇಹಿತರ ಗುಂಪೊಂದು ಬೇರ್ಪಟ್ಟ ನಂತರ ಅವರ ಜೀವನದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಈ ಚಿತ್ರವು ಚಿತ್ರಿಸುತ್ತದೆ ಎಂದು ಹೇಳಿದರು. 'ಲಕ್ಷ್ಮಿ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಮಹಿಳೆ. ಅವರ ಜೀವನದಲ್ಲಿ ಕಿಟ್ಟಿ ಪಾತ್ರವು ಅವಳಿಗೆ ಹೇಗೆ ಬೆಂಬಲವಾಗಿ ನಿಲ್ಲುತ್ತದೆ ಎಂಬುದೇ ಈ ಕಥೆಯ ಸಾರಾಂಶ' ಎಂದು ಅವರು ತಿಳಿಸಿದರು.
ಚಿತ್ರಕ್ಕೆ ಗುರುಪ್ರಶಾಂತ್ ರೈ ಛಾಯಾಗ್ರಹಣವನ್ನೂ, ಶಿನೋಯ್ ವಿ ಜೋಸೆಫ್ ಹಾಗೂ ಪಂಚಮ್ ಜೀವ ಸಂಗೀತ ಸಂಯೋಜನೆ ಮಾಡಿದ್ದಾರೆ; ಹಾಗೆಯೇ ಶ್ರೀಧರ್ ವಿ ಸಂಭ್ರಮ್, ಬಲರಾಮ್ ಮತ್ತು ರಾಕೇಶ್ ಆಚಾರ್ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


