ಜಾಲಕ್ಕೆ ಸಿಗದ ಜಾಣರು
ಹೇಳಿಕೇಳಿ ಇದು ಫೇಸ್ ಬುಕ್, ಟ್ವಿಟ್ವಿರ್ ಜಮಾನ. ನಮ್ಮೊಳಗೇ ಯಾರಾದ್ರೂ ಫೇಸ್ ಬುಕ್ ಅಕೌಂಟು ಹೊಂದಿಲ್ಲ ಅಂದ್ರೆ ಆತ ಪಕ್ಕಾ `ಇಂಟರ್ನೆಟ್ ಲೋಕದ ಅಸ್ಪೃಶ್ಯ'. ದಿನದಲ್ಲಿ...

ಹೇಳಿಕೇಳಿ ಇದು ಫೇಸ್ ಬುಕ್, ಟ್ವಿಟ್ವಿರ್ ಜಮಾನ. ನಮ್ಮೊಳಗೇ ಯಾರಾದ್ರೂ ಫೇಸ್ ಬುಕ್ ಅಕೌಂಟು ಹೊಂದಿಲ್ಲ ಅಂದ್ರೆ ಆತ ಪಕ್ಕಾ `ಇಂಟರ್ನೆಟ್ ಲೋಕದ ಅಸ್ಪೃಶ್ಯ'. ದಿನದಲ್ಲಿ ಹತ್ತಾರು ಹೇಳಿಕೆಗಳನ್ನು ಕೊಟ್ಟು, ಸಾಲದಷ್ಟು ಸೆಲ್ಫಿಗಳನ್ನು ತೂರಿಸುವ ಸೆಲೆಬ್ರಿಟಿಗಳಲ್ಲೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲ ಅಂದ್ರೆ ನಂಬಲು ಯಾರೂ ತಯಾರಿಲ್ಲ. ಸಾಮಾಜಿಕ ಜಾಲತಾಣ ಸೆಲೆಬ್ರಿಟಿಗಳಿಗೊಂದು ಸ್ಪ್ರಿಂಗ್ ಮೆಟ್ಟಿಲಿದ್ದಂತೆ. ಅಲ್ಲಿ ಕಾಲಿಟ್ಟ ಕೂಡಲೇ ಅವರ ಮೇಲಿನ ಪ್ರಚಾರ ಇನ್ನೂ ಎತ್ತರಕ್ಕೇರುತ್ತದೆ. ಟ್ವೀಟು-ಕಾಮೆಂಟು ಇಲ್ಲದಿದ್ದರೆ ಅವರ ಬದುಕಿನಲ್ಲಿ ಏನೂ ಟೇಸ್ಟಿರಲ್ಲ.
ಆದರೆ ಸೆಲೆಬ್ರಿಟಿಗಳಲ್ಲೇ ಸೋಷಿಯಲ್ ಮೀಡಿಯಾ ಸನ್ಯಾಸಿಗಳಿದ್ದಾರೆ. ಅವರೇನು ಹೆಬ್ಬೆಟ್ಟಲ್ಲ. ಓದಿಕೊಂಡವರೇ. ಆದರೆ, ಬಿಟ್ಟಿ ಪ್ರಚಾರಕ್ಕಾಗಿ -ಫೇಸ್ ಬುಕ್ಕಿಗೆ ಬಂದು ಬಾಯಿಬಿಡೋದಿಲ್ಲ. ಟ್ವಿಟ್ಟರಿಗೆ ಕಾಲಿಟ್ಟು 140 ಅಕ್ಷರ ಟೈಪಿಸಲೂ ಅವರಿಗೆ ಇಷ್ಟ ಇಲ್ಲ. ಅಭಿಮಾನಿಗಳು ಸೇರಿ ಇವರ ಮೇಲೆ ಪುಟ ರಚಿಸಿದ್ದರೂ, ಖಾಸಗಿ ಖಾತೆ ಇಟ್ಟುಕೊಂಡವರಲ್ಲ.
ಐಶ್ವರ್ಯಾ ರೈ ಅಂಥವರಲ್ಲೊಬ್ಬಳು. ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಈಕೆಗಿದ್ದಾರೆ. ರೈಗೆ ಈ ಜಾಲತಾಣಗಳ ಪ್ರಚಾರ ತೀರಾ ಕಿರಿಕಿರಿಯಂತೆ. ಯಾರು ಯಾವಾಗ ಇಲ್ಲಿ ಕಾಲೆಳೀತಾರೆ, ಅಟ್ಟಕ್ಕೇರಿಸುತ್ತಾರೆ ಎಂಬುದರ ಬಗ್ಗೆ ಈಕೆಗೆ ದೊಡ್ಡ ಭಯವಂತೆ. ಅಮಿತಾಭ್ ಒಮ್ಮೆ ಹೇಳಿದರೂ, ಖಾತೆ ತೆರೆಯಲು ಮನಸ್ಸು ಮಾಡಿಲ್ಲ ಐಶ್ವರ್ಯಾ. ಕರೀನಾ ಕಪೂರ್, ಖಾನ್ ಬಳಿಯೂ ಸೋಷಿಯಲ್ ಮೀಡಿಯಾ ಖಾತೆಯಿಲ್ಲ. ಟ್ವಿಟ್ಟರ್ ಖಾತೆ ತೆರೆದಿದ್ದರೂ ಯಾವುದೋ ಅಹಿತ ಘಟನೆ ಈಕೆಯನ್ನು ಅಲ್ಲಿಂದ ಕಾಲ್ತೆರೆಯುವಂತೆ ಮಾಡಿತಂತೆ. ಅಲ್ಲಿಗದು ಕ್ಲೋಸ್.
