ಕೋವಿಡ್ ನಿಂದಾಗಿ ಮೂವರು ಆತ್ಮೀಯರನ್ನು ಕಳೆದುಕೊಂಡ ನಟ ಸಂಚಾರಿ ವಿಜಯ್!
ನಟ ಸಂಚಾರಿ ವಿಜಯ್ ಅವರ ಮೂವರು ಆತ್ಮೀಯರು ಕೋವಿಡ್ ಗೆ ಬಲಿಯಾಗಿದ್ದಾರೆ. ಆ ದುಃಖವನ್ನು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಅವರು ತೋಡಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಕೇವಲ ಜನ ಸಾಮಾನ್ಯರಲ್ಲದೆ, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕೂಡ ತಮ್ಮವರನ್ನು ಕಳೆದುಕೊಂಡ ದುಖಃದಲ್ಲಿದ್ದಾರೆ.
ನಟ ಸಂಚಾರಿ ವಿಜಯ್ ಅವರ ಮೂವರು ಆತ್ಮೀಯರು ಕೋವಿಡ್ ಗೆ ಬಲಿಯಾಗಿದ್ದಾರೆ. ಆ ದುಃಖವನ್ನು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಅವರು ತೋಡಿಕೊಂಡಿದ್ದಾರೆ.
‘ತೀರಾ ಹತ್ತಿರದವರು, ನಮಗೆ ಒಳಿತನ್ನು ಬಯಸುತ್ತಿದವರು, ದೈಹಿಕವಾಗಿ ಮಾನಸಿಕವಾಗಿ ಗಟ್ಟಿಮುಟ್ಟಾಗಿದ್ದವರು, ನಮ್ಮ ವಾರಿಗೆಯ ಅಥವಾ ನಮಗಿಂತ ಕಿರಿಯ ವಯಸ್ಸಿನವರನ್ನು ಕಳೆದುಕೊಂಡಾಗ ಆಗುವ ದುಃಖವಿದೆಯಲ್ಲಾ ಅದೊಂಥರಾ ಹೇಳಿಕೊಳ್ಳಲಾಗದ ನೋವು’ ಎಂದು ಸಂಚಾರಿ ವಿಜಯ್ ಬರಹ ಆರಂಭಿಸಿದ್ದಾರೆ.
ಸಂಚಾರಿ ವಿಜಯ್ ಅವರ ಫೆಸ್ ಬುಕ್ ಪೋಸ್ಟ್ ಸಂಪೂರ್ಣ ವಿವರ ಹೀಗಿದೆ-
"ಈ ಮೂವರ ಸಾವಿನ ವಾರ್ತೆ ನನ್ನನ್ನು ತೀವ್ರವಾಗಿ ಕಂಗೆಡಿಸಿದೆ. ಇನ್ನೂ ಅದಿನ್ನೆಷ್ಟು ಜನರನ್ನು ಬಲಿ ತೆಗೆದುಕೊಳ್ಳಲು ಈ ಕೊರೋನಾ ಸಂಚು ಹಾಕಿ ಕುಳಿತಿದೆಯೋ ಆ ದೇವರೇ ಬಲ್ಲ. ಇನ್ನೂ ಹತ್ತಾರು ವರ್ಷ ಬಾಳಿ ಬದುಕಬೇಕಾದವರು ಹೀಗೆ ಮಧ್ಯದಲ್ಲೇ ಹೊರಟು ಹೋದರೆ ಇವರನ್ನೇ ನಂಬಿಕೊಂಡ ಕುಟುಂಬದ ಗತಿ ಏನು? ನಮ್ಮ ಕುಟುಂಬದವರನ್ನೇ ಕಳೆದುಕೊಂಡಷ್ಟು ನೋವು ನನ್ನೊಳಗೆ.
