ಬೋಳುತಲೆ ಸುಂದರವಾಗಿದೆ; ಸೊನಾಲಿ ಬೇಂದ್ರೆ
ಸ್ನೇಹಿತರ ದಿನಾಚರಣೆ ಅಂಗವಾಗಿ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ...

ಮುಂಬೈ: ಸ್ನೇಹಿತರ ದಿನಾಚರಣೆ ಅಂಗವಾಗಿ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಫೋಟೋವೊಂದನ್ನು ಶೇರ್ ಮಾಡಿ ಸುಂದರ ಅಡಿಬರಹ ಬರೆದಿದ್ದಾರೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊನಾಲಿ ಬೇಂದ್ರೆ ಜೀವನದಲ್ಲಿ ಆಶಾವಾದಿಯಾಗಿ ಯೋಚನೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೂದಲನ್ನು ಕತ್ತರಿಸಿ ಸುದ್ದಿಯಾಗಿದ್ದರು. ಇದೀಗ ಅವರ ಕೂದಲು ಸಂಪೂರ್ಣವಾಗಿ ಹೋಗಿದೆ.
ಇದೇ ಗೆಟಪ್ ನಲ್ಲಿ ಫೋಟೋಗೆ ಸ್ನೇಹಿತೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನ್ ಖಾನ್ ಜೊತೆ ಪೋಸ್ ನೀಡಿದ್ದು ಬೋಳುತಲೆ ಸೊಗಸಾಗಿ ಕಾಣುತ್ತದೆ ಎಂದಿದ್ದಾರೆ. ಈ ಫೋಟೋ ತೆಗೆದದ್ದು ಹೃತಿಕ್ ರೋಷನ್.
''ಇದು ನಾನು, ಈ ಕ್ಷಣದಲ್ಲಿ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಜನರು ನನ್ನನ್ನು ಈಗ ನೋಡಿದರೆ ವಿಚಿತ್ರ ನೋಟ ಬೀರಬಹುದು, ಆದರೆ ಇದು ನಿಜ, ನಾನು ಏಕೆ ಹೀಗೆ ಕಾಣುತ್ತಿದ್ದೇನೆ ಎನ್ನುತ್ತೇನೆ. ನಾನು ಪ್ರತಿ ಕ್ಷಣವನ್ನು ಅನುಭವಿಸುತ್ತೇನೆ. ಪ್ರತಿ ಕ್ಷಣದಲ್ಲಿ ಸಂತೋಷ ಹುಡುಕಲು ಬಯಸುತ್ತೇನೆ ಮತ್ತು ಬೆಳಕಿನೆಡೆಗೆ ನೋಡುತ್ತೇನೆ'' ಎಂದು ಸೊನಾಲಿ ಬೇಂದ್ರೆ ಫೋಟೋದಡಿ ಬರೆದಿದ್ದಾರೆ.
ಅಲ್ಲದೆ ನನಗೆ ಈ ಕ್ಷಣ ನೋವು ಕಾಡುತ್ತಿದೆ ಮತ್ತು ನನ್ನಲ್ಲಿ ಶಕ್ತಿ ಕುಂದಿದೆ ಎಂದು ಕೂಡ ಬರೆದುಕೊಂಡಿದ್ದಾರೆ.
ನನಗೆ ಏನು ಮಾಡಲು ಇಷ್ಟವಾಗುತ್ತದೆಯೋ ಅದನ್ನು ನಾನೀಗ ಮಾಡುತ್ತಿದ್ದೇನೆ, ನನ್ನನ್ನು ಪ್ರೀತಿಸುವವರ ಜೊತೆ ಕಳೆಯುತ್ತಿದ್ದೇನೆ. ಈ ಕ್ಷಣವನ್ನು ಸಂತೋಷವಾಗಿ ಕಳೆಯುವುದು ನನ್ನ ಉದ್ದೇಶ, ಈ ಗಳಿಗೆಯಲ್ಲಿ ನನಗೆ ಶಕ್ತಿ ತುಂಬುತ್ತಿರುವ ನನ್ನ ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ. ನನಗೆ ಆರೋಗ್ಯವಿಲ್ಲ ಎಂದು ಗೊತ್ತಾದ ಕೂಡಲೇ ಇವರೆಲ್ಲ ನನ್ನ ಬಳಿಗೆ ಬಂದು ನನ್ನ ಸಹಾಯಕ್ಕೆ ನಿಂತಿದ್ದಾರೆ. ಅವರ ಬ್ಯುಸಿ ಗಳಿಗೆಯಲ್ಲಿ ಕೂಡ ನನ್ನನ್ನು ಭೇಟಿ ಮಾಡುತ್ತಾರೆ. ಕರೆ ಮಾಡಿ ಮಾತನಾಡುತ್ತಾರೆ, ಸಂದೇಶ ಕಳುಹಿಸುತ್ತಾರೆ. ನಾನು ಒಬ್ಬಂಟಿಯೆಂದು ಅನಿಸಲು ಬಿಡುವುದೇ ಇಲ್ಲ, ನಿಜವಾದ ಸ್ನೇಹವೆಂದರೇನು ಎಂದು ನನಗೆ ಈಗ ಗೊತ್ತಾಗಿದೆ, ಸ್ನೇಹಿತರ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ.
ನನಗೆ ಈಗ ಡ್ರೆಸ್ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ ಏಕೆಂದರೆ ನನ್ನ ತಲೆ ಬೋಳಾಗಿದೆ, ಆದರೆ ಬೋಳಾಗಿ ಸುಂದರವಾಗಿದೆ ಎಂದು ನೋವಿನಲ್ಲಿ ತಮಾಷೆಯ ಮಾತುಗಳನ್ನು ಆಡಿದ್ದಾರೆ ಈ ನಟಿ.
ಕಳೆದ ಜುಲೈ ತಿಂಗಳಲ್ಲಿ ತಮಗೆ ಹೈಗ್ರೇಡ್ ಕ್ಯಾನ್ಸರ್ ಇದೆ ಎಂದು ಸೊನಾಲಿ ಬೇಂದ್ರೆ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಅನಾರೋಗ್ಯಕ್ಕೀಡಾದ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಸುದ್ದಿ ನೀಡುತ್ತಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


