Iran War ಕದನ ವಿರಾಮ: Indian Stock Market ಭಾರಿ ಏರಿಕೆ; 16 ಲಕ್ಷ ಕೋಟಿ ರೂ ಲಾಭ!
ಸೆನ್ಸೆಕ್ಸ್ ಇಂದು ಬರೊಬ್ಬರಿ 2,946.32ಅಂಕಗಳ ಏರಿಕೆಯೊಂದಿಗೆ 77,562.90 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 873.70 ಅಂಕಗಳ ಏರಿಕೆಯೊಂದಿಗೆ 23,997.35 ಅಂಕಗಳೊಂದಿಗೆ 24 ಸಾವಿರ ಗಡಿಯತ್ತ ಸಾಗಿದೆ.

ಮುಂಬೈ: ಅಮೆರಿಕ ಮತ್ತು ಇರಾನ್ ನಡುವೆ ತಿಂಗಳಗಳ ಕಾಲ ನಡೆದ ಯುದ್ಧದಲ್ಲಿ ಕೊನೆಗೂ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಬುಧವಾರ ಭಾರತೀಯ ಷೇರು ಮಾರುಕಟ್ಟೆ ಐತಿಹಾಸಿಕ ಚೇತರಿಕೆ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.3.95ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.3.78ರಷ್ಟು ದಾಖಲೆಯ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 2,946.32ಅಂಕಗಳ ಏರಿಕೆಯೊಂದಿಗೆ 77,562.90 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 873.70 ಅಂಕಗಳ ಏರಿಕೆಯೊಂದಿಗೆ 23,997.35 ಅಂಕಗಳೊಂದಿಗೆ 24 ಸಾವಿರ ಗಡಿಯತ್ತ ಸಾಗಿದೆ.
ಇಂದಿನ ವಹಿವಾಟಿನಲ್ಲಿ ಆಟೋ ಮತ್ತು ರಿಯಾಲ್ಟಿ ಷೇರುಗಳು ಶೇ. 6 ಕ್ಕಿಂತ ಹೆಚ್ಚು ಏರಿಕೆ ಕಂಡರೆ, ಗ್ರಾಹಕ ಬಾಳಿಕೆ ಬರುವ ವಸ್ತುಗಳು (consumer durables), ತೈಲ ಮತ್ತು ಅನಿಲ, ಟೆಲಿಕಾಂ, ಮೂಲಸೌಕರ್ಯ, ಪಿಎಸ್ಯು ಬ್ಯಾಂಕ್, ಖಾಸಗಿ ಬ್ಯಾಂಕ್ ಷೇರುಗಳು ಶೇ. 3-5 ರಷ್ಟು ಏರಿಕೆ ಕಂಡವು. ಎಲ್ಲಾ ವಲಯ ಸೂಚ್ಯಂಕಗಳು ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದವು.
ಅಂತೆಯೇ ನಿಫ್ಟಿ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕವು ತಲಾ ಶೇಕಡಾ 4 ರಷ್ಟು ಏರಿಕೆ ಕಂಡಿತು.
ಹಣಕಾಸು, ಆಟೋ ಮತ್ತು ರಿಯಾಲ್ಟಿ ಷೇರುಗಳು ಈ ಏರಿಕೆಯಲ್ಲಿ ಮುಂಚೂಣಿಯಲ್ಲಿವೆ, ಶ್ರೀರಾಮ್ ಫೈನಾನ್ಸ್ (10.14%), ಟಾಟಾ ಮೋಟಾರ್ಸ್ (8.75%) ಮತ್ತು ಅದಾನಿ ಎಂಟರ್ಪ್ರೈಸಸ್ (11-13%) ಅಗ್ರ ಲಾಭ ಗಳಿಸಿದ ಷೇರುಗಳಲ್ಲಿ ಸೇರಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಶ್ರೀರಾಮ್ ಫೈನಾನ್ಸ್, ಅದಾನಿ ಎಂಟರ್ಪ್ರೈಸಸ್, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಇಂಟರ್ಗ್ಲೋಬ್ ಏವಿಯೇಷನ್ ಮತ್ತು ಐಷರ್ ಮೋಟಾರ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಕೋಲ್ ಇಂಡಿಯಾ, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ, ವಿಪ್ರೋ, ಒಎನ್ಜಿಸಿ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
16 ಲಕ್ಷ ಕೋಟಿ ರೂ ಲಾಭ
ಅಂತೆಯೇ ಇಂದು ಒಂದೇ ದಿನ ಭಾರತೀಯ ಹೂಡಿಕೆದಾರರಿಗೆ ಬರೊಬ್ಬರಿ 16.59 ಲಕ್ಷ ಕೋಟಿ ಲಾಭ ಗಳಿಸಿದರು. ಈ ಐತಿಹಾಸಿಕ ಏರಿಕೆಯು ಬಿಎಸ್ಇ-ಪಟ್ಟಿಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ₹429 ಲಕ್ಷ ಕೋಟಿಗಳಿಂದ ಸರಿಸುಮಾರು ₹446 ಲಕ್ಷ ಕೋಟಿಗಳಿಗೆ ಜಿಗಿದಿದೆ.