"ಒಬ್ಬರು ರಾಘವೇಂದ್ರ ವೃತ್ತಿಯಲ್ಲಿ ವಕೀಲರಾಗಿದ್ದ ಇವರು ವೃತ್ತಿಪರತೆಯನ್ನು ಉಳಿಸಿಕೊಂಡಿದ್ದವರು. ಕನ್ನಡ-ಕನ್ನಡದ ಕಾರ್ಯಕ್ರಮಗಳೆಂದರೆ ಎಲ್ಲಾ ಜವಾಬ್ದಾರಿಯನ್ನೂ ತನ್ನ ಹೆಗಲಮೇಲೆ ಹೊತ್ತು ತಿರುಗುತ್ತಿದ್ದ ಅಪ್ಪಟ ಕನ್ನಡಾಭಿಮಾನಿ. ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸುವಾಗಲಂತೂ ಸಂಕೋಚದಿಂದಲೇ ಕೇಳುತ್ತಿದ್ದರು. ವಯಸ್ಸು 35 ರಿಂದ 40, ನನಗೆ ಆತ್ಮೀಯರೂ ಹೌದು. ಈಗ್ಗೆ ಎರೆಡು ತಿಂಗಳ ಹಿಂದೆಯಷ್ಟೇ ಹೊಸ ಆಫೀಸ್ ತೆರೆದು ಅದರ ಉದ್ಘಾಟನೆಗೆ ನನ್ನನ್ನು ಬಹಳ ಒತ್ತಾಯ ಮಾಡಿ ಕರೆದರೂ ಕಾರಣಾಂತರದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಈಗ ತಿರುಗಿ ಬರಲಾಗದ ಜಾಗಕ್ಕೆ ಹೋಗಿದ್ದೀರಿ. ನಿಮ್ಮನ್ನು ಕೊನೆಯ ದಿನಗಳಲ್ಲಿ ಭೆಟ್ಟಿಯಾಗಲು ಸಾಧ್ಯವಾಗಲೇ ಇಲ್ಲ ಕ್ಷಮಿಸಿಬಿಡಿ.
"ಮತ್ತೊಬ್ಬ ಮಧು ನನ್ನ ಕಾಲೇಜಿನ ಕಿರಿಯ ವಿದ್ಯಾರ್ಥಿ ವಯಸ್ಸು ಸುಮಾರು 30 ರಿಂದ 35. ಎರೆಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ, ಮಧುಗೆ ಒಂದು ವರ್ಷದ ಹೆಣ್ಣು ಮಗು ಕೂಡ ಇದೆ. ಭಾರತ ಸೇನೆಯಲ್ಲಿ ಸೈನಿಕನಾಗಿ ದುಡಿಯುತ್ತಿದ್ದು ಗಟ್ಟಿಮುಟ್ಟಾಗಿ ಆರೋಗ್ಯವಂತನಾಗಿದ್ದ. ರಜೆಗೆಂದು ಊರಿಗೆ ಬಂದವನು ಕೆಮ್ಮು ಕಾಣಿಸಿತೆಂದು ನಾಲ್ಕು ದಿನ ತಾನೇ ಮೊದಲನೇ ಮಹಡಿಯಲ್ಲಿ ಕ್ವಾರಂಟೈನ್ ಮಾಡಿಕೊಂಡಿದ್ದನಂತೆ. ಕೆಮ್ಮು ಕಡಿಮೆಯಾಗಲಿಲ್ಲವೆಂದು ಆಸ್ಪತ್ರೆಗೆ ತೋರಿಸಿದಾಗ ನಾಲ್ಕು ದಿನಗಳ ನಂತರ ಕೊರೋನಾ ಪಾಸಿಟಿವ್ ಎಂದು ರಿಪೋರ್ಟ್ ಬಂದಿದೆ ಅಲ್ಲಿಗೆ ಒಟ್ಟು ಎಂಟು ದಿನ ಕಳೆದಿದ್ದವು. ಅಷ್ಟರಲ್ಲಾಗಲೇ ಅವನ ಶ್ವಾಸಕೋಶ ಸಂಪೂರ್ಣವಾಗಿ ನಿಷ್ಕ್ರಿಯವಾಗಿ ಎಷ್ಟೇ ಸಾಹಸ ಮಾಡಿದರು ಸಧೃಡವಾಗಿದ್ದ ದೇಹ ಸ್ಪಂದಿಸದೆ ಎರೆಡು ದಿನಗಳ ಹಿಂದೆ ಅಸುನೀಗಿದ್ದಾನೆ. ಈತನ ಅಣ್ಣನೊಡನೆ ಫೋನ್ ಮಾಡಿ ಮಾತನಾಡುವಾಗ 'ಸರ್ ನಾವು ಮೊದಲ ಎರೆಡು ದಿನದಲ್ಲೇ ಆಸ್ಪತ್ರೆಗೆ ತೋರಿಸಿದ್ದಿದ್ದರೆ ನನ್ನ ತಮ್ಮ ಉಳಿದುಬಿಡುತ್ತಿದ್ದ ಸರ್. ಮನೆಯಲ್ಲೇ ಸರಿಹೋಗಬಹುದು ಎಂದು ಉದಾಸೀನ ಮಾಡಿ ತಪ್ಪು ಮಾಡಿಬಿಟ್ಟೆವು' ಎಂದು ಗೋಳಾಡುತ್ತಿದ್ದದ್ದು ಮನಸಿಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. ಎಂತಹ ಸೌಮ್ಯ ಸ್ವಭಾವದ ಮಗುವಿನ ಮನಸ್ಸು ಆತನದ್ದೆಂದರೆ ಇವನು ನಿಜವಾಗಿಯೂ ಗಡಿಯಲ್ಲಿ ಬಂದೂಕು ಹಿಡಿದು ಎದುರಾಳಿಯನ್ನು ಗುಂಡಿಟ್ಟು ಕೊಲ್ಲುವಷ್ಟು ಗಟ್ಟಿ ಧೈರ್ಯವಿದೆಯೇ? ಎಂಬ ಅನುಮಾನ ನನ್ನನ್ನು ಆಗಾಗ ಕಾಡುತ್ತಿತ್ತು. ನಿನ್ನ ಸಾವು ಅನ್ಯಾಯ ಮಧು. ಆ ದೇವರನ್ನೂ ನಾನು ಕ್ಷಮಿಸುವುದಿಲ್ಲ ಈ ನಿನ್ನ ಸಾವಿಗೆ.
