'3 Idiots' ಸಿನಿಮಾ Sonam Wangchuk ಆಧಾರಿತವಲ್ಲ: 'ಫುನ್‌ಸುಖ್ ವಾಂಗ್ಡು' ಪಾತ್ರದ ಸತ್ಯಾಸತ್ಯತೆ ಬಿಚ್ಚಿಟ್ಟ ನಟ Aamir Khan
ಇದೇ ವೇಳೆ ದೆಹಲಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಆಮೀರ್, ಕೂಡಲೇ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ನವದೆಹಲಿ/ಲಂಡನ್: ಬಾಲಿವುಡ್ ಬ್ಲಾಕ್‌ಬಸ್ಟರ್ ಸಿನಿಮಾ '3 ಇಡಿಯಟ್ಸ್' (3 Idiots) ಚಿತ್ರದ ಪ್ರಮುಖ ಪಾತ್ರ 'ಫುನ್‌ಸುಖ್ ವಾಂಗ್ಡು' (ರಾಂಚೊ) ಲಡಾಖ್‌ನ ಖ್ಯಾತ ಸಂಶೋಧಕ ಮತ್ತು ಪರಿಸರವಾದಿ ಸೋನಮ್ ವಾಂಗ್ಚುಕ್ ಅವರ ಜೀವನವನ್ನು ಆಧರಿಸಿದ್ದಲ್ಲ ಎಂದು ನಟ ಆಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ (BFI) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಾರ್ವಜನಿಕರಲ್ಲಿ ವರ್ಷಗಳಿಂದ ಇದ್ದ ದೊಡ್ಡ ತಪ್ಪು ಕಲ್ಪನೆಯನ್ನು ದೂರಾಗಿಸಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಆಮೀರ್, ಕೂಡಲೇ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಸೋನಂ ವಾಂಗ್‌ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಮೀರ್ ಖಾನ್, ಈ ವಿಚಾರವನ್ನು ಸ್ಪಷ್ಟಪಡಿಸಿದರು. ಈ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
'ಸಿನಿಮಾ ಮಾಡುವಾಗ ಸೋನಂ ವಾಂಗ್‌ಚುಕ್ ಬಗ್ಗೆ ಗೊತ್ತಿರಲಿಲ್ಲ'
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಹಾಗೂ ಹಿರಾನಿ ಮತ್ತು ಅಭಿಜಾತ್ ಜೋಶಿ ಬರೆದ '3 ಇಡಿಯಟ್ಸ್' ಚಿತ್ರದಲ್ಲಿ ಆಮೀರ್ ಖಾನ್ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ರಾಂಚೋ ಪಾತ್ರದಲ್ಲಿ ನಟಿಸಿದ್ದರು.
ಈ ಕುರಿತು ಮಾತನಾಡಿದ ಸ್ಪಷ್ಟನೆ ನೀಡಿರುವ ಆಮಿರ್ ಖಾನ್ ಅವರು, "ಇಲ್ಲ, ಅದು ನಿಜವಲ್ಲ. ಅದು ತಪ್ಪು ಕಲ್ಪನೆ. '3 ಇಡಿಯಟ್ಸ್' ಸಿನಿಮಾ ಮಾಡುವಾಗ ನನಗೆ, ನಿರ್ದೇಶಕ ರಾಜ್‌ಕುಮಾರ್ ಹಿರಾನಿಗೆ ಅಥವಾ ಲೇಖಕ ಅಭಿಜಾತ್ ಜೋಶಿಗೆ ಸೋನಂ ವಾಂಗ್‌ಚುಕ್ ಅವರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಅವರು ಮಾಡುತ್ತಿರುವ ಕೆಲಸ ಅತ್ಯಂತ ಶ್ಲಾಘನೀಯ. ಅವರನ್ನು ಗೌರವಿಸಲು ಅವರ ಬದುಕು ನಮ್ಮ ಚಿತ್ರದ ಪಾತ್ರದ ಆಧಾರವಾಗಿರಬೇಕೆಂಬ ಅಗತ್ಯವಿಲ್ಲ" ಎಂದು ಹೇಳಿದರು.
ಇತ್ತೀಚೆಗೆ ಚಿತ್ರದಲ್ಲಿ 'ಚತುರ್' ಪಾತ್ರ ನಿರ್ವಹಿಸಿದ್ದ ನಟ ಓಮಿ ವೈದ್ಯ ಅವರು, ರಾಂಚೋ ಪಾತ್ರ ಸೋನಂ ವಾಂಗ್‌ಚುಕ್ ಅವರನ್ನು ಆಧರಿಸಿದೆ ಎಂದು ಎಕ್ಸ್ (X) ನಲ್ಲಿ ವಿಡಿಯೊ ಹಂಚಿಕೊಂಡು, ವಾಂಗ್‌ಚುಕ್ ಅವರ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಆಮೀರ್ ಖಾನ್, "ಚತುರ್ ಹೇಳಿರುವ ವಿಡಿಯೊ ನೋಡಿದ್ದೇನೆ. ಅವರು ಹೇಳಿದ್ದು ತಪ್ಪು" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸೋನಂ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಮೀರ್ ಖಾನ್, ಅವರ ಆರೋಗ್ಯದ ಬಗ್ಗೆ ನಾವೆಲ್ಲರೂ ತುಂಬಾ ಚಿಂತಿತರಾಗಿದ್ದೇವೆ. ಅವರು ಉಪವಾಸವನ್ನು ಕೊನೆಗೊಳಿಸಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾವು ಆಶಿಸುತ್ತೇವೆ" ಎಂದು ಮನವಿ ಮಾಡಿದರು.
20ನೇ ದಿನಕ್ಕೆ ಕಾಲಿಟ್ಟ ಉಪವಾಸ
ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಜೂನ್ 28ರಂದು ಸೇರಿಕೊಂಡಿದ್ದ ಸೋನಂ ವಾಂಗ್‌ಚುಕ್, ಅಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.
ವೈದ್ಯಕೀಯ ವರದಿಯ ಪ್ರಕಾರ, ಉಪವಾಸ ಆರಂಭಿಸಿದ ಬಳಿಕ ಅವರು 9 ಕೆ.ಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 80 mg/dL, ನಾಡಿಮಿಡಿತ ನಿಮಿಷಕ್ಕೆ 72, ಮಲಗಿದ ಸ್ಥಿತಿಯಲ್ಲಿ ರಕ್ತದೊತ್ತಡ 105/61 mmHg ಹಾಗೂ ಕುಳಿತ ಸ್ಥಿತಿಯಲ್ಲಿ 101/65 mmHg ದಾಖಲಾಗಿದೆ.
ಸೋನಂ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಜೀನತ್ ಅಮನ್, ಶಬಾನಾ ಆಜ್ಮಿ, ಸೋನಾಕ್ಷಿ ಸಿನ್ಹಾ ಮತ್ತು ಅಭಯ್ ಡಿಯೋಲ್ ಸೇರಿದಂತೆ ಹಲವು ಸಿನಿತಾರೆಯರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



