ಸಿನಿಮಾ ಸುದ್ದಿ

'ಮಾಸ್ತಿ ಗುಡಿ' ನಿರ್ಮಾಪಕನ ಸಂಬಂಧಿ ಮೇಲೆ ಹಲ್ಲೆ, ದುನಿಯಾ ವಿಜಯ್ ವಿರುದ್ಧ ಎಫ್ಐಆರ್ ದಾಖಲು

'ಮಾಸ್ತಿ ಗುಡಿ' ದುರಂತ ಮಾಸುವ ಮುನ್ನವೇ ನಟ ದುನಿಯಾ ವಿಜಯ್ ಅವರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಮಾಸ್ತಿ ಗುಡಿ'...

'ಮಾಸ್ತಿ ಗುಡಿ' ನಿರ್ಮಾಪಕನ ಸಂಬಂಧಿ ಮೇಲೆ ಹಲ್ಲೆ, ದುನಿಯಾ ವಿಜಯ್ ವಿರುದ್ಧ ಎಫ್ಐಆರ್ ದಾಖಲು
ದುನಿಯಾ ವಿಜಯ್
Published On :
ಬೆಂಗಳೂರು: 'ಮಾಸ್ತಿ ಗುಡಿ' ದುರಂತ ಮಾಸುವ ಮುನ್ನವೇ ನಟ ದುನಿಯಾ ವಿಜಯ್ ಅವರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕನ ಸಂಬಂಧಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಜಯ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.
‘ಮಾಸ್ತಿಗುಡಿ’ ನಿರ್ಮಾಪಕ ಸುಂದರ್ ಅವರ ಸಹೋದರ ಶಂಕರ್ ಪತ್ನಿಯ ತಂದೆ ಜಯರಾಮ್ ಎಂಬವರ ಮೇಲೆ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪೊಲೀಸ್ ವಿಜಯ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ವಿಚಾರಣೆಗಾಗಿ ವಿಜಯ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಹಲ್ಲೆಗೆ ಒಳಗಾದ ಜಯರಾಮ್ ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರು ತಿಂಗಳ  ಹಿಂದೆ ಶಂಕರ್ ಅವರ ವಿವಾಹ ಜಯರಾಮ್ ಅವರ ಪುತ್ರಿ ಮಾನಸರ ಜೊತೆ ನಡೆದಿತ್ತು. ಆದರೆ ಮಗಳಿಗೆ ಕಿರುಕುಳ ನೀಡಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಜಯರಾಮ್ ಅವರು, ಈ ಬಗ್ಗೆ ವಿಚಾರಿಸಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಗಳ ಮನೆಗೆ ತೆರಳಿದಾಗ ಅಲ್ಲಿದ್ದ ವಿಜಯ ನಮ್ಮ ಕುಟುಂಬದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಕೆನ್ನೆಗೆ ಮತ್ತು ಮುಖಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಿ ಚೆನ್ನಮ್ಮನಕೆರೆ ಅಚ್ಚು ಕಟ್ಟು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಾಸ್ತಿ ಗುಡಿ ತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಖಳ ನಟರಾದ ಉದಯ್ ಹಾಗೂ ಅನಿಲ್ ಮೃತಪಟ್ಟಿದ್ದು, ಅವರೊಂದಿಗೆ ನೀರಿಗೆ ಹಾರಿದ್ದ ನಾಯಕ ನಟ ದುನಿಯಾ ವಿಜಯ್ ಅವರನ್ನು ರಕ್ಷಿಸಲಾಗಿತ್ತು. ಈ ಸಂಬಂಧ ಚಿತ್ರದ ನಿರ್ಮಾಪಕ ಸುಂದರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ನಟ ದುನಿಯಾ ವಿಜಯ್ ಅವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ, ವಿಜಯ್ ಈಗ ಬೇರೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.