"ಇನ್ನೂ ಸೌಮ್ಯ ಎನ್ನುವವರನ್ನು ಖುದ್ದಾಗಿ ಎಂದೂ ಭೆಟ್ಟಿಯಾಗಿಲ್ಲ ಆದರೆ ಕಲೆಯ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದವರು. ನನ್ನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಾ ಗೆದ್ದಾಗ ಸಂಭ್ರಮಿಸುತ್ತಾ ಸೋತಾಗ ಬೆನ್ನು ತಟ್ಟಿ ಧೈರ್ಯ ತುಂಬುತ್ತಾ ನನ್ನ ಜೊತೆಗಿದ್ದವರು. ಸದಾ ಹಸನ್ಮುಖಿ ನಿಮ್ಮ ಅಗಲಿಕೆ ನಮಗೆಲ್ಲ ತುಂಬಲಾರದ ನಷ್ಟ.
"ಆತ್ಮೀಯರೇ ಇಲ್ಲಿ ನಾನು ಹೆಸರಿಸಿರುವ ಮೂರು ಜನರೂ ಬಹಳ ಚಿಕ್ಕ ವಯಸ್ಸಿನವರು. ನೆನಪಿರಲಿ ಮೂವತ್ತರಿಂದ ನಲವತ್ತರ ಆಸುಪಾಸಿನವರು ಸಾಯುವ ವಯಸ್ಸೇ ಅಲ್ಲ. ದಯವಿಟ್ಟು ದಯವಿಟ್ಟು ಉಡಾಫೆಯಿಂದ ನನಗೇನು ಆಗುವುದಿಲ್ಲ ಎಂದು ಮನಸ್ಸಾ ಇಚ್ಛೆ ಓಡಾಡಬೇಡಿ. ನಾನು ಆರೋಗ್ಯವಂತನಾಗಿದ್ದೇನೆ ಲಸಿಕೆ ಕೂಡ ತೆಗೆದುಕೊಂಡಿದ್ದೇನೆ ಎಂದು ಎಲ್ಲೆಂದರಲ್ಲಿ ತಿರುಗಾಡಬೇಡಿ. ಕಾಯಿಲೆ ಉಲ್ಬಣವಾದಾಗ ನಾನೇ ಗುಣಪಡಿಕೊಳ್ಳುವೆ ಎಂದು ಉದಾಸೀನ ಮಾಡಬೇಡಿ. ಮಧುವಿನಂತಹ ಸಧೃಡವಾದ ದೇಹವೇ ಉರುಳಿ ಬಿದ್ದಾಗ ನಾವೆಲ್ಲ ಯಾವ ಲೆಕ್ಕ.
"ನಮಗಲ್ಲದಿದ್ದರೂ ನಮ್ಮಿಂದ ಮತ್ತಾರಿಗೋ ಹರಡಿ ಅವರು ಸೋಂಕಿತರಾಗಿ ಕಾಲವಾದರೆ ಆ ಕೊರಗು ನಮ್ಮನ್ನು ಸಾಯುವವರೆಗೂ ಬಿಡುವುದಿಲ್ಲ. ಬೇರೆಯವರಿಗೋಸ್ಕರವಾದರೂ ನಾವು ಎಚ್ಚರವಾಗುವುದೊಳಿತು.
"Stay home stay safe. "
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


