ವಾಣಿಜ್ಯ

ಯಾವ ಗಿಫ್ಟ್ ಗೆ ತೆರಿಗೆ ವಿನಾಯ್ತಿ, ಯಾವುದಕ್ಕಿಲ್ಲ: ಇಲ್ಲಿದೆ ಮಾಹಿತಿ

ದೀಪಾವಳಿ ಹಬ್ಬ ಸಮೀಪಿಸಿದೆ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ...

ಯಾವ ಗಿಫ್ಟ್ ಗೆ ತೆರಿಗೆ ವಿನಾಯ್ತಿ, ಯಾವುದಕ್ಕಿಲ್ಲ: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Published On :
ಚೆನ್ನೈ: ದೀಪಾವಳಿ ಹಬ್ಬ ಸಮೀಪಿಸಿದೆ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ ವಸ್ತು ಅಥವಾ ಹಣದ ರೂಪದಲ್ಲಿ ಗಿಫ್ಟ್ ನೀಡಬಹುದು. ಹೀಗೆ ಪಡೆದ ಗಿಫ್ಟ್ ಗೆ ನೀವು ತೆರಿಗೆ ಕಟ್ಟಬೇಕಾಗುತ್ತದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಲು ಇಲ್ಲಿದೆ ಸ್ವಲ್ಪ ಮಾಹಿತಿ. 
ಕ್ಲಿಯರ್ ಟ್ಯಾಕ್ಸ್.ಕಾಂನ ಸ್ಥಾಪಕ ಅರ್ಚಿತ್ ಗುಪ್ತಾ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ನಡೆಸಿದ ಸಂವಾದದಲ್ಲಿ ನೀವು ಪಡೆದುಕೊಂಡ ಯಾವ ಗಿಫ್ಟ್ ಅಥವಾ ಹಣಕ್ಕೆ ತೆರಿಗೆ ಕಟ್ಟಬೇಕು, ಯಾವುದಕ್ಕೆ ಕಟ್ಟುವ ಹಾಗಿಲ್ಲ ಎಂದು ವಿವರಿಸಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತಿದ್ದರೆ ಮತ್ತು ಹೋಗುತ್ತಿದ್ದರೆ ಕೊಡುಗೆಯಾಗಿ ನೀಡಿದ ಹಣಕ್ಕೆ ತೆರಿಗೆ ಕಟ್ಟಬೇಕೆ, ಬೇಡವೆ ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಕುಟುಂಬದ ಸದಸ್ಯರಿಗೆ ಹಣವನ್ನು ಗಿಫ್ಟ್ ಆಗಿ ನೀಡಿ ನೀವು ತೆರಿಗೆ ಕಟ್ಟುವುದರಿಂದ ಬಚಾವಾಗಬಹುದು ಎನ್ನುತ್ತಾರೆ.
ಯಾವ ಗಿಫ್ಟ್ ತೆರಿಗೆಯಿಂದ ವಿನಾಯ್ತಿ ಪಡೆಯುತ್ತವೆ ಮತ್ತು ಆದಾಯದ ಒಂದು ಭಾಗವೆಂದು ಪರಿಗಣಿಸಲ್ಪಡುತ್ತದೆ?
ಹಣ ಅಥವಾ ವಸ್ತುಗಳ ರೂಪದಲ್ಲಿ ಪಡೆದ ಗಿಫ್ಟ್ ಗಳಿಗೆ ತೆರಿಗೆಯಿರುವುದಿಲ್ಲ, ನಿಮ್ಮ ಕುಟುಂಬ ಸದಸ್ಯರು ಉದಾಹರಣೆಗೆ ಪೋಷಕರು, ಸೋದರ, ಸೋದರಿಯರು, ಪತ್ನಿ ಅಥವಾ ಪತಿ, ಅತ್ತೆ-ಮಾವ ಮೊದಲಾದವರು ನಿಮಗೆ ಚೆಕ್ ನೀಡಿದರೆ ಅದಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಅದಕ್ಕೆ ಮಿತಿ ಕೂಡ ಇಲ್ಲ. ಅಂದರೆ ಅದರರ್ಥ ತೆರಿಗೆ ಕಟ್ಟುವ ಯೋಚನೆಯಿಲ್ಲದೆ ನೀವು ಎಷ್ಟು ಬೇಕಾದರೂ ಗಿಫ್ಟ್ ನ್ನು ನಿಮ್ಮ ಕುಟುಂಬ ಸದಸ್ಯರಿಂದ ಪಡೆಯಬಹುದು.
