ವಾಣಿಜ್ಯ

West Asia war ಎಫೆಕ್ಟ್: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕ ಕುಸಿತ; ಹೂಡಿಕೆದಾರರಿಗೆ ಭಾರೀ ನಷ್ಟ

30 ಷೇರುಗಳ ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕಂಪನಿಗಳ ಷೇರುಗಳು ಗಮನಾರ್ಹವಾಗಿ ಇಳಿಕೆಯಾಗಿವೆ.

West Asia war ಎಫೆಕ್ಟ್: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕ ಕುಸಿತ; ಹೂಡಿಕೆದಾರರಿಗೆ ಭಾರೀ ನಷ್ಟ
ಸಂಗ್ರಹ ಚಿತ್ರ
Published On :

ಮುಂಬೈ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅಶಾಂತಿ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಭಾರೀ ಪರಿಣಾಮ ಬೀರಿದೆ.

ಸೋಮವಾರ ಆರಂಭಿಕ ವಹಿವಾಟಿನಲ್ಲಿ ಪ್ರಮುಖ ಸೂಚ್ಯಂಕಗಳು ತೀವ್ರ ಕುಸಿತ ಕಂಡು ಹೂಡಿಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿವೆ.

ಬಿಎಸ್‌ಇಯ 30 ಷೇರುಗಳ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕಗಳ ಕುಸಿತ ಕಂಡಿದ್ದು 72,391.98 ಕ್ಕೆ ತಲುಪಿದೆ. 50 ಷೇರುಗಳ ಎನ್‌ಎಸ್‌ಇಯ ನಿಫ್ಟಿ 349.45 ಅಂಕಗಳ ಕುಸಿತ ಕಂಡಿದ್ದು 22,470.15 ಕ್ಕೆ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಕುಸಿತದ ಪ್ರವೃತ್ತಿ ಕಂಡುಬರುತ್ತಿದ್ದು, ಇಂದು ಅದು ಮತ್ತಷ್ಟು ತೀವ್ರಗೊಂಡಿದೆ.

30 ಷೇರುಗಳ ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕಂಪನಿಗಳ ಷೇರುಗಳು ಗಮನಾರ್ಹವಾಗಿ ಇಳಿಕೆಯಾಗಿವೆ. ಇವುಗಳ ಮೇಲೆ ಹೂಡಿಕೆದಾರರ ಮಾರಾಟ ಒತ್ತಡ ಹೆಚ್ಚಿರುವುದು ಸ್ಪಷ್ಟವಾಗಿದೆ.

ಇನ್ನೊಂದೆಡೆ, ಭಾರತ್ ಎಲೆಕ್ಟ್ರಾನಿಕ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕಂಪನಿಗಳ ಷೇರುಗಳು ಏರಿಕೆ, ಕಂಡು ಮಾರುಕಟ್ಟೆಗೆ ಸ್ವಲ್ಪ ಮಟ್ಟಿನ ನಿರಾಳ ನೀಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಕೆಯಾಗಿರುವುದು ಪ್ರಮುಖ ಕಾರಣವಾಗಿದ್ದು, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ 2.32 ರಷ್ಟು ಏರಿಕೆಯಾಗಿ 115.3 ಡಾಲರ್‌ಗೆ ತಲುಪಿದೆ.

ತೈಲದ ಬೆಲೆ ಏರಿಕೆಯಿಂದ ಭಾರತದಂತಹ ಆಮದು ಅವಲಂಬಿತ ದೇಶಗಳಿಗೆ ಹೆಚ್ಚುವರಿ ಒತ್ತಡ ಉಂಟಾಗುತ್ತಿದೆ. ಇದರಿಂದ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹಾಗೂ ಆರ್ಥಿಕ ವೃದ್ಧಿಗೆ ಹಿನ್ನಡೆಯಾಗುವ ಭೀತಿ ಎದುರಾಗಿದೆ.

ವಿದೇಶಿ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ಮಾರುಕಟ್ಟೆ ಕುಸಿತಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಕಳೆದ ಶುಕ್ರವಾರ ಒಂದೇ ದಿನದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಷೇರುಗಳನ್ನು ಮಾರಾಟ ಮಾಡಿರುವ ಅವರು, ಮಾರ್ಚ್ ತಿಂಗಳಿನಲ್ಲಿ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹೊರತೆಗೆದಿದ್ದಾರೆ. ದೇಶೀಯ ಹೂಡಿಕೆದಾರರು ಕೆಲವು ಮಟ್ಟಿಗೆ ಖರೀದಿ ಮಾಡಿದರೂ, ಅದು ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಾಕಾಗುತ್ತಿಲ್ಲ.

ಇನ್ನು ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಕೋಸ್ಪಿ ಮತ್ತು ಜಪಾನ್‌ನ ನಿಕ್ಕಿ 225 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಕೂಡ ಕುಸಿತ ಕಂಡಿದ್ದು, ಜಾಗತಿಕ ಹೂಡಿಕೆದಾರರ ಮನಸ್ಥಿತಿ ನಕಾರಾತ್ಮಕವಾಗಿರುವುದನ್ನು ತೋರಿಸುತ್ತಿವೆ. ಆದರೆ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕವು ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ.

ಈ ನಡುವೆ ಅಮೆರಿಕಾದ ಷೇರು ಮಾರುಕಟ್ಟೆಯೂ ಶುಕ್ರವಾರ ಭಾರೀ ಕುಸಿತ ಕಂಡಿದ್ದು, ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕ ಶೇ 2.15 ರಷ್ಟು ಕುಸಿದರೆ, ಡೌ ಜೋನ್ಸ್ ಕೈಗಾರಿಕಾ ಸರಾಸರಿ ಶೇ 1.73 ರಷ್ಟು ಮತ್ತು ಎಸ್ & ಪಿ 500 ಶೇ 1.67 ರಷ್ಟು ಕುಸಿದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಕುಸಿದಿರುವುದು ಸ್ಪಷ್ಟವಾಗಿದೆ.

ಪಶ್ಚಿಮ ಏಷ್ಯಾದ ಸಂಘರ್ಷ ಇನ್ನಷ್ಟು ವಿಸ್ತಾರವಾಗುವ ಲಕ್ಷಣಗಳು ಕಾಣಿಸುತ್ತಿವೆ. ಯೆಮೆನ್‌ನ ಹೌತಿ ಗುಂಪು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ವರದಿಗಳ ಹಿನ್ನೆಲೆ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ಹೆಚ್ಚಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆಯ ಮೇಲೆ ಮತ್ತಷ್ಟು ಒತ್ತಡ ತರುವ ಸಾಧ್ಯತೆ ಇದೆ.

ಒಟ್ಟಾರೆ ಜಾಗತಿಕ ರಾಜಕೀಯ ಅಶಾಂತಿ, ತೈಲದ ಬೆಲೆ ಏರಿಕೆ, ವಿದೇಶಿ ಹೂಡಿಕೆದಾರರ ಹಣ ಹೊರಹರಿವು ಹಾಗೂ ಆರ್ಥಿಕ ಅನಿಶ್ಚಿತತೆ ಎಲ್ಲವೂ ಸೇರಿ ಭಾರತೀಯ ಷೇರು ಮಾರುಕಟ್ಟೆಯನ್ನು ತೀವ್ರ ಕುಸಿತದ ದಿಕ್ಕಿನಲ್ಲಿ ತಳ್ಳಿವೆ. ಮುಂದಿನ ದಿನಗಳಲ್ಲಿ ಯುದ್ಧದ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಮಾರುಕಟ್ಟೆಯ ದಿಕ್ಕು ನಿರ್ಧಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.