ನಾನು ರಾಜಕೀಯದಿಂದ ದೂರ ಉಳಿದಿಲ್ಲ, ಏನೇ ಪ್ರಶ್ನೆಗಳಿದ್ದರೂ ನನಗೆ ಕೇಳಿ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತೆ: ನಿಖಿಲ್
ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ನಿಖಿಲ್ ಕುಮಾರಸ್ವಾಮಿ ದೂರ ಉಳಿಯಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ನಿಖಿಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ನಿಖಿಲ್ ಕುಮಾರಸ್ವಾಮಿ ದೂರ ಉಳಿಯಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ನಿಖಿಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಅರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ ಎಂದಿದ್ದಾರೆ.
ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎನ್ನುವುದು ಒಂದು ಭಾಗವಾದರೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನ ಸ್ಥಾನ ಕೊಟ್ಟಿರುವ ಸಮಸ್ತ ಕಲಾಭಿಮಾನಿಗಳಿಗೆ ನಾನು ಎಂದೆಂದಿಗೂ ಚಿರಋಣಿ.
ನನ್ನ ಮೊದಲ ಚಿತ್ರ ಜಾಗ್ವಾರ್ ಮತ್ತು ನಾನು ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಬೆನ್ನುತಟ್ಟಿ ಆಶೀರ್ವದಿಸಿ, ಪ್ರೋತ್ಸಾಹಿಸಿ ನನ್ನ ಯಶಸ್ಸಿಗೆ ನೀವೆಲ್ಲರೂ ಕಾರಣರಾಗಿದ್ದಿರಿ. ಅದಕ್ಕೆ ನಾನು ಆಭಾರಿ. ಇನ್ನೂ ಬೆಟ್ಟದಷ್ಟು ಕನಸು ಹೊತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ಮನರಂಜಿಸಬೇಕು ಎನ್ನುವುದು ನನ್ನ ಜೀವನದ ಗುರಿ ಎಂದಿದ್ದಾರೆ.
ಇಲ್ಲಿಯವರೆಗೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ನಾನು ನಿಮ್ಮ ನಿರೀಕ್ಷೆಗೂ ಮೀರಿ ಚಿತ್ರಗಳನ್ನು ಮಾಡುವವನಿದ್ದೇನೆ. ಕೊನೆಯದಾಗಿ ಎಲ್ಲಾ ಮಾಧ್ಯಮದ ಮಿತ್ರರಿಗೆ ರಾಜಕಾರಣ ಮತ್ತು ಸಿನಿಮಾದ ವಿಚಾರವಾಗಿ ನನಗೆ ಸಂಬಂಧಿಸಿದ ವಿಷಯಗಳಿದ್ದರೆ ಆ ಪ್ರಶ್ನೆಗಳಿಗೆ ನಾನೇ ಉತ್ತರ ನೀಡಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


