ಮಧ್ಯ ಪ್ರಾಚ್ಯ ಸಂಘರ್ಷ: Indian Stock market ಉತ್ತಮ ವಹಿವಾಟು; ಸೆನ್ಸೆಕ್ಸ್ 504 ಅಂಕ ಏರಿಕೆ, 5 ಲಕ್ಷ ಕೋಟಿ ರೂ ಲಾಭ
ಇರಾನ್ ಗೊಂದಲದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ವಾರದ ಅಂತಿಮ ದಿನವಾದ ಶುಕ್ರವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತು ಗೊಂದಲಗಳ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಇಂದು ಕೂಡ ಉತ್ತಮ ವಹಿವಾಟು ನಡೆಸಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 5 ಲಕ್ಷ ಕೋಟಿ ಲಾಭವಾಗಿದೆ.
ಹೌದು.. ಇರಾನ್ ಗೊಂದಲದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ವಾರದ ಅಂತಿಮ ದಿನವಾದ ಶುಕ್ರವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.65ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.65ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು 504.86ಅಂಕಗಳ ಏರಿಕೆಯೊಂದಿಗೆ 78,493.54 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 156.80 ಅಂಕಗಳ ಏರಿಕೆಯೊಂದಿಗೆ 24,353.55 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಒಂದೇ ವಾರದಲ್ಲಿ 44 ಲಕ್ಷ ಕೋಟಿ ರೂ ಲಾಭ
ಇನ್ನು ಒಟ್ಟಾರೆ ಈ ವಾರ ಷೇರುಮಾರುಕಟ್ಟೆಯ ಏಳು-ಬೀಳಿಗೆ ಸಾಕ್ಷಿಯಾಗಿತ್ತು. ಆದಾಗ್ಯೂ ಈ ವಾರ ಸೆನ್ಸೆಕ್ಸ್ ಒಟ್ಟು 6800 ಅಂಕಗಳ ಏರಿಕೆ ಕಂಡಿದ್ದು, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಿಭಾಗದ ಷೇರುಗಳು ಚೇತೋಹಾರಿ ವಹಿವಾಟು ನಡೆಸಿವೆ. ಅಂತೆಯೇ ಈ ವಾರ ಹೂಡಿಕೆದಾರರು ಸುಮಾರು 44 ಲಕ್ಷ ಕೋಟಿ ರೂ ಲಾಭಾಂಶ ಕಂಡಿದ್ದಾರೆ ಎಂದು ವರದಿಯಾಗಿದೆ.
ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಏಪ್ರಿಲ್ 2 ರಂದು ಒಟ್ಟು ಅಖಿಲ ಭಾರತ ಮಾರುಕಟ್ಟೆ ಬಂಡವಾಳೀಕರಣವು 421.81 ಲಕ್ಷ ಕೋಟಿ ರೂ.ಗಳಿಂದ ಏಪ್ರಿಲ್ 17 ರಂದು 465.59 ಲಕ್ಷ ಕೋಟಿ ರೂ.ಗಳಿಗೆ ಏರಿದೆ, ಇದು 43.78 ಲಕ್ಷ ಕೋಟಿ ರೂ.ಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇತ್ತೀಚಿನ ವಹಿವಾಟು ವಾರದಲ್ಲಿಯೇ, ಮಾರುಕಟ್ಟೆ ಬಂಡವಾಳೀಕರಣವು 14 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ವಿಸ್ತರಿಸಿದೆ ಎನ್ನಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಹಿಂದೂಸ್ತಾನ್ ಯುನಿಲಿವರ್, ಪವರ್ ಗ್ರಿಡ್, ಟೆಕ್ ಮಹೀಂದ್ರ, ಏಷ್ಯನ್ ಪೇಯಿಂಟ್ಸ್, ರಿಲಾಯನ್ಸ್, ಐಟಿಸಿ, ಕೋಟಕ್ ಬ್ಯಾಂಕ್, ಮಾರುತಿ ಸುಜುಕಿ, ಬಿಇಎಲ್ ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಗ್ಯಾಲಂಟ್ ಇಸ್ಪಾಟ್, ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್, ಕಲ್ಯಾಣ್ ಜ್ಯುವೆಲ್ಲರ್ಸ್ ಇಂಡಿಯಾ, ಟಾಟಾ ಕಮ್ಯುನಿಕೇಷನ್ಸ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಗ್ರೋವ್, ಜೈಪ್ರಕಾಶ್ ಪವರ್ ವೆಂಚರ್ಸ್, ಫಸ್ಟ್‌ಸೋರ್ಸ್ ಸೊಲ್ಯೂಷನ್ಸ್, ಪಾಲಿ ಮೆಡಿಕ್ಯೂರ್ ಮತ್ತು ತೇಜಸ್ ನೆಟ್‌ವರ್ಕ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
5 ಲಕ್ಷ ಕೋಟಿ ಲಾಭ
ಇಂದಿನ ಮಾರುಕಟ್ಟೆ ಏರಿಕೆಯಿಂದಾಗಿ ಹೂಡಿಕೆದಾರರಿಗೆ ಇಂದು ಒಂದೇ ದಿನ 5 ಲಕ್ಷ ಕೋಟಿ ಲಾಭಾಂಶ ಬಂದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣಕ್ಕೆ 5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಲಾಭವಾಗಿ ಬಂದಿದ್ದು, ಆ ಮೂಲಕ ಮಾರುಕಟ್ಟೆ ಬಂಡವಾಳೀಕರಣ ಸುಮಾರು 466 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



