ಬಾಲಿವುಡ್

‘ಅನಿಮಲ್​’ ನಂತಹ ಸಿನಿಮಾಗಳ ಗೆಲುವು ಅಪಾಯಕಾರಿ; ಚಿತ್ರ ಗೆಲ್ಲಿಸುವ ಜವಾಬ್ದಾರಿ ಪ್ರೇಕ್ಷಕರದ್ದು: ಜಾವೇದ್​ ಅಖ್ತರ್

ರಣಬೀರ್ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಆದರೆ ವಿಮರ್ಶೆಯ ದೃಷ್ಟಿಯಲ್ಲಿ ಈ ಚಿತ್ರ ಸೋತಿದೆ. ಅನೇಕ ವಿಮರ್ಶಕರು ಈ ಸಿನಿಮಾವನ್ನು ಖಂಡಿಸಿದ್ದಾರೆ

‘ಅನಿಮಲ್​’ ನಂತಹ ಸಿನಿಮಾಗಳ ಗೆಲುವು ಅಪಾಯಕಾರಿ; ಚಿತ್ರ ಗೆಲ್ಲಿಸುವ ಜವಾಬ್ದಾರಿ ಪ್ರೇಕ್ಷಕರದ್ದು: ಜಾವೇದ್​ ಅಖ್ತರ್
ಜಾವೇದ್ ಅಖ್ತರ್
Published On :

ಮುಂಬೈ: ರಣಬೀರ್ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಆದರೆ ವಿಮರ್ಶೆಯ ದೃಷ್ಟಿಯಲ್ಲಿ ಈ ಚಿತ್ರ ಸೋತಿದೆ. ಅನೇಕ ವಿಮರ್ಶಕರು ಈ ಸಿನಿಮಾವನ್ನು ಖಂಡಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಕೂಡ ‘ಅನಿಮಲ್​’ ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಆ ಸಾಲಿಗೆ ಖ್ಯಾತ ಗೀತ ರಚನಕಾರ ಜಾವೇದ್ ಅಖ್ತರ್​ ಕೂಡ ಸೇರ್ಪಡೆ ಆಗಿದ್ದಾರೆ. ಅವರು ಈ ಸಿನಿಮಾದ ಗೆಲುವು ಅಪಾಯಕಾರಿ ಎಂದು ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ನಡೆದ ಅಜಂತಾ ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿರುವ ಅವರು, ಪ್ರಸ್ತುತ ಚಲನಚಿತ್ರದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 'ಅನಿಮಲ್' ಚಿತ್ರದ ಹೆಸರನ್ನು ಉಲ್ಲೇಖಿಸದಿದ್ದರೂ, ಸಿನಿಮಾದ ಕೆಲ ದೃಶ್ಯಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಸಮಸ್ಯಾತ್ಮಕ ದೃಶ್ಯಗಳನ್ನು ಹೊಂದಿರುವ ಚಲನಚಿತ್ರಗಳ ವಾಣಿಜ್ಯ ಯಶಸ್ಸು ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದಿದ್ದಾರೆ.

ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆ ನಿಂತಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಇದು ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಪುರುಷ ಹೇಳಿದರೆ ಆ ಚಿತ್ರ ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಅಖ್ತರ್ ಹೇಳಿದರು.

ಇಲ್ಲಿ ಅನಿಮಲ್ ಸಿನಿಮಾದ ಪ್ರಮುಖ ದೃಶ್ಯವನ್ನು ಉಲ್ಲೇಖಿಸಬಹುದು. ಚಿತ್ರದ ಪ್ರಮುಖ ಪಾತ್ರಧಾರಿ ರಣವಿಜಯ್ (ರಣಬೀರ್ ಕಪೂರ್) ತನ್ನ ಪ್ರೇಯಸಿ ಜೋಯಾಳನ್ನು (ತ್ರಿಪ್ತಿ ಧಿಮ್ರಿ ) ತನ್ನ ಪ್ರೀತಿಯನ್ನು ಸಾಬೀತುಪಡಿಸಲು ತನ್ನ ಬೂಟುಗಳನ್ನು ನೆಕ್ಕಲು ಕೇಳುತ್ತಾನೆ.

ಯಾವ ಚಿತ್ರಗಳನ್ನು ಒಪ್ಪಿಕೊಳ್ಳಬೇಕು ಮತ್ತು ತಿರಸ್ಕರಿಸಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಇಂದು ಪ್ರೇಕ್ಷಕರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನಿರ್ಮಾಪಕರಿಗಿಂತ ಹೆಚ್ಚಿನ ಜವಾಬ್ದಾರಿ ಪ್ರೇಕ್ಷಕರ ಮೇಲಿದೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಚಿತ್ರಗಳಲ್ಲಿ ಯಾವ ರೀತಿಯ ಮೌಲ್ಯಗಳು ಮತ್ತು ನೈತಿಕತೆಯನ್ನು ತೋರಿಸಬೇಕು ಎಂಬ ನಿರ್ಧಾರ ನಿಮ್ಮ ಕೈಯಲ್ಲಿದೆ. ಚೆಂಡು ಪ್ರಸ್ತುತ ಪ್ರೇಕ್ಷಕರ ಅಂಗಳದಲ್ಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.