ಬಾಲಿವುಡ್

ಹೀರೋಗಾಗಿ ಅವರು ಕಾಯುತ್ತಾ ಕೂರಲಿಲ್ಲ!

ಸಿನಿಮಾ ಶೂಟಿಂಗ್‍ನ ಸಂದರ್ಭದಲ್ಲಿ ಹೀರೋ ಬರುವುದು ತಡವಾಯಿತು ಎಂಬ ಕಾರಣಕ್ಕೆ; ಹೀರೋ ಬರಲೇ ಇಲ್ಲ ಎಂಬ ಕಾರಣಕ್ಕೆ ಶೂಟಿಂಗ್ ನಿಂತುಹೋಗಿರುವ ಉದಾಹರಣೆಗಳು ಬೇಕಾದಷ್ಟಿವೆ...

ಹೀರೋಗಾಗಿ ಅವರು ಕಾಯುತ್ತಾ ಕೂರಲಿಲ್ಲ!
ಲಗಾನ್
Published On :
ಸಿನಿಮಾ ಶೂಟಿಂಗ್‍ನ ಸಂದರ್ಭದಲ್ಲಿ ಹೀರೋ ಬರುವುದು ತಡವಾಯಿತು ಎಂಬ ಕಾರಣಕ್ಕೆ; ಹೀರೋ ಬರಲೇ ಇಲ್ಲ ಎಂಬ ಕಾರಣಕ್ಕೆ ಶೂಟಿಂಗ್ ನಿಂತುಹೋಗಿರುವ ಉದಾಹರಣೆಗಳು ಬೇಕಾದಷ್ಟಿವೆ. 
ಆದರೆ, ಹೇಳಿದ ಟೈಂಗೆ ಬರಲಿಲ್ಲ ಎಂಬ ಕಾರಣಕ್ಕೆ ಒಂದು ಸಿನಿಮಾದ ಹೀರೋನನ್ನೇ; ಅದೂ ಏನು? ನಾಯಕ ಕಂ ನಿರ್ಮಾಪಕ ಅನ್ನಿಸಿಕೊಂಡಿದ್ದ ಆಮೀರ್ ಖಾನ್‍ನಂಥ ಸ್ಟಾರ್‍ನನ್ನು ಬಿಟ್ಟು ಚಿತ್ರೀಕರಣ ನಡೆಸಿದ ಸಂಗತಿಯನ್ನು ಎಲ್ಲಾದರೂ ಕೇಳಿದ್ದೀರಾ? ಇಲ್ಲ ತಾನೆ? ಇಲ್ಲಿದೆ ನೋಡಿ ಆ ಇಂಟೆರೆಸ್ಟಿಂಗ್ ಸ್ಟೋರಿ. 
ಲಗಾನ್ ಚಿತ್ರದ ಶೂಟಿಂಗ್ ಆರಂಭವಾಗಬೇಕಿದ್ದ ಸಂದರ್ಭ. ಆ ಚಿತ್ರಕ್ಕೆ ನಾಯಕ ನಟ ಕಂ ನಿರ್ಮಾಪಕನೂ ಆಗಿದ್ದ ಆಮೀರ್ ಖಾನ್, ಇಡೀ ತಂಡದೊಂದಿಗೆ ಗುಜರಾತ್‍ನ ಭುಜ್ ಬಳಿಗೆ ಚಿತ್ರೀಕರಣಕ್ಕೆಂದು ಬಂದಿದ್ದ. ಅಲ್ಲಿ ವಿಶೇಷ ಸೆಟ್ ಹಾಕಲಾಗಿತ್ತು. ಶೂಟಿಂಗ್ ಹಿಂದಿನ ದಿನ, ಇಡೀ ಚಿತ್ರ ತಂಡದವರನ್ನೆಲ್ಲ ಒಟ್ಟಿಗೆ ಕೂರಿಸಿಕೊಂಡ ಆಮೀರ್ ಹೇಳಿದ: `ನಾವೆಲ್ಲ ತಂಗಿರ್ತೀವಲ್ಲ? ಆ ಜಾಗದಿಂದ ನಾಳೆ ಬೆಳಗ್ಗೆ ಐದೂವರೆಗೆ ಬಸ್ ಹೊರಡುತ್ತೆ. ಯಾರೇ ಆಗಿರಬಹುದು. ಒಂದೇ ಒಂದು ನಿಮಿಷ ತಡವಾಗಿ