ಕಂಗನಾ ರಾಣೌತ್
ಟ್ವಿಟ್ಟರನ್ನಷ್ಟೇ ಹೊಂದಿದ್ದರೂ ಫೇಸ್ ಬುಕ್ ಅಂದರೆ ಈಕೆಗೆ ಅಲರ್ಜಿ. `ಅದೊಂದು ಸಂತೆ' ಎಂದು ಟೀಕೆಯ ಸ್ಟ್ಯಾಂಪ್ ಅಂಟಿಸುತ್ತಾಳೆ. 2010ರಲ್ಲಿ ಟ್ವೀಟ್ ಮಾಡಿದ ಕಂಗನಾ, ಮತ್ತೆ ಕಾಣಿಸಿಕೊಂಡಿದ್ದು 2013ರ ಅಕ್ಟೋಬರ್ ನಲ್ಲಿ. ಆಮೇಲೆ ಕಂಗನಾ ನಾಪತ್ತೆ. ವಿದ್ಯಾ ಬಾಲನ್ ಕೂಡ ಇವೆರಡು ತಾಣಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಅಭಿಮಾನಿಗಳು ಈಕೆಯ ಪುಟ ರಚಿಸಿ ಟ್ವೀಟಿಸುವುದು ಈಕೆಗೂ ಸರಿ ಕಾಣುತ್ತಿಲ್ವಂತೆ. ` ದೇವದಾಸ್', `ಗುಜಾರಿಸ್'ನಂಥ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಇವೆರಡು ತಾಣಗಳಲ್ಲಿ ಗುರುತಿಸಿಕೊಳ್ಳಲು ಇನ್ನೂ ಮನಸ್ಸೇ ಆಗಿಲ್ಲ.
`ಕಾಮೆಂಟ್ ಮಾಡೋದು ನನ್ನ ವ್ಯಕ್ತಿತ್ವಕ್ಕೆ ಶೋಭೆ ಅಲ್ಲ' ಅನ್ನೋದು ಸಂಜಯ್ ಸ್ಪಷ್ಟನೆ. ಟ್ವಿಟ್ಟರಿನಲ್ಲಿ ನೀವೆಷ್ಟೇ ಹುಡುಕಿ ರಾಣಿ ಮುಖರ್ಜಿಯ ಖಾತೆಯೂ ಕಾಣ್ಸೋದಿಲ್ಲ. ಗಂಡ ಆದಿತ್ಯ ಚೋಪ್ರಾ ಕೂಡ ರಾಣಿಯ ಟೇಸ್ಟಿಗೆ ತಕ್ಕನಾಗಿ ಸಿಕ್ಕವನೇ!
ನಿಮ್ಗೆ ಗೊತ್ತಾ? `ಹ್ಯಾರಿ ಪಾಟರ್' ಖ್ಯಾತಿಯ ನಟ ಡೇನಿಯಲ್ ರ್ಯಾಡ್‍ಕ್ಲಿಪ್ ಕೂಡ ಇವೆರಡು ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ. `ಎಲ್ಲರಿಗೂ ನೀವು ಸುಲಭವಾಗಿ ಸಿಕ್ಕಿ ಪ್ರತಿಕ್ಷಣ ಏನ್ ಮಾಡ್ತಿದ್ದೀರಿ, ಏನ್ ಮಾಡ್ತಿಲ್ಲ ಅಂತ ಹೇಳೋದಾದ್ರೆ ಖಾಸಗಿ ಬದುಕು ಅಂತ ಇರೋದ್ಯಾಕೆ?' ಎಂಬುದು ಹ್ಯಾರಿ ಪಾಟರನ ಪ್ರಶ್ನೆ. ಜೇಮ್ಸ್‍ಬಾಂಡ್ ಸರಣಿಯಲ್ಲಿ ಕಾಣಿಸಿ ಕೊಂಡ ಡೇನಿಯಲ್ ಕ್ರೇಗ್ ಕೂಡ ಈ ವಿಚಾರದಲ್ಲಿ ಸನ್ಯಾಸಿಯೇ. ಶೆರ್ಲಾಕ್ ಹೋಮ್ಸನ ಸಿನಿಮಾದಲ್ಲಿ ಡಾ. ವ್ಯಾಟ್ಸನ್ ಆಗಿ ಗಮನ ಸೆಳೆದ ಮಾರ್ಟಿನ್ ? ಫ್ರಿಮನ್‍ಗೂ ಟ್ವಿಟ್ಟರ್- ಫೇಸ್‍ಬುಕ್ ಮೇಲೆ ಸಿಟ್ಟಿದೆ. ಕನ್ನಡದ ಮಟ್ಟಿಗೆ ಬಹುತೇಕ ತಾರೆಗಳು -ಫೇಸ್‍ಬುಕ್‍ನಲ್ಲಿ ದರ್ಶನ ಕೊಡುತ್ತಾರೆ. ಆದರೆ, ಅನೇಕರಿಗೆ ಟ್ವಿಟ್ಟರಿನ ವಿಳಾಸವೇ ಗೊತ್ತಿದ್ದಂತಿಲ್ಲ. ಗೊತ್ತಿಲ್ಲ ಎಂಬ ಕಾರಣಕ್ಕಷ್ಟೇ ಟ್ವಿಟ್ಟರಿನಲ್ಲಿಲ್ಲ ಬಿಟ್ಟರೆ, ಅದರ ಮೇಲೇನೂ ಕೋಪವಿಲ್ಲವೆಂದು ನಾವಂದುಕೊಳ್ಳಬಹುದೇನೋ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


