ಸಿನಿಮಾ ಸುದ್ದಿ

ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೆ ಧರಣಿ: ನಿರ್ಮಾಪಕರ ಎಚ್ಚರಿಕೆ

ಸಿನಿಮಾ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ...

ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೆ ಧರಣಿ: ನಿರ್ಮಾಪಕರ ಎಚ್ಚರಿಕೆ
ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರ ಸಭೆ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಸಿನಿಮಾ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ಮಾಪಕರ  ಮಹತ್ವದ ಸಭೆಯಲ್ಲಿ ಪಾಲ್ಗೊಂಡ ನಂತರ ನಿರ್ಮಾಪಕರು ಸಭೆ ನಡೆಸಿ, ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಒಂದು ವೇಳೆ  ನಿರ್ಮಾಪಕರ ಈ ನಿರ್ಧಾರವನ್ನು ಧಿಕ್ಕರಿಸಿ ಯಾವುದೇ ನಟರು ಇಂತಹ ಶೋಗಳಲ್ಲಿ ಭಾಗವಹಿಸಿದರೆ ಇತರೆ ನಿರ್ಮಾಪಕರೊಂದಿಗೆ ಸೇರಿ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಮಾಡುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ.

ಇಂದು ನಡೆದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ನಿರ್ಮಾಪಕರ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇನ್ನು ಮುಂದೆ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಪರ್ಸೆಂಟೇಜ್ ರೂಪದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಬೇಕು. ಸ್ಟಾರ್ ನಟರು, ಹೊಸ ನಟರುಗಳ ರೇಟಿಗೆ ತಕ್ಕಂತೆ ಪರ್ಸಂಟೇಜ್ ರೂಪದಲ್ಲಿ ಹಂಚಿಕೆದಾರರು ನಿರ್ಮಾಪಕರಿಗೆ ನೀಡಬೇಕು, ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂಬಿತ್ಯಾದಿ ವಿಚಾರಗಳ ಕುರಿತು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಿರ್ಮಾಪಕ ಜಯಸಿಂಹ ಮುಸುರಿ ಅವರು, ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ.

ವೀಕೆಂಡ್ ಗಳಲ್ಲಿ ಖ್ಯಾತ ನಟರು ಟಿವಿಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದುರಾಗುತ್ತಿದೆ ಎಂದು ಈ ಹಿಂದೆ ಹಲವು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರಿದ್ದರು. ಅಲ್ಲದೆ ಈ ಕುರಿತು ನಡೆದ ನಿರ್ಮಾಪಕ ಮತ್ತು ನಟರ ಸಭೆಯಲ್ಲಿ ವಿವಾದ ಉಂಟಾಗಿ ಹಲವು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಇದೀಗ ಮತ್ತೆ ನಿರ್ಮಾಪಕರು ನಟರ ರಿಯಾಲಿಟಿ ಶೋಗಳ ವಿರುದ್ಧ ಕಿಡಿಕಾರಿದ್ದು, ಧರಣಿ ಕೂರುವ ಕುರಿತು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.