ಬಂದ್ರೂ ಅವರಿಗೋಸ್ಕರ ಕಾಯುತ್ತ ಕುರೋದಿಲ್ಲ. ನನ್ನ ಜತೆ ಕೆಲಸ ಮಾಡ್ಬೇಕಾದ್ರೆ ಟೈಂ ಸೆನ್ಸು ಮೋಸ್ಟ್ ಇಂಪಾರ್ಟೆಂಟ್. ಯಾರೊಬ್ಬರು ಇಲ್ಲದಿದ್ರೂ ಶೂಟಿಂಗ್ ನಡೀಬೇಕು. ನಡೆಯುತ್ತೆ. ಈ ವಿಷಯ ಎಲ್ಲರಿಗೂ ನೆನಪಿರಲಿ'. 
ತಮಾಷೆ ಕೇಳಿ: ಮರುದಿನ ಚಿತ್ರ ತಂಡದ ಉಳಿದವರೆಲ್ಲ ಹೇಳಿದ್ದ ಟೈಂಗೆ ಬಂದರು. ಆದರೆ ಆಮೀರ್ ಖಾನೇ ನಾಪತ್ತೆ! ನಿಯಮ ಅಂದಮೇಲೆ ಎಲ್ಲರಿಗೂ ಒಂದೇ ತಾನೆ? ಬಸ್ಸು, ಲಗಾನ್ ಚಿತ್ರದ ಹೀರೋನನ್ನೇ ಬಿಟ್ಟು ಹೋಗಿಬಿಟ್ಟಿತು. ಐದು ನಿಮಿಷದ ನಂತರ ಓಡೋಡಿ ಬಂದ ಅಮೀರ್ ಖಾನ್, ಪೆಚ್ಚು ಮೋರೆಯೊಂದಿಗೆ ಹೋಟೆಲ್‍ಗೆ ವಾಪಸ್ಸಾದ! ಆ ಕಡೆ, ಲಗಾನ್ ಚಿತ್ರದ ಮೊತ್ತ ಮೊದಲ ದಿನದ ಶೂಟಿಂಗು, ಹೀರೋ ಕಂ ನಿರ್ಮಾಪಕನೇ ಇಲ್ಲದಿದ್ದರೂ ನಿರಾತಂಕವಾಗಿ ಮುಂದುವರಿಯಿತು. 
ಮುಂದೆ, ಲಗಾನ್ ದಾಖಲೆಯ ಮೇಲೆ ದಾಖಲೆ ಮಾಡಿದಾಗ ಟಿವಿ ಸಂದರ್ಶನವೊಂದರಲ್ಲಿ ಅಮೀರ್ ಖಾನೇ ಈ ವಿಷಯ ತಿಳಿಸಿದ. `ಅಲ್ಲ ಸರ್, ಹಾಗೆ ಅವಮಾನವಾದಾಗ ನಿಮ್ಗೆ ಸಿಟ್ಟು ಬರಲಿಲ್ವಾ?' ಎಂದು ಕೇಳಿದಳು ನಿರೂಪಕಿ. `ಇಲ್ಲ ಮೇಡಂ, ನನ್ನ ಅಶಿಸ್ತಿನಿಂದ ನಾಚಿಕೆಯಾಯಿತು. ನಮ್ಮ ಚಿತ್ರ ತಂಡದಲ್ಲಿ ಅಂಥದೊಂದು ಶಿಸ್ತು ಇಲ್ಲದಿದ್ರೆ ಲಗಾನ್ ಥರದ ಸಿನಿಮಾ ಮಾಡಲು ಆಗ್ತಾ ಇರಲಿಲ್ಲ' ಎಂದು ಅಮೀರ್ ಖಾನ್ ನಸುನಕ್ಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.