ಸತತ 5ನೇ ದಿನ ಗ್ರೀನ್ ನಲ್ಲಿ ವಹಿವಾಟು ಅಂತ್ಯ
ಅಂತೆಯೇ ಬೆಂಚ್ಮಾರ್ಕ್ಗಳು ಹಾಲಿ ವರ್ಷದಲ್ಲಿ ಪ್ರಬಲ ಅವಧಿಗಳಲ್ಲಿ ಒಂದನ್ನು ದಾಖಲಿಸಿದ್ದು ಐದು ದಿನಗಳ ಗೆಲುವಿನ ಹಾದಿಯನ್ನು ವಿಸ್ತರಿಸಿತು.
ಮಾರುಕಟ್ಟೆ ಏರಿಕೆಗೆ ಕಾರಣಗಳು
ಭಾರತೀಯ ಷೇರುಮಾರುಕಟ್ಟೆಯ ಈ ಬೃಹತ್ ಸಂಪತ್ತು ಸೃಷ್ಟಿಗೆ ಐದು ಪ್ರಮುಖ ಅಂಶಗಳು ಕಾರಣವಾಗಿದ್ದು, ಈ ಪೈಕಿ ಇರಾನ್ ಕದನ ವಿರಾಮ ಘೋಷಣೆ ಪ್ರಮುಖ ಎಂದು ಹೇಳಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದು, ಇದು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ನಾಟಕೀಯವಾಗಿ ಕಡಿಮೆ ಮಾಡಿತು. ಯುದ್ಧದ ಕೇಂದ್ರ ಬಿಂದುವಾಗಿದ್ದ ಹಾರ್ಮುಜ್ ಜಲಸಂಧಿಯಲ್ಲಿ ಇನ್ನೆರಡು ವಾರ ವಾಣಿಜ್ಯ ಹಡಗುಗಳ ಸಂಚಾರ ಸರಾಗವಾಗಲಿದ್ದು, ಇದು ಕಚ್ಚಾತೈಲ ಕುಸಿತಕ್ಕೂ ಕಾರಣವಾಗಿದೆ.
ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸುಮಾರು 14-15% ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ $95 ಕ್ಕಿಂತ ಕಡಿಮೆಯಾಗಿದೆ, ಇದು ಪ್ರಮುಖ ತೈಲ ಆಮದುದಾರನಾದ ಭಾರತಕ್ಕೆ ಗಮನಾರ್ಹ ಪರಿಹಾರವನ್ನು ಒದಗಿಸುತ್ತದೆ. ಇದಲ್ಲದೆ ಆರ್ ಬಿಐ ರೆಪೋದರದಲ್ಲಿ ಬದಲಾವಣೆ ಮಾಡದೇ ಇರುವುದೂ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಇರಿಸಿದ್ದು, ಸ್ಥಿರ ಬಡ್ಡಿದರದ ವಾತಾವರಣದೊಂದಿಗೆ ಹೂಡಿಕೆದಾರರಿಗೆ ಭರವಸೆ ನೀಡಿದೆ. ಅಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ 36 ಪೈಸೆ ಬಲಗೊಂಡು 92.64 ಗೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