ಹೊರಗಿನವರಿಂದ ಒಂದು ಹಣಕಾಸು ವರ್ಷದಲ್ಲಿ 50 ಸಾವಿರಕ್ಕಿಂತ ಹೆಚ್ಚು ಮೊತ್ತದ ವಸ್ತು ಅಥವಾ ಹಣ ಪಡೆದರೆ ಅದಕ್ಕೆ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಸ್ನೇಹಿತರ ಬಳಿಯಿಂದ 35 ಸಾವಿರ ರೂಪಾಯಿ ಪಡೆದಿದ್ದೀರಿ ಮತ್ತು ಸಹೋದ್ಯೋಗಿಯಿಂದ 14 ಸಾವಿರ ರೂಪಾಯಿ ಸಿಕ್ಕಿದೆ ಎಂದಿಟ್ಟುಕೊಳ್ಳಿ. ಗಿಫ್ಟ್ ನ ಒಟ್ಟು ಮೊತ್ತ 49 ಸಾವಿರ ರೂಪಾಯಿಯಾಗುತ್ತದೆ. ಇದಕ್ಕೆ ಯಾವುದೇ ತೆರಿಗೆ ಬೀಳುವುದಿಲ್ಲ. ಆದರೆ ಮತ್ತೊಬ್ಬ ಸ್ನೇಹಿತ ನಿಮಗೆ ಅದೇ ವರ್ಷ 2 ಸಾವಿರ ರೂಪಾಯಿ ಕೊಟ್ಟಿದ್ದಾರೆ ಎಂದಿಟ್ಟುಕೊಳ್ಳಿ. ಆಗ ನೀವು ಪಡೆದ ಒಟ್ಟು ಗಿಫ್ಟ್ ನ ಮೊತ್ತ 51 ಸಾವಿರ ರೂಪಾಯಿಯಾಗುತ್ತದೆ. ಆಗ ಆದಾಯ ತೆರಿಗೆ ನಿಯಮ ಪ್ರಕಾರ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
ಗಿಫ್ಟ್ ತೆರಿಗೆ ವಿನಾಯ್ತಿಯಿಂದ ಪಡೆಯುವುದು ಹೇಗೆ?
ತೆರಿಗೆ ವಿನಾಯ್ತಿಯಿಂದ ಕಾನೂನು ಪ್ರಕಾರವಾಗಿ ಲಾಭ ಪಡೆಯಬೇಕಾದರೆ ಒಂದು ಹಣಕಾಸು ವರ್ಷದಲ್ಲಿ 50 ಸಾವಿರ ರೂಪಾಯಿಗಿಂತ ಜಾಸ್ತಿ ಮೊತ್ತ ಗಿಫ್ಟ್ ಆಗಿ ಸ್ವೀಕರಿಸದಂತೆ ಎಚ್ಚರಿಕೆ ವಹಿಸಬೇಕು. ನಿಮಗೆ ಮಾರ್ಚ್ ತಿಂಗಳಿನಲ್ಲಿ 50 ಸಾವಿರ ರೂಪಾಯಿ ಸಿಕ್ಕಿದೆ ಎಂದಿಟ್ಟುಕೊಳ್ಳಿ. ಇನ್ನೂ ಹೆಚ್ಚಿನ ಮೊತ್ತ ಅವರು ನೀಡುವುದಿದ್ದರೆ ಏಪ್ರಿಲ್ ತಿಂಗಳಿನಲ್ಲಿ ನೀಡಲು ಹೇಳಿ ಆಗ ನಿಮಗೆ ತೆರಿಗೆ ಕಟ್ಟಬೇಕಾಗುವುದಿಲ್ಲ. ತೆರಿಗೆ ವಿನಾಯ್ತಿ ಪಡೆಯಬಹುದು.
ಷೇರುದಾರರು ಪಡೆದ ಬೋನಸ್ ಷೇರುಗಳಿಗೆ ತೆರಿಗೆ ಕಟ್ಟಬೇಕೆ? 
ಬೋನಸ್ ಷೇರುಗಳನ್ನು ವರ್ಷದೊಳಗೆ ಮಾರಿದರೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ ಅಲ್ಪಾವಧಿಗೆ ಹಣ ಗಳಿಸಿದರೆ ತೆರಿಗೆ ಅನ್ವಯವಾಗುತ್ತದೆ. ಅದಾಗ್ಯೂ ಬೋನಸ್ ಷೇರುಗಳನ್ನು ಮಾರಾಟ ಮಾಡಿ ಬಂದ ಹಣಕ್ಕೆ ತೆರಿಗೆ ಕಟ್ಟುವುದನ್ನು ತಡೆಯಲು ಷೇರು ಹೊಂದಿರುವವರು ಕನಿಷ್ಠ ಒಂದು ವರ್ಷದವರೆಗೆ ಅದನ್ನು ತಡೆಹಿಡಿಯಬೇಕು. ಆಗ ತೆರಿಗೆ ಪಾವತಿಗೆ ವಿನಾಯ್ತಿ ಸಿಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.