ವಿಷ್ಣು ಅಭಿಮಾನಿಗಳ ಕನಸು ನನಸು: ಮೈಸೂರಲ್ಲಿ 'ವಿಷ್ಣುವರ್ಧನ್ ಸ್ಮಾರಕ' ಅನಾವರಣ
ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನಲ್ಲಿ ಇಂದು ವಿಷ್ಣು ಸ್ಮಾರಕ ಅನಾವರಣವಾಗಿದೆ.

ಮೈಸೂರು: ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನಲ್ಲಿ ಇಂದು ವಿಷ್ಣು ಸ್ಮಾರಕ ಅನಾವರಣವಾಗಿದೆ.
ಚಲನಚಿತ್ರ ನಟ ವಿಷ್ಣುವರ್ಧನ್ ಅಭಿಮಾನಿಗಳ ಮುಗಿಲುಮುಟ್ಟುವ ಜಯಘೋಷದ ನಡುವೆ 'ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆ ಮಾಡಿದರು. ಮೈಸೂರಿನ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ 'ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ 7 ಅಡಿ ಎತ್ತರದ ಪ್ರತಿಮೆಯನ್ನೂ ಅವರು ಅನಾವರಣಗೊಳಿಸಿದರು.
ಸ್ಮಾರಕ ಲೋಕಾರ್ಪಣೆ ವೇಳೆ ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮೇಯರ್ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಉಪ ಮೇಯರ್ ಡಾ.ಡಿ.ರೂಪಾ ಇದ್ದರು.
ವೇದಿಕೆ ಮುಂಭಾಗದಲ್ಲಿ ನಟಿ ಭವ್ಯಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರಮೇಶ್ ಭಟ್ ಹಾಗೂ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಇದ್ದರು.
ಅಭಿಮಾನಿಗಳಿಗೆ ನಿರಾಸೆ:
ಸಾವಿರಾರು ಸಂಖ್ಯೆಯಲ್ಲಿ ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಅಭಿಮಾನಿಗಳಿಗೆ ಸ್ಮಾರಕ ವೀಕ್ಷಣೆಗೆ ಅವಕಾಶ ಸಿಗದೆ ನಿರಾಶರಾದರು. ಸ್ಥಳದಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸುರಕ್ಷತಾ ಸಿದ್ಧತೆಗಳು ಇಲ್ಲ. ಪೊಲೀಸರು ನಾಳೆ ಬರುವಂತೆ ಹೇಳಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ನಟ ಅನಿರುದ್ಧ ಮನವೊಲಿಸಲು ಯತ್ನಿಸಿದರು. ಆದರೂ ಅಭಿಮಾನಿಗಳ ಒತ್ತಾಯ, ಆಕ್ರೋಶ ಕೇಳುತ್ತಲೇ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


